ಬಡತನ, ನಕ್ಸಲಿಸಂಗೆ ಹೆಸರಾಗಿದ್ದ ಈ ಜಿಲ್ಲೆಯಲ್ಲಿಂದು 'ರಾಗಿ ಕ್ರಾಂತಿ': ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ IAS ಅಧಿಕಾರಿ
ಒಂದು ಕಾಲದಲ್ಲಿ ಜಾರ್ಖಂಡ್‌ನ ಗುಮ್ಲಾ ಜಿಲ್ಲೆ ಎಂದರೆ ಬರಿ ಬಡತನ ಮತ್ತು ನಕ್ಸಲಿಸಂಗೆ ಹೆಸರುವಾಸಿಯಾಗಿತ್ತು. ಆದರೆ ಇಂದು ಈ ಜಿಲ್ಲೆಯ ಹೆಸರು ವಿಶ್ವದಾದ್ಯಂತ ಕೇಳಿಬರುತ್ತಿದೆ. ಬಡತನ ಅಥವಾ ನಕ್ಸಲಿಸಂಗೆ ಅಲ್ಲಾ, ಬದಲಿಗೆ ಗುಮ್ಲಾದಲ್ಲಿ ನಡೆಯುತ್ತಿರುವ ರಾಗಿ ಕ್ರಾಂತಿ.
ಹೌದು, ಲಿಂಕ್ಡ್‌ಇನ್‌ನಲ್ಲಿ ಪೋಮಿಲ್ ರಾಜ್ ಎಂಬುವವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದ ಗುಮ್ಲಾ ಇಂದು ಪ್ರತಿಷ್ಠಿತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ಕೇಸ್ ಸ್ಟಡಿಯಾಗಿ ಬದಲಾಗಿದೆ. ಇದು ನಿಜಕ್ಕೂ ಸಂತಸ ಸುದ್ದಿ.

ಗುಮ್ಲಾ ಜಿಲ್ಲೆಯಲ್ಲಿ ಐಎಎಸ್ ಸುಶಾಂತ್ ಗೌರವ್ ತಂದ ಬದಲಾವಣೆ
ಈ ಬದಲಾವಣೆಗೆ ಮುಖ್ಯವಾಗಿ ಕಾರಣರಾದವರು ಐಎಎಸ್ ಅಧಿಕಾರಿ ಸುಶಾಂತ್ ಗೌರವ್. ಇವರು ಗುಮ್ಲಾ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ರೈತರಿಗೆ ಭತ್ತದ ಬದಲಿಗೆ ರಾಗಿಯನ್ನು ಬೆಳೆಯಲು ಹೆಚ್ಚು ಪ್ರೋತ್ಸಾಹವನ್ನು ನೀಡಿದರು. ರಾಗಿಯಿಂದಾಗುವ ಲಾಭಗಳನ್ನ ರೈತರಿಗೆ ಅರ್ಥವಾಗುವಂತೆ ವಿವರಿಸಿ ಹೇಳಿದರು. ಒಂದು ಕಾಲದಲ್ಲಿ ರಾಗಿಯ ಬಗ್ಗೆ ಏನೂ ತಿಳಿಯದ ಊರಿನಲ್ಲಿ ಇಂದು ಬರೋಬ್ಬರಿ 30,000ಕ್ಕೂ ಹೆಚ್ಚು ರೈತರು 30,000ಕ್ಕೂ ಹೆಚ್ಚು ಎಕರೆ ಜಾಗದಲ್ಲಿ ಯಶಸ್ವಿಯಾಗಿ ರಾಗಿ ಬೆಳೆಯುತ್ತಿದ್ದಾರೆ.
ಮಹಿಳಾ ಸ್ವಸಹಾಯ ಸಂಘಗಳು ಬೆಂಬಲ
ಕೇವಲ ರಾಗಿಯನ್ನ ಬೆಳೆದು ಸುಮ್ಮನಾಗಲಿಲ್ಲ, ಬದಲಿಗೆ ರಾಗಿಯಿಂದ ತಯಾರಿಸಲಾಗುವ ಮೌಲ್ಯವರ್ಧಿತ ಉತ್ಪನ್ನಗಳನ್ನ ತಯಾರಿಸುವತ್ತ ಕೂಡ ಜಿಲ್ಲಾಡಳಿತ ಗಮನಹರಿಸಿದೆ. ಈ ಕುರಿತು ಮಹಿಳಾ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಊರಿನ ಮಹಿಳೆಯರಿಗೆ ಬೇಕಾದ ಎಲ್ಲಾ ರೀತಿಯ ತರಬೇತಿಗಳನ್ನು ಮತ್ತು ಆರ್ಥಿಕ ನೆರವು ಸಹ ನೀಡಲಾಯಿತು. ಇದರಿಂದಾಗಿ ಮಹಿಳೆಯರು ರಾಗಿಯಿಂದ ಮಾಡಲಾಗುವ ರುಚಿಕರ ಮತ್ತು ಪೌಷ್ಟಿಕ ಆಹಾರಗಳಾದ ಲಡ್ಡು, ಕುಕ್ಕೀಸ್, ಚಿಪ್ಸ್, ಭುಜಿಯಾ, ನಿಮ್ಕಿ ಇನ್ನು ಹತ್ತು ಹಲವು ತರಹದ ತಿಂಡಿಗಳನ್ನ ತಯಾರಿಸಲು ಆರಂಭಿಸಿದರು.
ನಂತರ ಮಹಿಳೆಯರು ತಯಾರಿಸಿದ ಈ ಉತ್ಪನ್ನಗಳನ್ನ ಸರ್ಕಾರವು ಶಾಲಾ ಮಕ್ಕಳಿಗೆ ವಿತರಿಸುವ ಯೋಜನೆ ಜಾರಿ ಮಾಡಿತು. ಇದರಿಂದ ಜಿಲ್ಲೆಯ ಮಕ್ಕಳಲ್ಲಿ ಕಾಡುತ್ತಿದ್ದ ರಕ್ತಹೀನತೆ ಮತ್ತು ಅಪೌಷ್ಟಿಕತೆಯಂತಹ ಅನೇಕ ಖಾಯಿಲೆಗಳು ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿತು.

ಇನ್ನೂ ಗುಮ್ಲಾದಲ್ಲಿ ಬೆಳೆದ ರಾಗಿ ಹಾಗೂ ಅದರ ಉತ್ಪನ್ನಗಳು ಹೆಚ್ಚಾಗಿ ಸ್ಥಳೀಯವಾಗಿಯೇ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿವೆ. 2023ರ ಮೇ ತಿಂಗಳಿನಿಂದ ಈಚೆಗೆ ಜಿಲ್ಲೆಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯು 43 ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಇದರ ಜೊತೆಗೆ, ಇನ್ನೊಂದು ಸಂತಸದ ವಿಷಯವೆಂದರೆ ಜಿಲ್ಲೆಯಲ್ಲಿ ವಿಶೇಷವಾದ 'ಮಿಲ್ಲೆಟ್ ಕೆಫೆ' ಕೂಡ ಆರಂಭವಾಗಿದ್ದು, ಜನರಿಗೆ ಸಿರಿಧಾನ್ಯಗಳ ಖಾದ್ಯಗಳನ್ನು ಉಣಬಡಿಸುವ ಮೂಲಕ ಹೊಸದಾದ ಮಾರುಕಟ್ಟೆಯನ್ನ ಸೃಷ್ಟಿಸಿದೆ.
'ಪ್ರಧಾನ ಮಂತ್ರಿ ಪ್ರಶಸ್ತಿ' ಹಾಗೂ ಹಾರ್ವರ್ಡ್ ಕೇಸ್ ಸ್ಟಡಿ ಗರಿ
ಗುಮ್ಲಾ ಜಿಲ್ಲೆಯನ್ನು ಬಡತನದಿಂದ ಮೇಲೆತ್ತಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸಿದ ಈ ಯಶಸ್ಸಿಗಾಗಿ ಐಎಎಸ್ ಅಧಿಕಾರಿ ಸುಶಾಂತ್ ಗೌರವ್ ಅವರಿಗೆ ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ ನೀಡುವ ಪ್ರತಿಷ್ಠಿತ 'ಪ್ರಧಾನ ಮಂತ್ರಿ ಪ್ರಶಸ್ತಿ' ಒಲಿದು ಬಂದಿದೆ.
ಕೇವಲ ಭಾರತದ ಮಟ್ಟದಲ್ಲಿ ಮಾತ್ರವಲ್ಲ, ಈ ಅಭಿವೃದ್ಧಿಯ ಮಾದರಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರತಿಷ್ಠಿತ 'ಹಾರ್ವರ್ಡ್ ಬಿಸಿನೆಸ್ ಸ್ಕೂಲ್' ಗುಮ್ಲಾ ಮಾದರಿಯನ್ನು ತನ್ನ ಕೇಸ್ ಸ್ಟಡಿಯಾಗಿ ಅಳವಡಿಸಿಕೊಂಡು ಅಧ್ಯಯನ ನಡೆಸುತ್ತಿದೆ. ಬದಲಾವಣೆ ಮಾಡಬೇಕು ಎನ್ನುವ ಮನಸ್ಸೊಂದಿದ್ದರೆ ವ್ಯವಸ್ಥೆಯನ್ನು ಹೇಗೆ ಬೇಕಾದರೂ ಬದಲಾಯಿಸಬಹುದು ಎಂಬುದಕ್ಕೆ ಗುಮ್ಲಾ ಜಿಲ್ಲೆಯೇ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.














Click it and Unblock the Notifications