Bengaluru: ಬೆಂಗಳೂರಿನ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದ ಹೋಟೆಲ್‌ಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದೆ. ಇದರಿಂದ ಹೋಟೆಲ್‌ಗಳಲ್ಲಿ ಹಾಗೂ ಪಿಜಿಗಳಲ್ಲಿ ಮೆನು ಚೇಂಗ್ ಆಗುತ್ತಿದ್ದು, ಬೆಂಗಳೂರಿನ ಹೋಟೆಲ್‌ಗಳು ಸಾಂಬಾರ್ ಇಲ್ಲ; ಸ್ವಲ್ಪ ಚಟ್ನಿ ಹಾಕಿಕೊಂಡು ಅಡ್ಜೆಸ್ಟ್ ಮಾಡಿಕೊಳ್ಳಿ ಎಂದು ಹೋಟೆಲ್ ಗ್ರಾಹಕರಿಗೆ ಹೇಳುತ್ತಿವೆ. ಬೆಂಗಳೂರಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಹೋಟೆಲ್ ಮೆನುವಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರಿನ ಕೆಫೆ ಸ್ವಾರಸ್ಯ ಹೋಟೆಲ್ ಮಾಲೀಕರು ಹಂಚಿಕೊಂಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಮಸ್ಯೆ ಏನು.
ಬೆಂಗಳೂರು ಹೋಟೆಲ್‌ಗಳ ಹೊಸ ರಿಕ್ವೆಸ್ಟ್
ಅಮೆರಿಕ, ಇಸ್ರೇಲ್ Vs ಇರಾನ್ ದೇಶಗಳ ನಡುವಿನ ಯುದ್ಧವು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನೇರವಾದ ಪರಿಣಾಮ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಆಗುತ್ತಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಕೊರತೆಯಿಂದಾಗಿ ಮೆನುಗಳು ಚೇಂಜ್ ಆಗುತ್ತಿದ್ದರೆ, ಇನ್ನೂ ಕೆಲವು ಕಡೆ ಹೋಟೆಲ್‌ಗಳ ಊಟದ ಬೆಲೆ ಭಾರೀ ಹೆಚ್ಚಳವಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಂಬಾರ್ ಇಲ್ಲ; ಚಟ್ನಿ ಇದೆ ಎನ್ನುವ ಪೋಸ್ಟ್ ವೈರಲ್ ಆಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ
ಆತ್ಮೀಯ ಗ್ರಾಹಕರೇ ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಸಾಂಬಾರ್ ಮತ್ತು ಸಾಗು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ದಯವಿಟ್ಟು ಸಹಕರಿಸಿ, ಚಟ್ನಿ ಲಭ್ಯವಿರುತ್ತದೆ ಎಂದು ಬೆಂಗಳೂರಿನ ಕೆಫೆ ಸ್ವಾರಸ್ಯ ಹೋಟೆಲ್‌ನಿಂದ ಬೋರ್ಡ್ ಹಾಕಲಾಗಿದೆ. ಈ ಬೋರ್ಡ್‌ನ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Bengaluru ಬೆಂಗಳೂರು ನಗರ ಜಿಲ್ಲಾಧಿಕಾರಿ ಹೇಳಿದ್ದೇನು
ಇನ್ನು ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಎದುರಾಗಿರುವ ಸಮಸ್ಯೆಯ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಗ್ರಾಹಕರಿಗೆ (Domestic LPG Customers) ತಿಳಿಸುವುದೇನೆಂದರೆ, ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ ಗ್ರಾಹಕರು ಯಾರು ಗಾಬರಿಗೊಳ್ಳಬಾರದೆಂದು ಹಾಗೂ ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದೆಂದು ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ಕೊರತೆ ಇಲ್ಲ ಹೀಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸಿದೆ. ಹಾಗೂ ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಇಲ್ಲಿ ಬೆಂಗಳೂರು ನಗರ ಜಿಲ್ಲೆಯ ಗೃಹಬಳಕೆ ಅಡುಗೆ ಅನಿಲ ಗ್ರಾಹಕರು ಸಹಾಯವಾಣಿ ಸಂಖ್ಯೆ: 9611404384 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications