ಹೆತ್ತವರಿಗೆ ಗೂಗಲ್ ಆಫೀಸ್ ಟೂರ್ ಮಾಡಿಸಿದ ಟೆಕ್ಕಿ: ಈ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡ ಶೌರ್ಯನ್ ಶರ್ಮಾ
ಪ್ರತಿಯೊಬ್ಬರ ಜೀವನದಲ್ಲೂ ನಾವು ಕಂಡ ಕನಸಿನ ಹುದ್ದೆಯನ್ನ ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ಹಾಗೆಯೇ ಸಿಕ್ಕ ನಂತರ ಆ ಯಶಸ್ಸನ್ನ ನಮ್ಮ ಹೆತ್ತವರೊಂದಿಗೆ ಆಚರಿಸುವುದು ಕೂಡ ಅಷ್ಟೇ ಮುಖ್ಯ. ಪೋಷಕರ ಕೇವಲ ನಮ್ಮ ಸಂತೋಷಕ್ಕಾಗಿ ಅವರ ಎಷ್ಟೋ ಆಸೆ , ಕನಸ್ಸುಗಳನ್ನಾ ತ್ಯಾಗ ಮಾಡಿರುತ್ತಾರೆ. ಹಾಗಾಗಿ ನಮ್ಮ ಜೊತೆ ಅವರು ಕೂಡ ಆ ಕ್ಷಣಗಳನ್ನು ಸಂಭ್ರಮಿಸಬೇಕು.
ಇನ್ನೂ ತಂತ್ರಜ್ಞಾನ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡ ಯುವಜನರಿಗೆ ಈ ಟೆಕ್ ದೈತ್ಯ ಗೂಗಲ್‌ನಲ್ಲಿ ಕೆಲಸ ಪಡೆಯಲೇಬೇಕು ಎನ್ನುವ ಕನಸಿರುತ್ತದೆ. ಇಂತಹದೊಂದು ಕನಸನ್ನ ಕಂಡು ಈಗ ನನಸು ಮಾಡಿಕೊಂಡಿರುವ ಹೈದರಾಬಾದ್ ಗೂಗಲ್ ಕಚೇರಿಯ ಉದ್ಯೋಗಿ ಶೌರ್ಯನ್ ಶರ್ಮಾ, ತಮ್ಮ ಯಶಸ್ಸಿನ ಜೊತೆಗೆ ಕುಟುಂಬದ ಹೆಮ್ಮೆಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ಗೂಗಲ್ ಸೇರಿದ ಅವರು, ತಮ್ಮ ಪೋಷಕರನ್ನು ಗೂಗಲ್ ಆಫೀಸಿಗೆ ಕರೆದುಕೊಂಡು ಹೋದಾಗ ಅವರ ಪೋಷಕರ ಕಣ್ಣಲ್ಲಿ ಕಂಡ ಆನಂದವನ್ನು ಎಲ್ಲರಿಗೂ ಮನಮುಟ್ಟುವಂತೆ ವಿವರಿಸಿದ್ದಾರೆ.
ಹೈದರಾಬಾದ್ ಗೂಗಲ್ ಕಚೇರಿ ವೃತ್ತಿ ಬದುಕಿನ ಹೊಸ ಆರಂಭ
ಶೌರ್ಯನ್ ಶರ್ಮಾ ಅವರು ಹೈದರಾಬಾದ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ಟೆಕ್ನಿಕಲ್ ಸಲ್ಯೂಷನ್ಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಆರು ತಿಂಗಳ ಸುಂದರ ಆಫೀಸ್ ದಿನಗಳ ಬಗ್ಗೆ ಅವರು ಸುದೀರ್ಘವಾಗಿ ಬರೆದುಕೊಂಡಿದ್ದರು. "ನಾನು ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಈಗಲೂ ನನಗೆ ನಂಬಲು ಆಗುತ್ತಿಲ್ಲ. ಪ್ರತಿ ದಿನವೂ ಒಂದು ಹೊಸ ಆರಂಭದಂತೆ ಭಾಸವಾಗುತ್ತಿದೆ" ಎಂದು ಅವರು ತಮ್ಮ ವೃತ್ತಿ ಬದುಕಿನ ಅನುಭವವನ್ನು ತೆರೆದಿಟ್ಟಿದ್ದಾರೆ. ಈ ಸಂಸ್ಥೆಯು ಅವರಿಗೆ ಕೇವಲ ಉದ್ಯೋಗವನ್ನಷ್ಟೇ ಅಲ್ಲದೆ, ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಕೊಟ್ಟಿದೆ.
ಗೂಗಲ್‌ನಂತಹ ದೊಡ್ಡ ಕಂಪನಿಯಲ್ಲಿನ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಶೌರ್ಯನ್, ಅಲ್ಲಿನ ಗುಣಮಟ್ಟದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞನಾಗಿ ಬೆಳೆಯಲು ಗೂಗಲ್ ಯಾವ ರೀತಿ ವೇದಿಕೆ ಕಲ್ಪಿಸಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
"ಗೂಗಲ್ ಅನ್ನು ಗೂಗಲ್ ಆಗಿ ಮಾಡಿರುವುದೇ ಅಲ್ಲಿನ ಗುಣಮಟ್ಟ. ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಕೆಲಸದಲ್ಲಿ ಅತ್ಯುತ್ತಮವಾದುದನ್ನು ನೀಡಲು ಶ್ರಮಿಸುತ್ತಾರೆ. ಇಲ್ಲಿ ವ್ಯಕ್ತಿಗಳಿಗಿಂತ ವಿಚಾರಗಳಿಗೆ, ಹೊಸ ಐಡಿಯಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಂತಹ ವಾತಾವರಣವು ತಮ್ಮನ್ನು ತಾವೇ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳಲು ಪ್ರೇರೇಪಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕುಟುಂಬದವರಿಗೆ ಹೆಮ್ಮೆ ಮತ್ತು ಖುಷಿ
ವೃತ್ತಿಪರ ಯಶಸ್ಸಿನ ಆಚೆಗೆ, ಶೌರ್ಯನ್ ಅವರಿಗೆ ತುಂಬ ಇಷ್ಟ ಆಗಿರುವುದು ತಮ್ಮ ಕುಟುಂಬದ ಅಂದರೆ ಹೆತ್ತವರು ಗೂಗಲ್ ಆಫೀಸ್ಸಿಗೆ ಭೇಟಿ ನೀಡಿರುವುದು. ಗೂಗಲ್ ಕಚೇರಿಯ ಒಳಗೆ ತಮ್ಮ ಕುಟುಂಬದ ಸದಸ್ಯರನ್ನು ಕರೆತಂದ ಆ ಒಂದು ಕ್ಷಣವನ್ನ ಅವರು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.
"ಬಾಲ್ಯದಲ್ಲಿ ನಾನು ಗೂಗಲ್‌ನಂತಹ ದೊಡ್ಡ ಸಂಸ್ಥೆಯಕೆಲಸ ಮಾಡುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅಂತದರಲ್ಲಿ ನಾನು ಕೆಲಸ ಮಾಡುವ ಜಾಗವನ್ನು ನನ್ನ ಕುಟುಂಬಕ್ಕೆ ತೋರಿಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಒದಗಿ ಬಂದ ಅತಿ ದೊಡ್ಡ ಸೌಭಾಗ್ಯ. ನನ್ನ ಕಚೇರಿಯನ್ನು ನೋಡಿದಾಗ ಅವರ ಕಣ್ಣುಗಳಲ್ಲಿ ಕಂಡ ಹೆಮ್ಮೆ, ಉತ್ಸಾಹ ಹಾಗೂ ಖುಷಿ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ. ಈ ನೆನಪನ್ನು ನಾನು ಸದಾ ಕಾಲ ಕಾಪಾಡಿಕೊಳ್ಳುತ್ತೇನೆ" ಎಂದು ಶೌರ್ಯನ್ ಶರ್ಮಾ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications