ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ; ಹೇಗಿದೆ ಭಾರತ-ಬಾಂಗ್ಲಾ ಸಂಬಂಧ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ನಾಲ್ಕು ದಿನದ ಭೇಟಿ ನಿಮಿತ್ತ ಆಗಮಿಸಿದ್ದಾರೆ. ಮಂಗಳವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಹಸೀನಾಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಮಾಡಿದರು. ಸ್ನೇಹದ ಮೂಲಕ ನಾವು ಯಾವುದೇ ಸಮಸ್ಯೆಯನ್ನೂ ಬಗೆಹರಿಸಬಹುದು ಎಂದು ಹಸೀನಾ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

"ಭಾರತ ನಮ್ಮ ಸ್ನೇಹ ರಾಷ್ಟ್ರ. ನಾನು ಭಾರತಕ್ಕೆ ಬಂದಾಗೆಲ್ಲಾ, ನಮ್ಮ ಸ್ವಾತಂತ್ರ್ಯ ಹೋರಾಟದ ವೇಳೆ ಭಾರತ ನೀಡಿದ ಕೊಡುಗೆಯನ್ನು ನಾವು ಯಾವಾಗಲೂ ಮೆಲುಕುಹಾಕುತ್ತಿರುತ್ತೇವೆ. ಅದು ಬಹಳ ಖುಷಿ ಕೊಡುತ್ತದೆ. ನಮ್ಮಲ್ಲಿ ಸ್ನೇಹಪೂರ್ಣ ಸಂಬಂಧ ಇದೆ. ಪರಸ್ಪರ ಸಹಕಾರ ನೀಡುತ್ತಿದ್ದೇವೆ," ಎಂದು ಶೇಖ್ ಹಸೀನಾ ವಿವರಿಸಿದರು.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಗಮನ: ಹಲವು ನಿರೀಕ್ಷೆ?ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಗಮನ: ಹಲವು ನಿರೀಕ್ಷೆ?

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ನವದೆಹಲಿಗೆ ಬಂದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ರನ್ನು ಭೇಟಿ ಮಾಡಿದರು. ಎರಡು ದೇಶಗಳಿಗೆ ಸಂಬಂಧಿಸಿದ ಮತ್ತು ಮುಖ್ಯವೆನಿಸಿದ ವಿಚಾರಗಳನ್ನು ಇಬ್ಬರೂ ಚರ್ಚಿಸಿರುವುದು ತಿಳಿದುಬಂದಿದೆ. ಸಚಿವ ಜೈಶಂಕರ್ ಕೂಡ ಬಾಂಗ್ಲಾ ಪ್ರಧಾನಿ ಭೇಟಿ ಬಗ್ಗೆ ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದರು.

ಶೇಖ್ ಹಸೀನಾ ನಾಲ್ಕು ದಿನಗಳ ಕಾಲ ಭಾರತದಲ್ಲಿ ಇರಲಿದ್ದು ಈ ವೇಳೆ ಸಾಕಷ್ಟು ಪ್ರಮುಖ ಒಪ್ಪಂದಗಳು, ಚರ್ಚೆಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ಏನು ಪ್ರಮುಖ ಸಮಸ್ಯೆಗಳಿವೆ, ಹಸೀನಾ ತಮ್ಮ ನಾಲ್ಕು ದಿನದ ಭೇಟಿಯಲ್ಲಿ ಏನೇನು ಮಾಡಲಿದ್ದಾರೆ ಈ ವಿವರ ಇಲ್ಲಿದೆ.

ಬಾಂಗ್ಲಾದಲ್ಲಿ 52% ಇಂಧನ ದರ ಹೆಚ್ಚಳ; ಭುಗಿಲೆದ್ದ ಪ್ರತಿಭಟನೆಬಾಂಗ್ಲಾದಲ್ಲಿ 52% ಇಂಧನ ದರ ಹೆಚ್ಚಳ; ಭುಗಿಲೆದ್ದ ಪ್ರತಿಭಟನೆ

ಶೇಖ್ ಹಸೀನಾ ಕಾರ್ಯಕ್ರಮಗಳೇನು?

ಶೇಖ್ ಹಸೀನಾ ಕಾರ್ಯಕ್ರಮಗಳೇನು?

* ವ್ಯಾಪಾರ, ರಕ್ಷಣೆ, ಕನೆಕ್ಟಿವಿಟಿಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಚರ್ಚಿಸಲಿದ್ದಾರೆ.
* ಕುಶಿಯಾರಾ ನದಿ ನೀರು ಹಂಚಿಕೆ ಸಂಬಂಧ ಒಪ್ಪಂದ
* ರೈಲ್ವೆ, ವಿಜ್ಞಾನ, ಬಾಹ್ಯಾಕಾಶ ಮತ್ತು ಮಾಧ್ಯಮದಲ್ಲಿ ತರಬೇತಿ, ಐಟಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಅಂಕಿತ ಬೀಳಲಿದೆ.
* ಅಜ್ಮೇರ್‌ನಲ್ಲಿರುವ ಮೊಯಿನುದ್ದೀನ್ ಚಿಷ್ತಿಯ ದರ್ಗಾಗೆ ಗುರುವಾರ ಭೇಟಿ
* ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಶೇಖ್ ಹಸೀನಾ ಭೇಟಿ ಮಾಡಲಿದ್ದಾರೆ.

ಇದು ಬಿಟ್ಟರೆ ಎರಡೂ ದೇಶಗಳ ಸಂಬಂಧಕ್ಕೆ ಮಗ್ಗುಲಮುಳ್ಳಿನಂತಿರುವ ತೀಸ್ತಾ ನದಿ ನೀರು ವ್ಯಾಜ್ಯದ ಬಗ್ಗೆ ಶೇಖ್ ಹಸೀನಾ ಚರ್ಚಿಸುವ ಸಾಧ್ಯತೆ ಇದೆ.

ಭಾರತ-ಬಾಂಗ್ಲಾ ಸಂಬಂಧ ಹೇಗಿದೆ?

ಭಾರತ-ಬಾಂಗ್ಲಾ ಸಂಬಂಧ ಹೇಗಿದೆ?

1971ಕ್ಕೆ ಮುನ್ನ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗಲು ಭಾರತದ ಸಹಕಾರ ಬಹಳ ಇತ್ತು. 1971ರಿಂದ ಬಾಂಗ್ಲಾದೇಶ ಸ್ವತಂತ್ರಗೊಂಡ ಬಳಿಕ ಭಾರತಕ್ಕೆ ತನ್ನ ಪೂರ್ವಭಾಗದ ಗಡಿ ತುಸು ಸುಭದ್ರವಾಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳಿ ಬರುವ ವಲಸಿಗರ ಸಮಸ್ಯೆ ಬಿಟ್ಟರೆ ಆ ಗಡಿಭಾಗ ಬಹುತೇಕ ಸುರಕ್ಷಿತವಾಗಿದೆ. 2009ರಲ್ಲಿ ಶೇಖ್ ಹಸೀನಾ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಗಟ್ಟಿಯಾಗುತ್ತಿದೆ.

ಶೇಖ್ ಹಸೀನಾ ತಮ್ಮ ದೇಶದಲ್ಲಿ ಭಾರತ ವಿರೋಧಿ ಉಗ್ರ ಸಂಘಟನೆಗಳಿಗೆ ಕಡಿವಾಣ ಹಾಕಿದ್ದಾರೆ. ಇನ್ನೊಂದೆಡೆ, ಭಾರತದ ಜೊತೆಗಿನ ವ್ಯಾಪಾರ ಸಂಬಂಧದಿಂದ ಬಾಂಗ್ಲಾದೇಶದ ಆರ್ಥಿಕತೆಗೆ ಬಹಳ ಅನುಕೂಲವಾಗಿದೆ. ದಕ್ಷಿಣ ಏಷ್ಯಾದಲ್ಲಿ ಭಾರತದೊಂದಿಗೆ ಅತಿಹೆಚ್ಚು ವ್ಯವಹಾರ ನಡೆಸುವುದು ಬಾಂಗ್ಲಾದೇಶವೇ. 2009ರಲ್ಲಿ ಭಾರತಕ್ಕೆ ವರ್ಷಕ್ಕೆ 304.63 ಮಿಲಿಯನ್ ಡಾಲರ್ (2400 ಕೋಟಿ ರೂ) ಇರುತ್ತಿದ್ದ ಬಾಂಗ್ಲಾದೇಶದ ರಫ್ತು 2020ರಲ್ಲಿ 1.28 ಬಿಲಿಯನ್ ಡಾಲರ್ (10 ಸಾವಿರ ರೂಪಾಯಿ) ಮಟ್ಟ ಮುಟ್ಟಿದೆ. ಬಾಂಗ್ಲಾದೇಶಕ್ಕೆ ಭಾರತದ ರಫ್ತು ಕೂಡ ಇದೇ ಅವಧಿಯಲ್ಲಿ 2.3 ಬಿಲಿಯನ್‌ನಿಂದ (18 ಸಾವಿರ ಕೋಟಿ ರೂ) 8.6 ಬಿಲಿಯನ್ ಡಾಲರ್‌ಗೆ (68 ಸಾವಿರ ಕೋಟಿ ರೂ) ಏರಿದೆ.

ಸಕ್ರಮವಾಗಿ ಬರುವ ಬಾಂಗ್ಲಾದೇಶೀಯರಿಗೆ ಭಾರತ ಮುಕ್ತವಾಗಿ ಸ್ವಾಗತಿಸುತ್ತದೆ. ವೈದ್ಯಕೀಯ ಚಿಕಿತ್ಸೆ, ಪ್ರವಾಸ, ಉದ್ಯೋಗ ಮತ್ತು ಮನರಂಜನೆ ಕಾರ್ಯಕ್ರಮಗಳಿಗೆಂದು ಬಾಂಗ್ಲಾದೇಶದಿಂದ ಬಹಳಷ್ಟು ಜನರು ಭಾರತಕ್ಕೆ ಬರುತ್ತಾರೆ. ಇಂಥವರಿಗೆ ಭಾರತ ಪ್ರತೀ ವರ್ಷ 15-20 ಲಕ್ಷ ವೀಸಾಗಳನ್ನು ನೀಡುತ್ತದೆ.

ತೀಸ್ತಾ ನದಿ ನೀರು ವ್ಯಾಜ್ಯ

ತೀಸ್ತಾ ನದಿ ನೀರು ವ್ಯಾಜ್ಯ

ಭಾರತ ಮತ್ತು ಬಾಂಗ್ಲಾದೇಶ ನಡುವೆ ಕೆಲವೇ ವ್ಯಾಜ್ಯ ಬಿಟ್ಟರೆ ಉಳಿದಂತೆ ಸಂಬಂಧ ಉತ್ತಮವಾಗಿದೆ. ಎರಡೂ ದೇಶಗಳನ್ನು ಬಾಧಿಸುತ್ತಿರುವ ವಿವಾದಗಳಲ್ಲಿ ಪ್ರಮುಖವಾದುದು ತೀಸ್ತಾ ನದಿ ನೀರು ಹಂಚಿಕೆ. ಹಿಮಾಲಯದಲ್ಲಿ ಹುಟ್ಟುವ ತೀಸ್ತಾ ನದಿ ಸಿಕ್ಕಿಂ, ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶವನ್ನು ತಲುಪಿ ಅಲ್ಲಿಂದ ಬಂಗಾಳ ಕೊಲ್ಲಿ ಸೇರುತ್ತದೆ.

ಈ ನದಿ ಒಟ್ಟು 414 ಕಿಮೀ ದೂರ ಸಾಗುತ್ತದೆ. ಭಾರತದಲ್ಲಿ 305 ಕಿಮೀ ಇದ್ದರೆ ಉಳಿದದ್ದು ಬಾಂಗ್ಲಾದೇಶಕ್ಕೆ ಹೋಗುತ್ತದೆ. ಬಾಂಗ್ಲಾದೇಶದಲ್ಲಿ ತೀಸ್ತಾ ನದಿ ಬ್ರಹ್ಮಪುತ್ರ ನದಿಗೆ ಸೇರುತ್ತದೆ. ಸಿಕ್ಕಿಂ ಪಾಲಿಗೆ ಇದು ಅತಿದೊಡ್ಡ ನದಿ. ಹಾಗೆಯೇ ಪಶ್ಚಿಮ ಬಂಗಾಳಕ್ಕೆ ಗಂಗೆ ಬಿಟ್ಟರೆ ತೀಸ್ತಾ ಅತಿದೊಡ್ಡ ನದಿ.

ಎರಡು ರಾಜ್ಯಗಳನ್ನು ಸಂಪರ್ಕಿಸುವ ನದಿ ನೀರಿನ ವ್ಯಾಜ್ಯವನ್ನು ಬಗೆಹರಿಸುವುದು ಕಷ್ಟ. ಅಂಥದ್ದರಲ್ಲಿ ಎರಡು ದೇಶಗಳ ನಡುವೆ ಹರಿಯುವ ತೀಸ್ತಾ ನದಿ ನೀರಿನ ಹಂಚಿಕೆಗೆ ಪರಿಹಾರ ಅಷ್ಟು ಸುಲಭವಿರುವುದಿಲ್ಲ. ಯಾವ ದೇಶಗಳಿಗೆ ಈ ನದಿ ನೀರಿನ ಪಾಲು ಎಷ್ಟು ಸಿಗಬೇಕೆಂದು ಎಂಬತ್ತರ ದಶಕಗಳಿಂದಲೂ ಮಾತುಕತೆ ನಡೆಯುತ್ತಲೇ ಇದೆ. 2011ರಲ್ಲಿ ನದಿ ನೀರು ಹಂಚಿಕೆ ಸಂಬಂಧ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಆ ವರ್ಷ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕುವವರಿದ್ದರು. ಆದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭೇಟಿಯನ್ನು ರದ್ದು ಮಾಡಿದ್ದರಿಂದ ಒಪ್ಪಂದಕ್ಕೆ ಅಂಕಿತ ಬೀಳಲಿಲ್ಲ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾಗೆ ಭೇಟಿ ನೀಡಿದಾಗ ಮಮತಾ ಬ್ಯಾನರ್ಜಿ ಕೂಡ ಹೋಗಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸಹಕಾರ ತಂದು ಈ ವ್ಯಾಜ್ಯಕ್ಕೆ ಪರಿಹಾರ ಒದಗಿಸುವುದಾಗಿ ಆಗ ನರೇಂದ್ರ ಮೋದಿ ಭರವಸೆ ನೀಡಿದ್ದರು. ಅದಾಗಿ ಏಳು ವರ್ಷಗಳಾದರೂ ವ್ಯಾಜ್ಯ ಹಾಗೆಯೇ ಇದೆ.

ಭಾರತಕ್ಕೆ ಬರುವ ಮುನ್ನ ಮಾಧ್ಯಮದ ಜೊತೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, "ಭಾರತ ಈ ಸಮಸ್ಯೆ ಬಗೆಹರಿಸಲು ವಿಶಾಲತೆ ತೋರಬೇಕು. ಪರಿಹಾರ ಎಲ್ಲವೂ ಭಾರತದ ಅವಲಂಬಿತವಾಗಿದೆ" ಎಂದು ಅವರು ಹೇಳಿದ್ದರು.

ಇತರ ಸಮಸ್ಯೆ

ಇತರ ಸಮಸ್ಯೆ

ತೀಸ್ತಾ ನದಿ ನೀರು ವ್ಯಾಜ್ಯ ಹೊರತುಪಡಿಸಿ ಭಾರತ ಮತ್ತು ಬಾಂಗ್ಲಾದೇಶ ಸಂಬಂಧದಲ್ಲಿ ಹೆಚ್ಚೇನು ತೊಡಕುಗಳಿಲ್ಲ. ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಬರುತ್ತಿರುವುದು ಭಾರತಕ್ಕೆ ತಲೆನೋವು ಇದೆ. ಹಾಗೆಯೇ, ಈ ಅಕ್ರಮ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಭಾರತ ಸರಕಾರ ರೂಪಿಸಿರುವ ಸಿಎಎ ಮತ್ತು ಎನ್‌ಆರ್‌ಸಿ ಯೋಜನೆಗಳ ಬಗ್ಗೆ ಬಾಂಗ್ಲಾದೇಶಕ್ಕೆ ತಕರಾರು ಇದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವುದು ಸಿಎಎ ಉದ್ದೇಶ. ಸದ್ಯ ಇದು ಅನಗತ್ಯ ಎಂಬುದು ಬಾಂಗ್ಲಾದ ವಾದ.

ಬಾಂಗ್ಲಾದ ಮೇಲೆ ಚೀನಾ ಪ್ರಭಾವ ಬೀರಲು ಬಹಳ ಯತ್ನಿಸುತ್ತಿದೆ. ಪಾಕಿಸ್ತಾನ, ಶ್ರೀಲಂಕಾದ ರೀತಿಯಲ್ಲಿ ಬಾಂಗ್ಲಾ ಚೀನಾ ಹಿಡಿತಕ್ಕೆ ಇನ್ನೂ ಸಿಕ್ಕಿಲ್ಲ. ಆದರೆ, ಆರ್ಥಿಕವಾಗಿ ಬಾಂಗ್ಲಾ ಉತ್ತಮಗೊಂಡಷ್ಟೂ ಭಾರತಕ್ಕೆ ಸಮಸ್ಯೆ ಇಲ್ಲ. ಬಾಂಗ್ಲಾ ಆರ್ಥಿಕವಾಗಿ ಮುಗ್ಗರಿಸಿದರೆ ಯಾವಾಗ ಬೇಕಾದರೂ ಚೀನಾದ ಪ್ರಭಾವಳಿಗೆ ಬೀಳುವ ಸಾಧ್ಯತೆ ಇಲ್ಲದಿಲ್ಲ.

ಇವು ಬಿಟ್ಟರೆ ಉಳಿದಂತೆ ಭಾರತ ಮತ್ತು ಬಾಂಗ್ಲಾದೇಶ ನಡುನಿನ ಸಂಬಂಧ ಗಟ್ಟಿಯಾಗಿದೆ. ಪಾಕಿಸ್ತಾನ ಮತ್ತು ಚೀನಾ ಗಡಿ ಬಗ್ಗೆ ತಲೆಕೆಡಿಸಿಕೊಂಡಷ್ಟು ಪೂರ್ವಭಾಗದ ಗಡಿ ಬಗ್ಗೆ ಭಾರತ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಭಾರತದ ಜೊತೆಗಿನ ವ್ಯಾಪಾರ ಸಂಬಂಧ ಬಾಂಗ್ಲಾದ ಆರ್ಥಿಕತೆಗೂ ಒಳ್ಳೆಯದು ತಂದಿದೆ.

(ಒನ್ಇಂಡಿಯಾ ಸುದ್ದಿ)

English summary
Bangladesh PM Sheikh Hasina has arrived to India for 4 days visit. Here is a look at the relationship between these 2 countries and the disputes between them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X