Bengaluru Water Crisis: ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಉಂಟಾಗಲು ಕಾರಣವೇನು?
ಬೆಂಗಳೂರು, ಫೆಬ್ರವರಿ.27: ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಕೆಲವು ಭಾಗಗಳು ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಗರದ ನಿವಾಸಿಗಳ ಪರಿಸ್ಥಿತಿ ಹದಗೆಟ್ಟಿದೆ. ಪ್ರಮುಖವಾಗಿ ಮಹದೇವಪುರ, ವೈಟ್‌ಫೀಲ್ಡ್ ಮತ್ತು ವರ್ತೂರಿನ ಅನೇಕ ಎತ್ತರದ ಅಪಾರ್ಟ್‌ಮೆಂಟ್‌ಗಳು ಮತ್ತು ಐಷಾರಾಮಿ ಸಮುದಾಯಗಳನ್ನು ಹೊಂದಿರುವ ಪ್ರದೇಶಗಳು ನೀರಿನ ಬಿಕ್ಕಟ್ಟಿನ ಬಿಸಿ ಅನುಭವಿಸುತ್ತಿದ್ದಾರೆ.
ಇದರ ಜೊತೆಗೆ ಬೆಂಗಳೂರಿನಲ್ಲಿ ಫೆಬ್ರವರಿ 27 ರಂದು ಬೆಳಗ್ಗೆ 6 ರಿಂದ ಫೆಬ್ರವರಿ 28 ರ ಬೆಳಗ್ಗೆ 6 ರವರೆಗೆ 24 ಗಂಟೆಗಳ ನೀರು ಪೂರೈಕೆಯಲ್ಲಿ ವ್ಯತ್ಯಯ ಎದುರಿಸಬೇಕಾಗುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರನ್ನು ಬಳಸುವಾಗ ಜಾಗರೂಕರಾಗಿರಿ ಎಂದು ಜನರಿಗೆ ಮನವಿ ಮಾಡಿದೆ.

ಬೆಂಗಳೂರಿಗೆ ನೀರು ಬರುವುದು ಹೇಗೆ..?
ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಸಂಪರ್ಕಗಳೊಂದಿಗೆ ಕಾವೇರಿ ನದಿಯಿಂದ ನೀರನ್ನು ಪಡೆಯುತ್ತವೆ. ನಗರಕ್ಕೆ ಪ್ರತಿದಿನ 1,450 ಮಿಲಿಯನ್ ಲೀಟರ್ ಕಾವೇರಿ ನೀರು ಬರುತ್ತಿದೆ. ಇದು ಈಗ ಅಗತ್ಯಕ್ಕಿಂತ ಕಡಿಮೆಯಾಗಿದೆ. ಬೆಂಗಳೂರು ನಗರಕ್ಕೆ ತನ್ನ ದೈನಂದಿನ ಅಗತ್ಯಗಳಿಗಾಗಿ ದಿನಕ್ಕೆ ಸುಮಾರು 1,700 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ.
ಆದರೆ, ಕಾವೇರಿ ನೀರಿನ ಸಂಪರ್ಕ ಹೊಂದಿರದವರು ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಾರೆ. ಪೂರ್ವ ಬೆಂಗಳೂರಿನಲ್ಲಿರುವ ಬಹುತೇಕ ಅದ್ದೂರಿ ಅಪಾರ್ಟ್‌ಮೆಂಟ್‌ಗಳು ಸಂಪೂರ್ಣವಾಗಿ ಈ ಬೋರ್‌ವೆಲ್‌ಗಳು ಮತ್ತು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿವೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಏಕೆ..?
ಸಿಲಿಕಾನ್ ಸಿಟಿಯಲ್ಲಿ ಪ್ರಸ್ತುತ ತೀವ್ರ ನೀರಿನ ಸಮಸ್ಯೆಗೆ ಹಲವಾರು ಕಾರಣಗಳಿದ್ದರೂ, ತೀವ್ರ ಬರಗಾಲವು ಗಮನಾರ್ಹ ಕಾರಣಗಳಲ್ಲಿ ಒಂದಾಗಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಮತ್ತು ಕುಡಿಯುವ ನೀರಿಗೆ ಮಾತ್ರವಲ್ಲ. ನೀರಾವರಿ ಅಗತ್ಯಗಳಿಗೂ ನೀರು ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಮಳೆ ಕೊರತೆಯಿಂದಾಗಿ ಬೆಂಗಳೂರಿನ ಬೋರ್‌ವೆಲ್‌ಗಳು ಬತ್ತಿ ಹೋಗಿವೆ.

ಬೆಂಗಳೂರಿನ ನೀರಿನ ಟ್ಯಾಂಕರ್‌ಗಳು ಈ ಬಿಕ್ಕಟ್ಟಿನಿಂದ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ನಿವಾಸಿಗಳಿಂದ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತಿವೆ ಎಂದು ಜನರು ಆರೋಪಿಸಿದ್ದಾರೆ. ಮೊದಲು 600 ರಿಂದ 800 ರೂಪಾಯಿ ಇದ್ದ 1000 ಲೀಟರ್ ನೀರಿನ ಟ್ಯಾಂಕರ್ ಈಗ 2000 ಕ್ಕಿಂತ ಹೆಚ್ಚಿದೆ. ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತವಾಗಿರುವ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳಿಗೆ ಈ ನೀರು ಸರಬರಾಜುದಾರರಿಂದ ಖರೀದಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಈ ನೀರಿನ ಟ್ಯಾಂಕರ್‌ಗಳಿಗೆ ಬೆಲೆ ಮಿತಿಯನ್ನು ವಿಧಿಸಬೇಕು ಮತ್ತು ಹೆಚ್ಚಿನ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನೀರಿನ ಬಿಕ್ಕಟ್ಟು: ಸರ್ಕಾರ ಏನು ಮಾಡುತ್ತಿದೆ..?
ತುರ್ತು ಪರಿಸ್ಥಿತಿಯನ್ನು ಬಿಬಿಎಂಪಿ ಗಮನಿಸಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಸಭೆ ನಡೆಸಲಾಗಿದೆ. ಮಹದೇವಪುರ, ಆರ್‌ಆರ್‌ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಮತ್ತು ಯಲಹಂಕ ಸೇರಿದಂತೆ ಆದ್ಯತಾ ವಲಯಗಳಲ್ಲಿ ಮತ್ತು ಸುತ್ತಮುತ್ತಲಿನ 110 ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ನಾಗರಿಕ ಮಂಡಳಿಯು 131 ಕೋಟಿಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಿದೆ.
"ನಗರದ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ಕ್ಷೀಣತೆಯನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ. 10.84 ಲಕ್ಷ ಸಂಪರ್ಕಗಳ ಪೈಕಿ 1,200ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿದ್ದು, ಅಧಿಕಾರಿಗಳು ಅವುಗಳ ಕಾರ್ಯಚಟುವಟಿಕೆಯನ್ನು ಪುನಃಸ್ಥಾಪಿಸಲು ದುರಸ್ತಿ ಮತ್ತು ನಿರ್ವಹಣೆಗೆ ಆದ್ಯತೆ ನೀಡಿದ್ದಾರೆ" ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications