ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಅಣ್ಣಾಭಾವು ಸಾಠೆ ಪ್ರತಿಮೆ ಅನಾವರಣ; ಯಾರು ಇವರು?

|
Google Oneindia Kannada News

ಮಹಾರಾಷ್ಟ್ರದ ಖ್ಯಾತ ದಲಿತ ಬರಹಗಾರ, ಹೋರಾಟಗಾರರಾಗಿದ್ದ ಅಣ್ಣಾಭಾವು ಸಾಠೆ ಅವರ ಪ್ರತಿಮೆಯನ್ನು ರಷ್ಯಾದಲ್ಲಿ ಸ್ಥಾಪಿಸಲಾಗಿದೆ. ರಷ್ಯಾ ರಾಜಧಾನಿ ಮಾಸ್ಕೋ ನಗರಲ್ಲಿ ಅಣ್ಣಾಭಾವು ಸಾಠೆಯ ಪ್ರತಿಮೆ ಸೆ. 14, ಬುಧವಾರದಂದು ಅನಾವರಣಗೊಳ್ಳುತ್ತಿದೆ.

1969ರಲ್ಲಿ 49ನೇ ವಯಸ್ಸಿನಲ್ಲಿ ಮೃತಪಟ್ಟಿದ್ದ ತುಕಾರಾಂ ಭಾವುರಾವ್ ಸಾಠೆ ಅವರನ್ನು ದಲಿತ ಸಾಹಿತ್ಯದ ಪಿತಾಮಹ ಎಂದೇ ಪರಿಗಣಿಸಲಾಗುತ್ತದೆ. ರಷ್ಯಾದ ಕಮ್ಯೂನಿಸ್ಟ್ ಕ್ರಾಂತಿಯಿಂದ ಪ್ರಭಾವಿತರಾದ ಅವರು ನಂತರದ ವರ್ಷಗಳಲ್ಲಿ ಅಂಬೇಡ್ಕರ್ ಚಿಂತನೆಗೆ ಹೆಚ್ಚು ಒತ್ತುಕೊಟ್ಟಿದ್ದರು.

ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯ ತಟ್ಟುವ ಅನು'ರಾಗಾ'ಭಾರತ್ ಜೋಡೋ ಯಾತ್ರೆಯಲ್ಲಿ ಹೃದಯ ತಟ್ಟುವ ಅನು'ರಾಗಾ'

ಅವರ ಸಾಹಿತ್ಯ ಕೃಷಿ, ಹೋರಾಟಗಳಿಗೆ ಗೌರವವಾಗಿ ಮಾಸ್ಕೋ ನಗರದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಮಾರ್ಗರಿಟಾ ರುಡೋಇನೋ ಆಲ್-ರಷ್ಯನ್ ಸ್ಟೇಟ್ ಲೈಬ್ರರಿ ಫಾರ್ ಇಂಟರ್ನ್ಯಾಷನಲ್ ಲಿಟರೇಚರ್ ಎಂಬಲ್ಲಿ ಸ್ಥಾಪಿಸಲಾಗಿರುವ ಅಣ್ಣಾಭಾವುರಾವ್ ಪ್ರತಿಮೆಯ ಅನಾವರಣಕ್ಕಾಗಿ ಮಹಾರಾಷ್ಟ್ರದಿಂದ ಡಿಸಿಎಂ ದೇವೇಂದ್ರ ಫಡ್ನವಿಸ್ ಮೊದಲಾದವರು ರಷ್ಯಾಗೆ ತೆರಳಿದ್ದಾರೆ.

Know Who Is Annabhau Sathe, Whose Statue Built in Russia

ಫಡ್ನವಿಸ್ ಜೊತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನರ್ವೇಕರ್, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಅಧ್ಯಕ್ಷ ಡಾ. ವಿನಯ್ ಸಹಸ್ರಬುದ್ಧೆ ಅವರೂ ಇದ್ದಾರೆ.

ನೌಕಾಪಡೆಯ ಪ್ರಾಜೆಕ್ಟ್ 17ಎ; ಭಾರತದ ಬತ್ತಳಿಕೆಗೆ ತಾರಾಗಿರಿನೌಕಾಪಡೆಯ ಪ್ರಾಜೆಕ್ಟ್ 17ಎ; ಭಾರತದ ಬತ್ತಳಿಕೆಗೆ ತಾರಾಗಿರಿ

"ಮಾಸ್ಕೋದಲ್ಲಿ ಅಣ್ಣಾಭಾವು ಸಾಠೆ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಮಹಾರಾಷ್ಟ್ರಕ್ಕೆ ಒಂದು ಐತಿಹಾಸಿಕ ಮತ್ತು ಹೆಮ್ಮೆಯ ವಿಚಾರ" ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಭಿಪ್ರಾಯಪಟ್ಟಿದ್ದಾರೆ.

ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಠೆಯವರ ಆಯಿಲ್ ಪೇಂಟಿಂಗ್ ಚಿತ್ರವನ್ನೂ ಇದೇ ವೇಳೆ ಅನಾವರಣ ಮಾಡಲಾಗುತ್ತದೆ. ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ಮತ್ತು ಭಾರತ-ರಷ್ಯಾ ನಡುವಿನ ಸಂಬಂಧದ ಕುರುಹಾಗಿ ಈ ಕಾರ್ಯಕ್ರಮಗಳು ಜರುಗುತ್ತಿವೆ.

Know Who Is Annabhau Sathe, Whose Statue Built in Russia

ಯಾರು ಇವರು ಅಣ್ಣಾಭಾವು?

1920 ಆಗಸ್ಟ್ 1ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಟೆಗಾಂವ್ ಎಂಬಲ್ಲಿ ದಲಿತ ಕುಟುಂಬದಲ್ಲಿ ಜನಿಸಿದವರು ತುಕಾರಾಮ್ ಭಾವುರಾವ್ ಸಾಠೆ. ಅಸ್ಪೃಶ್ಯವೆನಿಸಿದ ಮಾಂಗ್ ಜಾತಿಯವರಾದ ಇವರು ಓದಿದ್ದು ನಾಲ್ಕನೇ ತರಗತಿಯಾದರೂ ಸಾಹಿತ್ಯ ಕೃಷಿ ಬಹಳ ದೊಡ್ಡದು.

ಭಾವುರಾವ್ ತಮ್ಮ ಯೌವ್ವನ ಕಾಲದಲ್ಲಿ ರಷ್ಯಾದ ಕಮ್ಯೂನಿಸ್ಟ್ ಕ್ರಾಂತಿಯಿಂದ ಬಹಳ ಪ್ರಭಾವಿತರಾದವರು. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕರಾಗಿ ಹಲವು ಹೋರಾಟಗಳನ್ನು ಮಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಸಿಪಿಐನ ಸಾಂಸ್ಕೃತಿಕ ವಿಭಾಗವೆನಿಸಿದ ಲಾಲ್ ಬಾವಟಾ ಕಲಾಪತಾಕ್ (ಕೆಂಪು ಬಾವುಟ ಕಲಾ ತಂಡ) ಸಂಘಟನೆಯ ಸದಸ್ಯರಾಗಿ ನಾಟಕಗಳನ್ನು ನಡೆಸುತ್ತಾ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಟ ನಡೆಸಿದರು. ಮಹಾರಾಷ್ಟ್ರದ ರಂಗ ಕ್ಷೇತ್ರದಲ್ಲಿ ಅಣ್ಣಾಭಾವು ಪಾತ್ರ ಬಹಳ ದೊಡ್ಡದು.

ಸ್ವಾತಂತ್ರ್ಯದ ಬಳಿಕ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಿ ಮಹಾರಾಷ್ಟ್ರ ರಾಜ್ಯ ಉದಯವಾಗಲು ಸಾಠೆ ಪಾತ್ರ ಇದೆ. ಬಾಂಬೆ ಪ್ರಾಂತ್ಯದಿಂದ ಮಹಾರಾಷ್ಟ್ರ ರಚನೆಯಾಗಲು ಹೋರಾಟ ನಡೆಸಿ ಸಂಯುಕ್ತ ಮಹಾರಾಷ್ಟ್ರ ಚಳವಳಿಯ ಮುಂದಾಳತ್ವ ವಹಿಸಿದವರಲ್ಲಿ ಇವರೂ ಒಬ್ಬರು.

ಸಾಹಿತ್ಯ ಕೃಷಿ

ಅಣ್ಣಾಭಾವು ರಾವ್ ಸಾಠೆ ಅಸ್ಪೃಶ್ಯ ಜನಾಂಗದಲ್ಲಿ ಹುಟ್ಟಿದ್ದರು. ಡಾ. ಬಿಆರ್ ಅಂಬೇಡ್ಕರ್ ಅವರಂತೆ ಇವರೂ ಬಹಳಷ್ಟು ತಾರತಮ್ಯ, ಅವಮಾನಗಳನ್ನು ಜೀವನದಲ್ಲಿ ಎದುರಿಸಬೇಕಾಯಿತು. ಮೇಲ್ವರ್ಗದವರ ಕಿರುಕುಳದಿಂದಾಗಿ ಇವರು ನಾಲ್ಕನೇ ಇಯತ್ತೆಗೆ ಶಾಲೆಯಿಂದ ಹೊರಬೀಳಬೇಕಾಯಿತು.

1930ರಲ್ಲಿ ಅವರ ಕುಟುಂಬ ಮುಂಬೈಗೆ ಬಂದಿತು. ಅಲ್ಲಿ ಅಣ್ಣಾಭಾವು ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಮುಂಬೈನಲ್ಲಿ ಹತ್ತಿ ಕಾರ್ಖಾನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವೇಳೆ 1934ರಲ್ಲಿ ಕಾರ್ಮಿಕರ ಮುಷ್ಕರ ನಡೆಯಿತು. ಲಾಲ್ ಬಾವಟಾ ಕಾರ್ಮಿಕರ ಒಕ್ಕೂಟ ಏರ್ಪಡಿಸಿದ್ದ ಮುಷ್ಕರದಲ್ಲಿ ಅವರು ಪಾಲ್ಗೊಂಡರು. ಹಾಗೆಯೇ, ಮಾತಂಗ ಕಾರ್ಮಿಕರ ಶಿಬಿರದಲ್ಲಿ ಡಾ. ಅಂಬೇಡ್ಕರ್ ಅವರ ಸಹಚರ ಆರ್ ಬಿ ಮೋರೆ ಅವರ ಪರಿಚಯವಾಯಿತು. ಈ ಕಾರ್ಮಿಕರ ಶಿಬಿರದಲ್ಲಿ ಓದು ಬರಹ ಇತ್ಯಾದಿ ಕಲಿಸಲಾಗುತ್ತಿತ್ತು. ಅಣ್ಣಾಭಾವು ಅವರ ಓದಿನ ಹಾದಿ ಇಲ್ಲಿಂದ ಪುನಾರಂಭವಾಯಿತು.

ಮುಂದೆ ಇವರು ಮರಾಠಿ ಭಾಷೆಯಲ್ಲಿ 35 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಹೆಚ್ಚಾಗಿ ಜಾನಪದ ಶೈಲಿ ಮೇಳೈಸುತ್ತದೆ. 13 ಕಿರುಕಥೆಗಳ ಸಂಗ್ರಹ, 4 ನಾಟಕಗಳು, ಕವನ, ಪ್ರವಾಸಕಥನ ಇವೇ ಮುಂತಾದ ಕೃತಿಗಳಿವೆ.

'ಇವರ ಅನೇಕ ಕೃತಿಗಳು ಮರಾಠಿ ಸಾಹಿತ್ಯದಲ್ಲಿ ಬಹಳ ಜನಪ್ರಿಯವಾದವು. ನಾಲ್ಕು ಕಾದಂಬರಿಗಳು ಚಲನಚಿತ್ರಗಳಾಗಿವೆ. ಹಲವು ಕೃತಿಗಳು ರಷ್ಯನ್ ಸೇರಿದಂತೆ ಹಲವು ಭಾಷೆಗಳಿಗೆ ತರ್ಜುಮೆಗೊಂಡಿವೆ. ಬಂಗಾಳ ಕ್ಷಾಮದ ಬಗ್ಗೆ ಬರೆದ ಒಂದು ಕೃತಿಯನ್ನು ಲಂಡನ್‌ನ ರಾಯಲ್ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇವರ ಅತ್ಯಂತ ಜನಪ್ರಿಯ ಕೃತಿ 'ಫಕೀರಾ'ವನ್ನು ಅಂಬೇಡ್ಕರ್‌ಗೆ ಅರ್ಜಪಿಸಿದರು.

1943ರಲ್ಲಿ ಅಮರ್ ಶೇಖ್ ಮತ್ತು ದತ್ತ ಗವ್ಹಾಂಕರ್ ಜೊತೆ ಸೇರಿ ಲಾಲ್ ಬಾವಟಾ ಕಲಾ ಪಾಟಕ್ ಎಂಬ ತಂಡ ಕಟ್ಟಿ ಮಹಾರಾಷ್ಟ್ರಾದ್ಯಂತ ಆಂದೋಲನ ಕಟ್ಟಿದರು. ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ವರ್ಗ ಸಂಘರ್ಷ, ಕಾರ್ಮಿಕರ ಹಕ್ಕು ಇತ್ಯಾದಿ ವಿಚಾರಗಳಲ್ಲಿ ಇವರು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ರಷ್ಯಾ ನಂಟು ಹೇಗೆ?

ಅಣ್ಣಾ ಬಾವುರಾವ್ ಸಾಠೆಯನ್ನು ಮಹಾರಾಷ್ಟ್ರದ ಮ್ಯಾಕ್ಸಿಮ್ ಗಾರ್ಕಿ ಎಂದು ಕರೆಯಲಾಗುತ್ತದೆ. ಗಾರ್ಕಿ ರಷ್ಯಾದ ಕಮ್ಯೂನಿಸ್ಟ್ ಕ್ರಾಂತಿಕಾರ. ಅವರು ಬರೆದ 'ದಿ ಮದರ್' ಕೃತಿ ಹಾಗೂ ಅವರ ಕ್ರಾಂತಿಗಳಿಂದ ಸಾಠೆ ಬಹಳ ಪ್ರೇರಣೆ ಪಡೆದಿದ್ದರು. ಸಾಠೆಯವರ ಅನೇಕ ಕೃತಿಗಳಲ್ಲಿ ಗಾರ್ಕಿಯ ಭಾವೋತ್ಕರ್ಷಗಳನ್ನು ಕಾಣಬಹುದು.

ಕಮ್ಯೂನಿಸ್ಟ್ ಕ್ರಾಂತಿಯ ಕಾಲಘಟ್ಟದಲ್ಲಿ ರಷ್ಯನ್ ಸಾಹಿತ್ಯ ಒಂದು ರೀತಿಯಲ್ಲಿ ಕಲೆ ಮತ್ತು ವಾಸ್ತವಿಕತೆಯನ್ನು ಮೇಳೈಸಿದ ಭಾವನೆಗಳನ್ನು ಹೊಂದಿತ್ತು. ಸಾಠೆಯವರ ಕೃತಿಯಲ್ಲೂ ಈ ಅಂಶಗಳು ಪ್ರಧಾನವಾಗಿ ಇವೆ.

ಆಗ ಭಾರತೀಯ ಸಾಹಿತ್ಯ ಕೃತಿಗಳನ್ನು ರಷ್ಯನ್ ಭಾಷೆಗೆ ತರ್ಜುಮೆ ಮಾಡಲಾಗುತ್ತಿತ್ತು. ಭಾವುರಾವ್ ಸಾಠೆಯವರ ಚಿತ್ರ, ಸ್ಟಾಲಿನ್‌ಗ್ರಾಚ ಪೋವಡ ಮೊದಲಾದ ಕೃತಿಗಳನ್ನು ರಷ್ಯನ್ ಭಾಷೆಗೆ ಭಾಷಾಂತರ ಮಾಡಲಾಗಿತ್ತು.

1961ರಲ್ಲಿ ಅಣ್ಣಾ ಭಾವು ಕೆಲ ಭಾರತೀಯರ ಜೊತೆ ರಷ್ಯಾ ಪ್ರವಾಸ ಮಾಡಿದರು. ಅಣ್ಣಾ ಕೃತಿಗಳು ರಷ್ಯನ್ ಭಾಷೆಯಲ್ಲಿ ಪ್ರಕಟವಾಗಿದ್ದರಿಂದ ಆಗಲೇ ಅವರು ಪರಿಚಿತರಾಗಿ ಹೋಗಿದ್ದರು. ಹೀಗಾಗಿ, ಅಣ್ಣಾ ಭಾವುರಾವ್‌ಗೆ ರಷ್ಯಾದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿತು. ಭಾರತಕ್ಕೆ ವಾಪಸ್ಸಾದ ಬಳಿಕ ಅವರು ತಮ್ಮ ರಷ್ಯಾ ಪ್ರವಾಸದ ಬಗ್ಗೆ ಅನುಭವ ಕಥನ ಬರೆದರು.

ಯಾರ ಆಸ್ತಿ ಅಣ್ಣಾ ಭಾವು?

ತುಕಾರಾಮ್ ಭಾವುರಾವ್ ಸಾಠೆ ಅಕಾ ಅಣ್ಣಾ ಭಾವು ಸಾಠೆ ಅವರ ಪ್ರತಿಮೆಯನ್ನು ರಷ್ಯಾದಲ್ಲಿ ಅನಾವರಣಗೊಳಿಸುತ್ತಿರುವುದು ಬಿಜೆಪಿ ನಾಯಕರು. ಭಾರತದ ಯಾವ ಕಮ್ಯೂನಿಸ್ಟ್ ನಾಯಕರೂ ಈ ಕಾರ್ಯಕ್ರಮದಲ್ಲಿ ಇಲ್ಲ ಎಂಬುದು ಅಚ್ಚರಿಯೇ.

ವಾಸ್ತವದಲ್ಲಿ ಭಾರತೀಯ ಕಮ್ಯೂನಿಸ್ಟರು ಅಣ್ಣಾಭಾವು ಸಾಠೆಯನ್ನು ಬಹುತೇಕ ಮರೆತುಹೋದಂತಿದೆ. ಕಾಂಗ್ರೆಸ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಈಗ ಬಿಜೆಪಿಯ ಆಸ್ತಿ ಆದಂತೆ ಅಣ್ಣಾ ಸಾಠೆ ಕೂಡ ಬಿಜೆಪಿಯ ತೆಕ್ಕೆಗೆ ಜಾರಿದರೂ ಅಚ್ಚರಿ ಇಲ್ಲ. ಅದೇನೇ ಆದರೂ ಅಣ್ಣಾಭಾವು ಸಾಠೆಗೆ ಜಾಗತಿಕ ಮನ್ನಣೆಯಂತೂ ಸಿಗುತ್ತಿದೆ. ಇದರ ಶ್ರೇಯಸ್ಸು ಬಿಜೆಪಿಗೆ ಸಲ್ಲುವುದರಲ್ಲಿ ತಪ್ಪಿಲ್ಲ. ಸಾಠೆಯವರನ್ನು ಇಟ್ಟುಕೊಂಡು ರಷ್ಯಾ ಜೊತೆಗಿನ ಭಾರತದ ಸಂಬಂಧವನ್ನು ವೃದ್ಧಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿರಬಹುದು.

ಈ ನೆಪದಲ್ಲಾದರೂ ನಾಡಿನ ಜನತೆಗೆ ತುಕಾರಾಮ್ ಅಣ್ಣಾಭಾವು ಸಾಠೆ ಅವರನ್ನು ಸ್ಮರಿಸುವ ಅವಕಾಶ ಒದಗಿಬಂದಿರುವುದು ಸ್ವಾಗತಾರ್ಹ.

(ಒನ್ಇಂಡಿಯಾ ಸುದ್ದಿ)

English summary
Indian social reformer Tukaram Bhaurao Sathe's statue is built in Moscow and is being unveiled on September 14th. Here is details about him and his works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X