Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ
ಮುಂಬೈ: ವಾರದ ಆರಂಭದಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಜಾಗತಿಕ ಮಾರುಕಟ್ಟೆಯ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಎಸ್‌ಇ (BSE) ಸೆನ್ಸೆಕ್ಸ್ 2100 ಅಂಕಗಳಿಗಿಂತಲೂ ಹೆಚ್ಚು ಕುಸಿತ ಕಂಡಿದೆ.
ಆರಂಭಿಕ ವ್ಯವಹಾರದಲ್ಲೇ ಸೆನ್ಸೆಕ್ಸ್ 2100ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಕೆಳಮಟ್ಟಕ್ಕೆ ಕುಸಿದಿದೆ. ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ (Nifty) ಕೂಡ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಪ್ರಮುಖ ಬೆಂಬಲ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ. ಮಾರುಕಟ್ಟೆಯ ಈ ದಿಢೀರ್ ಕುಸಿತದಿಂದಾಗಿ ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಕೆಲವೇ ಗಂಟೆಗಳಲ್ಲಿ ಮಣ್ಣು ಪಾಲಾಗಿದೆ.

ಅಮೆರಿಕ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ಮಾರಾಟದ ಒತ್ತಡ ಭಾರತೀಯ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಮತ್ತು ಬಡ್ಡಿದರ ಏರಿಕೆಯ ಭೀತಿಯಿಂದಾಗಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರಮುಖವಾಗಿ ಬ್ಯಾಂಕಿಂಗ್, ಐಟಿ ಮತ್ತು ಮೆಟಲ್ ವಲಯದ ಷೇರುಗಳು ತೀವ್ರ ಇಳಿಕೆ ಕಂಡಿವೆ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಇಂದು ಭಾರತೀಯ ಷೇರು ಮಾರುಕಟ್ಟೆಯನ್ನು ನಡುಗಿಸಿದೆ. ಇರಾನ್ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಹೂಡಿಕೆದಾರರಲ್ಲಿ ಹಣದುಬ್ಬರ ಮತ್ತು ರೂಪಾಯಿ ಮೌಲ್ಯ ಕುಸಿತದ ಭೀತಿ ಮೂಡಿಸಿದೆ. ಪರಿಣಾಮವಾಗಿ, ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಸುನಾಮಿ ಎದ್ದಿದೆ.
ರೂಪಾಯಿ ಮೌಲ್ಯ ಕುಸಿತ
ವಹಿವಾಟಿನ ಆರಂಭಿಕ ಹಂತದಲ್ಲೇ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 1,900 ರಿಂದ 2,100 ಅಂಕಗಳಷ್ಟು ಕುಸಿದು ಹೂಡಿಕೆದಾರರನ್ನು ಕಂಗಾಲಾಗಿಸಿದೆ. ಎನ್‌ಎಸ್‌ಇ ನಿಫ್ಟಿ-50 ಸೂಚ್ಯಂಕವು ಶೇ. 2.5 ರಷ್ಟು ಇಳಿಕೆ ಕಂಡು, ಅತ್ಯಂತ ನಿರ್ಣಾಯಕವಾದ 23,900 ಮಟ್ಟಕ್ಕಿಂತ ಕೆಳಕ್ಕೆ ಜಾರಿದೆ. ತೈಲ ಬೆಲೆ ಏರಿಕೆಯಿಂದಾಗಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು ₹92.31ಕ್ಕೆ ತಲುಪಿದೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಜಾಗತಿಕ ಇಂಧನ ಸರಬರಾಜಿಗೆ ಧಕ್ಕೆ ತರುವ ಆತಂಕ ಮೂಡಿಸಿದೆ. ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ್ದು, ಭಾರತದಂತಹ ಆಮದು ಅವಲಂಬಿತ ದೇಶಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಿದೆ. ಹೀಗಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆದುಕೊಳ್ಳುತ್ತಿದ್ದಾರೆ.
ಆಮದು ವೆಚ್ಚ ಹೆಚ್ಚಾಗುತ್ತಿದ್ದಂತೆ ಡಾಲರ್ ಬೇಡಿಕೆ ಕುದುರಿದ್ದು, ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಮಾರ್ಚ್ ಮೊದಲ ವಾರದಲ್ಲೇ ರೂಪಾಯಿ ಮೌಲ್ಯ ಕುಸಿದಿದೆ. ಇದರಿಂದ ವಿದೇಶಿ ಶಿಕ್ಷಣ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಚಿನ್ನದ ಆಮದು ಮತ್ತಷ್ಟು ದುಬಾರಿಯಾಗಲಿವೆ. ಕೇವಲ ಮಾರ್ಚ್ ಮೊದಲ ವಾರದ ಆರಂಭಿಕ ದಿನಗಳಲ್ಲೇ ವಿದೇಶಿ ಹೂಡಿಕೆದಾರರು ಸುಮಾರು 12000 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದ್ದು, ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಕರಗಿ ಹೋಗಿದೆ.
ಯುದ್ಧದ ಕಾರಣದಿಂದಾಗಿ ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಆತಂಕವಿದೆ. ಇದರಿಂದ ಶಿಪ್ಪಿಂಗ್ ಮತ್ತು ವಿಮಾ ವೆಚ್ಚಗಳು ಹೆಚ್ಚಾಗಲಿವೆ. ಭಾರತದ ರಫ್ತು ವಲಯಗಳಾದ ಕೃಷಿ (ಬಾಸುಮತಿ ಅಕ್ಕಿ), ಆಭರಣಗಳ ಮೇಲೆ ಇದು ನೇರ ಪರಿಣಾಮ ಬೀರಲಿದೆ.
ವಿದೇಶಿ ವಿನಿಮಯ ಸಂಗ್ರಹ ಮತ್ತು ಜಿಡಿಪಿ ಬೆಳವಣಿಗೆಯ ದೃಷ್ಟಿಯಿಂದ ಭಾರತದ ಆರ್ಥಿಕತೆಯು ಸದ್ಯದ ಮಟ್ಟಿಗೆ ಬಲಿಷ್ಠವಾಗಿದ್ದರೂ, ಯುದ್ಧವು ದೀರ್ಘಕಾಲ ಮುಂದುವರಿದರೆ ಅದು ಭಾರತದ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕುವುದಂತೂ ಖಚಿತ. ಆರ್‌ಬಿಐ (RBI) ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಿ ರೂಪಾಯಿ ಮೌಲ್ಯ ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆಯಾದರೂ, ಜಾಗತಿಕ ಪರಿಸ್ಥಿತಿ ತಿಳಿಯಾಗುವವರೆಗೆ ಅಸ್ಥಿರತೆ ಮುಂದುವರಿಯಲಿದೆ ಎನ್ನಲಾಗಿದೆ.












Click it and Unblock the Notifications