ಕಾವೇರಿ ಸ್ಕೀಂ ರಚನೆಗೆ ಮೀನಾಮೇಷ, ಕೇಂದ್ರದ ವಿರುದ್ಧ ಸುಪ್ರೀಂ ಗರಂ
ನವದೆಹಲಿ, ಮೇ 8: ಕಾವೇರಿ ಸ್ಕೀಂ ರಚನೆಗೆ ಕೇಂದ್ರ ಸರಕಾರ ಮೀನಾಮೇಷ ಎಣಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಗರಂ ಆಗಿದೆ. ಕೇಂದ್ರದ ನಡೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಸುಪ್ರೀಂ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಮೇ 14ರಂದು ನಡೆಯಲಿರುವ ಮುಂದಿನ ವಿಚಾರಣೆ ವೇಳೆ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕಾವೇರಿ ಸ್ಕೀಂ ನೊಂದಿಗೆ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಕೋರ್ಟ್ ಖಡಕ್ ಆದೇಶ ನೀಡಿದೆ.
ಕಾವೇರಿ ಸ್ಕೀಂ ಸಂಬಂಧ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವಂತೆ ಮೇ 3ರಂದು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ಕಾವೇರಿ ನೀರನ್ನು ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ಹಂಚಿಕೊಳ್ಳುವ ಸೂತ್ರವನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಲಾಗಿತ್ತು.

ಇನ್ನು ನಿನ್ನೆ ಅಂದರೆ ಮೇ 7ರ ವಿಚಾರಣೆ ವೇಳೆ ಸ್ಕೀಂ ರಚನೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡುವಂತೆ ಕೇಂದ್ರ ಸರಕಾರ ಕೋರಿಕೊಂಡಿತ್ತು. ಇದೀಗ ಹೊಸ ವಿಚಾರಣಾ ದಿನಾಂಕದ ಪ್ರಕಾರ, ಕರ್ನಾಟಕ ಚುನಾವಣೆ ನಡೆದ ನಂತರ ಈ ಮಂಡಳಿ ರಚನೆಗೆ ದಿನ ನಿಗದಿಯಾಗಿದೆ. ಇದನ್ನೇ ಕೇಂದ್ರ ಸರಕಾರ ಬಯಸುತ್ತಿತ್ತು ಎಂಬುದು ಗುಟ್ಟಾಗಿಯೇನು ಉಳಿದಿಲ್ಲ.
ಇನ್ನು ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲು ಸಾಧ್ಯವೇ ಎಂದು ಕರ್ನಾಟಕವನ್ನು ಸುಪ್ರೀಂ ಕೋರ್ಟ್ ಕೇಳಿತ್ತು. ಈ ಸಂಬಂಧ ಸೋಮವಾರ ಅಫಿಡವಿಟ್ ಸಲ್ಲಿಸಿದ ರಾಜ್ಯ ಸರಕಾರ ಸದ್ಯಕ್ಕೆ ತಾನು ನೀರುವ ಬಿಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದೆ.












Click it and Unblock the Notifications