ಹೊಸ ಪರ್ಮಿಟ್ ವಿರೋಧಿಸಿ ಬೆಂಗಳೂರಿನಲ್ಲಿ ಆಟೋ ಬಂದ್

ಮಹಾರಾಣಿ ಕಾಲೇಜು ಮುಂದಿರುವ ಸ್ವಾತಂತ್ರ್ಯ ಉದ್ಯಾನದ ಎದಿರು ಧರಣಿಗೆ ಕುಳಿತಿರುವ ಆಟೋ ಚಾಲಕರ ಸಂಘ ಹೆಚ್ಚುವರಿ ಆಟೋಗಳಿಗೆ ಪರ್ಮಿಟ್ ನೀಡಬಾರದೆಂದು ಆಗ್ರಹಿಸುತ್ತಿದೆ. ಈಗಾಗಲೆ 1 ಲಕ್ಷ ಆಟೋಗಳು ನಗರದಲ್ಲಿ ಸಂಚರಿಸುತ್ತಿವೆ. ಇವುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಿದರೆ ವಾಯುಮಾಲಿನ್ಯ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂಬುದು ಅವರ ವಾದ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಉಪಾಧ್ಯಕ್ಷ ಉಮೇಶ್ ಅವರು, "ವಾಹನ ದಟ್ಟಣೆಯಿಂದ ನಾಗರಿಕರು ಸಾಕಷ್ಟು ತಾಪತ್ರಯ ಎದುರಿಸುತ್ತಿದ್ದಾರೆ. ನಾಗರಿಕರ ಬಗ್ಗೆ ಸರಕಾರಕ್ಕೆ ಕಾಳಜಿಯಿದ್ದರೆ ನೂತನ ಆಟೋ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು" ಎಂದು ಆಗ್ರಹಿಸಿದರು.
ಶೇ. 90ರಷ್ಟು ಆಟೋಗಳು ರಸ್ತೆ ಸಂಚಾರ ನಿಲ್ಲಿಸಿವೆಯೆಂಬುದು ಉಮೇಶ್ ಅವರ ಹೇಳಿಕೆ. ಆದರೆ, ಬಸ್, ರೈಲು, ವಿಮಾನ ನಿಲ್ದಾಣದಿಂದ ಬರುವ ಜನರಿಗೆ ಈ ಆಟೋ ಮುಷ್ಕರದಿಂದ ತೊಂದರೆಯಾಗಿರುವುದಂತೂ ನಿಜ. ಈ ಒಂದು ದಿನದ ಆಟೋ ಮುಷ್ಕರಕ್ಕೆ ಸಿಐಟಿಯು ಕೂಡ ಬೆಂಬಲ ವ್ಯಕ್ತಪಡಿಸಿದೆ.
ಆಟೋ ಮುಷ್ಕರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಯನಗರದ ನಿವಾಸಿ ರಾಘವೇಂದ್ರ ಅವರು, "ಇಲ್ಲಿ ಇಬ್ಬರದೂ ತಪ್ಪಿದೆ. ಹೆಚ್ಚು ಹೊಗೆಯುಗುಳುವ 2-ಸ್ಟ್ರೋಕ್ ಆಟೋಗಳನ್ನು ತ್ಯಜಿಸಲು ಆಟೋದವರೂ ಒಪ್ಪಬೇಕು ಮತ್ತು ಹೆಚ್ಚುವರಿ ಆಟೋಗಳಿಗೆ ಪರ್ಮಿಟ್ ನೀಡದಂತೆ ಸರಕಾರ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
2-ಸ್ಟ್ರೋಕ್ ಇಂಜಿನ್ ಇರುವ ಆಟೋಗಳನ್ನು ಮಾರಾಟ ಮಾಡಿದವರಿಗೆ 15 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ. 2-ಸ್ಟ್ರೋಕ್ ಇಂಜಿನ್ ಕಡಿಮೆಯಾದರೆ ವಾಯುಮಾಲಿನ್ಯ ಶೇ.50ರಷ್ಟು ನಿಯಂತ್ರಣಕ್ಕೆ ಬರುತ್ತದೆ ಎಂಬುದು ಅವರ ವಾದ.












Click it and Unblock the Notifications