Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ
Sulekere: ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರು ತಾಲ್ಲೂಕಿನಲ್ಲಿರುವ ಸೂಳೇಕೆರೆಗಳ ಹೆಸರನ್ನು ಬದಲಾಯಿಸುವಂತೆ ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ ಮನವಿ ಮಾಡಿದ್ದು, ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಈ ಬಗ್ಗೆ ಸಾಹಿತಿ, ಪತ್ರಕರ್ತ ಡಾ. ಎನ್. ಜಗದೀಶ್ ಕೊಪ್ಪ ಅವರ ಬರಹ ಇಲ್ಲಿದೆ.
ಮಂಡ್ಯ ನೆಲದ ನನ್ನ ಅಕ್ಕತಂಗಿಯರ ಗಮನಕ್ಕೆ. ನನ್ನ ದೃಷ್ಟಿಯಲ್ಲಿ ಸೂಳೇಕೆರೆ ಎಂಬ ಹೆಸರು ಬದಲಾವಣೆ ಅವಿವೇಕತನದ ಪರಮಾವಧಿ. ಇಂದು ಬೆಳಿಗ್ಗೆ ಮಿತ್ರ ಹಾಗೂ ಜಾನಪದ ತಜ್ಞ ವ.ನಂ. ಶಿವರಾಮು, ಈ ಪತ್ರವನ್ನು ನನಗೆ ಕಳಿಸಿಕೊಟ್ಟಿದ್ದರು. ಕಳೆದವಾರ, ಮಹಿಳಾ ಸಮಾವೇಶ ಕುರಿತು ಮಾತನಾಡಿದ ನನ್ನ ಜಿಲ್ಲೆಯ ಲೇಖಕಿಯರು, ಪದಗಳಿವೆ ಎದೆಯೊಳಗೆ ಕೃತಿಯಲ್ಲಿ ಮಂಡ್ಯ ಜಿಲ್ಲೆಯ ದೇವದಾಸಿಯರ ಕುರಿತು ಬರೆದಿದ್ದಾರಾ, ಎಂದು ಕೇಳಿದಾಗ, ಈ ತಾಯಂದಿರ ಕಥನ ಅಥವಾ ಇತಿಹಾಸ ಒಂದು ಜಿಲ್ಲೆಗೆ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ನಾನು ಇಡೀ ದೇಶದ ಹಾಗೂ ಒಂದನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ದಾಖಲಿಸಿದ್ದೀನಿ ನೋಡ್ರವ್ವಾ ಎಂದು ವಿವರಿಸಿದೆ.

ಈಗ ಇದೇ ನನ್ನ ಅಕ್ಕತಂಗಿಯರು ಸೂಳೇಕೆರೆ ಎಂಬ ಹೆಸರನ್ನು ಬದಲಿಸಲು ಹೊರಟಿದ್ದಾರೆ. ಜೊತೆಗೆ ನಮ್ಮ ತಲೆಯೊಳಗೆ ಇರುವುದು ಮಿದುಳಲ್ಲ, ಸಗಣಿ ಎಂದು ಜಗತ್ತಿಗೆ ತೋರಿಸಿದ್ದಾರೆ. ಚಿತ್ರದುರ್ಗದ ಚಳ್ಳೇಕೆರೆ ಬಳಿ ಇರುವ ಇಡೀ ಭಾರತದಲ್ಲಿ ದೊಡ್ಡಕೆರೆಗಳಲ್ಲಿ ಒಂದಾದ ಸೂಳೇಕೆರೆಯ ಹೆಸರನ್ನು ಶಾಂತಿಸಾಗರ ಎಂದು ಬದಲಿಸಲು ಹೊರಟಾಗ, ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರು, ಎಲ್ಲರಿಗೂ ಉಗಿದು ಬುದ್ಧಿ ಹೇಳಿದ್ದರು. ಸ್ಥಳೀಯ ಪಾಳೇಗಾರನ ಪುತ್ರಿ ಅಪ್ಪನ ಮಾತು ಮೀರಿ, ಪ್ರೀತಿಸಿದ ಯುವಕನನ್ನು ವಿವಾಹವಾಗುತ್ತಾಳೆ ( ಹೆಸರು ಮರೆತು ಹೋಗಿದೆ. ನನ್ನ ಕೃತಿಯಲ್ಲಿ ದಾಖಲಿಸಿದ್ದೀನಿ) ಶಾಂತವ್ವ ಎಂದು ನೆನಪು. ಆಕೆ ಅಪ್ಪನ ಪ್ರೀತಿ ಗಿಟ್ಟಿಸಲು ಕೆರೆ ಕಟ್ಟಿಸಲು ಮುಂದಾಗುತ್ತಾಳೆ. ಆಕೆ ಆಯ್ಕೆ ಮಾಡಿಕೊಂಡ ಸ್ಥಳ ದೇವದಾಸಿಯರು ವಾಸಿಸುತ್ತಿದ್ದ ಊರಾಚೆಗಿನ ಸ್ಥಳವಾಗಿರುತ್ತದೆ.
ಆಕೆ ಕೆರೆ ನಿರ್ಮಿಸುವ ವಿಷಯ ತಿಳಿಸಿದಾಗ, ಎಲ್ಲರೂ ಸ್ಥಳವನ್ನು ಉಚಿತವಾಗಿ ನೀಡಿ, ತಮ್ಮಲ್ಲಿದ್ದ ಚಿನ್ನ, ಹಣವನ್ನು ದಾನಮಾಡುತ್ತಾರೆ. ಇಂದು ನಾಡಿನಾದ್ಯಂತ ಇರುವ ಸೂಳೇಕೆರೆ ಹೆಸರಿನ ಹಿಂದೆ ಇಂತಹ ಔದಾರ್ಯದ ಮತ್ತು ದಾನದ ಕತೆಗಳಿವೆ. ಸೂಳೇಕೆರೆ ಹೆಸರು ಬದಲಾಗಬೇಕೆಂದು ಇಚ್ಛಿಸುವ ನನ್ನ ಅಕ್ಕತಂಗಿಯರಿಗೆ ಒಂದು ಮನವಿ. ನೀವು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದ ಹಿಂದೆ ಓರ್ವ ದೇವದಾಸಿ ನಿರ್ಮಿಸಿರುವ ನೂರು ಅಡಿ ಆಳವಿರುವ ಕಲ್ಯಾಣಿ ಇದೆ ನೋಡಿಬನ್ನಿ. ನಿಮಗೆ ಅಲ್ಲಿ ಅಥವಾ ಹುಬ್ಬಳ್ಳಿಯಲ್ಲಿ ಊಟ, ವಸತಿ ವ್ಯವಸ್ಥೆ ಮಾಡುತ್ತೇನೆ.
ಆ ಕಲ್ಯಾಣಿಯ ವಿನ್ಯಾಸ, ಮೆಟ್ಟಿಲು, ಹಾಕಿರುವ ಕಲ್ಲುಗಳನ್ನು ನೋಡಿದಾಗಲೆಲ್ಲಾ, ಸೋಮೇಶ್ವರನ ಬದಲಾಗಿ, ಆ ತಾಯಿಗೆ ಕೈ ಮುಗಿದು ಬಂದಿದ್ದೀನಿ. ಹತ್ತು ವರ್ಷದ ಹಿಂದೆ, ಹೂಳು ತುಂಬಿದ್ದ ಕಲ್ಯಾಣಿಯನ್ನು ಸುಧಾಮೂರ್ತಿಯವರು ಎರಡು ಕೋಟಿ ಖರ್ಚು ಮಾಡಿ ದುರಸ್ತಿ ಮಾಡಿಸಿದರು. ಸುಧಾಮೂರ್ತಿಯವರ ತಂದೆ ಲಕ್ಷ್ಮೇಶ್ವರದಲ್ಲಿ ಸರ್ಕಾರಿ ವೈದ್ಯರಾಗಿದ್ದ ಕಾರಣ, ಅವರ ಬಾಲ್ಯದ ವಿದ್ಯಾಭ್ಯಾಸ ಹಾಗೂ ಆಟ ಎಲ್ಲವೂ ಆ ಕಲ್ಯಾಣಿಯ ಹತ್ತಿರ ನಡೆದಿತ್ತು. ದಯವಿಟ್ಟು ನನ್ನ ಪದಗಳಿವೆ ಎದೆಯೊಳಗೆ ಕೃತಿಯನ್ನು ಓದಿರಿ. ಅದರಲ್ಲಿ ದೇವದಾಸಿಯರು ಕಟ್ಟಿಸಿದ ದೇಗುಲ. ಚಿನ್ನದ ಗೋಪುರ ಹಾಗೂ ಕೊಡುಗೆಯಾಗಿ ನೀಡಿದ ಚಿನ್ನದ ಆರತಿ ತಟ್ಟೆ, ಕೆರೆ, ಕಾಲುವೆ ಮತ್ತು ಅನ್ನ ಛತ್ರದ ವಿವರಗಳಿವೆ. ನಂತರ ನಿಮ್ಮ ನಿರ್ಧಾರ ತಿಳಿಸಿ.
ಒಂದು ವೇಳೆ ಮಂಡ್ಯ ಜಿಲ್ಲಾಡಳಿತ ಮಂಡ್ಯ ಜಿಲ್ಲೆಯ ಕೆರೆಗಳ ಹೆಸರನ್ನು ಬದಲಾಯಿಸಲು ಹೊರಟರೇ, ಜಿಲ್ಲಾಧಿಕಾರಿ ಕಚೇರಿ ಎದುರು ಗೆಳೆಯರ ಜೊತೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ. ಈ ವಿಷಯ ನಿಮ್ಮ ಗಮನದಲ್ಲಿರಲಿ. ಅಕ್ಕತಂಗಿಯರೇ, ಕಳೆದ ನಾಲ್ಕು ದಶಕಗಳಿಂದ ನಿಮ್ಮಿಂದ ಜಗಣ್ಣಾ ಎಂದು ಕರೆಸಿಕೊಂಡು, ಮಂಡ್ಯ ಜಿಲ್ಲೆಯ ಎಲ್ಲಾ ಮಹಿಳಾ ಹೋರಾಟಗಳಲ್ಲಿ ಪಾಲ್ಗೊಂಡವನು ನಾನು.. 26 ವರ್ಷದ ಹಿಂದೆ, ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಕೌಡ್ಲೆ ಸಮೀಪದ ಯಡವನಹಳ್ಳಿ ಮಹಿಳೆಯರ ಮೇಲೆಹಲ್ಲೆ ಮಾಡಿ, ಬಂಧಿಸಿದಾಗ, ಒಂದು ವಾರ ಕಾಲ ಜಿಲ್ಲಾಧಿಕಾರಿ ಕಚೇರಿ ಎದುರು ನಿಮ್ಮ ಜೊತೆ ಧರಣಿ ಕೂತು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಸರ್ಕಾರ ಮಣಿಯುವಂತೆ ಮಾಡಿದ್ದೆ.
ಮೈಸೂರಿನ ಜಿ.ಹೆಚ್. ನಾಯಕರ ಪತ್ನಿ ಮೀರಾನಾಯಕರು ನಲವತ್ತು ಮಹಿಳೆಯರನ್ನು ಮಂಡ್ಯಕ್ಕೆ ಕರೆದುಕೊಂಡು ಬಂದು ದಿನವಿಡಿ ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಭೀಮಯ್ಯನರ ಪುತ್ರಿ ಹಾಗೂ ವಕೀಲೆ ಮೈಸೂರಿನ ರಾಧಾಮಣಿಯವರು ಉಚಿತವಾಗಿ ಕಾನೂನು ಸಲಹೆ ನೀಡಿದ್ದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ನನ್ನ ತಂಗಿಯರಾದ ಸುನಂದಾ ಜಯರಾಂ, ನಾಗರೇವಕ್ಕಾ, ಮತ್ತು ಶಶಿ ಕಲಾ ಈ ಮೂವರನ್ನು ಕೇಳಿದರೆ ನಿಮಗೆ ಹೋರಾಟದ ಇತಿಹಾಸ ಅರ್ಥವಾಗುತ್ತದೆ. ಯಾವ ಕಾರಣಕ್ಕೂ ನಮ್ಮ ಮಂಡ್ಯ ನೆಲದ ಆ ತಾಯಂದಿರ ಭವ್ಯ ಇತಿಹಾಸಕ್ಕೆ ಮಸಿ ಬಳಿಯಬೇಡಿ. ಸೋಮೇಶ್ವರದ ಕಲ್ಯಾಣಿಯ ಚಿತ್ರ ನೋಡಿ. ಇದನ್ನು ಸೂಳೆ ನಿರ್ಮಿಸಿದಳು ಎಂದು ಹೆಸರು ಬದಲಿಸಲು ಸಾಧ್ಯವೆ ?
- ಜಗದೀಶ್ ಕೊಪ್ಪ.
Sulekere: ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟದ ಮನವಿ ಏನು
ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರು ತಾಲ್ಲೂಕಿನಲ್ಲಿರುವ ಸೂಳೇಕೆರೆಗಳ ಹೆಸರನ್ನು ಬದಲಾಯಿಸುವಂತೆ ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಗನವಿಲೆ ರಸ್ತೆಯಲ್ಲಿರುವ ನಾಗಮಂಗಲದ ಅತ್ಯಂತ ದೊಡ್ಡಕೆರೆ ಸೂಳೇಕೆರೆ ಮತ್ತು ಮಂಡ್ಯ ಜಿಲ್ಲೆಯ ಅತೀ ದೊಡ್ಡ ಕೆರೆ ಮದ್ದೂರಿನ ಅಂಬರಹಳ್ಳಿ, ಕನ್ನಲಿ ಮಾರ್ಗದಲ್ಲಿರುವ ಸೂಳೇಕೆರೆಗಳಿಗೆ ಇರುವ ಹೆಸರನ್ನು ಬದಲಾಯಿಸಿ ಇತಿಹಾಸಕ್ಕೆ ಸೂಕ್ತವಾದ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಮನವಿ ಮಾಡಿವೆ.
ಮಂಡ್ಯ ಜಿಲ್ಲೆಯ ಎಲ್ಲಾ ಮಹಿಳ ಸಂಘಟನೆಗಳ ಮುಖಂಡರು ಮತ್ತು ಆಸಕ್ತ ಮಹಿಳೆಯರು ಒಂದುಗೂಡಿ ಚರ್ಚಿಸಿ, "ಹೆಣ್ಣೇ ಹೆಣ್ಣನ್ನು ಗೌರವಿಸು" ಘೋಷಣೆಯೊಂದಿಗೆ ಸೂಳೇಕೆರೆ ಎಂಬ ಕೆರೆಗಳ ಹೆಸರನ್ನು ಬದಲಾಯಿಸಿ ಮುಂದಿನ ತಲೆಮಾರಿಗೆ ಇತಿಹಾಸವನ್ನು ಅಚ್ಚಳಿಸದೇ ಉಳಿಸುವ ನಿಟ್ಟಿನಲ್ಲಿ ಈ ಮೇಲ್ಕಂಡ ಕೆರೆಗಳ ಹೆಸರುಗಳನ್ನು ಬದಲಿಸಿ, ಹೆಣ್ತನವನ್ನು ಗೌರವಿಸಿ ಎಂದು ಆಗ್ರಹಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications