ವಿಕ್ರಮ್-1' ಯಶಸ್ಸಿನ ರೂವಾರಿ: ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಬರೆದ ಸ್ಕೈರೂಟ್‌ನ Gen-Z ಎಂಜಿನಿಯರ್ ಕೀರ್ತಿ ಶ್ರೀ
ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ 2026ರ ಜುಲೈ 18 ಅಂದರೆ ಶನಿವಾರ ಒಂದು ಮಹತ್ವದ ಮೈಲಿಗಲ್ಲನ್ನಾ ಸಾಧಿಸಿದೆ. ಹೈದರಾಬಾದ್ ಮೂಲದ 'ಸ್ಕೈರೂಟ್ ಏರೋಸ್ಪೇಸ್' ಎನ್ನುವ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್ಅಪ್ ನಿರ್ಮಿಸಿದ ಭಾರತದ ಮೊಟ್ಟಮೊದಲ ಖಾಸಗಿ ಆರ್ಬಿಟ್ ರಾಕೆಟ್ 'ವಿಕ್ರಮ್-1' ಯಶಸ್ವಿಯಾಗಿ ಉಡಾವಣೆಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ ಆಕಾಶದ ಕಡೆಗೆ ಹಾರಿದ ಈ ರಾಕೆಟ್, ಅಮೆರಿಕಾ ಮತ್ತು ಚೀನಾದ ನಂತರ ಖಾಸಗಿಯಾಗಿ ಕಕ್ಷೆಗೆ ರಾಕೆಟ್ ಉಡಾವಣೆ ಮಾಡಿದ ವಿಶ್ವದ ಮೂರನೇ ರಾಷ್ಟ್ರ ಎಂಬ ಹೆಮ್ಮೆಗೆ ಭಾರತ ಪಾತ್ರವಾಗುವಂತೆ ಮಾಡಿದೆ.
ಈ ಐತಿಹಾಸಿಕ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿದ ಯುವ ಎಂಜಿನಿಯರ್‌ಗಳ ತಂಡದ ಪಾತ್ರ ಪ್ರಮುಖವಾದ್ದು. ಈ ತಂಡದ ಯುವ ಪ್ರತಿಭೆಗಳಲ್ಲಿ ಒಬ್ಬರಾದ ಜೆನ್-ಝಿ ಎಂಜಿನಿಯರ್ ಕೀರ್ತಿ ಶ್ರೀ ತಮ್ಮ ಅದ್ಭುತ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

'ವಿಕ್ರಮ್-1' ರಾಕೆಟ್‌ನ ಪ್ರತಿ ಹಂತವನ್ನ ಶೂನ್ಯದಿಂದ ನಿರ್ಮಿಸಿ, ಅದನ್ನು ಉಡಾವಣೆಗೆ ಸಿದ್ಧಪಡಿಸುವವರೆಗಿನ ಪಯಣ ಅತ್ಯಂತ ಕಠಿಣ ಹಾಗೂ ರೋಮಾಂಚಕಾರಿಯಾಗಿತ್ತು ಎಂದು ಕೀರ್ತಿ ಶ್ರೀ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ನಾವು ಸ್ವತಃ ಕೆಲಸ ಮಾಡಿದ ರಾಕೆಟ್ ಬಾಹ್ಯಾಕಾಶ ಮತ್ತು ಕಕ್ಷೆಯನ್ನ ತಲುಪುತ್ತಿರುವುದನ್ನು ಕಣ್ಣಾರೆ ನೋಡುವುದು ಪದಗಳಿಗೆ ನಿಲುಕದ ಅದ್ಭುತ ಭಾವನೆ. ಇದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ಕ್ಷಣ. ಈ ಸಾಧನೆಗೆ ಕಾರಣರಾದ ಪ್ರತಿಯೊಂದು ವಿಭಾಗದ ಪ್ರತಿಯೊಬ್ಬ ವ್ಯಕ್ತಿಗೂ ದೊಡ್ಡ ಸೆಲ್ಯೂಟ್. ಈ ಯಶಸ್ಸು ಇಡೀ ನಮ್ಮ ತಂಡಕ್ಕೆ ಸಲ್ಲುತ್ತದೆ," ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೀರ್ತಿ ಶ್ರೀ ಅವರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯಲ್ಲಿ ಅವಿಯಾನಿಕ್ಸ್ ಎಲೆಕ್ಟ್ರಿಕಲ್ ಇಂಟಿಗ್ರೇಷನ್ ಮತ್ತು ಟೆಸ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಕೆಟ್‌ಗಳ ಒಳಗಿನ ವಿದ್ಯುತ್ ಮತ್ತು ಸಂವಹನ ಜಾಲವನ್ನ ಇವರು ವಿನ್ಯಾಸಗೊಳಿಸುವುದರಿಂದ, ಇವರನ್ನು ಸಂಸ್ಥೆಯಲ್ಲಿ ರಾಕೆಟ್‌ನ ನರಮಂಡಲದ ವೈದ್ಯರು ಅಂದರೆ ನ್ಯೂರಾಲಜಿಸ್ಟ್ ಎಂದು ಕರೆಯಲಾಗುತ್ತದೆ. ರಾಕೆಟ್‌ನ ನಿಯಂತ್ರಣ ವ್ಯವಸ್ಥೆಯು ಅದರ ಇತರ ಎಲ್ಲಾ ಭಾಗಗಳೊಂದಿಗೆ ಯಾವುದೇ ಅಡಚಣೆಯಿಲ್ಲದೇ ಸಂವಹನ ನಡೆಸುವಂತೆ ನೋಡಿಕೊಳ್ಳುವುದು ಇವರ ಮುಖ್ಯ ಜವಾಬ್ದಾರಿಯಾಗಿದೆ. ರಾಕೆಟ್‌ನ ವೈರಿಂಗ್ ಹಾರ್ನೆಸ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್‌ಗಳನ್ನು ವಿನ್ಯಾಸಗೊಳಿಸುವ ಹಾಗೂ ಪರೀಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಇವರು ಹೊತ್ತಿದ್ದಾರೆ.
ಅಷ್ಟೇ ಅಲ್ಲದೆ, ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಸ್ಕೈರೂಟ್‌ನ ಐತಿಹಾಸಿಕ 'ಮಿಷನ್ ಆಗಮನ್' ಯೋಜನೆಯ ಅಂತಿಮ ಹಂತದ ತಾಂತ್ರಿಕ ಸಿದ್ಧತೆಗಳನ್ನು ನಿರ್ವಹಿಸುತ್ತಿರುವ ಪ್ರಮುಖ ಇಂಜಿನಿಯರ್‌ಗಳ ತಂಡದಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.
ಸ್ಕೈರೂಟ್ ಏರೋಸ್ಪೇಸ್ ಸೇರುವ ಮುನ್ನ ಕೀರ್ತಿ ಶ್ರೀ ಅವರು ಪುಣೆಯ ಪ್ರಸಿದ್ಧ 'ಲಾರ್ಸೆನ್ ಆಂಡ್ ಟೂಬ್ರೊ ಡಿಫೆನ್ಸ್' ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಭಾರತೀಯ ಸೇನೆ ಮತ್ತು ಡಿ.ಆರ್.ಡಿ.ಒ ಪ್ರಮುಖ ರಕ್ಷಣಾ ಯೋಜನೆಗಳಾದ ಕ್ಷಿಪಣಿ ಲಾಂಚರ್ ಆಟೊಮೇಷನ್ ಹಾಗೂ ನಿಯಂತ್ರಣ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.
ಇವರು 2022ರಲ್ಲಿ ಗಾಯತ್ರಿ ವಿದ್ಯಾ ಪರಿಷತ್ ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದು, ಸದ್ಯ ಏರೋಸ್ಪೇಸ್ ಉದ್ಯಮದಲ್ಲಿ ಯುವ ತಂತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ.
ಸ್ಕೈರೂಟ್ ಸಂಸ್ಥಾಪಕರು ಮತ್ತು ಇಡೀ ತಂಡದ ನಿರಂತರ ಕಠಿಣ ಶ್ರಮದ ಫಲವೇ ಈ ಯಶಸ್ಸು. ಜುಲೈ 18, 2026 ಬಾಹ್ಯಾಕಾಶ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ. "ನಾವು ಕನಸು ಕಂಡೆವು, ನಾವು ಅದನ್ನು ನಿರ್ಮಿಸಿದೆವು, ಮತ್ತು ಅಂತಿಮವಾಗಿ ನಾವು ಅದನ್ನು ಸಾಧಿಸಿದೆವು," ಎಂದು ಕೀರ್ತಿ ಬರೆದುಕೊಂಡಿರುವ ಸಾಲುಗಳು, ಇಂದಿನ ಯುವ ಪೀಳಿಗೆಯ ಸಾಧಿಸಬೇಕು ಎನ್ನುವ ಛಲವನ್ನಾ ಎತ್ತಿ ತೋರಿಸುತ್ತದೆ. ವಿಶೇಷವೆಂದರೆ, ಸ್ಕೈರೂಟ್ ಸಿಇಒ ಪವನ್ ಚಂದನಾ ಅವರು ತಿಳಿಸಿರುವಂತೆ, ಈ ಇಡೀ ಮಿಷನ್ ಬೆನ್ನೆಲುಬಾಗಿ ನಿಂತಿರುವ ತಂಡ ಎಲ್ಲರ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಮಾತ್ರ!
ವಿಕ್ರಮ್-1 ಉಡಾವಣೆ
'ಮಿಷನ್ ಆಗಮನ್'ಹೆಸರಿನಲ್ಲಿ ಯಶಸ್ವಿಯಾಗಿ ಉಡಾವಣೆಯಾದ 'ವಿಕ್ರಮ್-1' ರಾಕೆಟ್, ಭಾರತದ ಖಾಸಗಿ ಬಾಹ್ಯಾಕಾಶ ವಲಯದ ಅತಿ ದೊಡ್ಡ ಮೈಲಿಗಲ್ಲು. ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ರಚನೆ ಮತ್ತು ತ್ರೀ-ಡಿ ಪ್ರಿಂಟೆಡ್ ಲಿಕ್ವಿಡ್ ಎಂಜಿನ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ರಾಕೆಟ್ ಅನ್ನು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾಗಿದೆ. ಇದು ಸುಮಾರು 350 ಕೆ.ಜಿ ತೂಕದ ಉಪಗ್ರಹಗಳನ್ನ ಭೂಮಿಯ ಕೆಳ ಕಕ್ಷೆಗೆ ಅಂದರೆ ಸರಿಸುಮಾರು 450 ಕಿಲೋಮೀಟರ್ ಎತ್ತರಕ್ಕೆ ಸೇರಿಸುವ ಸಾಮರ್ಥ್ಯ ಹೊಂದಿದೆ. ತನ್ನ ಚೊಚ್ಚಲ ಹಾರಾಟದಲ್ಲೇ ವಿಕ್ರಮ್-1, ಸ್ಕೈರೂಟ್‌ನ ಸ್ವಂತ 'ಸ್ಕೋಪ್' ಉಪಗ್ರಹ, ಗ್ರಹಾ ಸ್ಪೇಸ್‌ನ ಸೊಲಾರಸ್ ಎಸ್3 ಸೇರಿದಂತೆ ಅನೇಕ ಗ್ರಾಹಕರ ಪೇಲೋಡ್‌ಗಳನ್ನು ನಿಖರವಾಗಿ ಕಕ್ಷೆಗೆ ಸೇರಿಸುವ ಮೂಲಕ ಸಂಪೂರ್ಣ ಯಶಸ್ಸು ಕಂಡಿದೆ.
ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ಭವಿಷ್ಯ
ಈವರೆಗೆ ಇಸ್ರೋ ಮಾತ್ರವೇ ಭಾರತದ ಬಾಹ್ಯಾಕಾಶ ಯಶಸ್ಸಿನ ಏಕೈಕ ರೂವಾರಿಯಾಗಿತ್ತು. ಆದರೆ, 2020ರಲ್ಲಿ ಕೇಂದ್ರ ಸರ್ಕಾರ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಂಸ್ಥೆಗಳಿಗೂ ಮುಕ್ತ ಅವಕಾಶ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತು. ಅದರ ಪ್ರತಿಫಲವೇ ಇಂದಿನ ಸ್ಕೈರೂಟ್ ಏರೋಸ್ಪೇಸ್‌ನ ಐತಿಹಾಸಿಕ ಸಾಧನೆ. ಈ ಯಶಸ್ಸು ಕೇವಲ ಸ್ಕೈರೂಟ್ ಕಂಪನಿಗೆ ಸೀಮಿತವಾಗಿರದೆ, ಇಡೀ ದೇಶದ ವಾಣಿಜ್ಯ ಬಾಹ್ಯಾಕಾಶ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನ ತೆರೆದಿದೆ.


Click it and Unblock the Notifications
