Dubare Elephant Camp: ದುಬಾರೆಯಲ್ಲಿ ಮುನಿದ ಕಾವೇರಿ: ಪ್ರವಾಸಿಗರಿಗೆ ಶಾಕ್!

ಮಡಿಕೇರಿ, ಏಪ್ರಿಲ್‌ 07: ಕಾವೇರಿ ನದಿ ಸೃಷ್ಟಿಯ ದುಬಾರೆ ಪ್ರವಾಸಿ ತಾಣವೀಗ ಬರದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ. ಹಿಂದೆ ಇಲ್ಲಿನ ಸೌಂದರ್ಯವನ್ನು ನೋಡಿಕೊಂಡು ಹೋದವರು ಮತ್ತೇ ಅದೇ ಗುಂಗಿನಲ್ಲಿ ಇತ್ತ ಬಂದರೆ ಶಾಕ್ ಆಗುವುದಂತು ಖಚಿತ. ಏಕೆಂದರೆ ಇವತ್ತಿನ ದುಬಾರೆಯ ಸ್ಥಿತಿ ಹೀನಾಯವಾಗಿ ಹೋಗಿದೆ. ಜುಳುಜುಳು ಹರಿಯುತ್ತಿದ್ದ ಕಾವೇರಿ ಹರಿವು ನಿಲ್ಲಿಸಿದ್ದಾಳೆ.

ವಿಶಾಲ ಹರಡಿ ಭೋರ್ಗರೆದು ಹರಿಯುವ ಕಾವೇರಿಯೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ನದಿಯಲ್ಲಿ ನೀರೇ ಇಲ್ಲದ ಮೇಲೆ ಸೌಂದರ್ಯ ಎಲ್ಲಿಂದ ಬಂತು? ಹೀಗಾಗಿ ತುಂಬಾ ಆಸೆಯಿಂದ ದೂರದಿಂದ ಕುಟುಂಬ ಸಮೇತ ಆಗಮಿಸಿ ಒಂದಷ್ಟು ಸಮಯ ಕಳೆದು ನೀರಿನಲ್ಲಿ ಆಟವಾಡಿ, ಬೋಟ್ ಗಳಲ್ಲಿ ತಿರುಗಾಡ ಬಹುದೆಂದು ಇತ್ತ ಬಂದವರಿಗೆ ನಿರಾಸೆಯಾಗುವುದಂತು ನಿಜ.

Travel News Cauvery River Has Dried Up In Dubare Elephant Camp

ಇವತ್ತು ದುಬಾರೆಯಲ್ಲಿ ಕಾವೇರಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಬಂಡೆಕಲ್ಲುಗಳೆಲ್ಲವೂ ಕಾಣಿಸುತ್ತಿದೆ. ಅಲ್ಲಲ್ಲಿ ನೀರು ನಿಂತಿದ್ದು, ಇದು ನಾವು ನೋಡಿದ ಕಾವೇರಿಯ ವೈಭವನಾ? ಎಂಬ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ಕಾವೇರಿ ನದಿಯಲ್ಲಿ ಈ ಪ್ರಮಾಣದಲ್ಲಿ ನೀರು ಆರುತ್ತಿರಲಿಲ್ಲ. ದೋಣಿಗಳ ಸಂಚಾರ ಮಾಡುವಷ್ಟು ನೀರು ಇರುತ್ತಿತ್ತು. ಹೀಗಾಗಿ ಪ್ರವಾಸಿಗರು ದೋಣಿ ವಿಹಾರ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ರಿವರ್ ರಾಫ್ಟಿಂಗ್ ಮಾಡಲೆಂದೇ ಜನ ಬರುತ್ತಿದ್ದರು.

ದುಬಾರೆಯಲ್ಲಿ ಬತ್ತಿದ ಕಾವೇರಿ ನದಿ

ಈ ಬಾರಿಯ ಬರ ಅದೆಷ್ಟು ಕಾಡಿದೆ ಎಂದರೆ ಕಾವೇರಿ ನದಿಯಲ್ಲಿ ನೀರು ಆರಿ ಹೋಗಿ ಮೈದಾನದಂತಾಗಿದೆ. ಹೀಗಾಗಿ ರಾಫ್ಟ್ ಹಾಗೂ ದೋಣಿಗಳನ್ನು ದಡದಲ್ಲಿಡಲಾಗಿದೆ. ದುಬಾರೆ ಆನೆಶಿಬಿರಕ್ಕೆ ನದಿಯನ್ನು ಆರಾಮಾಗಿ ದಾಟಿಕೊಂಡು ಹೋಗಬಹುದಾಗಿದೆ. ಇಷ್ಟೇ ಅಲ್ಲದೆ ದುಬಾರೆ ಆನೆ ಶಿಬಿರದಲ್ಲಿರುವ ಸಾಕಾನೆಗಳಿಗೆ ದಿನನಿತ್ಯ ಸ್ನಾನ ಮಾಡಿಸಲು ಕಷ್ಟವಾಗಿದೆ.

Travel News Cauvery River Has Dried Up In Dubare Elephant Camp

ಹಾಗೆನೋಡಿದರೆ ದುಬಾರೆ ಸೃಷ್ಟಿಯಾಗಿರುವುದೇ ಕಾವೇರಿ ನದಿಯಿಂದ. ಕಾವೇರಿ ನದಿ ಕವಲೊಡೆದು ಹರಿಯುವ ಮೂಲಕ ಇಲ್ಲಿ ದ್ವೀಪ ಸೃಷ್ಟಿಸಿದ್ದು, ಈ ಪ್ರದೇಶ 12,757 ಎಕರೆ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಸೆರೆ ಹಿಡಿದ ಆನೆಗಳನ್ನು ಪಳಗಿಸಿ ತರಬೇತಿ ನೀಡುವ ಕಾರ್ಯವನ್ನು ಮಾಡಲಾಗುತ್ತಿತ್ತು. ಅದು ಕ್ರಮೇಣ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದ್ದಂತೆಯೇ ಸುತ್ತ ದೋಣಿ ವಿಹಾರ, ಇದಾದ ಬಳಿಕ ರಿವರ್ ರಾಫ್ಟಿಂಗ್ ಇಲ್ಲಿ ಜನಪ್ರಿಯವಾಯಿತು. ಮಳೆಗಾಲ ಸೇರಿದಂತೆ ಎಲ್ಲ ಸಮಯದಲ್ಲಿಯೂ ಜನ ಇಲ್ಲಿಗೆ ಬರತೊಡಗಿದರು.

ಹಿಂದೆಯೂ ಇಂತಹದ್ದೇ ಪರಿಸ್ಥಿತಿ ಬಂದಿತ್ತು

ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಲಾಯಿತು. ಪ್ರವಾಸಿಗರು ವಾಸ್ತವ್ಯ ಹೂಡಲು ಜಂಗಲ್ ಲಾಡ್ಜ್ ರೆಸಾರ್ಟ್ ಇಲ್ಲಿ ತಲೆ ಎತ್ತಿತು. ವರ್ಷದಿಂದ ವರ್ಷಕ್ಕೆ ದುಬಾರೆ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸಲು ಆರಂಭಿಸಿತು. ಹೀಗಾಗಿ ದುಬಾರೆ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹೆಸರು ಮಾಡಿತು. ಪ್ರತಿದಿನವೂ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಅದರಲ್ಲೂ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಾವೇರಿ ನದಿಯಲ್ಲಿ ಸಮಯ ಕಳೆದು ಹೋಗುತ್ತಿದ್ದರು.

Travel News Cauvery River Has Dried Up In Dubare Elephant Camp

ಈ ಬಾರಿ ಅದೇ ರೀತಿಯ ಆಲೋಚನೆಯಿಂದ ಪ್ರವಾಸಿಗರು ದುಬಾರೆಗೆ ಬಂದರೆ ಅಚ್ಚರಿ ಪಡುತ್ತಾರೆ. ಅಷ್ಟೇ ಅಲ್ಲದೆ ಬೇಸರ ಪಡುತ್ತಾರೆ. ಈಗಾಗಲೇ ಹಲವರು ಖುಷಿಯಿಂದ ಬಂದವರು ನಿರಾಸೆಯಿಂದ ಹಿಂತಿರುಗಿದ ಪ್ರಸಂಗಗಳು ಬಹಳಷ್ಟು ನಡೆದಿವೆ. ಇಷ್ಟರಲ್ಲಿಯೇ ಮಳೆ ಬಂದಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈ ಬಾರಿಯೇ ಕಾವೇರಿ ನದಿ ಪಾತಾಳ ಸೇರಿದ್ದು. ಈ ಹಿಂದೆ 2003, 2007 ಮತ್ತು 2015ರಲ್ಲಿಯೂ ಕಾವೇರಿ ನದಿಯಲ್ಲಿ ನೀರು ಕ್ಷೀಣಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಮಳೆ ಸುರಿದ ಕಾರಣದಿಂದ ಯಥಾ ಸ್ಥಿತಿಗೆ ಬಂದಿತ್ತು.

ಮಳೆ ಬಂದರೆ ಜೀವ ಕಳೆ ಬರಲಿದೆ

ಮುಂಗಾರು ಮಳೆ ಕೊಡಗಿನಲ್ಲಿ ಕೈಕೊಟ್ಟ ಪರಿಣಾಮ ಕಾವೇರಿ ನದಿಯಲ್ಲಿ ನೀರು ಬತ್ತಿಹೋಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಮತ್ತೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ, ದುಬಾರೆಗೆ ಜೀವಕಳೆ ಬರಲಿದೆ. ಪ್ರವಾಸಿಗರು ಬರಲಿದ್ದು, ಪ್ರವಾಸೋದ್ಯಮವೂ ಚೇತರಿಸಿಕೊಳ್ಳಲಿದೆ. ಈಗಾಗಲೇ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಬೇಕಿತ್ತು. ಆದರೆ ಬರದ ಕಾರಣದಿಂದಾಗಿ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಮುಂದೆ ಮಳೆ ಬಂದರೆ ಎಲ್ಲವೂ ಸರಿ ಹೋಗಲಿದೆ. ಆದರೆ ಮಳೆ ಬರುವುದು ಯಾವಾಗ? ಅದೇ ಈಗಿರುವ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+