Bengaluru water crisis: ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು, ಆದರೂ ಜಲಮಂಡಳಿಯಲ್ಲಿ ಇಲ್ಲ ಪೂರ್ಣಾವಧಿ ಅಧ್ಯಕ್ಷರು!
ಬೆಂಗಳೂರು, ಫೆಬ್ರವರಿ.26: ಬೇಸಿಗೆ ಆರಂಭಕ್ಕೆ ತಿಂಗಳುಗಳಿವೆ. ಈಗಲೇ ಸಿಲಿಕಾನ್ ಸಿಟಿಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ಇದರ ಜೊತೆಗೆ ನಾಗರಿಕರಿಗೆ ಕಾವೇರಿ ನೀರು ಪೂರೈಸುವ ಹೊಣೆ ಹೊತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಗೆ ಪೂರ್ಣಾವಧಿ ಅಧ್ಯಕ್ಷರೇ ಇಲ್ಲ.
ಹೌದು, ಸರ್ಕಾರ 2010 ರ ಬ್ಯಾಚ್ ಐಎಎಸ್ ಅಧಿಕಾರಿ ರಾಮ್ ಪ್ರಸಾತ್ ಮನೋಹರ್ ಅವರನ್ನು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷರಾಗಿ ನೇಮಿಸಿದ್ದರೂ ಕೂಡ, ಅವರು ಅರೆಕಾಲಿಕ ಅಧ್ಯಕ್ಷರು. ಅವರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಈಗಾಗಲೇ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ತೀವ್ರ ನೀರಿನ ಹಾಹಾಕಾರ ಉಂಟಾಗಿದ್ದು, ಜನರು ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ನಗರದಲ್ಲಿ ಬೊರ್‌ವೆಲ್‌ಗಳನ್ನು ಕೊರೆಯಲು ಸರ್ಕಾರ ಸಿದ್ಧವಾಗಿದೆ. ಮತ್ತಷ್ಟು ಟ್ಯಾಂಕರ್‌ಗಳು ಮೂಲಕ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಿದೆ. ಆದರೆ, ಎಲ್ಲವನ್ನು ನಿಭಾಯಿಸಲು ಜಲಮಂಡಳಿಯಲ್ಲಿ ಅಧ್ಯಕ್ಷರಿಲ್ಲದಿರುವುದೂ ಕೂಡ ಒಂದು ತೊಂದರೆಯೇ ಆಗಿದೆ.
ಬಿಡಬ್ಲ್ಯುಎಸ್‌ಎಸ್‌ಬಿ ಅರೆಕಾಲಿಕ ಅಧ್ಯಕ್ಷರು ನಿಭಾಯಿಸಬಲ್ಲ ಸಣ್ಣ ಸಂಸ್ಥೆಯಲ್ಲ ಎಂದು ನಿವೃತ್ತ ಇಂಜಿನಿಯರ್‌ಗಳು ಹೇಳುತ್ತಾರೆ. ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಮತ್ತು ಪ್ರಧಾನ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿಗಳಾದ ಎ ರವೀಂದ್ರ ಮತ್ತು ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಜಲಮಂಡಳಿಯ ನೇತೃತ್ವ ವಹಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
''ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವವಿದ್ದು, 110 ಗ್ರಾಮಗಳ ಶೇ.60ರಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಮೇಲ್ಮೈ ನೀರು ಕೆಲವು ದಿನಗಳ ಕಾಲ ಉಳಿಯಬಹುದು ಅಷ್ಟೇ. ಆದರೆ ಇದು ಸಾಕಾಗುವುದಿಲ್ಲ. ಅಂತರ್ಜಲ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಸಮಸ್ಯೆ ಗಂಭೀರವಾಗಿದೆ ಆದರೆ ಬಿಡಬ್ಲ್ಯುಎಸ್‌ಎಸ್‌ಬಿಗೆ ಪೂರ್ಣಾವಧಿ ಅಧ್ಯಕ್ಷರಿಲ್ಲ. ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಪರಿಸ್ಥಿತಿ ನಿಯಂತ್ರಿಸುವುದು ಕಷ್ಟ" ಎಂದು ಹೆಸರು ಹೇಳಲು ಇಚ್ಛಿಸದ ನಿವೃತ್ತ ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್ ತಿಳಿಸಿದ್ದಾರೆ.
"ನೀರಿನ ಸಮಸ್ಯೆಯ ಚರ್ಚೆಯನ್ನು ಬೇಸಿಗೆ ಕಾಲಕ್ಕೆ ಸೀಮಿತಗೊಳಿಸಬಾರದು. ಬೆಂಗಳೂರು ದೇಶದಲ್ಲಿ ಪ್ರಮುಖ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿರುವ ನಗರ. ಆದರೆ, ನೀರಿನ ಕೊರತೆಯನ್ನು ಪರಿಹರಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿಲ್ಲ" ಎಂದು ಮತ್ತೊಬ್ಬ ಎಂಜಿನಿಯರ್ ಹೇಳಿದ್ದಾರೆ.
ಬೆಂಗಳೂರಿನ 58 ಸ್ಥಳಗಳಲ್ಲಿ ನೀರಿನ ತೀವ್ರ ಅಭಾವ
ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ನೀರು ಪೂರೈಕೆ ಸವಾಲು ಎದುರಿಸುತ್ತಿದೆ. ಈ ಮಧ್ಯೆ ನೀರಿನ ಅಭಾವ ಇರುವ 58 ಸ್ಥಳಗಳಲ್ಲಿ ತೀವ್ರ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲೆಲ್ಲೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂದು ಬಿಬಿಎಂಪಿ ಗುರುತಿಸುತ್ತಿದೆ.,
ಆರ್‌ಆರ್ ನಗರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ಜೊತೆಗೆ ಮಹದೇವಪುರ ಮತ್ತು ಬೊಮ್ಮನಹಳ್ಳಿಯ ಟೆಕ್ ಕಾರಿಡಾರ್‌ಗಳಲ್ಲಿ ಹೆಚ್ಚಾಗಿ ನೀರಿನ ಅಭಾವ ಕಂಡು ಬಂದಿದೆ ಎಂದು ಬಿಬಿಎಂಪಿ ಪ್ರಾಥಮಿಕ ವರದಿ ತಿಳಿಸಿದೆ. ಇನ್ನು, ಬೆಂಗಳೂರಿನಾದ್ಯಂತ ನೀರಿನ ಅಭಾವವಿರುವ ಅಂದಾಜು 257 ಪಾಯಿಂಟ್‌ಗಳನ್ನು ಜಲಮಂಡಳಿ ಗುರುತಿಸಿದೆ. ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಜಲಮಂಡಳಿ ಕ್ರಮ ಕೈಗೊಳ್ಳುತ್ತಿದೆ.












Click it and Unblock the Notifications