India Vs Bangladesh: ಸರಣಿ ನಿರ್ಣಾಯಕ ಪಂದ್ಯ ರೋಚಕ ಟೈ
ಶನಿವಾರದಂದು ಮಿರ್‌ಪುರದಲ್ಲಿ ನಡೆದ ಭಾರತ ಬಾಂಗ್ಲಾದೇಶ ಮಹಿಳಾ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಗೆಲುವಿನ ಸನಿಹಕ್ಕೆ ಬಂದ ಭಾರತ ತಂಡ ಕೊನೆಯ ಹಂತದಲ್ಲಿ ಎಡವುವ ಮೂಲಕ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿತು.
226 ರನ್‌ಗಳನ್ನು ಬೆನ್ನಟ್ಟಿದ ಭಾರತಕ್ಕೆ ಕೊನೆಯ 19 ಎಸೆತಗಳಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿತ್ತು, ಇನ್ನೂ ನಾಲ್ಕು ವಿಕೆಟ್‌ಗಳು ಕೈಯಲ್ಲಿದ್ದವು ಭಾರತ ಸುಲಭವಾಗಿ ಗೆಲುವು ಸಾಧಿಸುತ್ತದೆ ಎನ್ನುವಾಗಲೇ ಹೋರಾಟ ಕೊಟ್ಟ ಬಾಂಗ್ಲಾದೇಶ ವನಿತೆಯರು ಭಾರತದ ಆಟಗಾರ್ತಿಯರನ್ನು ಕಟ್ಟಿಹಾಕಿದರು.

ಭಾರತ 49.3 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಸ್ಕೋರ್‌ಗಳು ಸಮಬಲಗೊಂಡಾಗ ಮತ್ತು ನಿಗದಿತ ಸಮಯ ಮುಗಿದ ಕಾರಣ ಪಂದ್ಯವನ್ನು ಟೈ ಎಂದು ನಿರ್ಧರಿಸಿ ಉಭಯ ತಂಡಗಳಿಗೆ ಟ್ರೋಫಿ ಹಂಚಿಕೆ ಮಾಡಲಾಯಿತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದು ಗೆಲುವು ಸಾಧಿಸಿದ್ದವು.
ಮಂದಾನ, ಹರ್ಲಿನ್ ಡಿಯೋಲ್ ಹೋರಾಟ ವ್ಯರ್ಥ
ಭಾರತ 42ನೇ ಓವರ್‌ನಲ್ಲಿ 5 ವಿಕೆಟ್‌ಗೆ 191 ರನ್ ಗಳಿಸಿ ಸುಲಭ ಜಯ ಗಳಿಸುವ ಹಾದಿಯಲ್ಲಿತ್ತು, ಆದರೆ ದಿಢಿರ್ ಕುಸಿತ ಕಂಡು 48ನೇ ಓವರ್‌ನಲ್ಲಿ 9 ವಿಕೆಟ್‌ಗೆ 217 ರನ್ ಗಳಿಸಿತು, ಕೊನೆಯ ವಿಕೆಟ್ ಜೋಡಿ ಜೆಮಿಮಾ ರಾಡ್ರಿಗಸ್ (ಔಟಾಗದೆ 33) ಮತ್ತು ಮೇಘನಾ ಸಿಂಗ್ (6) ತಂಡವನ್ನು ಅಂತಿಮ ಹಂತಕ್ಕೆ ಕೊಂಡೊಯ್ದರು.
ಆದರೆ ಕೊನೆಯ ನಾಲ್ಕು ಎಸೆತಗಳಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿದ್ದಾಗ, ಮೇಘನಾ ಕ್ಯಾಚ್ ಹಿಡಿದ ಮರುಫಾ ಅಕ್ಟರ್ ಪಂದ್ಯವನ್ನು ಟೈ ಆಗಿಸುವಲ್ಲಿ ಯಶಸ್ವಿಯಾದರು. ಸ್ಮೃತಿ ಮಂಧಾನ (59) ಮತ್ತು ಹರ್ಲೀನ್ ಡಿಯೋಲ್ (77) ಅವರ ಅರ್ಧ ಶತಕದ ಹೋರಾಟ ವ್ಯರ್ಥವಾಯಿತು. ಭಾರತ 32 ರನ್‌ಗೆ 2 ವಿಕೆಟ್ ಕಳೆದುಕೊಂಡ ನಂತರ ಇವರಿಬ್ಬರು ಮೂರನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ಆಡಿದ್ದರು.
ಬಾಂಗ್ಲಾದೇಶದ ಪರವಾಗಿ ನಹಿದಾ ಅಖ್ತರ್ 3 ವಿಕೆಟ್ ಪಡೆದು ಮಿಂಚಿದರು. ಮರುಫಾ ಅಕ್ತರ್ 2 ವಿಕೆಟ್ ಪಡೆದರೆ, ಸುಲ್ತಾನ ಖಾತುಂ, ರಬೆಯಾ ಖಾನ್ ಮತ್ತು ಫಹಿಮಾ ಖಾತುಂ ತಲಾ ಒಂದು ವಿಕೆಟ್ ಪಡೆದರು.
ಫರ್ಗಾನಾ ಹೋಕ್ ಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿತ್ತು. ಆರಂಭಿಕ ಆಟಗಾರ್ತಿ ಶಮೀಮಾ ಸುಲ್ತಾನ 52 ರನ್ ಗಳಿಸಿದರೆ, ಫರ್ಗಾನಾ ಹೋಕ್ 107 ರನ್ ಗಳಿಸಿ ಮಿಂಚಿದರು. ನಿಗಾರ್ ಸುಲ್ತಾನ 24, ಶೋಭನಾ ಮೊಸ್ತೇ ಅಜೇಯ 23 ರನ್ ಗಳಿಸಿ ಉತ್ತಮ ಮೊತ್ತ ಕಲೆ ಹಾಕಲು ಕಾರಣವಾದರು. ಸ್ನೇಹ್ ರಾಣಾ 2 ವಿಕೆಟ್ ಪಡೆದರೆ, ದೇವಿಕಾ ವೈದ್ಯ 1 ವಿಕೆಟ್ ಪಡೆದರು.












Click it and Unblock the Notifications