Male Mahadeshwara Hill: ಮಾರ್ಚ್ 11ರವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬೈಕ್, ಆಟೋ ಸಂಚಾರ ನಿರ್ಬಂಧ-ಕಾರಣ ಏನು?
ಚಾಮರಾಜನಗರ, ಮಾರ್ಚ್, 06: ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರಳುವ ದ್ವಿಚಕ್ರ ವಾಹನಗಳು, ಆಟೋರಿಕ್ಷಾ ಗೂಡ್ಸ್ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಹಾಗೂ ಜಿಲ್ಲೆ ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಅಪಘಾತಗಳು ಉಂಟಾಗುವ ಸಂಭವ ಇರುತ್ತದೆ.

ಆದ್ದರಿಂದ ಅರಣ್ಯ ಪ್ರದೇಶ ಮತ್ತು ತುಂಬಾ ಕಡಿದಾದ ತಿರುವುಗಳು ಇರುವುದರಿಂದ ಎಲ್ಲಾ ಮಾದರಿಯ ದ್ವಿಚಕ್ರ, ತ್ರಿಚಕ್ರ (ಆಟೋರಿಕ್ಷಾ ಮತ್ತು ಗೂಡ್ಸ್ ವಾಹನಗಳು ಸೇರಿದಂತೆ) ಇನ್ನಿತರ ವಾಹನಗಳನ್ನು ಮಾರ್ಚ್ 7ರ ಬೆಳಗ್ಗೆ ಆರು ಗಂಟೆಯಿಂದ ಮಾರ್ಚ್ 11ರ ಸಂಜೆ 7 ಗಂಟೆಯವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಸಿಟಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.
ಮಾದಪ್ಪನ ಬೆಟ್ಟಕ್ಕೆ ಹರಿದುಬಂದ ಭಕ್ತರ ದಂಡು: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಭಕ್ತರು ತೆರಳುತ್ತಿದ್ದಾರೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಾದಯಾತ್ರೆ ಭಕ್ತಾದಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಮೂರು ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸುತ್ತಿದ್ದಾರೆ. ಇದಲ್ಲದೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.
ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ರಾತ್ರಿಯಿಡಿ ದೇವರ ಸ್ಮರಣೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಹತ್ತಾರು ವರ್ಷಗಳಿಂದ ಹರಕೆ ಹೊತ್ತು ಭಕ್ತಾದಿಗಳು ಹಗಲು-ರಾತ್ರಿ-ಚಳಿ-ಬಿಸಿಲೆನ್ನದೇ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಶಾಗ್ಯ ಗ್ರಾಮದ ಬಳಿ ಪಾದಯಾತ್ರೆ ಮೂಲಕ ಬರುವಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ವರ್ಷವೂ ನೂರಾರು ಭಕ್ತಾದಿಗಳು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಾರ್ಗ ಮಧ್ಯದ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾ ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹ ಭೋಜನವನ್ನು ಸವಿದು ಸಂಚರಿಸುತ್ತಿರುವುದು ಹನೂರು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದೆ.
ಪಾದಯಾತ್ರೆಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಸುಮಾರು 10 ಕಡೆ ಮಿನಿ ಟ್ಯಾಂಕ್‌ಗಳನ್ನು ಇಡಲಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾಳು ಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಬರುವಂತಹ ಭಕ್ತಾದಿಗಳಿಗೆ ತೊಂದರೆಯಾಗದಿರಲಿ ಎಂದು ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳನ್ನು ಇಡಲಾಗುತ್ತಿದೆ.
ಪಾದಯಾತ್ರೆಯ ಮೂಲಕ ಬರುವಂತಹ ಭಕ್ತಾದಿಗಳು ತಾವು ಬಳಸುವ ಪ್ಲಾಸ್ಟಿಕ್ ರಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ಪ್ರಾಧಿಕಾರದ ವತಿಯಿಂದ ಇಡಲಾಗಿರುವ ಕಸದ ಬುಟ್ಟಿಗಳನ್ನು ಬಳಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಮಲೆ ಮಹದೇಶ್ವರ ಬೆಟ್ಟ ವನ್ನಾಗಿ ಮಾಡಲು ಪ್ರತಿಯೊಬ್ಬ ಭಕ್ತರು ಸಹಕರಿಸಬೇಕು, ಕುಡಿಯುವ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿಕೊಳ್ಳಬೇಕು ಎಂದು ಪ್ರಾಧಿಕಾರದವರು ಮನವಿ ಮಾಡಿದ್ದಾರೆ.
ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುತ್ತಿರುವ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತ ಭಕ್ತಿ ಭಾವದಿಂದ ತೆರಳುತ್ತಿದ್ದರೆ ಯುವಕರು ತಮಟೆ ಬಾರಿಸುತ್ತಾ ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಾ ತೆರಳುತ್ತಿದ್ದಾರೆ. ಇನ್ನು ವಯೋವೃದ್ಧರು ಮಾದಪ್ಪನ ಹಾಡುಗಳನ್ನು ಹಾಡಿಕೊಂಡು ಉಘೇ ಮಾದಪ್ಪ ಉಘೇ ಮೈಕಾರ ಎಂದು ಘೋಷಣೆ ಕೂಗಿ ಭಕ್ತಿ ಭಾವದಿಂದ ತೆರಳುತ್ತಿರುವುದು ಸಾಮಾನ್ಯವಾಗಿದೆ.












Click it and Unblock the Notifications