Ban vs NZ: ಚೆಂಡನ್ನು ಮುಟ್ಟಿದ್ದಕ್ಕೆ ಬ್ಯಾಟರ್ ಔಟ್! ಬಾಂಗ್ಲಾ ಬ್ಯಾಟರ್ ಎಡವಟ್ಟು
ಬುಧವಾರ ಮಿರ್‌ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ನ್ಯೂಜಿಲೆಂಡ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ವಿಲಕ್ಷಣ ಶೈಲಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ.
ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನ 41ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 35 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರಹೀಮ್ ಕೈಲ್ ಜೇಮಿಸನ್ ಬೌನ್ಸ್ ಮಾಡಿದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ, ರಹೀಮ್ ಚೆಂಡು ವಿಕೆಟ್‌ಗೆ ಬಡಿಯುತ್ತದೆ ಎಂದು ಕೈಯಲ್ಲಿ ತಳ್ಳಿದ್ದು ಪ್ರಮಾದವಾಗಿದೆ.

ಬ್ಯಾಟರ್ ಕೈನಲ್ಲಿ ಚೆಂಡನ್ನು ತಳ್ಳಿದ್ದಕ್ಕೆ ನ್ಯೂಜಿಲೆಂಡ್ ಆಟಗಾರರು ಮನವಿ ಮಾಡಿದ್ದರಿಂದ ಆನ್‌ಫೀಲ್ಡ್ ಅಂಪೈರ್‌ಗಳು ಇಬ್ಬರೂ ಚರ್ಚಿಸಿ ಮೂರನೇ ಅಂಪೈರ್ ತೀರ್ಮಾನಕ್ಕೆ ಕಳುಹಿಸಿದರು. ಮೂರನೇ ಅಂಪೈರ್ ನಂತರ ಬ್ಯಾಟರ್ ಉದ್ದೇಶಪೂರ್ವಕವಾಗಿ ಚೆಂಡನ್ನು ನಿಲ್ಲಿಸಿದ ಎಂದು ಭಾವಿಸಿ 'ಫೀಲ್ಡ್ ಅನ್ನು ಅಡ್ಡಿಪಡಿಸಿದ' ಎಂದು ಮುಶ್ಫಿಕರ್ ಅವರನ್ನು ಔಟ್ ಎಂದು ತೀರ್ಪು ನೀಡಿದರು.
ಬಾಂಗ್ಲಾದೇಶದ ಮೊದಲ ಬ್ಯಾಟರ್
ಮೈದಾನದಲ್ಲಿ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಬಾಂಗ್ಲಾದೇಶದ ಬ್ಯಾಟರ್ ಎಂಬ ಕೆಟ್ಟ ದಾಖಲೆಯನ್ನು ಮುಶ್ಫಿಕರ್ ರಹೀಮ್ ಬರೆದರು. ಬ್ಯಾಟರ್ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡಿಪಡಿಸುವುದು ಕ್ರಿಕೆಟ್ ನಿಯಮಕ್ಕೆ ವಿರುದ್ಧವಾಗಿದೆ.
ಬುಧವಾರದ ಈ ರೀತಿಯ ಎರಡನೇ ಘಟನೆಯಾಗಿದೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಅವರು ಪ್ರೆಸಿಡೆಂಟ್ 11 ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದಾಗ ತಮ್ಮ ಕೈಗವಸುಗಳಿಂದ ಆಡುವ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದ್ದರು.
ಬಾಂಗ್ಲಾದೇಶಕ್ಕೆ ಮೊದಲ ದಿನವೇ ಆಘಾತ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಷ್ಟ ಮೇಲುಗೈ ಸಾಧಿಸಿದೆ. ಪಂದ್ಯದ ಮೊದಲ ದಿನ ಟೀ ವಿರಾಮದ ವೇಳೆಗೆ ಬಾಂಗ್ಲಾದೇಶ 149 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿದೆ.
ಮಿಚೆಲ್ ಸ್ಯಾಂಟ್ನರ್ 3 ವಿಕೆಟ್ ಪಡೆದರೆ, ಅಜಾಜ್ ಪಟೇಲ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಎರಡು ವಿಕೆಟ್ ಪಡೆದಿದ್ದಾರೆ. ಮುಷ್ಫೀಕರ್ ರಹೀಮ್ 35 ರನ್, ಶಹದತ್ ಹೊಸೆನ್ 31 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಆಘಾತ ನೀಡಿತ್ತು. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಬಾಂಗ್ಲಾದೇಶ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡರು ಸರಣಿ ಗೆಲ್ಲಲಿದೆ. ಇತ್ತ ನ್ಯೂಜಿಲೆಂಡ್ ಎರಡನೇ ಪಂದ್ಯ ಗೆದ್ದು ಸರಣಿ ಡ್ರಾ ಮಾಡಿಕೊಳ್ಳಲು ಯೋಜಿಸುತ್ತಿದೆ.












Click it and Unblock the Notifications