Namma yatri: ನಮ್ಮ ಯಾತ್ರಿಯಿಂದ ನಿರ್ಗಮಿಸಿದ ಆಟೋ ಚಾಲಕರ ಒಕ್ಕೂಟ, ಯಾಕೆ ಹಾಗೂ ಇದಕ್ಕೆ ಆ್ಯಪ್‌ನ ಸ್ಪಷ್ಟನೆ ಏನು?
ಬೆಂಗಳೂರು, ಡಿಸೆಂಬರ್, 13: ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ತುಂಬಾ ಸದ್ದು ಮಾಡಿತ್ತು. ಹಾಗೆಯೇ ಆಟೋ ಚಾಲಕರಿಗೆ ನೆರವಾಗುವಂತೆ ಆ್ಯಪ್ ಭರವಸೆ ನೀಡಿದ್ದು, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುವುದೇ ಈ ಆ್ಯಪ್‌ನ ಉದ್ದೇಶವಾಗಿದೆ. ಆದ್ದರಿಂದ ದಿನದಿಂದ ದಿನಕ್ಕೆ ಇದನ್ನು ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಇದೀಗ ಇದರಿಂದ ನಿರ್ಗಮಿಸಲು ಅದೇ ಆಟೋ ಚಾಲಕರ ಸಂಘ ನಿರ್ಧಾರ ಮಾಡಿದೆ ಎನ್ನಲಾಗಿದ್ದು, ಇದಕ್ಕೆ ಇದೇ ಆ್ಯಪ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.
Setting the record straight. Here's our official statement: pic.twitter.com/vTl45Nic9K
— Namma Yatri (@nammayatri) December 11, 2023
ನಗರದ ಪ್ರಮುಖ ಆಟೋ ರಿಕ್ಷಾ ಒಕ್ಕೂಟಗಳಲ್ಲಿ ಒಂದಾದ ಆಟೋ ರಿಕ್ಷಾ ಚಾಲಕರ ಸಂಘ ಒಎನ್‌ಡಿಸಿ ಬೆಂಬಲಿತ 'ರೈಡ್' ಅಪ್ಲಿಕೇಶನ್ 'ನಮ್ಮ ಯಾತ್ರಿ'ಯಿಂದ ನಿರ್ಗಮಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲ ಚಾಲಕರು ಇನ್ನೂ ಆ್ಯಪ್ ಬಳಸುವುದಾಗಿ ಹೇಳಿರುವುದರಿಂದ 'ನಮ್ಮ ಯಾತ್ರಿ' ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಸ್ಥಗಿತ ಆಗಿಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ತೊಂದರೆ ಎದುರಿಸುತ್ತಿದ್ದ ಪ್ರಯಾಣಿಕರೂ 'ಯಾತ್ರಿ' ಮುಂದುವರೆದಿರುವುದನ್ನು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.

ಅಪ್ಲಿಕೇಶನ್ ಚಾಲನೆಯ ಸಮಯದಲ್ಲಿ ಆಟೋ ಚಾಲಕರ ಸಂಘ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಸಂಘದ ಬೇಡಿಕೆಗಳನ್ನು ಈಡೇರಿಸುವಲ್ಲಿ 'ನಮ್ಮ ಯಾತ್ರಿ' ಇದೀಗ ವಿಫಲ ಆಗಿದೆ ಎಂದು ತಿಳಿದುಬಂದಿದೆ. ಪ್ರಾರಂಭದಿಂದಲೂ ಎಆರ್‌ಡಿಯು ನಮ್ಮ ಯಾತ್ರಿ ಆ್ಯಪ್‌ನ ಭಾಗವಾಗಿತ್ತು. ಆ್ಯಪ್ ಬಿಡುಗಡೆ ಆಗುವ ಮೊದಲೇ ಒಟ್ಟು 10,000 ಚಾಲಕರು ಈ ವ್ಯವಸ್ಥೆಗೆ ಕೈಜೋಡಿಸಿದ್ದರು.
ನಂತರ ಇನ್ನೂ 50,000 ಚಾಲಕರು ನೋಂದಣಿ ಮಾಡಿಕೊಂಡರು. ಆದರೆ 'ನಮ್ಮ ಯಾತ್ರಿ' ನಂತರದ ದಿನಗಳಲ್ಲಿ ನಮ್ಮನ್ನು ನಿರ್ಲಕ್ಷಿಸಿತು ಎಂದು ಆಟೋ ಚಾಲಕರ ಸಂಘದ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿ ಸವಾರಿಗೆ ಇಂತಿಷ್ಟು ಎಂದು ಕಮಿಷನ್ ಸಂಗ್ರಹಿಸುವ ಓಲಾ, ಉಬರ್ ಮತ್ತು ರ‍್ಯಾಪಿಡೊದಂತಹ ಅಗ್ರಿಗೇಟರ್‌ಗಳಿಗೆ 'ನಮ್ಮ ಯಾತ್ರಿ' ಪರ್ಯಾಯ ಎಂದು ಹೇಳಲಾಗುತ್ತಿತ್ತು.
ಆ್ಯಪ್ ನಡೆಸುವ ಸಂಸ್ಥೆಗೆ ಯಾವುದೇ ಕಮಿಷನ್ ನೀಡದೇ ಚಾಲಕರು ಸವಾರಿ ಬಾಡಿಗೆಯ ಸಂಪೂರ್ಣ ಹಣ ಪಡೆಯುವ ವ್ಯವಸ್ಥೆಯು ಈ ಆ್ಯಪ್ ಜನಪ್ರಿಯಗೊಳ್ಳಲು ಪ್ರಮುಖ ಕಾರಣ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 'ನಮ್ಮ ಯಾತ್ರಿ' ಸಹ ಚಾಲಕರಿಗೆ ಚಂದಾದಾರಿಕೆ ಶುಲ್ಕ ವಿಧಿಸಲು ಆರಂಭಿಸಿತು. ಅಲ್ಲಿ ಅವರು ದಿನಕ್ಕೆ 25 ರೂಪಾಯಿ ಮತ್ತು ಪ್ರತಿ ಸವಾರಿಗೆ 3.50 ರೂಪಾಯಿ ಪಾವತಿಸಬೇಕೆನ್ನುವ ಷರತ್ತು ಹಾಕಲಾಗಿತ್ತು. ಈ ಹಣವನ್ನು ಆ್ಯಪ್ ಸುಧಾರಣೆಗೆ ಬಳಸಲಾಗುವುದು ಎನ್ನುವ ಮಾಹಿತಿ ನೀಡಲಾಗಿತ್ತು.
ಈ ಹಣ ಹೊರತುಪಡಿಸಿದರೆ ಇತರ ಯಾವುದೇ ರೀತಿಯಲ್ಲಿ ನಾವು ಚಾಲಕರಿಂದ ಅಥವಾ ಗ್ರಾಹಕರಿಂದ ಯಾವುದೇ ಹಣವನ್ನು ಸಂಗ್ರಹಿಸುತ್ತಿರಲಿಲ್ಲ. ನಮ್ಮ ಯಾತ್ರಿ ಫಿನ್ ಟೆಕ್ ಬ್ರಾಂಡ್ ಜುಸ್ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಒಡೆತನದಲ್ಲಿದೆ. ಈ ವರ್ಷದ ಅಕ್ಟೋಬರ್‌ವರೆಗೆ ಬೆಂಗಳೂರಿನ 'ನಮ್ಮ ಯಾತ್ರಿ' ಆ್ಯಪ್ ತನ್ನ ಚಾಲಕರಿಗೆ 189 ಕೋಟಿ ರೂಪಾಯಿ ಆದಾಯ ಗಳಿಸಲು ನೆರವಾಗಿದೆ. ಶೂನ್ಯ ಕಮಿಷನ್ ಮಾದರಿಯ ಮೂಲಕ ಆಟೋ ಚಾಲಕರಿಗೆ ಸುಮಾರು 19 ಕೋಟಿ ರೂ. ಉಳಿತಾಯ ಆಗಿದೆ ಎಂದು 'ನಮ್ಮ ಯಾತ್ರಿ' ತಿಳಿಸಿದೆ. ತನ್ನ ವಿರುದ್ಧ ಕೇಳಿಬಂದ ಆಕ್ಷೇಪಗಳಿಗೆ 'ನಮ್ಮ ಯಾತ್ರಿ' ಆ್ಯಪ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ನಮ್ಮ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ.












Click it and Unblock the Notifications