ತುಕಾಲಿ ಸಂತೋಷ್ ಕಾರು ಅಪಘಾತ ಕೇಸ್: ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು!
ಬಿಗ್‌ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋಚಾಲಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ಹೌದು... ಕನ್ನಡದ ಬಿಗ್ ಬಾಸ್ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಫಘಾತಕ್ಕೀಡಾಗಿತ್ತು. ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಕಳೆದ ದಿನ ರಾತ್ರಿ ಆಟೋ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿತ್ತು.

ಅಪಘಾತದಲ್ಲಿ ಆಟೋ ಚಾಲಕ ಜಗದೀಶ್ಗೆ ತೀವ್ರ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರಿಗೆ ಚಿಕಿತ್ಸೆ ಫಲಿಸಿದೆ ಸಾವನ್ನಪ್ಪಿದ್ದಾರೆ.
ಹೊಸ ಕಾರಿನಲ್ಲಿ ಪತ್ನಿ ಮಾನಸಾ ಜೊತೆಗೆ ತುಕಾಲಿ ಸಂತು ತುಮಕೂರಿಗೆ ತೆರಳಿದ್ದರು. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರಕ್ಕೆ ತುಕಾಲಿ ಸಂತು ಮತ್ತು ಮಾನಸಾ ಪ್ರಯಾಣಿಸುತ್ತಿದ್ದರು. ಕುಣಿಗಲ್‌ನ ಹೊನ್ನೇನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ತುಕಾಲಿ ಸಂತು ಅವರ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಆಕ್ಸಿಡೆಂಟ್‌ನಲ್ಲಿ ಆಟೋ ಜಖಂ ಆಗಿದ್ದು, ಆಟೋ ಚಾಲಕ ಜಗದೀಶ್ಗೆ ತೀವ್ರ ಗಾಯಗಳಾಗಿತ್ತು. ಆಟೋ ಚಾಲಕ ಜಗದೀಶ್ ಮದ್ಯ ಸೇವನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮ ಮುಗಿದ್ಮೇಲೆ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲಿ ತುಕಾಲಿ ಸಂತು ಹಾಗೂ ಮಾನಸಾ ಸ್ಪರ್ಧಿಸುತ್ತಿದ್ದಾರೆ. 'ಬಿಗ್ ಬಾಸ್' ಕಡೆಯಿಂದ ಬಂದ ಹಣದಲ್ಲಿ ತುಕಾಲಿ ಸಂತು ಬಿಳಿ ಬಣ್ಣದ ಕಿಯಾ ಕಾರನ್ನ ಖರೀದಿಸಿದ್ದರು. ದುಬಾರಿ ಕಾರನ್ನ ತುಕಾಲಿ ಸಂತು ಖರೀದಿ ಮಾಡಿದ್ಮೇಲೆ ಹಲವರು ನಿಬ್ಬೆರಗಾಗಿದ್ದರು. ಆದರೆ ಸದಾ ಹಸನ್ಮುಕಿಯಾಗಿ ಎಲ್ಲರನ್ನು ನಗಿಸುತ್ತಿದ್ದ ತುಕಾಲಿ ಸಂತೋಷ್ ಅವರಿಗೆ ಈ ಕಾರು ಅಪಘಾತ ಬೇಸರ ತಂದಿದೆ. ಕೇಸ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.












Click it and Unblock the Notifications