ಬುದ್ಧಿ ಕಲಿತ ಬೆಂಗಳೂರು ಮಂದಿ!: 60 ಸಾವಿರದಿಂದ 60 ಲಕ್ಷ ಲೀಟರ್‌ಗೆ ಏರಿಕೆಯಾದ ಸಂಸ್ಕರಿಸಿದ ನೀರಿನ ಬೇಡಿಕೆ
ಬೆಂಗಳೂರು, ಏಪ್ರಿಲ್. 20: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹೀಗಾಗಿಯೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕೂಡ ಸಂಸ್ಕರಿಸಿದ ನೀರನ್ನು ಹೆಚ್ಚು ಬಳಸುವಂತೆ ಕರೆ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕಾವೇರಿ ನೀರು ಮತ್ತು ಬೋರ್‌ವೆಲ್ ನೀರನ್ನು ನಿರ್ಮಾಣ ಮತ್ತು ಇತರ ತೃತೀಯ ಉದ್ದೇಶಗಳಿಗಾಗಿ ಬಳಸುವುದನ್ನು ನಿಷೇಧಿಸಿದೆ. ಇದಾದ ನಂತರವೇ ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಬೇಡಿಕೆ ತೀವ್ರವಾಗಿ ಏರಿಕೆಯಾಗಿದೆ. ಈ ಮೊದಲು, ಬಿಡಬ್ಲ್ಯುಎಸ್‌ಎಸ್‌ಬಿ ದಿನಕ್ಕೆ 60,000 ಲೀಟರ್ ಸಂಸ್ಕರಿಸಿದ ನೀರನ್ನು ಮಾರಾಟ ಮಾಡುತ್ತಿತ್ತು. ಅದು ಈಗ ದಿನಕ್ಕೆ 60 ಲಕ್ಷ ಲೀಟರ್ (6 MLD)ಗೆ ಏರಿಕೆಯಾಗಿದೆ.

ಸಂಸ್ಕರಿಸಿದ ನೀರಿನ ಬೇಡಿಕೆಯಲ್ಲಿ ಹೆಚ್ಚಾಗಿರುವ ಬೇಡಿಕೆಯು ತೀವ್ರ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ನೀಡಲು ಸಹಾಯ ಮಾಡಿದೆ ಎಂದು ಹಿರಿಯ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. "ಶುದ್ಧೀಕರಿಸಿದ ನೀರನ್ನು ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಬಳಸುವುದು ಉತ್ತಮ ಮಾರ್ಗವಾಗಿದೆ. ಮೊದಲು ಈ ಬಗ್ಗೆ ಅರಿವು ಕಡಿಮೆ ಇತ್ತು. ಈಗ, ಪ್ರಕ್ರಿಯೆಯನ್ನು ಸುಲಭಗೊಳಿಸುವ ಮೂಲಕ ಮತ್ತು ಜಾಗೃತಿ ಮೂಡಿಸುವ ಮೂಲಕ, ಬೇಡಿಕೆಯು ಗಣನೀಯವಾಗಿ ಏರಿದೆ. ಇದು ಕಾವೇರಿ ನೀರು ಮತ್ತು ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ" ಎಂದಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್ ಅವರನ್ನು ಉಲ್ಲೇಖಿಸಿದೆ.
ನಿರ್ಮಾಣ ವಲಯದಿಂದ ಸಂಸ್ಕರಿಸಿದ ನೀರಿಗೆ ಬೇಡಿಕೆ
ಸಂಸ್ಕರಿಸಿದ ನೀರಿಗೆ ಪ್ರಸ್ತುತ ಹೆಚ್ಚಿನ ಬೇಡಿಕೆ ಇರುವುದು ನಿರ್ಮಾಣ ವಲಯದಿಂದ. ಆದರೂ, ಬೆಂಗಳೂರು ಸುಮಾರು 1,200 MLD ಸಂಸ್ಕರಿಸಿದ ನೀರನ್ನು ಉತ್ಪಾದಿಸುವುದರಿಂದ ಬಿಡಬ್ಲ್ಯುಎಸ್‌ಎಸ್‌ಬಿ, ಐಟಿ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೂ ಕೂಡ ಇದನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಹಾಕುತ್ತಿದೆ.

"ಅನೇಕ ಬೃಹತ್ ಗ್ರಾಹಕರು ತಮ್ಮ ಆಂತರಿಕ ಎಸ್‌ಟಿಪಿಗಳಿಂದ ಉತ್ಪಾದಿಸಲಾದ ಸಂಸ್ಕರಿಸಿದ ನೀರನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈಗ ನಾವು ಅವರ ಪೂರೈಕೆಯನ್ನು ಶೇಕಡಾ 20 ರಷ್ಟು ಕಡಿತಗೊಳಿಸಿದ್ದೇವೆ. ಅವರು ಸಂಸ್ಕರಿಸಿದ ನೀರಿನ ಮೌಲ್ಯವನ್ನು ಅರಿತುಕೊಳ್ಳುತ್ತಿದ್ದಾರೆ. ಅದನ್ನು ಉತ್ತಮವಾಗಿ ಬಳಕೆ ಮಾಡುತ್ತಿದ್ದಾರೆ. ಕಾವೇರಿ ನೀರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಈ ಬದಲಾವಣೆ ಮುಖ್ಯವಾಗಿದೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯಕ್ಕೆ, ಬಿಡಬ್ಲ್ಯುಎಸ್‌ಎಸ್‌ಬಿ ಟ್ಯಾಂಕರ್‌ಗಳ ಮೂಲಕ ಸಂಸ್ಕರಿಸಿದ ನೀರನ್ನು ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ, ನಿರಂತರವಾಗಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಬೇಡಿಕೆ ಹೆಚ್ಚಿರುವ ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೇಕ ಸಂಸ್ಕರಿಸಿದ ನೀರಿನ ಪೈಪ್‌ಲೈನ್ ಅನ್ನು ಹಾಕಲು ಜಲ ಮಂಡಳಿ ಪ್ಲ್ಯಾನ್ ಮಾಡುತ್ತಿದೆ.
ಅನೇಕ ಬೃಹತ್ ಬಳಕೆದಾರರು ಸಂಸ್ಕರಿಸಿದ ನೀರನ್ನು ಪೈಪ್‌ನಲ್ಲಿ ಸರಬರಾಜು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಮೂಲಗಳು ತಿಳಿಸಿದೆ. BWSSB ತನ್ನ ಎಸ್‌ಟಿಪಿಗಳಿಂದ ಸಂಸ್ಕರಿಸಿದ ನೀರನ್ನು ಪೂರೈಸುವುದರ ಹೊರತಾಗಿ, ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಸಹ ಅನುಕೂಲ ಮಾಡಿಕೊಡುತ್ತಿದೆ.












Click it and Unblock the Notifications