Adani: ಒಡಿಶಾದಲ್ಲಿ ₹1.08 ಲಕ್ಷ ಕೋಟಿ ಹೂಡಿಕೆ, 53,500 ಉದ್ಯೋಗ ಸೃಷ್ಟಿ ನಿರೀಕ್ಷೆ
Adani: ಭಾರತದ ಪ್ರಮುಖ ಕೈಗಾರಿಕಾ ದೈತ್ಯ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಮತ್ತು ಅಬುದಾಬಿಯ ಮೂಲದ ಇಂಟರ್ನ್ಯಾಷನಲ್ ರಿಸೋರ್ಸಸ್ ಹೋಲ್ಡಿಂಗ್ (IRH) ಜಂಟಿಯಾಗಿ ಒಡಿಶಾದಲ್ಲಿ ಭಾರಿ ಹೂಡಿಕೆ ಮಾಡಲು ಮುಂದಾಗಿವೆ. ಈ ಎರಡೂ ಸಂಸ್ಥೆಗಳು ಒಟ್ಟಾಗಿ ಸುಮಾರು 1.08 ಲಕ್ಷ ಕೋಟಿ (11.5 ಬಿಲಿಯನ್ ಡಾಲರ್) ರೂಪಾಯಿ ವೆಚ್ಚದಲ್ಲಿ ಬೃಹತ್ ಅಲ್ಯೂಮಿನಿಯಂ ಯೋಜನೆಯನ್ನು ಕೈಗೆತ್ತಿಕೊಳ್ಳಲಿವೆ. ಈ ಮೆಗಾ ಯೋಜನೆಯು ಒಡಿಶಾ ರಾಜ್ಯದ ಆರ್ಥಿಕ ಚಿತ್ರಣವನ್ನು ಬದಲಾಯಿಸುವುದಲ್ಲದೆ, ಸ್ಥಳೀಯವಾಗಿ ಭಾರಿ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಐತಿಹಾಸಿಕ ಒಪ್ಪಂದವು ಎಷ್ಟೋ ಸ್ಥಳೀಯ ನಿರುದ್ಯೋಗಿ ಕುಟುಂಬಗಳ ಉದ್ಯೋಗದ ಕನಸಿಗೆ ಸಿಕ್ಕ ಬಹುದೊಡ್ಡ ಭರವಸೆಯಾಗಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ಸಮ್ಮುಖದಲ್ಲಿ ನಡೆದ ಈ ತಿಳುವಳಿಕಾ ಒಪ್ಪಂದವು, ಆ ರಾಜ್ಯದ ಕೈಗಾರಿಕಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿದೇಶಿ ನೇರ ಹೂಡಿಕೆಯಾಗಿ ಇತಿಹಾಸ ಸೃಷ್ಟಿಸಲಿದೆ. ಶೇಕಡಾ 50ರಷ್ಟು ಸಮಾನ ಪಾಲುದಾರಿಕೆಯೊಂದಿಗೆ ರೂಪುಗೊಳ್ಳಲಿರುವ ಈ ಜಂಟಿ ಉದ್ಯಮ ಯೋಜನೆಯು ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ.

ಅದಾನಿ ಎಂಟರ್‌ಪ್ರೈಸಸ್ ಮತ್ತು ಐಆರ್‌ಎಚ್ ಸಂಸ್ಥೆಗಳು 50:50 ಜಂಟಿ ಸಹಭಾಗಿತ್ವದಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅಭಿವೃದ್ಧಿಪಡಿಸಲಿವೆ. ಕಂಪನಿಗಳ ಪ್ರಕಾರ, ಈ ಹೂಡಿಕೆಯು ಒಡಿಶಾ ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ ಪ್ರಸ್ತಾವನೆಯಾಗಿದ್ದು, ಭಾರತದ ಲೋಹಶಾಸ್ತ್ರ ಕ್ಷೇತ್ರದಲ್ಲಿ ಇದುವರೆಗಿನ ಅತಿದೊಡ್ಡ ವಿದೇಶಿ ಹೂಡಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ನಿರೀಕ್ಷೆಯಿದೆ.
ಈ ಕೈಗಾರಿಕಾ ಘಟಕದಲ್ಲಿ ವಾರ್ಷಿಕ 4 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಅಲ್ಯೂಮಿನಾ ರಿಫೈನರಿ ಹಾಗೂ 2 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಅಲ್ಯೂಮಿನಿಯಂ ಸ್ಮೆಲ್ಟರ್ ಅನ್ನು ಸ್ಥಾಪಿಸಲಾಗುತ್ತಿದೆ. ಇವುಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಅನುಕೂಲ ಆಗುವಂತೆ 4,000 ಮೆಗಾವ್ಯಾಟ್ ಸಾಮರ್ಥ್ಯದ ಪ್ರತ್ಯೇಕ ವಿದ್ಯುತ್ ಸ್ಥಾವರ ಮತ್ತು ಒಂದು ಮಿಲಿಯನ್ ಟನ್ ಸಾಮರ್ಥ್ಯದ ಪೂರಕ ಕೈಗಾರಿಕೆಗಳ ಪಾರ್ಕ್ ಅನ್ನು ಸಹ ನಿರ್ಮಿಸಲಾಗುವುದು. ಈ ಯೋಜನೆಯ ವೆಚ್ಚವನ್ನು ಎರಡು ಹಂತಗಳಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ಸುಮಾರು 66,000 ಕೋಟಿ ರೂಪಾಯಿ ಹಾಗೂ ಎರಡನೇ ಹಂತದಲ್ಲಿ 44,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಪ್ರಣಾಳಿಕೆಗಳನ್ನು ಸಿದ್ಧಪಡಸಲಾಗಿದೆ.
ಈ ಬೃಹತ್ ಅಲ್ಯೂಮಿನಿಯಂ ಯೋಜನೆಯ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 53,500 ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಹೆತ್ತವರನ್ನು ಮತ್ತು ಹುಟ್ಟಿದ ಮಣ್ಣನ್ನು ಬಿಟ್ಟು ಹೊಟ್ಟೆಪಾಡಿಗಾಗಿ ದೂರದ ಊರುಗಳಿಗೆ ವಲಸೆ ಹೋಗುವ ಕಷ್ಟ ತಪ್ತಿತಲ್ಲ ಎಂಬ ಸಂತಸ ಇಲ್ಲಿನ ಯುವಜನತೆಯಲ್ಲಿ ಕಾಣಿಸುತ್ತಿದೆ. ಯೋಜನೆಯ ನಿರ್ಮಾಣ ಹಂತದಲ್ಲೇ ಅಂದಾಜು 35,000 ಜನರಿಗೆ ಕೆಲಸದ ಅವಕಾಶಗಳು ಸಿಗಲಿದ್ದು, ಆನಂತರ ಉದ್ಯಮದ ದೈನಂದಿನ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಮತ್ತೊಂದು 18,500 ಜನರಿಗೆ ಕಾಯಂ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರ ಜೊತೆಗೆ, ಸಾರಿಗೆ, ಇಂಜಿನಿಯರಿಂಗ್, ನಿರ್ವಹಣೆ ಮತ್ತು ಇತರ ಪೂರಕ ಕೈಗಾರಿಕೆಗಳಲ್ಲೂ ಭಾರಿ ಪ್ರಮಾಣದ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಈ ಬಗ್ಗೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಅವರು ಮಾತನಾಡಿ, 'ಈ ಹೂಡಿಕೆಯು ಒಡಿಶಾದ ಅಲ್ಯೂಮಿನಿಯಂ ಮೌಲ್ಯದ ಸರಪಳಿಯನ್ನು ಗಣಿಗಾರಿಕೆ ಮತ್ತು ಸಂಸ್ಕರಣೆಯಿಂದ ಹಿಡಿದು ಪೂರಕ ಉತ್ಪಾದನಾ ವಿಭಾಗದವರೆಗೆ ಒಂದೇ ಸೂರಿನಡಿ ಜೋಡಿಸಲು ನೆರವಾಗಲಿದೆ. ಜೊತೆಗೆ ಜಾಗತಿಕ ಅಲ್ಯೂಮಿನಿಯಂ ಪೂರೈಕೆ ಸರಪಳಿಯಲ್ಲಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ,' ಎಂದು ಹೇಳಿದರು. ಅಲ್ಲದೆ, ಈ ಯೋಜನೆಯು ರಾಜ್ಯದ ದೀರ್ಘಕಾಲೀನ ಕೈಗಾರಿಕಾ ಅಭಿವೃದ್ಧಿಯ ಗುರಿಗಳಿಗೆ ಪೂರಕವಾಗಿದೆ ಎಂದೂ ಅವರು ತಿಳಿಸಿದರು.
ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಅದಾನಿ ಗ್ರೂಪ್ ಅನ್ನು ಪ್ರತಿನಿಧಿಸಿದ್ದ ಕರಣ್ ಅದಾನಿ ಅವರು ಮಾತನಾಡಿ, 'ಪ್ರಸ್ತಾವಿತ ಜಂಟಿ ಉದ್ಯಮವು ದೀರ್ಘಕಾಲೀನ ಉತ್ಪಾದನಾ ತಾಣವಾಗಿ ಒಡಿಶಾದ ಮೇಲಿರುವ ನಮ್ಮ ಗ್ರೂಪ್‌ನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯು ಉದ್ಯೋಗಗಳನ್ನು ಸೃಷ್ಟಿಸುವ, ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಭಾರತದ ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ,' ಎಂದು ತಿಳಿಸಿದರು.












Click it and Unblock the Notifications