Hiriyur By Election 2026: ಹಿರಿಯೂರು ಕಣದ ಮೇಲೆ JDS ಕಣ್ಣು; ಅವಕಾಶ ನೀಡುವಂತೆ ಕುಮಾರಸ್ವಾಮಿ ಬೇಡಿಕೆ
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಸುಧಾಕರ್ ಅವರ ನಿಧನದಿಂದ ತೆರವಾದ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಕ್ಷಣದಲ್ಲಾದರೂ ರಾಜ್ಯ ಚುನಾವಣೆ ಆಯೋಗ ಉಪಚುನಾವಣೆ (Hiriyur By Election 2026) ಘೋಷಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಪ್ರಮುಖ ಉದ್ಯಮಿಗಳು, ವ್ಯಾಪಾರಿಗಳು ಸಕ್ರಿಯವಾಗಿದ್ದಲ್ಲದೇ, ಜೆಡಿಎಸ್-ಬಿಜೆಪಿ ಮಧ್ಯೆ ಹಿರಿಯೂರು ಸ್ಪರ್ಧೆ ವಿಚಾರವಾಗಿ ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಇದೇ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿ ಸಚಿವರೊಬ್ಬರು ಮೃತರಾದ ಬಳಿಕ ಅವರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಿಸುತ್ತಿರುವ ಜಿಲ್ಲೆಯಾಗಿದೆ. ಉಪಚುನಾವಣೆ ದಿನಾಂಕ ಸಂಬಂಧ ಅಧಿಕೃತ ಘೋಷಣೆ ಶೀಘ್ರವೇ ಪ್ರಕಟವಾಗಲಿದೆ. ಇತ್ತ ಜೆಡಿಎಸ್ ತಾನು ಸ್ಪರ್ಧಿಸುವುದಾಗಿ ಮೈತ್ರಿ ಪಕ್ಷ ಬಿಜೆಪಿಗೆ ತಿಳಿಸಿದೆ. ಜೆಡಿಎಸ್ ನಾಯಕರು ಸದರಿ ಉಪಚನಾವಣೆಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಕಾಂಗ್ರೆಸ್ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.

ಹಿರಿಯೂರಲ್ಲಿ ನಾನು ಸ್ಪರ್ಧಿಸಲ್ಲ: ಕುಮಾರಸ್ವಾಮಿ
ಹಿರಿಯೂರು ಉಪ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಇದೆಲ್ಲ ವದಂತಿ ನಂಬಬೇಡಿ ಎಂದು ಗುರುವಾರ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ಸ್ಪರ್ಧಿಸಲು ಕ್ಷೇತ್ರ ಬಿಟ್ಟುಕೊಡುವಂತೆ ಮಿತ್ರ ಪಕ್ಷ ಬಿಜೆಪಿಗೆ ಬಹಿರಂಗ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿಬಿ ಸುರೇಶ್ ಬಾಬು ಅವರು ಧ್ವನಿಗೂಡಿಸಿದ್ದಾರೆ.
ಜೆಡಿಎಸ್ ಪಕ್ಷವು ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆ ಇದೆ. ಈ ಸಂಬಂಧ ಕ್ಷೇತ್ರದಲ್ಲೂ ಎರಡು ಮೂರು ಬಾರಿ ಸಭೆ ಮಾಡಿದ್ದು, ಸ್ಥಳೀಯರ ಅಭಿಪ್ರಾಯ ಪಡೆದಿದ್ದೇನೆ. ಈ ಬಗ್ಗೆ ಬಿಜೆಪಿ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ. ಪಕ್ಷದ ಇಷ್ಟದಂತೆ ಜೆಡಿಎಸ್ ಅಭ್ಯರ್ಥಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಹಿರಿಯೂರಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಇದೆ. ಆದ್ದರಿಂದ ಮೈತ್ರಿ ಟಿಕೆಟ್ ಅನ್ನು ಜೆಡಿಎಸ್‌ಗೆ ನೀಡಬೇಕು. ಇದೇ ಸೂಕ್ತ. ಜೆಡಿಎಸ್ ತೀರ್ಮಾನಿಸಿ ಸ್ಥಳೀಯ ಜೆಡಿಎಸ್ ನಾಯಕರಿಗೆ ಟಿಕೆಟ್ ನೀಡಲಾಗುವುದು ಎಂದು ಸುರೇಶ್ ಬಾಬು ಅವರು ಕೋರಿದ್ದಾರೆ.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆಗೆ ಬೇಡಿಕೆ
ಮೈತ್ರಿ ಪಕ್ಷಗಳ ನಡುವೆ ಒಂದು ಸಮನ್ವಯ ಸಮಿತಿ ರಚನೆ ಆಗಬೇಕು. ಇಂತಹ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ನಾಯಕರ ಆಗ್ರಹವಾಗಿದೆ. ಎರಡು ಪಕ್ಷಗಳ ವರಿಷ್ಠರು ಈ ಬಗ್ಗೆ ಗಮನಹರಿಸಬೇಕು. ಮುಂದೆ ಬರಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯಲ್ಲೂ ಸ್ಪರ್ಧಿಸುವಾಗಲೂ ಸಮಿತಿಯಡಿ ನೀರ್ಣಯ ಕೈಗೊಳ್ಳಬಹುದಾಗಿದೆ. ಜಿಬಿಎ ಎಲೆಕ್ಷನ್‌ನಲ್ಲಿ ಜೆಡಿಎಸ್ ಪಕ್ಷಕ್ಕೂ ಸ್ಥಾನ ನೀಡಬೇಕು. ಎಲ್ಲಿ, ಎಷ್ಟು ಸ್ಥಾನ ನೀಡಬೇಕೆಂದು ನಿರ್ಧರಿಸಲು ಸಮನ್ವಯ ಸಮಿತಿ ರಚಿಸಬೇಕೆಂದು ಮೈತ್ರಿ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಹಾಲಿ ಸಚಿವ ನಿಧನ ಹಿನ್ನೆಲೆ ಉಪಚುನಾವಣೆ
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ.ಸುಧಾರಕ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ಪಡೆದರೂ ಸಹಿತ ಫಲಕಾರಿಯಾದ ಹಿನ್ನೆಲೆಯಲ್ಲಿ ಅವರ ಮೇ 10, 2026ರಂದು ನಿಧನರಾದರು. ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಆದಷ್ಟು ಶೀಘ್ರವೇ ಉಪಚುನಾವಣೆ ನಡೆಯಲಿದೆ.













Click it and Unblock the Notifications