ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಾ ನಾಗರಾಜ್ ಕಥೆ : ತಮಾಗುಚಿ (ಭಾಗ 2)

By Prasad
|
Google Oneindia Kannada News

Tamagotchi : Short story
(ಕಥೆ ಮುಂದುವರಿದಿದೆ...) ಮಗ ಸಿಂಗಪುರಕ್ಕೆ ಬಂದು ಹದಿನಾರು ವರ್ಷಗಳೇ ಕಳೆದವು. ಅವನ ಮದುವೆಯಾಗಿ ಹದಿನೈದು ವರ್ಷವಾಗಿದೆ. ಅಲ್ಲಿಂದೀಚೆಗೆ ರಾಮು ಮತ್ತು ರಾಜಿ ಹಲವಾರು ಸಲ ಇಲ್ಲಿಗೆ ಬಂದು ಮೂರು ಮೂರು ತಿಂಗಳು ಇಲ್ಲಿದ್ದು ಹೋಗಿದ್ದಾರೆ. ಇವರ ಜೀವನ ಶೈಲಿ, ಆಹಾರಕ್ರಮ ಎಲ್ಲವನ್ನೂ ರಾಜಿ ಒಪ್ಪಿಕೊಂಡಂತೆ, ಸಹಿಸುತ್ತಿದ್ದಂತೆ ತಮಗೆ ಆಗುತ್ತಿಲ್ಲ ಏಕೆ? ಇಲ್ಲಿಯ ಬದುಕಿನ ಚಂದಗಳೇ ಬೇರೆ! ಮಗಸೊಸೆ ಬೆಳಗಿನ ಆರಕ್ಕೆ ಏಳುತ್ತಾರೆ. ಅರ್ಧಗಂಟೆಯಲ್ಲಿ ಬ್ರೆಡ್ ಉಪ್ಪಿಟ್ಟು ಅಥವಾ ಪಾಸ್ತಾ, ಅಥವಾ ಅವಲಕ್ಕಿ ಒಗ್ಗರಣೆ, ಅಥವಾ ಮ್ಯಾಗಿ ತಯಾರಾಗುತ್ತದೆ. ಗಂಡ ಕಸಗುಡಿಸುತ್ತಾನೆ, ಹೆಂಡತಿ ಗಿಡಕ್ಕೆ ನೀರುಹಾಕುತ್ತಾಳೆ. ಗಂಡ ಸ್ನಾನಕ್ಕೆ ಹೋಗುತ್ತಾನೆ ಹೆಂಡತಿ ಮಕ್ಕಳಿಗೆ ಉದಯರಾಗ ಹಾಡುತ್ತಲೇ ಸಿಂಕಿನ ಪಾತ್ರೆಗಳಿಗೆ ಸ್ವಚ್ಛತೆಯ ಮುಕ್ತಿಕಾಣಿಸುತ್ತಾಳೆ. ಗಂಡ ತನ್ನ ಮತ್ತು ಮಕ್ಕಳ ಬಟ್ಟೆಗಳಿಗೆ ಐರನ್ ಹಾಕುತ್ತಾನೆ, ಹೆಂಡತಿ ಮಕ್ಕಳಿಗೆ ಗಂಡನಿಗೆ ಡಬ್ಬಿ ಕಟ್ಟುತ್ತಾಳೆ.

ರಾಮು ಮಲಗಿದಲ್ಲಿಂದಲೇ ಸರಿದ ಕರ್ಟನ್ ಸಂದಿಯಿಂದ ಸೊಸೆಯ ಮೊಣಕಾಲವರೆಗಿನ ಪ್ಯಾಂಟ್ ಕೆಳಗಿನ ಕಾಲುಗಳೂ, ಮಗನ ಟವೆಲ್ ಕೆಳಗಿನ ಕಾಲುಗಳೂ, ಮಧ್ಯೆ ಮಧ್ಯೆ ಎಳೆಯ ಕಾಲುಗಳೂ ಹಾಲಿನತುಂಬಾ ಸರಿದಾಡುತ್ತಿರುವುದನ್ನು ನೋಡುತ್ತಿರುತ್ತಾರೆ. ಅವರಿಗಾಗ ನಿದ್ದೆ ಹರಿದಿದ್ದರೂ ಏಳಲು ಹೋಗುವುದಿಲ್ಲ. ಏಕೆಂದರೆ ಇರುವ ಎರಡು ಬಾತ್‍ರೂಮುಗಳಲ್ಲಿ ಒಳಗಿದ್ದವರನ್ನು"ಬೇಗ ಬಾ ನಮಗೂ ಹೊತ್ತಾಗುತ್ತಿದೆ" ಎಂದು ಹೊರಗಿದ್ದವರು ಅವಸರಿಸುತ್ತಿರುತ್ತಾರೆ. ಎಂಟೂವರೆಯವರೆಗೆ ಈ ಮನೆಯ ಜನ, ಬೆಂಗಳೂರಿನ ಸಿಟಿಮಾರ್ಕೆಟ್ಟಿನ ಸುತ್ತಾ ಕುಣಿಯುವ ಕರಗದಂತೆಯೇ ಮನೆಯ ಒಳಗೆಲ್ಲಾ ಹೆಜ್ಜೆಹಾಕುತ್ತಿರುತ್ತಾರೆ. ಎಂಟೂವರೆಗೆ ಇಡೀ ಮನೆ ಬಕ್ಕನೆ ಬೋರಲು ಬಿದ್ದಂತೆ ಖಾಲಿಯಾಗಿಬಿಡುತ್ತದೆ. ಮತ್ತೆ ಈ ಮನೆಗೆ ಜೀವ ಬರುವುದು ನಾಲ್ಕೂವರೆಗೆ ಅಮ್ಮ ಮತ್ತು ಮಕ್ಕಳ ಪ್ರವೇಶವಾದಾಗಲೇ!

ಸುಧಾ ಹತ್ತಿರದ ಶಾಲೆಯಲ್ಲಿ ಇಂಗ್ಲಿಷ್ ಕಲಿಸಲು ಹೋಗುತ್ತಾಳೆ. ಅವಳ ಕೆಲಸ ಮುಗಿಯುವುದು ಎರಡು ಗಂಟೆಗೇ ಆದರೂ ಎರಡುವರೆಗೆ ಮನೆಗೆ ಬಂದು ಬೆಳಿಗ್ಗೆ ಏನು ಮಾಡಿರುತ್ತಾಳೋ ಅದನ್ನು "ಊಟ" ಎನ್ನುವ ಹೆಸರಲ್ಲಿ ತಿಂದು ಅದೇ ಕಟ್ಟಡದ ಮೊದಲ ಮಹಡಿಯಲ್ಲಿರುವ ಗೆಳತಿಯ ಮನೆಗೆ ಹೋದರೆ ಅವಳು ಮತ್ತೆ ಈ ಮನೆಯೊಳಗೆ ಕಾಲಿಡುವುದು ಶಾಲೆ ಮುಗಿಸಿ ಬರುವ ಮಕ್ಕಳೊಂದಿಗೇ! ಮತ್ತೆ ಬೇರೊಂದು ಕುಣಿತದ ತಯ್ಯಾರಿ! ಮಕ್ಕಳನ್ನು ಸ್ವಿಮ್ಮಿಂಗ್‍ಗೆ ಕರೆದೊಯ್ಯಬೇಕು, ವಾಪಸ್ ಬಂದಮೇಲೆ ಹೋಮ್‍ವರ್ಕ್ ಮಾಡಿಸಬೇಕು ರಾತ್ರಿ ಎಂಟಕ್ಕೆ ಗಂಡಯ್ಯ ಬರುವ ವೇಳೆಗೆ ಊಟದ ತಯ್ಯಾರಿಯಾಗಬೇಕು!

ಅನ್ನ, ಅಥವಾ ಅಂಗಡಿಯಿಂದ ತಂದ ಚಪಾತಿ ಇಲ್ಲವೇ ಪರೋಟ, ನಿನ್ನೆಯ ಹುಳಿ, ಮೊನ್ನೆಯ ಸಾರು, ನಾಲ್ಕು ದಿನದ ಹಿಂದಿನ ಪಲ್ಯ, ಯಾವತ್ತೋ ಮಾಡಿದ ಸ್ವಲ್ಪ ಚಿತ್ರಾನ್ನ, ಎಲ್ಲವೂ ಗ್ಯಾಸ್ ಒಲೆಯ ಮೇಲೆ, ಮೈಕ್ರೋ ಓವನ್ನಿನಲ್ಲಿ ಮತ್ತೆ ಕೊತಕೊತನೆ ಕುದಿಯುತ್ತವೆ. ಗಂಡಹೆಂಡತಿಗೆ ಅದೇ ಪರಮಾನ್ನ! ಇಡೀ ದಿನ ಬ್ರೆಡ್ ಉಪ್ಪಿಟ್ಟನ್ನೋ ಪಾಸ್ತಾವನ್ನೋ ತಿಂದನಾಲಿಗೆಗೆ ಇವೆಲ್ಲಾ ಅಮೃತಸಮಾನ. ಮಕ್ಕಳು ಗೊಣಗುತ್ತವೆ "ಥೂ ಇದು ನಿನ್ನೇನೇ ಚೆನ್ನಾಗಿರಲಿಲ್ಲ ಇವತ್ತೂ ಇದೇ ತಿನ್ಬೇಕಾ"? "ಸುಮ್ನೇ ತಿನ್ರೋ ಪಾಪ ಹೊತ್‍ಹೊತ್ತಿಗೆ ರುಚಿರುಚಿಯಾಗ್ ಮಾಡ್‍ಹಾಕ್ತೀನಿ ನೋಡಿ ಕೊಬ್ಬು ನಿಮಗೆ. ನನ್ನ ಹಾಗೆ ಹಾಸ್ಟೆಲ್ ಊಟ ತಿನ್ಕೊಂಡು ಬಿದ್ದಿರಬೇಕಾಗಿತ್ತು ಆಗ ಗೊತ್ತಾಗ್‍ತಿತ್ತು" ಎಂದು ತನ್ನ ಅಡುಗೆಗೆ ಸರ್ಟಿಫಿಕೇಟನ್ನೂ, ಮಕ್ಕಳಿಗೆ ಬೆದರಿಕೆಯನ್ನೂ ಒಟ್ಟಿಗೇ ಕೊಡುತ್ತಾಳೆ. (ಕಥೆ ಮುಂದುವರಿದಿದೆ...)

English summary
Weekend special : A heart touching Kannada long story by Shantha Nagaraj, Bangalore. Subject of the story is Tamagotchi, a pal to young and even to older.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X