ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಾ ನಾಗರಾಜ್ ಕಥೆ : ತಮಾಗುಚಿ (ಭಾಗ 4)

By Prasad
|
Google Oneindia Kannada News

(ಕಥೆ ಮುಂದುವರಿದಿದೆ...) ಎಲ್ಲವೂ ಥೇಟ್ ಮಕ್ಕಳನ್ನು ಸಾಕಿದಹಾಗೆ! ಅದಕ್ಕೆ ಹಸಿವಾಗುತ್ತದೆ ತಿನ್ನಿಸು, ಬೇಜಾರಾಗುತ್ತದೆ ಆಟವಾಡಿಸು, ಪ್ರವಾಸಕ್ಕೆ ಕಳಿಸು, ಸಣ್ಣ ಪುಟ್ಟ ಕೆಲಸ ಕಲಿಸು, ಅದು "ಹೊಲಸು" ಸಹ ಮಾಡಿಕೊಳ್ಳುತ್ತದೆ, ಕಮೋಡ್ ಚಿತ್ರವನ್ನು ಸೆಲೆಕ್ಟ್ ಮಾಡಿ ಬಟನ್ ಒತ್ತಿ ಕ್ಲೀನ್ ಮಾಡು, ರೋಗಬರುತ್ತದೆ ಡಾಕ್ಟರ್ ಹತ್ತಿರ ಕಳಿಸು. ಅನಂತನಿಗೆ ಸಿಂಗಪುರದ ಕನ್ನಡಿಗರೊಬ್ಬರ ಮನೆಯಲ್ಲಿ ಮಗುವಿನ ಹುಟ್ಟಿದಹಬ್ಬದ ದಿನ ಮಕ್ಕಳಿಗೆಲ್ಲಾ ಆಟವಾಡಿಸಿದಾಗ ಇವನು ಯಾವುದೋ ಆಟದಲ್ಲಿ ಗೆದ್ದನೆಂದು ಇದನ್ನು ಬಹುಮಾನವಾಗಿ ಕೊಟ್ಟಿದ್ದರು.

ಅದು ಪ್ಯಾಕೆಟ್‌ನಲ್ಲಿದ್ದು ಮನೆಗೆ ಬಂದು ಬಿಚ್ಚಿನೋಡಿದಾಗ ಈ ತಮಾಗುಚಿಯನ್ನು ಕಂಡು ಆದಿತ್ಯನಿಗೆ ನಗುವೋನಗು! ಅದು ಹುಡುಗಿಯರ ಆಟಿಕೆಯಂತೆ! ಅನಂತನಿಗೆ ಹಾಗೇನೂ ಅನಿಸಿರಲಿಲ್ಲ. ಅವನು ತನ್ನೆಲ್ಲ ಮಾತೃಹೃದಯವನ್ನು ಅದಕ್ಕಾಗಿ ಮುಡಿಪಾಗಿಟ್ಟು, ತನ್ನ ಆಟ ಓದು ಎಲ್ಲ ಮುಗಿದಮೇಲೆ ತಮಾಗುಚಿಯನ್ನು ಆಡಿಸುತ್ತಾ ಅಣ್ಣ ಮತ್ತು ಅಮ್ಮನ ಗೇಲಿಗೆ ಬಲಿಯಾಗುತ್ತಿದ್ದ. ಕೆಲವೊಂದು ಸಲವಂತೂ ಬೇರೇನೂ ಆಟಿಕೆ ಮುಟ್ಟದೇ ತಮಾಗುಚಿಯ ಆರೈಕೆಯಲ್ಲೇ ಮುಳುಗಿ ಸುಧಾಳಿಂದ "ಹೆಣ್ಣಿಗರಾಮ ಒಳ್ಳೆ ಹುಡಿಗಿಥರ ಅದನ್ನೇ ಹಿಡ್ಕೊಂಡು ಏನೋ ನಿಂದು"? ಅಂತ ಬೈಸಿಕೊಳ್ಳುತ್ತಿದ್ದ.

ರಾಮುಗೆ ನಿಧಾನವಾಗಿ ತಮಾಗುಚಿಯ ಸೆಳೆತ ಹೆಚ್ಚಿತು. ಅದರಲ್ಲೇನೋ ಅರ್ಥವಿದೆ ಅನಿಸುತ್ತಿತ್ತು. ಹಿಂದೆ "ಮೇಡ್ ಇನ್ ಜಪಾನ್"ಎನ್ನುವುದನ್ನು ಓದಿದ ಮೇಲೆ ಈ ಜಪಾನೀಯರು ಏನೆಲ್ಲಾ ಚಮತ್ಕಾರವನ್ನು ಈ ಪುಟ್ಟ ಚಿಪ್‌ನಲ್ಲಿ ಅಡಗಿಸಿದ್ದಾರೆ ಎನ್ನುವ ಬೆರಗು ಮೂಡಿತು. ಅಂದಿನಿಂದ ಶಾಲೆಯಿಂದ ಬಂದ ಮೊಮ್ಮಕ್ಕಳ ಜೊತೆಗೆ ತಮಾಗುಚಿಯ ಬಗ್ಗೆ ಮಾತಾಡತೊಡಗಿದರು. "ಏನು ಮಾವ ನಿಮಗೂ ಅನಿಯ ಚಟ ಹತ್ತಿತ್ತಾ" ಎಂದು ಸೊಸೆಯಿಂದ ತಮಾಷೆ ಮಾಡಿಸಿಕೊಂಡರು. ಆದಿತ್ಯ ಕಿಲಾಡಿ! ಹೆಣ್ಣಿನ ಆಟಿಕೆಯೆಂದು ಅನಿಗೆ ರೇಗಿಸುತ್ತಿದ್ದರೂ ಅವನು ಸ್ನಾನಕ್ಕೆ ಹೋದಾಗಲೋ ಅಥವಾ ಅಮ್ಮನ ಹತ್ತಿರ ಪಾಠ ಹೇಳಿಸಿಕೊಳ್ಳುವಾಗಲೋ ತನ್ನದು ಮುಗಿದಿದ್ದರೆ ಮೆಲ್ಲಗೆ ತಮಾಗುಚಿಯನ್ನು ಕೈಗೇರಿಸಿಕೊಂಡು ಅನಂತನಿಗಿಂತಾ ಅದರಲ್ಲಿನ ಪ್ರೋಗ್ರಾಮಿನ ಎಲ್ಲ ಸಾಧ್ಯತೆಗಳನ್ನೂ ಅರಿತಿದ್ದ.

ತಮಾಗುಚಿಯನ್ನು ಆಡಿಸುವಾಗ ಅದಕ್ಕೆ ಹೇಗೆಲ್ಲಾ ಪಾಯಿಂಟ್ಸ್‌ಗಳನ್ನು ದಕ್ಕಿಸಿಕೊಡಬಹುದು, ಊಟತಿಂಡಿಗಳನ್ನು ಸರಿಯಾಗಿ ಕೊಟ್ಟರೆ ಬೋನಸ್ ರೂಪದಲ್ಲಿ ಯಾವಯಾವ ಹಣ್ಣುಗಳು ಸಿಗುತ್ತವೆ, ಪ್ರವಾಸಕ್ಕೆ ಯಾವ ಊರಿಗೆ ಕಳಿಸಿದರೆ ತಮಾಗುಚಿ ಎಷ್ಟು ಸೆಕೆಂಡ್‌ನಲ್ಲಿ ವಾಪಸ್ ಬರುತ್ತದೆ, ಅದರ "ಹೊಲಸನ್ನು" ಸರಿಯಾಗಿ ಕ್ಲೀನ್ ಮಾಡದಿದ್ದರೆ ಅದಕ್ಕೆ ವೈರಸ್‌ಹತ್ತಿದ್ದು ಹೇಗೆ ಗೊತ್ತಾಗುತ್ತದೆ, ಅದು ಎಷ್ಟು ಹೊತ್ತಿಗೆ ಮಲಗುತ್ತದೆ, ಯಾವಾಗ ಏಳುತ್ತದೆ ಎಲ್ಲ ಪಂಚಾಂಗವೂ ಆದಿತ್ಯನ ಬಾಯಲ್ಲಿತ್ತು. "ಮತ್ತೆ ಅನಿನ ಹೆಣ್ಣಪ್ಪಿ ಅಂತಿ ನಿಂಗೇ ತಮಾಗುಚಿ ಜಾಸ್ತಿ ಗೊತ್ತು" ಎನ್ನುವ ತಾತನ ನಗೆಚಾಟಿಕೆಗೆ ತರುಣನಂತೆ ನಸುನಗುತ್ತಾ "ಹಾಗೇ ಸುಮ್ನೆ ಒಂದ್‌ಸಲ ನೋಡ್ಕೊಂಡಿದ್ದೆ ತಾತ" ಎನ್ನುವ ಹಾರಿಕೆ ಉತ್ತರಕೊಟ್ಟು ಜಾಗ ಖಾಲಿ ಮಾಡುತ್ತಾ " ನಿಮಗೆ ಇನ್ನೂ ತಮಾಗುಚಿಯ ವಿಷಯ ತಿಳ್ಕೋಬೇಕೂಂತ ಇದ್ದರೆ ಡಬ್ಲು ಡಬ್ಲು ಡಬ್ಲು ಡಾಟ್ ತಮಾಗುಚಿ ಡಾಟ್ ಕಾಮ್‌ಗೆ ಹೋಗಿ ನೋಡಿ ತಾತ ಇದಕ್ಕಿಂತಾ ಅಡ್ವಾನ್ಸ್ ತಮಾಗುಚಿ ಇವೆ" ಎಂದು ಹೇಳಿ ರಾಮುವಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಾನೆ!

English summary
Weekend special : A heart touching Kannada long story by Shantha Nagaraj, Bangalore. Subject of the story is Tamagotchi, a pal to young and even to older.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X