Blue Line Metro: ಬೆಂಗಳೂರಿಗರಿಗೆ ಬ್ಲೂ ಲೈನ್ ಮೆಟ್ರೋ ಭಾಗ್ಯ; ಕೃಷ್ಣ ಬೈರೇಗೌಡ ಮಹತ್ವದ ಮಾಹಿತಿ!

ಬೆಂಗಳೂರು: ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸುವ ಮಹತ್ವದ ಯೋಜನೆಯಾದ ಬ್ಲೂ ಲೈನ್ ಮೆಟ್ರೋ ಮಾರ್ಗದ ಫೇಸ್ 2A ಯೋಜನೆಯಡಿ ಕೆ.ಆರ್. ಪುರಂನಿಂದ ಮಹದೇವಪುರದ ಕಡೆಗೆ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ (ಟ್ರಯಲ್ ರನ್) ಆರಂಭವಾಗಿದೆ. ಕೆ.ಆರ್. ಪುರಂನಿಂದ ನಾಲ್ಕು ಮೆಟ್ರೋ ನಿಲ್ದಾಣಗಳವರೆಗೆ ಪರೀಕ್ಷಾರ್ಥ ಸಂಚಾರ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ನಿಲ್ದಾಣಗಳಿಗೂ ಟ್ರಯಲ್ ರನ್ ವಿಸ್ತರಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಪರೀಕ್ಷಾರ್ಥ ಸಂಚಾರದ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಸಂಚಾರ ವ್ಯವಸ್ಥೆಯ ದೃಷ್ಟಿಯಿಂದ ಔಟರ್ ರಿಂಗ್ ರೋಡ್ ಅತ್ಯಂತ ಪ್ರಮುಖ ಕಾರಿಡಾರ್ ಆಗಿದೆ. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ಪ್ರದೇಶದಲ್ಲಿ ಸುಮಾರು 11ರಿಂದ 12 ಲಕ್ಷ ಜನರು ಉದ್ಯೋಗ ನಿರ್ವಹಿಸುತ್ತಿದ್ದು, ಸಾರ್ವಜನಿಕರ ದೈನಂದಿನ ಸಂಚಾರ, ಉದ್ಯೋಗಾವಕಾಶ ಹಾಗೂ ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಕಾರಿಡಾರ್ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

Blue Line Metro Bengaluru Metro Trial Run Begins Public Service Targeted for Next Year Krishna Byre Gowda

ಔಟರ್ ರಿಂಗ್ ರೋಡ್‌ನಲ್ಲಿನ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ಒದಗಿಸುವ ಉದ್ದೇಶದಿಂದ ಮೆಟ್ರೋ ಸಂಪರ್ಕವನ್ನು ಅತ್ಯಗತ್ಯವೆಂದು ಪರಿಗಣಿಸಿ, 2016-17ರಲ್ಲಿಯೇ ಯೋಜನೆ ರೂಪಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಫೇಸ್ 2A ಮತ್ತು ಫೇಸ್ 2B ಯೋಜನೆಗಳನ್ನು ಸಿದ್ಧಪಡಿಸಿ, 2017ರಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2020ರಿಂದ ಕಾಮಗಾರಿಗಳು ಆರಂಭಗೊಂಡಿವೆ ಎಂದು ವಿವರಿಸಿದರು.

ಫೇಸ್ 2A: ಪರೀಕ್ಷಾರ್ಥ ಸಂಚಾರ ಹಂತ ಹಂತವಾಗಿ ವಿಸ್ತರಣೆ

ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 19 ಕಿ.ಮೀ. ಉದ್ದದ ಫೇಸ್ 2A ಮೆಟ್ರೋ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಅಕ್ಟೋಬರ್ ಅಂತ್ಯದ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭಿಸುವ ಗುರಿ ಹೊಂದಲಾಗಿತ್ತು. ಅದರಂತೆ ಇದೀಗ ಕೆ.ಆರ್. ಪುರಂನಿಂದ ನಾಲ್ಕು ನಿಲ್ದಾಣಗಳವರೆಗೆ ಟ್ರಯಲ್ ರನ್ ಆರಂಭಿಸಲಾಗಿದೆ.

ಈ ತಿಂಗಳು ಪೂರ್ತಿ ಪರೀಕ್ಷಾರ್ಥ ಸಂಚಾರ ಮುಂದುವರಿಯಲಿದ್ದು, ಮುಂದಿನ ತಿಂಗಳು ಇನ್ನೂ ನಾಲ್ಕು ನಿಲ್ದಾಣಗಳವರೆಗೆ ಟ್ರಯಲ್ ರನ್ ವಿಸ್ತರಿಸಲಾಗುವುದು. ಪ್ರಸ್ತುತ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಬಾಕಿಯಿದ್ದು, ಮುಂದಿನ ಎರಡು-ಮೂರು ತಿಂಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

Metro Blue Line: ಟ್ರಯಲ್ ರನ್ ಮಾರತ್ತಹಳ್ಳಿವರೆಗೂ ವಿಸ್ತರಣೆ! 2ಎ-2ಬಿ ಲೈನ್ ಅಪ್ಡೇಟ್, ನಿಲ್ದಾಣಗಳು, ಉದ್ಘಾಟನೆ?
Metro Blue Line: ಟ್ರಯಲ್ ರನ್ ಮಾರತ್ತಹಳ್ಳಿವರೆಗೂ ವಿಸ್ತರಣೆ! 2ಎ-2ಬಿ ಲೈನ್ ಅಪ್ಡೇಟ್, ನಿಲ್ದಾಣಗಳು, ಉದ್ಘಾಟನೆ?

ಜನವರಿ ವೇಳೆಗೆ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಪೂರ್ಣಗೊಳಿಸಿ, ಫೆಬ್ರವರಿ ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗೆ ಮುಂದಾಗುವ ಉದ್ದೇಶವಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸುಮಾರು ಏಳೆಂಟು ತಿಂಗಳ ಕಾಲಾವಕಾಶ ಅಗತ್ಯವಿದ್ದು, ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಮೆಟ್ರೋ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಫೇಸ್ 2B ಕಾಮಗಾರಿಗಳ ವೇಗ ಹೆಚ್ಚಿಸಲು ಸೂಚನೆ

ಬ್ಲೂ ಲೈನ್ ಯೋಜನೆಯ ಫೇಸ್ 2B ಅಡಿಯಲ್ಲಿಯೂ ಕಾಮಗಾರಿಗಳು ಪ್ರಗತಿಯಲ್ಲಿವೆ. ವಿಶೇಷವಾಗಿ ಕೆ.ಆರ್. ಪುರಂನಿಂದ ಹೆಬ್ಬಾಳದ ನಡುವಿನ ಕಾಮಗಾರಿಗಳ ವೇಗ ಇನ್ನಷ್ಟು ಹೆಚ್ಚಾಗಬೇಕಿದೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಗುತ್ತಿಗೆದಾರರೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ನಿರ್ದೇಶಿಸಲಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ, ಕೆ.ಆರ್. ಪುರಂನಿಂದ ಹೆಬ್ಬಾಳ ಹಾಗೂ ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58.2 ಕಿ.ಮೀ. ಉದ್ದದ ಬ್ಲೂ ಲೈನ್ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಸುಮಾರು 20,000 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಮುಂದಿನ ಒಂದೂವರೆ ವರ್ಷದೊಳಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!
Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!

ಕಾಮಗಾರಿಗಳಿಗೆ ಅನುದಾನದ ಕೊರತೆಯಾಗದಂತೆ ಕ್ರಮ

ಮೆಟ್ರೋ ಯೋಜನೆಗೆ ಸಂಬಂಧಿಸಿದ ಸಾಲ ಮರುಪಾವತಿಯ ಹೊರೆ ರಾಜ್ಯ ಸರ್ಕಾರದ ಮೇಲಿದೆ. ಮೆಟ್ರೋ ಸಂಸ್ಥೆಯು ತನ್ನ ಆದಾಯದಿಂದಲೇ ನಿರ್ವಹಣಾ ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದ್ದು, ಕಳೆದ ಹಲವು ವರ್ಷಗಳಿಂದ ಸಂಸ್ಥೆ ಅನುಭವಿಸಿರುವ ನಷ್ಟವನ್ನು ರಾಜ್ಯ ಸರ್ಕಾರವೇ ಅನುದಾನದ ಮೂಲಕ ಭರಿಸುತ್ತಿದೆ.

ಸಾಲ ಪಡೆಯುವ ಸಂದರ್ಭದಲ್ಲಿ ಡಾಲರ್ ಮೌಲ್ಯ ಸುಮಾರು 70ರಿಂದ 80 ರೂ.ಗಳಷ್ಟಿದ್ದು, ಇದೀಗ ಸುಮಾರು 100 ರೂ.ಗಳಿಗೆ ಏರಿಕೆಯಾಗಿರುವುದರಿಂದ ಸಾಲ ಮರುಪಾವತಿಯ ಹೊರೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಯೋಜನೆಗಳ ಅನುಮೋದನೆಗೆ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವುದರಿಂದ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಹಾಗೂ ಕಾಮಗಾರಿಗಳ ವೆಚ್ಚವೂ ಹೆಚ್ಚಾಗುತ್ತಿದೆ. ಈ ಹೆಚ್ಚುವರಿ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಬೇಕಾಗಿದೆ ಎಂದು ವಿವರಿಸಿದರು.

ಆರ್ಥಿಕ ಹೊರೆ ಹೆಚ್ಚಾಗಿದ್ದರೂ ಮೆಟ್ರೋ ಕಾಮಗಾರಿಗಳಲ್ಲಿ ಹಣದ ಕೊರತೆಯಿಂದ ಯಾವುದೇ ವಿಳಂಬವಾಗಲು ಸರ್ಕಾರ ಅವಕಾಶ ನೀಡಿಲ್ಲ. ಮೆಟ್ರೋ ಸಂಸ್ಥೆಯು ಅಗತ್ಯ ಹಣ ಕೇಳಿದ ತಕ್ಷಣ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬಜೆಟ್‌ನಲ್ಲಿಯೂ ಅಗತ್ಯ ಅನುದಾನವನ್ನು ಕಾಯ್ದಿರಿಸಲಾಗಿದೆ. ಯಾವುದೇ ಕಾರಣಕ್ಕೂ ಹಣಕಾಸಿನ ಕೊರತೆಯಿಂದ ಕಾಮಗಾರಿಗಳು ವಿಳಂಬವಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ಹೇಳಿದರು.

ರೆಡ್ ಲೈನ್ ಮೆಟ್ರೋ ಪ್ರಸ್ತಾವನೆ ಕುರಿತು ಚರ್ಚೆ

ಬೆಂಗಳೂರು ನಗರದ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ರೆಡ್ ಲೈನ್ ಪ್ರಸ್ತಾವನೆ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ತಾವು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಸುಮಾರು 22 ತಿಂಗಳು ಕಳೆದಿದ್ದರೂ, ಈವರೆಗೆ ಅಂತಿಮ ಅನುಮೋದನೆ ದೊರೆತಿರಲಿಲ್ಲ.

ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆದಿದ್ದು, ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರಸ್ತಾವನೆಯ ವಿವಿಧ ಅಂಶಗಳನ್ನು ವಿವರಿಸಿದ್ದಾರೆ. ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳದಿದ್ದರೂ, ರಾಜ್ಯದ ಅಹವಾಲುಗಳನ್ನು ಆಲಿಸಿ ಸಕಾರಾತ್ಮಕ ಹಾಗೂ ರಚನಾತ್ಮಕ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ ಸರ್ಜಾಪುರದಿಂದ ಇಬ್ಬಳೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ಡಬಲ್ ಡೆಕ್ಕರ್ ವ್ಯವಸ್ಥೆ ನಿರ್ಮಿಸುವ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರದ ಮುಂದೆ ಮಂಡಿಸಲಾಗಿದೆ. ಸರ್ಜಾಪುರ ರಸ್ತೆಯಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಿದ್ದು, ಈ ಭಾಗದಲ್ಲಿ ವಸತಿ ಸಮುಚ್ಚಯಗಳು, ವಿಲ್ಲಾಗಳು ಹಾಗೂ ಕಂಪನಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಸಂಚಾರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡಬಲ್ ಡೆಕ್ಕರ್ ಹಾಗೂ ಮೆಟ್ರೋ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಎರಡೂ ಪ್ರಸ್ತಾವನೆಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮೆಟ್ರೋ ಆದಾಯ ಮೂಲಗಳನ್ನು ಬಲಪಡಿಸಲು ಚಿಂತನೆ

ಮೆಟ್ರೋ ಸಂಸ್ಥೆಯು ಆರ್ಥಿಕವಾಗಿ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಪ್ರಸ್ತುತ ಟಿಕೆಟ್ ಆದಾಯದಿಂದ ನಿರ್ವಹಣಾ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಾಗುತ್ತಿಲ್ಲ. ಸವಕಳಿ ವೆಚ್ಚವನ್ನು ಪರಿಗಣಿಸಿದರೆ ಸಂಸ್ಥೆಯು ವಾರ್ಷಿಕ ಸುಮಾರು 600ರಿಂದ 700 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಸವಕಳಿ ವೆಚ್ಚವನ್ನು ಹೊರತುಪಡಿಸಿದ ಲೆಕ್ಕಾಚಾರದಲ್ಲಿ ಪ್ರಸ್ತುತ ಸುಮಾರು 50ರಿಂದ 60 ಕೋಟಿ ರೂ. ಲಾಭದಲ್ಲಿದ್ದರೂ, ಬ್ಲೂ ಲೈನ್ ಕಾರ್ಯಾಚರಣೆ ಆರಂಭವಾದ ನಂತರ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.

ಹೀಗಾಗಿ ಮೆಟ್ರೋ ಸಂಸ್ಥೆಯ ಆದಾಯ ಮೂಲಗಳನ್ನು ಬಲಪಡಿಸುವ ಕುರಿತು ಸಮಗ್ರವಾಗಿ ಚಿಂತನೆ ನಡೆಸಲಾಗುತ್ತಿದೆ. ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳಿಗೆ ಸರ್ಕಾರದ ಅನುದಾನವನ್ನೇ ಅವಲಂಬಿಸದೆ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವಂತಾಗಬೇಕು. ಇದರಿಂದ ಆರ್ಥಿಕವಾಗಿ ಸದೃಢವಾದ ಮೆಟ್ರೋ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ದೆಹಲಿ ಮೆಟ್ರೋಗೆ ಹೋಲಿಕೆ ಮಾಡುವಾಗ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು, ಮೆಟ್ರೋ ಜಾಲದ ಉದ್ದ ಹಾಗೂ ಪ್ರಯಾಣಿಕರ ಸಂಖ್ಯೆ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಗಣಿಸಬೇಕು. ಈ ಕುರಿತು ಸಮಗ್ರ ಚರ್ಚೆ ಅಗತ್ಯವಿದೆ ಎಂದು ಹೇಳಿದರು.

ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ಒದಗಿಸುವ ಗುರಿ

ಬ್ಲೂ ಲೈನ್ ಮೆಟ್ರೋ ಯೋಜನೆ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ವಿಶೇಷವಾಗಿ ಔಟರ್ ರಿಂಗ್ ರೋಡ್‌ನಲ್ಲಿ ಉದ್ಯೋಗಕ್ಕಾಗಿ ಪ್ರತಿದಿನ ಸಂಚರಿಸುವ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಸಾರ್ವಜನಿಕ ಸಾರಿಗೆಯ ಬಳಕೆ ಹೆಚ್ಚಿಸುವುದರ ಮೂಲಕ ರಸ್ತೆ ಮೇಲಿನ ವಾಹನಗಳ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಯೋಜನೆಯ ಕಾಮಗಾರಿಗಳು ಹಾಗೂ ಸುರಕ್ಷತಾ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಗದಿತ ಗುರಿಯಂತೆ ಸಾರ್ವಜನಿಕರಿಗೆ ಮೆಟ್ರೋ ಸೇವೆ ಒದಗಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಯಾವುದೇ ಸವಾಲುಗಳಿದ್ದರೂ ಅವುಗಳನ್ನು ಸಮರ್ಥವಾಗಿ ನಿಭಾಯಿಸಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್, ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಯಶವಂತ್ ಚವಾಣ್, ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ. ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+