B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ
B Khata: ಕರ್ನಾಟಕ ಸರ್ಕಾರವು ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗೆ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಆದರೆ, ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಂಡಿರುವ ಬಗ್ಗೆ ಶ್ರೀನಿವಾಸ ಮಠ ಎನ್ನುವ ಆಸ್ತಿದಾರರು ವಿವರಿಸಿದ್ದಾರೆ. ಬಿ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಎದುರಿಸಿದ ಸವಾಲುಗಳ ಬಗ್ಗೆ ಹೇಳಿದ್ದಾರೆ. ಈ ಮಾಹಿತಿಯು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಅತ್ಯಂತ ಉಪಯುಕ್ತವಾಗಿರಲಿದೆ. ಅಲ್ಲದೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಎಷ್ಟು ಹಣ ಖರ್ಚಾಯಿತು ಎನ್ನುವ ವಿವರವನ್ನೂ ಅವರು ಹಂಚಿಕೊಂಡಿದ್ದಾರೆ.
ಅಂತೂ ಎ ಖಾತಾ ಸರ್ಟಿಫಿಕೇಟ್ ಕೈ ಸೇರಿತು. ಸುದೀರ್ಘ ಸಮಯ ಆತಂಕ, ಯಾಕಾದರೂ ಈ ಕೆಲಸಕ್ಕೆ ಕೈಹಾಕಿದೆವೋ ಎಂಬ ಬೇಸರ- ಈ ಎಲ್ಲ ಭಾವನೆಗಳ ಅಂತ್ಯವಾಗಿ ಈಗ ನನ್ನ ಆಸ್ತಿ ಅಧಿಕೃತವಾಗಿ 'ಎ ಖಾತಾ' ಆಗಿದೆ. ಕಳೆದ ನಾಲ್ಕೈದು ತಿಂಗಳಲ್ಲಿ ನಾನು ಅನುಭವಿಸಿದ ಏರಿಳಿತಗಳು ಮತ್ತು ಈ ಪ್ರಕ್ರಿಯೆಯಲ್ಲಿ ಎದುರಾದ ಅಪರೂಪದ ವ್ಯಕ್ತಿಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನಂತೆಯೇ ಅಲೆದಾಡುತ್ತಿರುವ ಸಾವಿರಾರು ಜನರಿಗೆ ದಾರಿದೀಪವಾಗಬಹುದು ಎಂಬುದು ನನ್ನ ಆಶಯ.

B Khata: ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಂಡಿದ್ದು ಹೇಗೆ
ಬೆಂಗಳೂರಿನ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ 780 ಚದರಡಿಯ 'ಬಿ ಖಾತಾ' ಸೈಟನ್ನು ಖರೀದಿಸಿದ್ದೆ. ಈ ಹಿಂದಿನ ಬಿಬಿಎಂಪಿಯಿಂದ (ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಯಾವುದೇ ಪ್ಲಾನ್ ಅಪ್ರೂವಲ್ ಇಲ್ಲದೆಯೇ ಅಲ್ಲಿ ಮನೆ ನಿರ್ಮಾಣವನ್ನೂ ಮಾಡಿದ್ದೆವು. ಆದರೆ ಸಮಸ್ಯೆ ಶುರುವಾಗಿದ್ದೇ ಬೆಸ್ಕಾಂನಿಂದ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಹೋದಾಗ. "ಒಸಿ (OC) ಮತ್ತು ಸಿಸಿ (CC) ಇಲ್ಲದಿದ್ದರೆ ಕನೆಕ್ಷನ್ ಸಿಗುವುದಿಲ್ಲ" ಎಂಬ ಉತ್ತರ ಕೇಳಿ ಒಂದು ಕ್ಷಣ ಆಕ್ರೋಶ, ಮತ್ತೊಂದು ಕ್ಷಣ ನಮ್ಮ ನಿರ್ಧಾರದ ಬಗ್ಗೆ ನಾವೇ ಶಾಪ ಹಾಕಿಕೊಂಡಂತಾಯಿತು. ಈ ಸಂಕಷ್ಟಕ್ಕೆ ಸರ್ಕಾರಿ ಮಟ್ಟದಲ್ಲಿ ಸಿಕ್ಕ ಪರಿಹಾರವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ರೂಪಿಸಿದ 'ಬಿ ಖಾತಾ ಟು ಎ ಖಾತಾ' ಯೋಜನೆ.
ಯೋಜನೆಯ ಹಿಂದಿನ ಶಕ್ತಿ: ಮುನೀಶ್ ಮೌದ್ಗಿಲ್ ಅವರು ಕಡಿಮೆ ಮಾತಿನವರಾದರೂ, ಅವರ ಕೆಲಸಗಳು ಜನಸಾಮಾನ್ಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಬೆಂಗಳೂರಿಗರ ಬಿ ಖಾತಾ ಆಸ್ತಿಗಳಿಗೆ ಕಾನೂನುಬದ್ಧ ಮಾನ್ಯತೆ ದೊರಕಿಸುವ ಈ ಆಲೋಚನೆ ಮೌದ್ಗಿಲ್ ಅವರದ್ದು. ಇದಕ್ಕಾಗಿ ಕಾಂಗ್ರೆಸ್ ಸರ್ಕಾರಕ್ಕೆ ಕ್ರೆಡಿಟ್ ಸಲ್ಲಬೇಕಾದರೂ, ಇದರ ಹಿಂದಿನ ತಾಂತ್ರಿಕ ರೂವಾರಿ ಮೌದ್ಗಿಲ್ ಅವರೇ ಎಂಬುದು ಅಕ್ಷರಶಃ ಸತ್ಯ. ಆರಂಭದಲ್ಲಿ ವಕೀಲರೊಬ್ಬರು ಈ ಕೆಲಸಕ್ಕೆ 2.5 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ್ದರು. ಅದೇ ಸಮಯದಲ್ಲಿ ಬಿಬಿಎಂಪಿಯಲ್ಲಿ ಅನಧಿಕೃತ ಎ ಖಾತಾ ಹಗರಣ ಬಯಲಿಗೆ ಬಂದಿದ್ದರಿಂದ ಭಯಗೊಂಡು ಸುಮ್ಮನಾಗಿದ್ದೆವು. ಆದರೆ ಸರ್ಕಾರವೇ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿದಾಗ ಧೈರ್ಯ ಬಂತು.
B Khata: ಬಿ ಖಾತಾ ಪರಿವರ್ತನೆಗೆ ಅಲೆದಾಟ ಮತ್ತು ಅಡೆತಡೆಗಳು
ಬಿ ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಸಿದ ದಿನಾಂಕ: ಅಕ್ಟೋಬರ್ 17, 2025
ತಾಂತ್ರಿಕ ಸಮಸ್ಯೆ: ಆಸ್ತಿಯ ಗೈಡ್‌ಲೈನ್ಸ್ ವ್ಯಾಲ್ಯೂ ಶೇ. 5ರಷ್ಟು ಮೊತ್ತ ಪಾವತಿಸುವ ಹಂತದಲ್ಲಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದರೂ ಪೋರ್ಟಲ್‌ನಲ್ಲಿ ಅಪ್‌ಡೇಟ್ ಆಗಲಿಲ್ಲ. ಅನಿವಾರ್ಯವಾಗಿ ಮುನೀಶ್ ಮೌದ್ಗಿಲ್ ಅವರ ಕಚೇರಿಗೆ ಹೋದಾಗ, ಅವರ ಆಪ್ತ ಕಾರ್ಯದರ್ಶಿ ಭರತ್ ಅವರು ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿಕೊಟ್ಟರು. ಒಬ್ಬ ಅಧಿಕಾರಿಯ ಶಿಸ್ತು ಮತ್ತು ಕಾರ್ಯಕ್ಷಮತೆ ಅವರ ಸಿಬ್ಬಂದಿಯ ಮೇಲೂ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಭರತ್ ಅವರೇ ಸಾಕ್ಷಿ.
ಕೊನೆಯ ಹಂತದ ಆತಂಕ ಮತ್ತು ಸಹಾಯಕ್ಕೆ ಬಂದ ಅಧಿಕಾರಿ
ಹಣ ಪಾವತಿಯಾದ ನಂತರ ಫೆಬ್ರವರಿ 24ರಂದು 'ಸಿಂಗಲ್ ಪ್ಲಾಟ್ ಅಪ್ರೂವಲ್ ಸರ್ಟಿಫಿಕೇಟ್' ಬಂದಿತು. ಆದರೆ ಮಾರ್ಚ್ 12 ಬಂದರೂ ಎ ಖಾತಾ ಸರ್ಟಿಫಿಕೇಟ್ ಮಾತ್ರ ಜನರೇಟ್ ಆಗಿರಲಿಲ್ಲ. ಬೇಸತ್ತು ರಾಜರಾಜೇಶ್ವರಿ ನಗರ ವಲಯದ ಜಿಬಿಎ (GBA) ಕಚೇರಿಗೆ ಹೋದೆವು.
ಅಲ್ಲಿ ಮೊದಲು ಸಿಕ್ಕವರು ಕೇಸ್ ವರ್ಕರ್ ಕಾಳಪ್ಪನವರು. ಅವರು ನಮ್ಮ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ, ಡೆಪ್ಯೂಟಿ ಕಮಿಷನರ್ ಅಬ್ದುಲ್ ರಾಬ್ ಅವರನ್ನು ಭೇಟಿ ಮಾಡುವಂತೆ ಸೂಚಿಸಿದರು. ಸರ್ಕಾರಿ ಕಚೇರಿಗಳಲ್ಲಿ ಆಗುವ ಎಂದಿನ "ನಾಳೆ ಬನ್ನಿ" ಎಂಬ ಉತ್ತರ ನಿರೀಕ್ಷಿಸಿ ಅಬ್ದುಲ್ ಅವರ ಬಳಿ ಹೋದೆವು. ಆದರೆ ಅಬ್ದುಲ್ ಅವರು ಸಂಪೂರ್ಣ ಭಿನ್ನ ವ್ಯಕ್ತಿತ್ವದವರು. "20 ನಿಮಿಷ ಹೊರಗೆ ಇರಿ, ಇವತ್ತು ನಿಮ್ಮ ಕೆಲಸ ಮುಗಿಯುತ್ತದೆ" ಎಂದು ಭರವಸೆ ನೀಡಿದರು.
ಅಂದೇ ಸಂಜೆ 6 ಗಂಟೆಗೆ ನಮ್ಮನ್ನು ಕರೆದು, "ಇನ್ನು ಒಂದು ಗಂಟೆಯಲ್ಲಿ ಕೆಲಸ ಆಗುತ್ತದೆ, ಮನೆಗೆ ಹೋಗಿ ಚೆಕ್ ಮಾಡಿ. ಏನಾದರೂ ತೊಂದರೆಯಾದರೆ ನನಗೆ ಕರೆ ಮಾಡಿ" ಎಂದು ತಮ್ಮ ವೈಯಕ್ತಿಕ ಫೋನ್ ನಂಬರ್ ಕೂಡ ನೀಡಿದರು.
ಅಂತಿಮ ಪ್ರಕ್ರಿಯೆ
ರಾತ್ರಿ 7 ಗಂಟೆಗೆ ಇ-ಖಾತಾ ವೆಬ್‌ಸೈಟ್‌ನಲ್ಲಿ ನೋಡಿದಾಗ 'ಮ್ಯುಟೇಷನ್ ಫೀ' (14,582 ರೂ. + 125 ರೂ.) ಪಾವತಿಸಲು ಮೆಸೇಜ್ ಬಂದಿತ್ತು. ಗೊಂದಲಕ್ಕೀಡಾಗಿ ಅಬ್ದುಲ್ ಅವರಿಗೆ ಕರೆ ಮಾಡಿದಾಗ, ಐದೇ ನಿಮಿಷದಲ್ಲಿ ಅವರೇ ಮರಳಿ ಕರೆ ಮಾಡಿ, "ಶುಲ್ಕದ ಜೊತೆ ಈ ಮೊತ್ತ ಸೇರಿಲ್ಲ, ಇದನ್ನು ಆನ್‌ಲೈನ್‌ನಲ್ಲಿ ಕಟ್ಟಿ ತಕ್ಷಣ ಖಾತಾ ಡೌನ್‌ಲೋಡ್ ಮಾಡಿಕೊಳ್ಳಿ" ಎಂದರು. ಮಾರ್ಚ್ 12, 2026ರ ಆ ರಾತ್ರಿ ಕೊನೆಗೂ ನಮ್ಮ ಎ ಖಾತಾ ಡೌನ್‌ಲೋಡ್ ಆಯಿತು.
ಸಾರ್ವಜನಿಕರಿಗೆ ಒಂದು ಕಿವಿಮಾತು
ನಿಮ್ಮ ಎ ಖಾತಾ ಸರ್ಟಿಫಿಕೇಟ್ ತಾನಾಗಿಯೇ ಬರುತ್ತದೆ ಎಂದು ಕಾಯಬೇಡಿ. ಇ-ಖಾತಾ ವೆಬ್‌ಸೈಟ್‌ನಲ್ಲಿ ಸ್ಟೇಟಸ್ ಚೆಕ್ ಮಾಡುತ್ತಿರಿ. ಅಲ್ಲಿ ಮ್ಯುಟೇಷನ್ ಫೀ ಬಾಕಿ ತೋರಿಸಿದರೆ, ಆನ್‌ಲೈನ್‌ನಲ್ಲಿ ಪಾವತಿಸಿದ ತಕ್ಷಣವೇ ಸರ್ಟಿಫಿಕೇಟ್ ಲಭ್ಯವಾಗುತ್ತದೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳೆಂದರೆ ದೂರು ನೀಡುವ ನಮಗೆ, ಮುನೀಶ್ ಮೌದ್ಗಿಲ್, ಭರತ್, ಅಬ್ದುಲ್ ರಾಬ್ ಮತ್ತು ಕಾಳಪ್ಪನವರಂತಹ ಅಧಿಕಾರಿಗಳು ವ್ಯವಸ್ಥೆಯ ಮೇಲೆ ಗೌರವ ಮೂಡುವಂತೆ ಮಾಡಿದರು. ಇಂತಹ ಪ್ರಾಮಾಣಿಕ ಅಧಿಕಾರಿಗಳ ಸಂತತಿ ಬೆಳೆಯಲಿ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಆದ ವೆಚ್ಚ
ಸರ್ಕಾರಕ್ಕೆ ಪಾವತಿಸಿದ ಶೇ. ಐದರ ಶುಲ್ಕ: 1,67,753 ರೂ.
ಕಟ್ಟಡದ ನಕ್ಷೆ ಹಾಗೂ ಸೈಟಿನ ಪ್ಲಾನ್ ಮಾಡಿಸುವುದಕ್ಕೆ ಆದ ವೆಚ್ಚ: 2,500 ರೂ.
ಇ- ಖಾತಾ ವೆಬ್ ಸೈಟ್ ನಲ್ಲಿ ಖಾತಾ ಡೌನ್ ಲೋಡ್ ಮಾಡುವಾಗ ಪಾವತಿ ಮಾಡಿದ ಮ್ಯುಟೇಷನ್ ಫೀ: 14,707 ರೂ.
ಒಟ್ಟು: 1,84,870 ರೂ.












Click it and Unblock the Notifications