D Sudhakar: ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಿ ಸಚಿವ ಡಿ ಸುಧಾಕರ್ ನಿಧನ, ಗಣ್ಯರ ಸಂತಾಪ
ಬೆಂಗಳೂರು: ಕರ್ನಾಟಕದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಮತ್ತು ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅನಾರೋಗ್ಯ ಕಾರಣದಿಂದಾಗಿ ಇಂದು ಭಾನುವಾರ (ಮೇ 10)ರಂದು ಆಸ್ಪತ್ರೆಯಲ್ಲಿ ನಿಧನರಾದರು. ಸಚಿವರ ನಿಧನಕ್ಕೆ ಅನೇಕ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ.
ಸಚಿವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದಾಗಿ ಬಳಲುತ್ತಿದ್ದರು. ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಚಿವರಿಗೆ ಶಾಸ್ವಕೋಶದ ಸೋಂಕು ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಗಂಭೀರ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ಎಲೆಕ್ಟ್ರಾನಿಕ್ ಸಿಟಿಯ ಕೃಷ್ಣ ಆರೋಗ್ಯ ವಿಜ್ಞಾನಗಳ ಸಂಸ್ಥೆಗೆ ಸ್ಥಳಾಂತರಿಸಿ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಬೆಳಗಿನ ಜಾವ 3ಕ್ಕೆ ನಿಧನ
ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಸುಮಾರು 3ಗಂಟೆ ಹೊತ್ತಿಗೆ ನಿಧನರಾದರೆಂದು ಆಸ್ಪತ್ರೆ ಅಧಿಕೃತ ಮಾಹಿತಿ ನೀಡಿದೆ. ಕಳೆದೊಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ. ಶ್ವಾಸಕೋಶ ಕಾಯಿಲೆಯಿಂದ ಬಳಲಿಕೆ ಹೆಚ್ಚಾಗಿದ್ದು, ಪ್ರಜ್ಞೆ ಬರುವುದನ್ನೆ ಕಾಯಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಚಳ್ಳಕೆರೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ
2004ರಲ್ಲಿ ಚಳ್ಳಕೆರೆಯಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ನಂತರದ ದಿನಗಳಲ್ಲಿ ಪಕ್ಷೇತರವಾಗಿ ಗೆದ್ದು ಬಿಜೆಪಿ ಬೆಂಬಲಿಸಿದ್ದರು. ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳಲ್ಲೂ ಸಚಿವರಾಗಿ ಶ್ರಮಿಸಿದವರು. ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಹೆಸರಾಗಿದ್ದರು. ಸದ್ಯ ಅವರು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಸಚಿವರಾಗಿದ್ದರು.
ಸಚಿವರ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು-ಸಂತಾಪ
ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಚಿವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 'ಕರ್ನಾಟಕ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರು ಮತ್ತು ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಿ. ಸುಧಾಕರ್ ಅವರ ನಿಧನಕ್ಕೆ ನನ್ನ ಸಂತಾಪಗಳು. ಭಗವಂತನ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ, ಓಂ ಶಾಂತಿ' ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಜನಪರ ಕಾಳಜಿ, ಬದ್ಧತೆಯ ವ್ಯಕ್ತಿ: ಸಿದ್ದರಾಮಯ್ಯ ಸಂತಾಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯ ನಾಯಕರು ಆಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಾನು ಖುದ್ದು ಆಸ್ಪತ್ರೆಗೆ ಭೇಟಿನೀಡಿ ಸುಧಾಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅವರ ಆರೋಗ್ಯದ ಮಾಹಿತಿ ಪಡೆದಿದ್ದೆ, ಈ ವೇಳೆ ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು.
ಜನಸೇವೆಯಲ್ಲಿ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಎಕ್ಸ್‌ನಲ್ಲಿ ಸಂತಾಪ ತಿಳಿಸಿದ್ದಾರೆ.
ಆತ್ಮೀಯ ಸ್ನೇಹಿತ ನಿಧನ: ತುಂಬಲಾರದ ನಷ್ಟ: ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಅವರು, "ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು. ಬಡವರ ಬಂಧು ಎಂದೇ ಹೆಸರಾಗಿದ್ದ ಅವರು, ನನ್ನನ್ನು ಭೇಟಿ ಮಾಡಲು ಬಂದಾಗಲೆಲ್ಲ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಹಿಡಿದುಕೊಂಡೇ ಬರುತ್ತಿದ್ದರು. ಅವರ ಆ ಗುಣ, ಕ್ಷೇತ್ರದ ಜನರ ಮೇಲಿದ್ದ ಅವರ ಅಪಾರ ಪ್ರೀತಿಯನ್ನು ತೋರಿಸುತ್ತಿತ್ತು.
ಸುಧಾಕರ್ ಅವರು ಇಂದು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಬೆಂಬಲಿಗರನ್ನು ಅಗಲಿರುವುದು ತುಂಬಲಾರದ ನಷ್ಟವಾಗಿದೆ' ಎಂದು ಅವರು ಕಂಬನಿ ಮಿಡಿದಿದ್ದಾರೆ.
ಸಂಪುಟ ಸಹೋದ್ಯೋಗಿ ನಿಧನಕ್ಕೆ ಎಂಬಿ ಪಾಟೀಲ ಕಂಬನಿ
ರಾಜ್ಯ ಸರ್ಕಾರದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ನಿಧನಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ಕಂಬನಿ ಮಿಡಿದಿದ್ದಾರೆ. ಸಂಪುಟ ಸಹೋದ್ಯೋಗಿಯಾಗಿದ್ದ ಡಿ ಸುಧಾಕರ್ ಅವರು ಸರಳತೆ, ಸಜ್ಜನಿಕೆ, ಜನಪರ ಧೋರಣೆ ಹಾಗೂ ಸ್ನೇಹಮಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಮೊದಲಿಗೆ, ಚಳ್ಳಕೆರೆ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು ತಮ್ಮ ಕ್ರಿಯಾಶೀಲತೆಯಿಂದ ಹಿರಿಯೂರು ಕ್ಷೇತ್ರದ ಜನರ ಬೆಂಬಲ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಒಮ್ಮೆ ತಮ್ಮನ್ನು ಭೇಟಿಯಾಗಿ ಕ್ಷೇತ್ರದ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಗಾಢವಾಗಿದೆ. ಕ್ಷೇತ್ರದ ಜನರ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಇತ್ತು ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.













Click it and Unblock the Notifications