ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ
ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ಬಿಸಿಯಾದ ಪ್ರದೇಶವಾಗಿ ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಬೀದರ್ ಜಿಲ್ಲೆಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಚಲನೆಯಿಂದಾಗಿ ಹವಾಮಾನದಲ್ಲಿ ಕೆಲವು ಬದಲಾವಣೆಗಳಾಗಿದ್ದು, ಸದ್ಯಕ್ಕೆ ರಾಜ್ಯದಾದ್ಯಂತ ತಾಪಮಾನದಲ್ಲಿ ದೊಡ್ಡ ಮಟ್ಟದ ಇಳಿಕೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಬಿಸಿಲ ತಾಪ ತೀವ್ರವಾಗಲಿದ್ದು, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾರವಾಡ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನವು 38-39 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ.

ಎಲ್ಲೆಲ್ಲಿ ಗರಿಷ್ಠ ತಾಪಮಾನ ದಾಖಲು?
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬೀದರ್, ವಿಜಯಪುರ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನವು 36.1-39.8 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಮೂಲಕ ತೀವ್ರ ಸೆಕೆ ಕಂಡುಬಂದಿದೆ. ಇನ್ನು ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ ಮತ್ತು ಧಾರವಾಡದಲ್ಲಿ ತಾಪಮಾನವು 33.4-36 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಬಿಸಿಲ ತಾಪ ಏರಿದೆ. ಚಿತ್ರದುರ್ಗ, ಹಾಸನ, ಚಿಂತಾಮಣಿ, ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ತಾಪಮಾನವು 33.4-36 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ.
ಕರಾವಳಿ ಭಾಗದ ಜಿಲ್ಲೆಗಳಲ್ಲಿ ಒಳನಾಡಿಗಿಂತ ತುಸು ಕಡಿಮೆ ತಾಪಮಾನ ದಾಖಲಾಗಿದೆ. ಹೊನ್ನಾವರ, ಕಾರವಾರ, ಮಂಗಳೂರು ಮತ್ತು ಶಕ್ತಿನಗರ ಪ್ರದೇಶಗಳಲ್ಲಿ ತಾಪಮಾನವು 32.5-34.6 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ. ರಾಜ್ಯದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಮುಂದಿನ ದಿನಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ರಾಜ್ಯದಾದ್ಯಂತ ಒಣ ಹವಾಮಾನವೇ ಮುಂದುವರಿಯಲಿದೆ.
ಮುಂದಿನ 48 ಗಂಟೆಗಳ ಕಾಲ ರಾಜ್ಯದ ಹಲವೆಡೆ ಒಣ ಹವಾಮಾನ ಮುಂದುವರಿಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 1.6-3.0 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣವೂ ಕಂಡುಬರಬಹುದು. ಬೆಂಗಳೂರಿನಲ್ಲಿ ಆಕಾಶವು ಶುಭ್ರವಾಗಿರಲಿದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಬೆಂಗಳೂರು ನಗರ, ಕೆ.ಐ.ಎ.ಎಲ್ ಮತ್ತು ಹೆಚ್.ಎ.ಎಲ್ ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಳವಾಗಿದೆ. ಹೊನ್ನಾವರ, ಕಾರವಾರ ಮತ್ತು ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ತಾಪಮಾನವು 32.5-34.6 ಡಿಗ್ರಿ ಸೆಲ್ಸಿಯಸ್ ನಡುವೆ ಸ್ಥಿರವಾಗಿದೆ.
ಮುಂದುವರಿದ ಸುಳಿಗಾಳಿ
ಮನ್ನಾರ್ ಕೊಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ಸುಮಾರು 0.9 ಕಿ.ಮೀ ಎತ್ತರದಲ್ಲಿ ಮೇಲ್ಮೈ ವಾಯುಮಂಡಲದ ಸುಳಿಗಾಳಿ ಇನ್ನೂ ಮುಂದುವರಿದಿದೆ. ಇದೇ ವೇಳೆ, ಮನ್ನಾರ್ ಕೊಲ್ಲಿಯಿಂದ ತಮಿಳುನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಮೂಲಕ ಉತ್ತರ ಒಳನಾಡು ಕರ್ನಾಟಕದವರೆಗೆ ಹರಡಿದ್ದ ವಾಯುಭಾರ ಕುಸಿತದ ಸುಳಿ ಈಗ ದುರ್ಬಲಗೊಂಡಿದೆ. ಈ ಬದಲಾವಣೆಗಳಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನವೇ ಮುಂದುವರಿಯಲಿದ್ದು, ತಾಪಮಾನದಲ್ಲಿ ಸದ್ಯಕ್ಕೆ ದೊಡ್ಡ ಮಟ್ಟದ ಇಳಿಕೆಯ ಮುನ್ಸೂಚನೆ ಇಲ್ಲ ಎಂದು ಇಲಾಖೆ ತಿಳಿಸಿದೆ.












Click it and Unblock the Notifications