ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಬೇಡಿದ ಕೈದಿಗಳ ಕಳಚದ ಬೇಡಿ

By Prasad
|
Google Oneindia Kannada News

Parappana agrahara jail, Bangalore
ಬೆಂಗಳೂರು, ಆ. 16 : ಸ್ವಾತಂತ್ರ್ಯದ ಬಿಡುಗಡೆ ಬೇಡಿ ನಿರಶನ ಆರಂಭಿಸಿದ್ದ 36 ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗ್ರಹದಲ್ಲಿ ಅಸ್ವಸ್ಥರಾದ ಕಾರಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರದ ನಿರಾಸಕ್ತಿ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ನಿರಾಸಕ್ತಿಯಿಂದ ಜೈಲಿಹಕ್ಕಿಗಳು ಬಂಧನದಲ್ಲಿಯೇ ನಲುಗುವಂತಾಗಿದೆ.

ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಸನ್ನಡತೆ ತೋರಿದ ಕೈದಿಗಳನ್ನು ಅವಧಿ ಮುಗಿಯುವ ಮುನ್ನ ಬಿಡುಗಡೆ ಮಾಡುವುದು ರೂಡಿಸಿಕೊಂಡು ಬಂದಿರುವ ಪದ್ದತಿ. ಆದರೆ, ಈ ಸಲ ಮಾತ್ರ ಯಾವುದೇ ಕೈದಿಗಳನ್ನು ಬಿಡುಗಡೆ ಮಾಡಲಿಲ್ಲ. ಇದನ್ನು ಪ್ರತಿಭಟಿಸಿದ ಕೈದಿಗಳು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರೂ ಸರಕಾರ ಮತ್ತು ರಾಜ್ಯಪಾಲರು ಎಚ್ಚೆತ್ತುಕೊಳ್ಳಲಿಲ್ಲ.

ನಮ್ಮ ಪ್ರಾಣ ಹೋದರೆ ರಾಜ್ಯಪಾಲರು ಹಾಗೂ ಸರಕಾರವೇ ಹೊಣೆ. ಇನ್ನು ಈ ಯಾತನೆ ಸಾಕು. ಬಿಡುಗಡೆ ಮಾಡದಿದ್ದರೆ ಜೈಲಿನಲ್ಲೇ ಸಾಯುತ್ತೇವೆ ಎಂದು ಕೈದಿಗಳು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಮತ್ತು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದರು. ಕೈದಿಗಳ ಪ್ರತಿಭಟನೆಗೆ ಶ್ರೀರಾಮಸೇನೆ ಸಂಘಟನೆಯ ಪ್ರಮೋದ್ ಮುತಾಲಿಕ್ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಜೈಲಿನ ಮುಂದೆ ಪ್ರತಿಭಟನೆಯನ್ನೂ ನಡೆಸಿದರು.

ಸತತ ನಾಲ್ಕು ದಿನ ಕೈದಿಗಳು ನಡೆಸಿದ ಉಪವಾಸ ವ್ಯರ್ಥವಾಯಿತು. 64ನೇ ಸ್ವಾತಂತ್ರ್ಯ ದಿನಾಚರಣೆ ಕೈದಿಗಳ ಪಾಲಿಗೆ ಕರಾಳ ದಿನಾಚರಣೆಯಾಯಿತು. ಕೈದಿಗಳು ಒಂದಡೆ ಉಪವಾಸ ಸತ್ಯಾಗ್ರಹ ಆರಂಭಿಸಿ ಅಸ್ಪತ್ರೆ ಪಾಲಾಗುತ್ತಿದ್ದರೆ, ಅಧಿಕಾರಿಗಳು, ಸಚಿವರಿಗೆ ಮಾತ್ರ ಇದರ ಬಿಸಿಯೇ ತಟ್ಟಲಿಲ್ಲ. ಪ್ರತಿ ಬಾರಿಯೂ ಜೈಲಿನಲ್ಲಿ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಬಾರಿಯ ಸ್ವಾತಂತ್ರ್ಯ ದಿನ ಮಾತ್ರ ನೀರಸವಾಗಿತ್ತು. ನೆಪ ಮಾತ್ರಕ್ಕೆ ಎಂಬಂತೆ ಧ್ವಜಾರೋಹಣ ಮಾಡಲಾಯಿತು.

ಕಾರಾಗೃಹದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದರೆ ಕೈದಿಗಳ ಗೋಳು ಕೇಳಬೇಕಾಗುತ್ತದೆ ಎಂಬ ಕಾರಣದಿಂದಾಗಿ ಕಾರಾಗೃಹದ ಹಿರಿಯ ಅಧಿಕಾರಿಗಳಾಗಲಿ, ಬಂದೀಖಾನೆ ಸಚಿವರಾಗಲಿ ಆಗಮಿಸಲಿಲ್ಲ. ಆದರೆ, ಹತ್ತಕ್ಕೂ ಹೆಚ್ಚು ವರ್ಷ ಕಾರಾಗೃಹ ವಾಸ ಅನುಭವಿಸಿರುವ ಹಾಗೂ ಸನ್ನಡತೆ ತೋರಿರುವ ಕೈದಿಗಳಿಗೆ ಬೆಂಬಲ ಸೂಚಿಸಿ ಸುಮಾರು 1500 ಕೈದಿಗಳು ಭಾನುವಾರ ಉಪವಾಸ ನಡೆಸಿದ್ದು ಮಹಿಳೆಯರು ಸೇರಿದಂತೆ 50 ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಸಾಯಿಖಾನೆಗಳಿಗೆ ಕುರಿಗಳನ್ನು ಕರೆದೊಯ್ಯುವ ರೀತಿಯಲ್ಲಿ ಅಸ್ವಸ್ಥಗೊಂಡ ಕೈದಿಗಳನ್ನು ವಾಹನದಲ್ಲಿ ತುಂಬಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಗಿದೆ. ಉಪವಾಸ ನಡೆಸುವವರಲ್ಲಿ ಹೆಚ್ಚಿನವರಿಗೆ ಸಕ್ಕರೆ ಕಾಯಿಲೆ ಇದೆ. ವೃದ್ದರು, ಮಹಿಳೆಯರು ಇದ್ದಾರೆ.

ಅವಧಿಪೂರ್ಣ ಬಿಡುಗಡೆ ನಮ್ಮ ಹಕ್ಕಲ್ಲ. ಸಂವಿಧಾನದ 161ನೇ ವಿಧಿಯ ಪ್ರಕಾರ ಸನ್ನಡತೆ ತೋರಿದ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ. ಹತ್ತಾರು ವರ್ಷ ಜೈಲು ಜೀವನ ಸವೆಸಿದ ನಮಗೆ ಬಿಡುಗಡೆ ಅಸಾಧ್ಯವಾದರೆ, ಈ ಹಿಂದೆ ಏಕೆ ಕೈದಿಗಳನ್ನು ಬಿಡುಗಡೆ ಮಾಡಿದ್ದೀರಿ. ಮೃಗಾಲಯದಲ್ಲಿ ಪ್ರಾಣಿ ಸತ್ತರೆ ಸರಕಾರ ತೀವ್ರ ಶೋಕ ವ್ಯಕ್ತಪಡಿಸುತ್ತದೆ. ಕೈದಿಗಳು ಪ್ರಾಣ ಬಿಟ್ಟರೆ ಅವರ ಜೀವಕ್ಕೆ ಕಿಮ್ಮತ್ತಿಲ್ಲವೇ? ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಒಮ್ಮೆ ನೀವು ಜೈಲಿಗೆ ಭೇಟಿ ನೀಡಿ. ಕೈದಿಗಳೊಂದಿಗೆ ಸಂವಾದ ನಡೆಸಿ, ನಾವೆಲ್ಲ ಶಾಶ್ವತ ಅಪರಾಧಿಗಳು ಎನಿಸಿದರೆ ನಮ್ಮನ್ನು ನೇಣು ಹಾಕಿ ಎಂದು ಕೈದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಜೈಲು ಶಿಕ್ಷಾ ಸ್ಥಳವಾಗಿತ್ತು. ಈಗ ಅದು ಪರಿವರ್ತನೆಯ ಕೇಂದ್ರ ಎಂದು ಸರಕಾರವೇ ಹೇಳುತ್ತದೆ. ನಾವು ಇಷ್ಟು ವರ್ಷ ಪರಿವರ್ತನೆ ಕೇಂದ್ರದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇವೆ. ತೇರ್ಗಡೆಯಾದವರನ್ನು ಬಿಡುಗಡೆ ಮಾಡುವುದು ನ್ಯಾಯವಲ್ಲವೇ ಎಂದು ಕಣ್ಣೀರಿಡುವ ಕೈದಿಗಳ ಕೂಗು. ರಾಜ್ಯಪಾಲ ಭಾರದ್ವಾಜ್, ಮುಖ್ಯಮಂತ್ರಿ ಯಡಿಯೂರಪ್ಪ, ಬಂಧಿಖಾನೆ ಸಚಿವ ಉಮೇಶ್ ಕತ್ತಿ ಅವರಿಗೆ ಕೈದಿಗಳ ಈ ಕೂಗು ಕೇಳುತ್ತಿದೆಯೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X