ಚಾಮರಾಜನಗರ: ಆಟೋ ಸಾರಿಗೆ (KSRTC) ಬಸ್ ನಡುವೆ ಡಿಕ್ಕಿ: ಆಸ್ಪತ್ರೆಗೆ ಹೋಗುತ್ತಿದ್ದ ಇಬ್ಬರು ಮಸಣಕ್ಕೆ
ಚಾಮರಾಜನಗರ, ಏಪ್ರಿಲ್, 04: ಪ್ಯಾಸೆಂಜರ್ ಆಟೋ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಇಡ್ ಪೋಸ್ಟ್‌ನ ನಿವಾಸಿಗಳಾದ ನೂರ್ ಉನ್ನಿಸ್ (68), ಸೈಯದ್ ಮನ್ಸೂರ್ ಹುಸೇನ್ (36) ಸ್ಥಳದಲ್ಲಿ ಮೃತ ಪಟ್ಟವರಾಗಿದ್ದು, ಇನ್ನು ಸಂಸದ್ ಬೇಗಂ (30) ರಹಮದ್ ಉನ್ನಿಸಾ (40) ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುರುವಾರ (ಏಪ್ರಿಲ್ 04) ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ವರು ಸತ್ಯಗಾಲ ಅಂಡ್ ಪೋಸ್ಟ್‌ನಿಂದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ಆಟೋದಲ್ಲಿ ತೆರಳುವಾಗ ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ(KSRTC) ಬಸ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆಟೋ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಈ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಸಾರಿಗೆ ಸಂಸ್ಥೆ ಬಸ್ ಪಲ್ಟಿ: ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ (KSRTC) ಬಸ್ ಪಲ್ಟಿಯಾದ ಘಟನೆ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪ ಇತ್ತೀಚೆಗಷ್ಟೇ ನಡೆದಿತ್ತು.
ಈ ವೇಳೆ ಬಸ್‌ನಲ್ಲಿ 30 ಮಂದಿ ಪ್ರಯಾಣಿಕರಲ್ಲಿ ಶಿಕ್ಷಕರೇ ಹೆಚ್ಚು ಮಂದಿ ಇದ್ದರು. ಅದೃಷ್ಟವಶಾತ್ 6-7 ಮಂದಿ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೇ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ರಾಜ್ಯದಲ್ಲಿ ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಭಾಗದಲ್ಲೇ ಅತೀ ಹೆಚ್ಚಾಗಿ ಸಾರಿಗೆ ಬಸ್‌ಗಳನ್ನು ಅಪಘಾತಕ್ಕೀಡಾಗಿತ್ತು. ಹಾಗೆಯೇ ಇನ್ನೂ ಇದೀಗ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಇದಕ್ಕೆ ಕಾರಣ ಬಸ್ ಕಂಡಕ್ಟರ್ ಬಸ್ ಚಲಾಯಿಸಿದ್ದು ಎಂದು ತಿಳಿದುಬಂದಿತ್ತು.
ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗವಾಗಿ ಒಡೆಯರ್ ಪಾಳ್ಯ ಕಡೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಆನೆ ಕಾರಿಡಾರ್ ರಸ್ತೆಗೆ ಇಳಿದಿದೆ. ಕೂಡಲೇ ಸ್ಥಳೀಯರು ದೌಡಾಯಿಸಿ ಬಸ್ಸಿನಲ್ಲಿದ್ದವರನ್ನು ಹೊರಕ್ಕೆ ಕರೆತಂದಿದ್ದು, ಕಿಟಕಿ ಬಳಿ ಕುಳಿತಿದ್ದವರಿಗೆ 6-7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು, ಕಂಡಕ್ಟರ್ ಬಸ್ ಅನ್ನು ಓಡಿಸುತ್ತಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications