ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಗಮನ: ಹಲವು ನಿರೀಕ್ಷೆ?
ನವದೆಹಲಿ, ಸೆಪ್ಟೆಂಬರ್ 05: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ನವದೆಹಲಿಗೆ ಆಗಮಿಸಿದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ಭೇಟಿಯ ಸಮಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಭೇಟಿಯಾಗಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ. ರಕ್ಷಣಾ ಸಹಕಾರವನ್ನು ನವೀಕರಿಸುವುದು, ಪ್ರಾದೇಶಿಕ ಸಂಪರ್ಕ ಉಪಕ್ರಮಗಳನ್ನು ವಿಸ್ತರಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಸ್ಥಾಪಿಸುವುದು ಅವರ ಭೇಟಿಯ ಉದ್ದೇಶವಾಗಿದೆ ಎನ್ನಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ನವದೆಹಲಿಗೆ ಹಿಂತಿರುಗುವ ಸಂದರ್ಭದಲ್ಲಿ ಪ್ರಧಾನಿ ಹಸೀನಾ ಅವರನ್ನು ಭೇಟಿ ಮಾಡಲಿದ್ದಾರೆ. ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳು 2021ರಲ್ಲಿ 50ನೇ ವರ್ಷವನ್ನು ಮುಟ್ಟಿದ ನಂತರ ಇದು ಅವರ ಮೊದಲ ಭೇಟಿಯಾಗಿದೆ. ಕಳೆದ ವರ್ಷ ಬಾಂಗ್ಲಾದೇಶದ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವ ಮತ್ತು ರಾಷ್ಟ್ರದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ 100ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು. ದೆಹಲಿ ಮತ್ತು ಢಾಕಾ ಸೇರಿದಂತೆ ವಿಶ್ವದ 20 ರಾಜಧಾನಿಗಳಲ್ಲಿ ಮೈತ್ರಿ ದಿವಸ್ ಆಚರಣೆಗಳನ್ನು ನಡೆಸಲಾಯಿತು. 2015ರಿಂದ ಇಲ್ಲಿವರೆಗೆ ಉಭಯ ದೇಶಗಳ ಪ್ರಧಾನಿಗಳು 12 ಬಾರಿ ಭೇಟಿಯಾಗಿದ್ದಾರೆ.

ಪ್ರಾದೇಶಿಕ ಸಹಕಾರಕ್ಕಾಗಿ ಉಭಯ ರಾಷ್ಟ್ರಗಳ ಪ್ರಯತ್ನ
ಭಾರತ ಮತ್ತು ಬಾಂಗ್ಲಾದೇಶವು ಕಳೆದ ಕೆಲವು ವರ್ಷಗಳಿಂದ ಹಲವಾರು ಸಹಕಾರ ಯೋಜನೆಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಪ್ರಾದೇಶಿಕ ಸಹಕಾರಕ್ಕಾಗಿ ಒಂದು ಮಾದರಿಯನ್ನು ರಚನೆಗೆ ಎರಡು ರಾಷ್ಟ್ರಗಳು ಪ್ರಯತ್ನಿಸಿವೆ. ಅಖೌರಾ-ಅಗರ್ತಲಾ ರೈಲು ಸಂಪರ್ಕವು ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ. ಈ ಬೆನ್ನಲ್ಲೇ ಕೆಲವೇ ವಾರಗಳಲ್ಲಿ ಅಗರ್ತಲಾ ಮತ್ತು ಚಿತ್ತಗಾಂಗ್‌ಗೆ ವಿಮಾನದ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ರಾಜಸ್ಥಾನದ ಅಜ್ಮೀರ್‌ಗೆ ಹಸೀನಾ ಪ್ರಯಾಣ ಸಾಧ್ಯತೆ
ಹಸೀನಾ ಅವರ ಭೇಟಿಯ ಸಮಯದಲ್ಲಿ ಕುಶಿಯಾರಾ ನದಿಯ ನೀರಿನ ಹಂಚಿಕೆ ಕುರಿತು ಉಭಯ ಕಡೆಯವರು ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಕಳೆದ ತಿಂಗಳು ಭಾರತ ಮತ್ತು ಬಾಂಗ್ಲಾದೇಶವು ನದಿ ನೀರಿನ ಮಧ್ಯಂತರ ಹಂಚಿಕೆಯ ಒಪ್ಪಂದದ ಪತ್ರಗಳನ್ನು ಅಂತಿಮಗೊಳಿಸಿದೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾಕ್ಕೆ ಭೇಟಿ ನೀಡಲು ಬಾಂಗ್ಲಾದೇಶದ ಪ್ರಧಾನಿ ರಾಜಸ್ಥಾನದ ಅಜ್ಮೀರ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ.

ಸಹಕಾರ, ಭದ್ರತೆ, ವ್ಯಾಪಾರ ಮತ್ತು ವಾಣಿಜ್ಯ ಕಾರ್ಯಕ್ಷೇತ್ರ
ಆಗಸ್ಟ್ 25ರಂದು ದೆಹಲಿಯಲ್ಲಿ ನಡೆದ ಭಾರತ- ಬಾಂಗ್ಲಾದೇಶ ಜಂಟಿ ನದಿಗಳ ಆಯೋಗದ (ಜೆಆರ್‌ಸಿ) 38ನೇ ಮಂತ್ರಿ ಮಟ್ಟದ ಸಭೆಯಲ್ಲಿ ತಿಳಿವಳಿಕೆ ಪತ್ರವನ್ನು ಅಂತಿಮಗೊಳಿಸಲಾಯಿತು. 1972ರಲ್ಲಿ ಸಾಮಾನ್ಯ ನದಿಗಳ ಮೇಲೆ ಪರಸ್ಪರ ಸಮಸ್ಯೆಗಳನ್ನು ಪರಿಹರಿಸಲು ದ್ವಿಪಕ್ಷೀಯ ಕಾರ್ಯವಿಧಾನವಾಗಿ ಆಯೋಗವನ್ನು ರಚಿಸಲಾಯಿತು. ಬಾಂಗ್ಲಾದೇಶವು ಭಾರತದ ನೆರೆಹೊರೆ ರಾಷ್ಟ್ರದ ನೀತಿಯ ಅಡಿಯಲ್ಲಿ ಪ್ರಮುಖ ಪಾಲುದಾರ ದೇಶವಾಗಿದೆ. ಸಹಕಾರ, ಭದ್ರತೆ, ವ್ಯಾಪಾರ ಮತ್ತು ವಾಣಿಜ್ಯ, ವಿದ್ಯುತ್ ಮತ್ತು ಇಂಧನ, ಸಾರಿಗೆ ಮತ್ತು ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ನದಿಗಳು ಮತ್ತು ಕಡಲ ವ್ಯವಹಾರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಸಿದಂತೆ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತದೆ.

ಪ್ರಸಕ್ತ 16.15 ಶತಕೋಟಿ ಡಾಲರ್ ವ್ಯಾಪಾರ
ಬಾಂಗ್ಲಾದೇಶ ಈಗ ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ. ಕಳೆದ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವು 9 ಶತಕೋಟಿ ಡಾಲರ್‌ನಿಂದ 18 ಶತಕೋಟಿ ಡಾಲರ್‌ಗೆ ಬೆಳೆವಣಿಗೆಯಾಗಿದೆ. 2020-21ರ ಹಣಕಾಸು ವರ್ಷದಲ್ಲಿಲ್ಲಿ 9.69 ಶತಕೋಟಿ ಡಾಲರ್‌ನಿಂದ 2021-2ನೇ ಹಣಕಾಸು ವರ್ಷದಲ್ಲಿ 16.15 ಶತಕೋಟಿ ಡಾಲರ್‌ಗೆ 66 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಬಾಂಗ್ಲಾದೇಶವು ಭಾರತಕ್ಕೆ ನಾಲ್ಕನೇ ಅತಿದೊಡ್ಡ ರಫ್ತು ರಾಷ್ಟ್ರವಾಗಿದೆ.












Click it and Unblock the Notifications