Namma Yatri: ಕ್ಯಾಬ್ ಸೇವೆ ಆರಂಭಿಸಿದ ನಮ್ಮ ಯಾತ್ರಿ; 25,000 ಚಾಲಕರ ನೇಮಕ
ಬೆಂಗಳೂರು, ಏಪ್ರಿಲ್. 17: ಇತ್ತೀಚೆಗೆ ಬೆಂಗಳೂರಿಗರ ಫೇವರಿಟ್ ಆಪ್ ಆಗಿರುವ 'ನಮ್ಮ ಯಾತ್ರಿ' ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಕಮಿಷನ್ ಇಲ್ಲದೆ ಆಟೋ ಚಾಲಕರಿಗೆ ನೆರವಾಗುವ ಈ ನಮ್ಮ ಯಾತ್ರಿ, ಆಟೋಗಳ ಜೊತೆಗೆ ಕ್ಯಾಬ್ ಸೇವೆಯನ್ನು ಒದಗಿಸಲಿದೆ. ಇದು ನಮ್ಮ ಯಾತ್ರಿ ಬಳಕೆದಾರರಲ್ಲಿ ಖುಷಿಗೆ ಕಾರಣವಾಗಿದೆ.
ಏಪ್ರಿಲ್ 16 ರಂದು ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳನ್ನು ನೀಡುವ ಬಗ್ಗೆ ಘೋಷಿಸಿದೆ. ನಮ್ಮ ಯಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿ 25,000 ಕ್ಕೂ ಹೆಚ್ಚು ಚಾಲಕರನ್ನು ಕೆಲಸಕ್ಕೆ ತೆಗೆದುಕೊಂಡಿದೆ. "ಈ ಯೋಜನೆಯ ಚಾಲಕರ ಆದಾಯವನ್ನು ಹೆಚ್ಚಿಸುವುದಲ್ಲದೆ, ಸುಧಾರಿತ ವಾಹನ ನಿರ್ವಹಣೆ ಮತ್ತು ಉತ್ತಮ ಗ್ರಾಹಕರ ಅನುಭವಗಳನ್ನು ನೀಡುತ್ತದೆ. ನಾವು ಈಗ ಸುಮಾರು 25,000 ಚಾಲಕರನ್ನು ಈಗಾಗಲೇ ಕೆಲಸಕ್ಕೆ ಇಳಿಸಿದ್ದೇವೆ ಮತ್ತು ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಚಾಲಕರನ್ನು ಆನ್‌ಬೋರ್ಡ್ ಮಾಡುವ ಸಾಧ್ಯತೆಯಿದೆ" ಎಂದು ನಮ್ಮ ಯಾತ್ರಿ ಸಿಇಒ ಮಗಿಜಾನ್ ಸೆಲ್ವನ್ ಹೇಳಿದ್ದಾರೆ.

ನಮ್ಮ ಯಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿ ಆಟೋಗಳ ಜೊತೆಗೆ ನಾನ್-ಎಸಿ ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್‌ಎಲ್ ಕ್ಯಾಬ್‌ಗಳ ಸೇವೆ ದೊರೆಯಲಿದೆ. ಮೊದಲು ಬೆಂಗಳೂರಿನಲ್ಲಿ ಈ ಕ್ಯಾಬ್ ಸೇವೆ ನೀಡಲಿದೆ. ನಂತರ, ನಮ್ಮ ಯಾತ್ರಿ ತನ್ನ ಕ್ಯಾಬ್ ಸೇವೆಗಳನ್ನು ಇಂಟರ್ ಸಿಟಿ ಪ್ರಯಾಣ, ಬಾಡಿಗೆಗಳು ಮತ್ತು ನಿಗದಿತ ಸವಾರಿಗಳ ಸೇವೆಯನ್ನು ನೀಡಲು ಪ್ಲ್ಯಾನ್ ಮಾಡಿದೆ.
ಕರ್ನಾಟಕದಾದ್ಯಂತ ನಮ್ಮ ಯಾತ್ರಿ ಕ್ಯಾಬ್ ಸೇವೆ ಲಭ್ಯವಾಗಲಿದೆ. ಹೆಚ್ಚುವರಿಯಾಗಿ, ಕಂಪನಿಯು ವಿಶೇಷ ಚೇತನರಿಗೆ ವಿಶೇಷ ಸವಾರಿ, ಹೆಚ್ಚುವರಿ ಲಗೇಜ್ ಸ್ಥಳ, ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮತ್ತು ಸಾರ್ವಜನಿಕ ಸಾರಿಗೆ ಕೇಂದ್ರಗಳಿಗೆ ಪ್ರವಾಸಗಳಂತಹ ವಿಶೇಷ ಸೇವೆಗಳನ್ನು ಕಲ್ಪಿಸುತ್ತದೆ.

"ನಮ್ಮ ಯಾತ್ರಿ ಆಟೋ ಸೇವೆಗಳ ಅತ್ಯಂತ ಯಶಸ್ವಿ ಪ್ರಾರಂಭದ ನಂತರ ಕ್ಯಾಬ್ ಸೇವೆಗಳನ್ನು ನೀಡುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ. ನಾವು ಇತರ ನಗರಗಳಿಗೆ ಮತ್ತು ಇತರ ದೇಶಗಳಿಗೆ ಸೇವೆ ನೀಡಲು ಬಯಸುತ್ತೇವೆ" ಎಂದು ಜಸ್‌ಪೇ ಸಹಸ್ಥಾಪಕ ವಿಮಲ್ ಕುಮಾರ್ ಹೇಳಿದ್ದಾರೆ.
ಫಿನ್‌ಟೆಕ್ ಸಂಸ್ಥೆ ಜುಸ್ಪೇ, ನಂದನ್ ನಿಲೇಕಣಿಯವರ BECKN ಫೌಂಡೇಶನ್‌ನ ಸಹಯೋಗದೊಂದಿಗೆ ಮತ್ತು ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಬೆಂಬಲದೊಂದಿಗೆ ನವೆಂಬರ್ 2022 ರಲ್ಲಿ ನಮ್ಮ ಯಾತ್ರಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಓಲಾ ಮತ್ತು ಉಬರ್‌ಗೆ ಪರ್ಯಾಯವಾಗಿ ಬಂದಿದೆ. ಓಲಾ, ಉಬರ್ ಅಪ್‌ಗಳು 30 ರಿಂದ 40 % ಕಮಿಷನ್ ಶುಲ್ಕ ವಿಧಿಸುತ್ತವೆ.











Click it and Unblock the Notifications