ಶಾಂತಾ ನಾಗರಾಜ್ ಕಥೆ : ತಮಾಗುಚಿ (ಭಾಗ 3)
(ಕಥೆ ಮುಂದುವರಿದಿದೆ...) ಹನ್ನೆರಡು ವರ್ಷದ ಆದಿತ್ಯ ಅಪ್ಪನ ಕೈಯ್ಯಲ್ಲಿ ಪಳಗಿ ಹೋಗಿದ್ದಾನೆ. ಅಮ್ಮನನ್ನು ಸ್ವಲ್ಪ ಹೊಗಳಿಬಿಟ್ಟರೆ ತಾನು ಕ್ಷೇಮ ಎನ್ನುವ ಸೂತ್ರವನ್ನು ಕಂಡುಕೊಂಡಿದ್ದಾನೆ. "ಅಮ್ಮ ನೀ ಮಾಡೊ ಸಾರು ಸೂಪರ್" ಎಂದೋ, "ವಾವ್ ಈ ಪಲ್ಯ ಬೊಂಬಾಟ್" ಎಂದೋ ಅಮ್ಮನನ್ನು ಉಬ್ಬಿಸಿ ತನಗೆ ರುಚಿಕಂಡದ್ದನ್ನು ಮಾತ್ರ ತಿಂದು ತನ್ನ ಊಟವನ್ನು ಹೇಗೋ ಸಂಭಾಳಿಸಿ ಬಿಡುತ್ತಾನೆ. ಪಾಪ ಏಳರ ಅನಂತನಿಗೆ ಇವೆಲ್ಲಾ ಕೌಶಲ್ಯಗಳು ಇನ್ನೂ ಕರಗತವಾಗಿಲ್ಲ. ರುಚಿಯಿಲ್ಲದನ್ನು ತಿರಸ್ಕರಿಸುತ್ತಾನೆ, ಸೇರಲ್ಲವೆಂದು ಮೊಂಡಾಟ ಮಾಡುತ್ತಾನೆ. ಎಲ್ಲರ ಊಟ ಮುಗಿದರೂ ಮೊದಲು ಹಾಕಿದ ಅನ್ನದ ಅಗುಳೆಣಿಸುತ್ತಾ ಕುಳಿತಿರುತ್ತಾನೆ.
ಶುರುವಾಗುತ್ತದೆ ಗಂಡಹೆಂಡತಿಯರ ಯಕ್ಷಗಾನದ ಕುಣಿತ. "ಗುದ್ದು ರವಿ ಅವನ್ ಬೆನ್ನಮೇಲೆ ಗಬಕ್ ಅಂತ ತಟ್ಟೆ ಖಾಲಿ ಮಾಡ್ಬೇಕು ಹಾಗೆ ಗುದ್ದು" ಅಮ್ಮ ಆಜ್ಞೆ ಹೊರಡಿಸುತ್ತಾಳೆ. ಅಪ್ಪ ಕೋಲಿನೊಂದಿಗೆ ಹತ್ತಿರ ನಿಲ್ಲುತ್ತಾನೆ "ಟೆನ್ ಕೌಂಟ್ ಮಾಡ್ತೀನಿ ಅಷ್ಟರಲ್ಲಿ ತಟ್ಟೆ ಖಾಲಿಯಾಗ್ಬೇಕು.. ಒನ್...ಟೂ.." ಮಗುವಿನ ಕಣ್ಣಲ್ಲಿ ನೀರು ಹರಿಯುತ್ತಿರುತ್ತದೆ. ಬಾಯಿತುಂಬಾ ಅನ್ನ ತುಂಬಿದ್ದರೂ ಬಿಕ್ಕುಗಳು ಹೊರಗೆ ಬರುತ್ತಿರುತ್ತವೆ. ದೀನನೋಟದಲ್ಲಿ ಮಗು ತಾತನ ಕಡೆ ನೋಡುತ್ತದೆ. ರಾಮುಗೆ ಕರುಳತುಂಬಾ ಕತ್ತರಿಯಾಡಿಸುತ್ತಿರುವಂತೆ ನೋವು. ಈ ನರಕದ ದೃಶ್ಯದಿಂದ ಪಲಾಯನ ಮಾಡುವವರಂತೆ, ಹೊಸಗಾಳಿಗೆ ಹಪಹಪಿಸುವವರಂತೆ, ಹೊರಬಾಗಿಲನ್ನು ತೆರೆದು ಬಾಲ್ಕನಿಯಲ್ಲಿ ನಡೆಯುತ್ತಾ ಲಿಫ಼್ಟ್‍ವರೆಗೂ ಬಂದುಬಿಡುತ್ತಾರೆ. ಸುಧಾ ಮತ್ತು ರವಿ ಕೆಟ್ಟ ತಂದೆತಾಯಿಯರೇನಲ್ಲ ಎನ್ನುವುದು ರಾಮುಗೆ ಗೊತ್ತಿದೆ. ಆದರೆ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಅವರು ಸಹಿಸುವುದಿಲ್ಲವೆನ್ನುವುದೂ ಗೊತ್ತಿದೆ.
ಅರ್ಧ ಓದಿದ ಪುಸ್ತವನ್ನು ಮುಂದುವರೆಸುತ್ತಿರುವಾಗಲೇ ಒಂದೂವರೆಗಂಟೆಯಾಗಿ ಬೆಳಗಿನ ಬ್ರೇಕ್‍ಫ಼ಾಸ್ಟ್ ಸರಿಯಿಲ್ಲದ ಕಾರಣ ಹೊಟ್ಟೆ ಚುರುಗುಟ್ಟತೊಡಗುತ್ತದೆ. ಹಿಂದೆಯೇ ಬಾಂಡಲೆಯಲ್ಲಿದ್ದ ಬ್ರೆಡ್‍ಉಪ್ಪಿಟ್ಟು ಕಿಸ್ಸಕ್ಕನೆ ನಕ್ಕಂತಾಗುತ್ತದೆ. "ಇದು ನೀನು ಮಾಡಿದ್ದೇ ರಾಜಿ. ಮೊದಲ ಇಪ್ಪತ್ತೈದು ವರ್ಷ ಅಮ್ಮ ನನ್ನ ಊಟತಿಂಡಿಯ ಹಾಳತವನ್ನು ಕಾಪಾಡಿದಳು. ನೀನು ನನ್ನ ಬಾಳಲ್ಲಿ ಪ್ರವೇಶಿಸಿದ್ದೇ ನನ್ನ ಹೊಟ್ಟೆಯ ಹದ ಮತ್ತು ಅಳತೆಗಳನ್ನು ನಿನಗೊಪ್ಪಿಸಿಬಿಟ್ಟಳು. ನೀವಿಬ್ಬರೂ ಸೇರಿ ನನ್ನನ್ನು ಈ ಸ್ಥಿತಿಗೆ ತಂದಿಟ್ಟಿರಿ" ನಸುನಗುತ್ತಾ ಮನದಲ್ಲೇ ಗೊಣಗುತ್ತಾರೆ. ರಾಜಮ್ಮನ ಕೈಯ ಇಡ್ಲಿ, ದೋಸೆ, ಮಸಾಲೆ ದೋಸೆ, ಅಕ್ಕಿರೊಟ್ಟಿ, ತರಕಾರಿ ಉಪ್ಪಿಟ್ಟು ಮುಂತಾದವು ಕಣ್ಣಮುಂದೆ ನರ್ತಿಸುತ್ತವೆ.
ಅಡುಗೆ ಮನೆಗೆ ಹೋಗಿ ಸಣ್ಣ ಬೋಗುಣೆಯಲ್ಲಿ ಹಾಲನ್ನು ಸುರಿದುಕೊಂಡು ಅದಕ್ಕಷ್ಟು ಕಾರ್ನ್ ಫ್ಲೇಕ್ಸ್ ಹಾಕಿಕೊಂಡು "ಇದು ಇವತ್ತಿನ ಊಟ. ವಿವಾಹ ಭೋಜನವಿದು, ವಿಚಿತ್ರಭಕ್ಷ್ಯಗಳಿವು! ಓಹೋರೆ ಗಾರಿಗೆಗಳು, ಪುಳಿಯೋರೆ ಉಪ್ಪಿಟ್ಟುಗಳು ಹೋಳಿಗೆ ಜಿಲೇಬಿ ಇವೆಲ್ಲ ನನಗೆ ಸಾಟಿ" ಎಂದು ಮೆಲ್ಲನೆ ಹಾಡಿಕೊಂಡು ತಿಂದು ಮುಗಿಸುತ್ತಾರೆ. ಮತ್ತೆ ರೂಮಿನಲ್ಲಿ ಮಲಗಿ ಓದಿನಲ್ಲಿ ಮುಳುಗಿದಾಗ ಹೊರಗೆ ಸೊಸೆಬಂದ ಸದ್ದಾಗುತ್ತದೆ. ಪುಸ್ತಕವನ್ನು ಪಕ್ಕದಲ್ಲಿಟ್ಟು ನಿದ್ದೆ ಬಂದವರಂತೆ ನಟಿಸುತ್ತಾರೆ. ಸೊಸೆ ಎಂದಿನಂತೆ ತನ್ನ ಬ್ರೆಡ್‍ಉಪ್ಪಿಟ್ಟು ಊಟವನ್ನು ಮುಗಿಸಿ ಬಾಗಿಲೆಳೆದುಕೊಂಡು ಲಿಫ಼್ಟ್ ಕಡೆ ಹೋದದ್ದು ಸದ್ದಿನಿಂದಲೇ ತಿಳಿಯುತ್ತದೆ. ಅಷ್ಟರಲ್ಲಿ ಬೆನ್ನಕೆಳಗೆ ಏನೋ ಟಿಣಟಿಣ ಎಂದು ಸಂಗೀತದ ಸದ್ದು ಬಂದು ಗಾಬರಿಯಿಂದ ಎದ್ದು ನೋಡುತ್ತಾರೆ ಬೆಳಿಗ್ಗೆ ಟೇಕ್‍ಕೇರ್ ಮಾಡಲು ಅನಂತ ಕೊಟ್ಟ ತಮಾಗುಚಿಯ ಮೇಲೇ ತಾವು ಮಲಗಿಬಿಟ್ಟಿದ್ದಾರೆ! ತಮಾಗುಚಿಯ ಒಳಗಿಂದ ಅಲಾರಂ ಮೊಳಗುತ್ತಿದೆ!
"ತಮಾಗುಚಿ" ರಾಮು ಅಂಗೈಯಲ್ಲಿ ಹಿಡಿದು ಪಿಸುಗುಡುತ್ತಾರೆ. ತಮ್ಮೂರಿನಲ್ಲಿ ಈಗಲೂ ಚಿಕ್ಕಹೆಣ್ಣುಮಕ್ಕಳು ಕುಂಟೋಬಿಲ್ಲೆಯಾಡಲು ತೆಳು ಚಪ್ಪಟೆ ಕಲ್ಲನ್ನು ತಮ್ಮಕಾಲಿಗೆ ಚುಚ್ಚದಂತೆ ಅದರ ಅಂಚನ್ನೆಲ್ಲಾ ಮತ್ತೊಂದು ಕಲ್ಲಿಗೆ ಉಜ್ಜೀಉಜ್ಜೀ ಸುತ್ತಲೂ ನುಣುಪಾಗಿಸಿ ಇಟ್ಟುಕೊಳ್ಳುವ ಅವರು"ಬಚ್ಚ" ಎಂದು ಕರೆಯುವ ವಸ್ತುವಿನ ನೆನಪಾಗುತ್ತದೆ. ಅಷೇ ದಪ್ಪ ಅಗಲಗಳಿರುವ ಈ ಎಲೆಕ್ಟ್ರಾನಿಕ್ ಆಟಿಗೆಯ ಸೊಬಗನ್ನು ಮೊದಲ ಬಾರಿಗೆ ಕಣ್ಣರಳಿಸಿ ನೋಡುತ್ತಾರೆ. ತಮಾಗುಚಿಯ ಅಂಚು ತೆಳುಗುಲಾಬಿ ಬಣ್ಣದ್ದು. ಒಳಗೆ ಸಣ್ಣ ಡಿಸ್‍ಪ್ಲೇ ಮಾನೀಟರ್ ಇದೆ. ಅದರೊಳಗೆ ಸಣ್ಣ ಕಡಲೇಬೇಳೆಯಗಲದ ತಲೆ ಸಣ್ಣಕ್ಕಿಯಂಥಾ ಕೈಕಾಲುಗಳುಳ್ಳ ಗುಂಗುರು ಕೂದಲ ತಮಾಗುಚಿ ಕುಣಿಯುತ್ತಿದೆ. ಡಿಸ್‍ಪ್ಲೇ ಮಾನಿಟರ್ ಸುತ್ತ ಸಣ್ಣ ಸಣ್ಣ ಚಿತ್ರಗಳಿವೆ. ಕೆಳಗೆ ಸಾಸಿವೆಯಂಥಾ ಮೂರು ಬಟನ್‍ಗಳಿವೆ. ಅವುಗಳನ್ನು ಆಯಾ ಚಿತ್ರಗಳನ್ನು ಆಯ್ದು ಒತ್ತುತ್ತಾ ತಮಾಗುಚಿಯ ಸಕಲ ಅಗತ್ಯಗಳನ್ನೂ ಪೂರೈಸಬಹುದು. ತಮಾಗುಚಿಗೆ ಹಸಿವೆಯಾಗಿದೆ, ಫುಡ್ ಚಿತ್ರವನ್ನು ಸೆಲೆಕ್ಟ್ ಮಾಡಿ, ಬ್ರೇಕ್‍ಫ಼ಾಸ್ಟ್ ಸಮಯವಾದರೆ ಬ್ರೆಡ್, ಕಾರನ್‍ಫ಼್ಲೇಕ್ಸ್, ಕೊಡಬಹುದು. ಊಟದ ಸಮಯವಾದರೆ ಊಟದ ಮೆನು ಬರುತ್ತದೆ. ಮೂರು ಐಟಂಗಳು ಯಾವುದನ್ನಾದರೂ ಆರಿಸಿ ಕೊಡಬಹುದು. ತಮಾಗುಚಿ ಹಸಿವಾಗಿದ್ದರೆ ತಿನ್ನುತ್ತದೆ. ಇಲ್ಲದಿದ್ದರೆ ಬೇಡವೆಂದು ತಲೆಯಾಡಿಸುತ್ತದೆ.












Click it and Unblock the Notifications