New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್‌ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್‌ಪೋರ್ಟ್‌

ಬೆಂಗಳೂರು: ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೊಂದು ಹೊಸ ಏರ್‌ಪೋರ್ಟ್‌ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಮೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಬಳ್ಳಾರಿ ಜಿಲ್ಲೆಯ ಸಮೀಪ ನಿರ್ಮಿಸಲಾಗುವುದು. ಈ ಸಂಬಂಧ ಶೀಘ್ರವೇ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ ಶುಕ್ರವಾರ ಮಾಹಿತಿ ನೀಡಿದರು.

ಬಜೆಟ್ ಅಧಿವೇಶನದಲ್ಲಿ ಗಂಗಾವತಿಯ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಎಂಬಿ ಪಾಟೀಲರು ವಿವರವಾಗಿ ಉತ್ತರಿಸಿದರು. ಬಳ್ಳಾರಿ, ಹೊಸಪೇಟೆ, ಹಂಪೆ, ಆನೆಗೊಂದಿ, ಸಂಡೂರು, ಕೊಪ್ಪಳ, ಕುರುಗೋಡು, ಸಿರಗುಪ್ಪ ಮುಂತಾದ ಭಾಗಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಬರಬೇಕೆಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

New Site

ಹೊಸ ಏರ್‌ಪೋರ್ಟ್‌ನಿಂದ ಏನೆಲ್ಲ ಅನುಕೂಲ

ಈ ಕಾರಣದಿಂದ ಬಳ್ಳಾರಿ ಸಮೀಪ 19 ಕಿ.ಮೀ. ದೂರದಲ್ಲಿ ಜಾಗವನ್ನು ಗುರುತಿಸಲಾಗಿದೆ. ಇದು ಕಾರ್ಯಸಾಧು ಎನಿಸಿದರೆ ಎಲ್ಲ ಜನಪ್ರತಿನಿಧಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು. ಬಳ್ಳಾರಿ ವಿಮಾನ ನಿಲ್ದಾಣದಿಂದ ಆ ಜಿಲ್ಲೆಯ ಜತೆಗೆ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜನರಿಗೂ ಸಂಚಾರಕ್ಕೂ ಪ್ರಯೋಜನ ಆಗಬೇಕು. ಬಳ್ಳಾರಿ ಏರ್‌ಪೋರ್ಟ್ ನಿಂದ ನೆರೆಯ ಆಂಧ್ರ ಪ್ರದೇಶಕ್ಕೂ ಲಾಭವಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಶೀಘ್ರವೇ ಸದರಿ ಮೂರು ಜಿಲ್ಲೆಗಳ ಸಂಬಂಧ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಯೋಜನೆಯ ಸಾಧಕ ಬಾಧಕಗಳನ್ನು ಸಮಾಲೋಚಿಸುತ್ತೇವೆ ಎಂದರು.

3 ಜಿಲ್ಲೆಗಳ ಈ ಭಾಗಗಳಿಂದ ಏರ್‌ಪೋರ್ಟ್ ದೂರವೆಷ್ಟು?

ಈಗ ಹೊಸದಾಗಿ ಗುರುತಿಸಿರುವ ಸ್ಥಳದಿಂದ ಹೊಸಪೇಟೆಗೆ 33 ಕಿ.ಮೀ., ಹಂಪೆಗೆ 26 ಕಿ.ಮೀ, ಸಂಡೂರಿಗೆ 33 ಕಿ.ಮೀ, ಕೊಪ್ಪಳಕ್ಕೆ 75 ಕಿ.ಮೀ, ಕುರುಗೋಡಿಗೆ 14 ಕಿ.ಮೀ, ತೋರಣಗಲ್ಲಿಗೆ 13 ಕಿ.ಮೀ ಮತ್ತು ಸಿರಗುಪ್ಪಕ್ಕೆ 43 ಕಿ.ಮೀ ಆಗಲಿದೆ. ಸದರಿ ಉದ್ದೇಶಿತ ಜಾಗವು ವಿಮಾನ ನಿಲ್ದಾಣಕ್ಕೆ ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದನ್ನು ಮುಂದೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ಧರಿಸಲಿದೆ ಎಂದು ವಿವರಿಸಿದರು.

ದೂರದೃಷ್ಟಿ ವಿಮಾನ ನಿಲ್ದಾಣ ಯೋಜನೆಗೆ ಬಹಳ ಮುಖ್ಯವಾಗಿರುತ್ತದೆ. ಇಲ್ಲದೆ ಹೋದರೆ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಇಲ್ಲೆಲ್ಲ ಆಗಿರುವ ತಪ್ಪುಗಳೇ ಮುಂದುವರಿಯುತ್ತವೆ. ಬೆಳಗಾವಿ ಮತ್ತು ಹುಬ್ಬಳ್ಳಿ ಏರ್‌ರ್ಪೋರ್ಟ್ ಮಧ್ಯೆ ಕೇವಲ 70 ಕಿ.ಮೀ. ಅಂತರವಿದೆ. ಇವೆರಡೂ ಜಿಲ್ಲೆಗಳಿಗೆ ಅನುಕೂಲವಾಗುವ ಹಾಗೆ ಮಧ್ಯದಲ್ಲಿ ನಿಲ್ದಾಣ ನಿರ್ಮಿಸಿದ್ದರೆ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸುತ್ತಿದ್ದರು. ಬೆಳಗಾವಿಯಲ್ಲಿ ಭಾರತೀಯ ವಾಯುಪಡೆ ಇರುವುದು ನಮ್ಮ ಪ್ರಯೋಜನಕ್ಕೆ ಬಂದಿದೆ ಎಂದು ಅವರು ವಾಸ್ತವವನ್ನು ಸಂಗತಿ ತಿಳಿಸಿದರು.

ವಿಜಯಪುರದಲ್ಲಿ ತಪ್ಪು ಜಾಗ ಆಯ್ಕೆ

ವಿಜಯಪುರ ಏರ್‌ಪೋರ್ಟ್ ವಿಚಾರದಲ್ಲೂ ಇದೇ ತಪ್ಪಾಗಿದೆ. ಈಗ ಉದ್ಘಾಟನೆಗೆ ಸಜ್ಜಾಗಿರುವ ಏರ್‌ಪೋರ್ಟ್ ಕಲಬುರಗಿ ರಸ್ತೆಯಲ್ಲಿದೆ. ಅದರ ಬದಲು ಆಲಮಟ್ಟಿ ಕಡೆಗೆ ಮಾಡಿದ್ದರೆ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬಾಗಲಕೋಟೆ ಮುಂತಾದ ಸ್ಥಳಗಳಿಗೆ ಪ್ರಯೋಜನ ಒದಗಿಸುತ್ತಿತ್ತು. ಏರ್‌ರ್ಪೋರ್ಟ್ ಕಟ್ಟಿದ ಮೇಲೆ ಅದು ಸ್ತಬ್ಧವಾದರೆ ಪ್ರಯೋಜನವೇನು? ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಕೆಐಎಡಿಬಿ ವತಿಯಿಂದ 800 ಮತ್ತು 1,200 ಎಕರೆಯ ಎರಡು ಹೊಸ ಜಾಗ ಗುರುತಿಸಲಾಗಿದೆ ಎಂದರು.

ಬೀದರ್, ಕಲಬುರಗಿ ಏರ್‌ಪೋರ್ಟ್‌ ದುರವಸ್ಥೆ

ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಕೇಂದ್ರಗಳಲ್ಲಿ ಇರುವ ವಿಮಾನ ನಿಲ್ದಾಣಗಳು ಇಡೀ ದೇಶದಲ್ಲಿ ತೊಂದರೆ ಎದುರಿಸುತ್ತಿವೆ. ಬೀದರ್, ಕಲಬುರಗಿ ವಿಮಾನ‌ ನಿಲ್ದಾಣಗಳು ಇಂಥ ದುರವಸ್ಥೆ ಎದುರಿಸುತ್ತಿವೆ. ಬೀದರ್ ವಿಮಾನ ನಿಲ್ದಾಣ ಸದ್ಯಕ್ಕೆ ಕೆಕೆಆರ್‌ಡಿಬಿ ನೆರವಿನಿಂದ ನಿರ್ವಹಣೆ ಆಗುತ್ತಿದೆ. ಅದೇ ರೀತಿ ಕಲಬುರಗಿ ಏರ್‌ಪೋರ್ಟ್‌ ಕಾರ್ಯಾಚರಣೆ ಆಗಬೇಕೆಂಬ ಬೇಡಿಕೆ ಇದೆ. ಉಡಾನ್ ಯೋಜನೆಯನ್ನು 3ರಿಂದ 5 ವರ್ಷಗಳಿಗೆ ವಿಸ್ತರಿಸಬೇಕೆಂದು ಮತ್ತು ನಂತರದ ಐದು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ನಿರ್ವಹಿಸಬೇಕು ಎಂದು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಸಚಿವರು ತಿಳಿಸಿದ್ದಾರೆ.

ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸರ್ಕಾರ

ಬಳ್ಳಾರಿ ಏರ್‌ಪೋರ್ಟ್ ವಿಚಾರದಲ್ಲಿ ಹಾಗಾದಂತೆ ಎಚ್ಚರಿಕೆ ಹೆಜ್ಜೆ ಇಡಲಾಗುತ್ತಿದೆ. ಈ ಹಿಂದೆ ಗುರುತಿಸಿದ್ದ ತಾಣದಲ್ಲಿ ವಿಮಾನ ನಿಲ್ದಾಣವಾದರೆ 8 ಪಥಗಳ ಗ್ರೀನ್-ಫೀಲ್ಡ್ ಹೆದ್ದಾರಿ ನಿರ್ಮಾಣ ಇನ್ನಿತರ ಪ್ರಶ್ನೆಗಳು ಉದ್ಭವಿಸುತ್ತವೆ. ಅದಕ್ಕೆ ಭೂಸ್ವಾಧೀನ, ಪರಿಹಾರ ಎಲ್ಲ ಸೇರಿ ವಿಮಾನ ನಿಲ್ದಾಣಕ್ಕೆ ಹಾಕಿದಷ್ಟು ಹಣವನ್ನೇ ಸುರಿಯಬೇಕಾಗುತ್ತದೆ. ಆದ್ದರಿಂದ ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಒಟ್ಟಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+