Ind vs Ban: ಕೊಹ್ಲಿ ಶತಕದ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಂಗ್ಲಾ ಹುಲಿಗಳು!
ಭಾರತ ತಂಡ 2023ರ ವಿಶ್ವಕಪ್ ಅಖಾಡದಲ್ಲಿ ತನ್ನ ಅಜೇಯ ಓಟ ಮುಂದುವರಿಸಿದೆ. ಈ ಬಾರಿ ಬಾಂಗ್ಲಾದೇಶದ ಹುಲಿಗಳಿಗೂ ಭಾರತೀಯ ಆಟಗಾರರು ಖೆಡ್ಡಾ ತೋಡಿ, ಬೋನಿಗೆ ಹಾಕಿದ್ದಾರೆ. ಅದ್ರಲ್ಲೂ ದಾಖಲೆಗಳ ಸರದಾರ, ಸೆಂಚ್ಯುರಿ ಸ್ಟಾರ್ ವಿರಾಟ್ ಕೊಹ್ಲಿ ಇಂದು ಕೂಡ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಹಾಗಾದರೆ ಭಾರತೀಯ ಆಟಗಾರರ ಕ್ರಿಕೆಟ್ ವಿಶ್ವಕಪ್ ಗೆಲುವಿನ ಓಟ ಇಂದು ಹೇಗೆ ಸಾಗಿತ್ತು ಗೊತ್ತಾ?
ಬಾಂಗ್ಲಾದೇಶ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೂ ಬಾಂಗ್ಲಾದೇಶ ತಂಡವನ್ನು ಕಡೆಗಣಿಸುವಂತೆ ಇರಲಿಲ್ಲ. ಏಕೆಂದರೆ 2007ರ ವಿಶ್ವಕಪ್ ಅಖಾಡದಲ್ಲಿ ಹೀಗೆ ಬಾಂಗ್ಲಾದೇಶ ತಂಡ ಭಾರತ ತಂಡವನ್ನ ಮಣಿಸಿ, ಲೀಗ್ ಹಂತದಲ್ಲೇ ಭಾರತ ಹೊರಬಿದ್ದು ತವರಿಗೆ ಮರಳಬೇಕಾಯಿತು. ಹೀಗಾಗಿ ಬಾಂಗ್ಲಾದೇಶದ ವಿರುದ್ಧ ಭಾರತದ ಆಟಗಾರರು ಈ ಬಾರಿಯೂ ಎಚ್ಚರಿಕೆಯ ಆಟವನ್ನೇ ಆಡಿದರು. ಮೊದಲಿಗೆ ಅಬ್ಬರಿಸಿದ ಬಾಂಗ್ಲಾ ತಂಡದ ಆಟಗಾರರನ್ನು 256 ರನ್‌ಗೆ ಕಟ್ಟಿಹಾಕುವಲ್ಲಿ ಸಕ್ಸಸ್ ಕೂಡ ಆಗಿತ್ತು ಭಾರತ ತಂಡ.

ಭಾರತ ತಂಡಕ್ಕೆ ಉತ್ತಮ ಆರಂಭ!
ಹೀಗೆ ಬಾಂಗ್ಲಾದೇಶ ತಂಡ ನೀಡಿದ್ದ 257 ರನ್‌ಗಳ ಗುರಿ ಬೆನ್ನು ಹತ್ತಿದ ಭಾರತ ತಂಡಕ್ಕೆ, ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಈ ಜೋಡಿ ಟೀಂ ಇಂಡಿಯಾದ ಮೊತ್ತವು 88 ರನ್ ಆಗಿದ್ದಾಗಲೇ ಬೇರೆಯಾಯಿತು. ಮೊದಲ ವಿಕೆಟ್ ಬಿದ್ದ ನಂತರ ರಿಯಲ್ ಗೇಮ್ ಶುರುವಾಗಿತ್ತು. ಅಖಾಡಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿ, ಬಂದ ತಕ್ಷಣವೇ ಬಾಂಗ್ಲಾ ಬೌಲರ್‌ಗಳ ಬೆವರು ಇಳಿಸಿದರು. ಈ ಸಮಯದಲ್ಲಿ 53 ರನ್ ಗಳಿಸಿದ್ದ ಶುಬ್ಮನ್ ಗಿಲ್ ಪೆವಿಲಿಯನ್ ಸೇರಿದರು. ಬಳಿಕ ಶ್ರೇಯಸ್ ಅಯ್ಯರ್ ವಿರಾಟ್ ಕೊಹ್ಲಿ ಅವರಿಗೆ ಸಾಥ್ ನೀಡಿದರು.
ನಿಧಾನವಾಗಿ ಏರಿತ್ತು ಭಾರತದ ಮೊತ್ತ
ಹೀಗೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ನಿಧಾನವಾಗಿ ಭಾರತ ತಂಡದ ಮೊತ್ತವನ್ನು ಏರಿಸುತ್ತಾ ಹೋಗಿತ್ತು. ಆದರೆ ಭಾರತ ತಂಡದ ಒಟ್ಟು ಮೊತ್ತ 178 ರನ್‌ಗೆ ತಲುಪಿದ್ದಾಗ ಶ್ರೇಯಸ್ ಅಯ್ಯರ್ ಔಟ್ ಆದರು. ಆ ನಂತರ ಕೊಹ್ಲಿಗೆ ಕನ್ನಡಿಗ ರಾಹುಲ್ ಸಾಥ್ ನೀಡಿದರು. ಹೀಗೆ ಇಬ್ಬರು ಭರ್ಜರಿ ಆಟ ಪ್ರದರ್ಶಿಸಿ, ಭಾರತ ತಂಡವನ್ನು ಜಯದ ಹಾದಿಗೆ ತಂದು ಬಿಟ್ಟರು. ಆದರೆ ಇದೇ ಸಮಯದಲ್ಲಿ ಹೊಸ ಸಮಸ್ಯೆ ಶುರುವಾಗಿತ್ತು. ಈ ಮ್ಯಾಚ್‌ನಲ್ಲಿ ಕೊಹ್ಲಿ ಶತಕ ಸಿಡಿಸುತ್ತಾರಾ? ಇಲ್ವಾ? ಎಂಬ ಆತಂಕ ಕಾಡತೊಡಗಿತ್ತು.
ಕೊಹ್ಲಿಗೆ ಸಾಥ್ ಕೊಟ್ಟ ರಾಹುಲ್ ಗೆಳೆಯ!
ಹೌದು, ಇವತ್ತಿನ ಪಂದ್ಯದ ಕೊನೆಯಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ ಭಾರತ ಗೆದ್ದೇಬಿಟ್ಟಿದೆ ಆದರೆ ಕೊಹ್ಲಿ ಶತಕ ಆಗಬೇಕು ಅಂತಾ ಶತಕೋಟಿ ಭಾರತೀಯರು ಕಾಯುತ್ತಿದ್ದರು. ಹೀಗೆ ಶತಕಕ್ಕೆ ಸರಿಯಾದ ರನ್‌ಗಳನ್ನು ಭಾರತ ಕೂಡ ಗಳಿಸಬೇಕಿತ್ತು. ಅಂದ್ರೆ ಭಾರತದ ಗೆಲುವಿಗೆ ಅಗತ್ಯ ಇದ್ದ ರನ್ ಹಾಗೂ ಕೊಹ್ಲಿ ಶತಕಕ್ಕೆ ಬೇಕಿದ್ದ ರನ್‌ಗಳು ಸಮವಾಗಿದ್ದವು. ಈ ವೇಳೆ ಬಾಂಗ್ಲಾದ ಬೌಲರ್‌ಗಳು ವೈಡ್ ದಾಳಿ ಶುರುಮಾಡಿದರು. ಕೊನೆಗೂ ಹೇಗೋ ವಿರಾಟ್ 97 ರನ್‌ಗೆ ಬಂದು ನಿಂತಾಗ ಕೂಡ ವೈಡ್ ಬಾಲ್ ಹಾವಳಿ ಸೃಷ್ಟಿಯಾಗಿತ್ತು. ಆದರೆ ಅಂಪೈರ್ ಆ ಬಗ್ಗೆ ನಿರ್ಧಾರ ಕೊಡಲಿಲ್ಲ. ಹೀಗಾಗಿ ಅದು ಕೂಡ ಗುಡ್ ಬಾಲ್ ಆಗಿತ್ತು. ನೋಡ, ನೋಡುತ್ತಲೇ ವಿರಾಟ್ ಮುಂದೆ ಬಂದು 41.3ನೇ ಓವರ್‌ನಲ್ಲಿ ಸಿಕ್ಸ್ ಸಿಡಿಸಿದರು.

ಹೀಗೆ ಅಭಿಮಾನಿಗಳ ಪಾಲಿನ ಕಿಂಗ್ ಕೊಹ್ಲಿ ಸೆಂಚ್ಯುರಿ ಗಳಿಸಿದರು 103 ರನ್‌ಗಳನ್ನ ತಮ್ಮ ಖಾತೆಗೆ ಸೇರಿಸಿಕೊಂಡರು. ಅಂತಿಮವಾಗಿ ಕೊಹ್ಲಿ ಬಾರಿಸಿದ ಸಿಕ್ಸರ್ ಭಾರತದ ಗೆಲುವಿಗೂ ರಣಕಹಳೆ ಮೊಳಗಿಸಿತ್ತು. ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಮುಗಿಲು ಮುಟ್ಟುವ ರೀತಿ ಸಂಭ್ರಮಿಸಿದರು. ವಿರಾಟ್ ಕೊಹ್ಲಿ 78ನೇ ಶತಕ ಗಳಿಸಿ, ತಮ್ಮ ಶತಕಗಳ ಶತಕಕ್ಕೂ ಮುನ್ನುಡಿ ಬರೆದಿದ್ದಾರೆ. ಹಾಗೇ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಗೆಲ್ಲುವ ಕನಸು ಕಂಡು ಹೀನಾಯ ಸೋಲಿನ ಮೂಲಕ ವಾಪಸ್ ಹೋಗಿದೆ.












Click it and Unblock the Notifications