ಹೆಲ್ತ್ ಇನ್ಶೂರೆನ್ಸ್ ಇದ್ದರೂ ಯಾಕೆ ಲಕ್ಷಾಂತರ ಆಸ್ಪತ್ರೆ ಬಿಲ್ ಬರುತ್ತದೆ? ಇದರ ಹಿಂದಿನ 12 ಕಾರಣಗಳು!
ಒಬ್ಬ ವ್ಯಕ್ತಿ ₹10 ಲಕ್ಷದ ಹೆಲ್ತ್ ಇನ್ಶೂರೆನ್ಸ್ ತೆಗೆದುಕೊಂಡಿರುತ್ತಾರೆ. ಅನಾರೋಗ್ಯ ಬಂದಾಗ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಡಿಸ್ಚಾರ್ಜ್ ಸಮಯದಲ್ಲಿ ಆಸ್ಪತ್ರೆ, "ಇನ್ನೂ ₹2 ಲಕ್ಷ ನೀವು ಪಾವತಿಸಬೇಕು" ಎಂದು ಹೇಳುತ್ತದೆ. ಇದನ್ನು ಕೇಳಿ ಬಹುತೇಕ ಜನರಿಗೆ ಆಘಾತವಾಗುತ್ತದೆ. ಇನ್ಶೂರೆನ್ಸ್ ಇದ್ದೂ ನಾನು ಯಾಕೆ ಹಣ ಕೊಡಬೇಕು? ಎಂಬ ಪ್ರಶ್ನೆ ಮೂಡುತ್ತದೆ.
ವಾಸ್ತವವಾಗಿ ಹೆಲ್ತ್ ಇನ್ಶೂರೆನ್ಸ್ ಕಂಪನಿ ಎಲ್ಲ ಆಸ್ಪತ್ರೆ ವೆಚ್ಚವನ್ನೂ ಶೇಕಡಾ 100ರಷ್ಟು ಭರಿಸುವುದಿಲ್ಲ. ಪಾಲಿಸಿಯ ನಿಯಮಗಳು, ಆಸ್ಪತ್ರೆಯ ಬಿಲ್ಲಿಂಗ್ ವಿಧಾನ ಮತ್ತು ಕೆಲ ತಾಂತ್ರಿಕ ಕಾರಣಗಳಿಂದಾಗಿ ರೋಗಿಯೇ ಲಕ್ಷಾಂತರ ರೂಪಾಯಿ ಪಾವತಿಸಬೇಕಾದ ಸಂದರ್ಭಗಳು ಬರುತ್ತವೆ. ಇದಕ್ಕೆ ಪ್ರಮುಖ ಕಾರಣಗಳು ಯಾವುವು ಎಂಬುದನ್ನು ನೋಡೋಣ.

1. ರೂಮ್ ರೆಂಟ್ ಮಿತಿ (Room Rent Limit)
ಇದು ಅತ್ಯಂತ ಸಾಮಾನ್ಯ ಕಾರಣ. ಉದಾಹರಣೆಗೆ ನಿಮ್ಮ ಪಾಲಿಸಿಯಲ್ಲಿ ದಿನಕ್ಕೆ ₹5,000 ರೂಮ್ ರೆಂಟ್ ಮಾತ್ರ ಅನುಮತಿ ಇದೆ ಎಂದುಕೊಳ್ಳಿ. ಆದರೆ ನೀವು ದಿನಕ್ಕೆ ₹10,000 ಇರುವ ಕೊಠಡಿಯಲ್ಲಿ ಉಳಿದರೆ? ಕೇವಲ ರೂಮ್ ರೆಂಟ್‌ನಷ್ಟೇ ಅಲ್ಲ, ಅದಕ್ಕೆ ಸಂಬಂಧಿಸಿದ ಅನೇಕ ವೆಚ್ಚಗಳನ್ನೂ ಇನ್ಶೂರೆನ್ಸ್ ಕಂಪನಿ ಅನುಪಾತದ (Proportionate Deduction) ಪ್ರಕಾರ ಕಡಿತ ಮಾಡಬಹುದು.
ಮೇಲಿನ ಉದಾಹರಣೆಯಲ್ಲಿ ಅನುಮತಿಗಿಂತ 2 ಪಟ್ಟು ದುಬಾರಿ ರೂಮ್ ಪಡೆಯಲಾಗಿದೆ. ಆಸ್ಪತ್ರೆ ಬಿಲ್‌ನಲ್ಲಿ ರೂಮ್ ಬಾಡಿಗೆ ₹50,000, ವೈದ್ಯರ ಭೇಟಿ ₹80,000, ನರ್ಸಿಂಗ್ ₹40,000, OT Charges ₹2 ಲಕ್ಷ ಹೀಗೆ ಹೋಗಬಹುದು. ಕೆಲವು ಪಾಲಿಸಿಗಳಲ್ಲಿ ಇವುಗಳ ಮೇಲೂ ಅನುಪಾತದ ಕಡಿತ ಅನ್ವಯವಾಗಬಹುದು. ಹೀಗಾಗಿ ಲಕ್ಷಾಂತರ ರೂಪಾಯಿ ನಿಮ್ಮ ಜೇಬಿನಿಂದ ಹೋಗಬಹುದು.
2. ಪಾಲಿಸಿಯಲ್ಲಿ ಕವರ್ ಆಗದ ವೆಚ್ಚಗಳು (Non-Medical Expenses)
ಆಸ್ಪತ್ರೆಯ ಬಿಲ್ಲಿನಲ್ಲಿ ಇನ್ಶೂರೆನ್ಸ್ ಕಂಪನಿ ಒಪ್ಪದ ಅನೇಕ ವಸ್ತುಗಳಿರುತ್ತವೆ. ಉದಾಹರಣೆಗೆ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್, ರಿಜಿಸ್ಟ್ರೇಷನ್ ಶುಲ್ಕ, ಆಡಳಿತ ವೆಚ್ಚ, ಆಹಾರ ವೆಚ್ಚ (ಕೆಲ ಸಂದರ್ಭಗಳಲ್ಲಿ), ವೈಯಕ್ತಿಕ ಉಪಯೋಗದ ವಸ್ತುಗಳು. ಈ ವೆಚ್ಚಗಳನ್ನು ಸಾಮಾನ್ಯವಾಗಿ ರೋಗಿಯೇ ಭರಿಸಬೇಕು.
3. ಕೇ- ಪೇಮೆಂಟ್ ನಿಯಮ
ಕೆಲ ಪಾಲಿಸಿಗಳಲ್ಲಿ Co-pay ಇರುತ್ತದೆ. ಅಂದರೆ ಆಸ್ಪತ್ರೆ ವೆಚ್ಚದ ಒಂದು ಭಾಗವನ್ನು ನೀವು ಕಡ್ಡಾಯವಾಗಿ ಪಾವತಿಸಬೇಕು. ಉದಾಹರಣೆಗೆ ಆಸ್ಪತ್ರೆ ಬಿಲ್ ₹10 ಲಕ್ಷ ಹಾಗೂ Co-pay 20% ಇದ್ದರೆ, ಇನ್ಶೂರೆನ್ಸ್ ನೀಡುವುದು ₹8 ಲಕ್ಷ. ನೀವು ಕಟ್ಟಬೇಕಾಗುವುದು ₹2 ಲಕ್ಷ.
4. ಡಿಡಕ್ಟಿಬಲ್ ಅಥವಾ ಸೂಪರ್ ಟಾಪ್ ಅಪ್ ನಿಯಮ
ಸೂಪರ್ ಟಾಪ್ ಅಪ್ ಪಾಲಿಸಿ ಇದ್ದರೆ ಮೊದಲಿಗೆ ನಿರ್ದಿಷ್ಟ ಮೊತ್ತವನ್ನು ನೀವೇ ಭರಿಸಬೇಕು. ಉದಾಹರಣೆಗೆ ಡಿಡಕ್ಟಿಬಲ್ ₹5 ಲಕ್ಷ ಇದ್ದು, ಆಸ್ಪತ್ರೆ ಬಿಲ್ ₹8 ಲಕ್ಷ ಆಗಿದ್ದರೆ, ಮೊದಲ ₹5 ಲಕ್ಷ ನಿಮ್ಮ ಬೇಸ್ ಪಾಲಿಸಿ ಅಥವಾ ನಿಮ್ಮಿಂದ. ಉಳಿದ ₹3 ಲಕ್ಷ ಮಾತ್ರ Super Top-up ನೀಡುತ್ತದೆ.
5. ಕಾಯುವ ಅವಧಿ (Waiting Period)
ಹಲವಾರು ಕಾಯಿಲೆಗಳಿಗೆ ಆರಂಭದ ಕೆಲವು ವರ್ಷ ಕಾಯಬೇಕಾಗುತ್ತದೆ. ಉದಾಹರಣೆಗೆ ಹರ್ನಿಯಾ, ಕ್ಯಾಟರಾಕ್ಟ್, ಜಾಯಿಂಟ್ ರಿಪ್ಲೇಸ್‌ಮೆಂಟ್, ವೇರಿಕೋಸ್ ವೇನ್ಸ್ ಇತ್ಯಾದಿ. Waiting Period ಮುಗಿಯುವ ಮೊದಲು ಚಿಕಿತ್ಸೆ ಪಡೆದರೆ ಕಂಪನಿ ಕ್ಲೈಮ್ ತಿರಸ್ಕರಿಸಬಹುದು.
6. ಮದಲಿನಿಂದ ಇದ್ದ ಕಾಯಿಲೆ (Pre-existing Disease)
ಪಾಲಿಸಿ ತೆಗೆದುಕೊಳ್ಳುವ ಮೊದಲು ಇದ್ದ ಕಾಯಿಲೆಯನ್ನು ಮರೆಮಾಚಿದರೆ ದೊಡ್ಡ ಸಮಸ್ಯೆಯಾಗಬಹುದು. ಉದಾಹರಣೆಗೆ ಡಯಾಬಿಟಿಸ್, ಬಿಪಿ, ಹೃದಯ ಸಮಸ್ಯೆಗಳು. ಇವನ್ನು ಘೋಷಿಸದೇ ಇದ್ದರೆ ಕಂಪನಿ ಕ್ಲೈಮ್ ನಿರಾಕರಿಸಬಹುದು.
7. ಆಸ್ಪತ್ರೆ ನೆಟ್‌ವರ್ಕ್‌ನಲ್ಲಿ ಇಲ್ಲದಿದ್ದರೆ
ನೀವು ದಾಖಲಾಗಿರುವುದು ನೆಟ್‌ವರ್ಕ್ ಹಾಸ್ಪಿಟಲ್ ಅಲ್ಲದಿದ್ದರೆ ಕ್ಯಾಶ್‌ಲೆಸ್ ಸೌಲಭ್ಯ ಸಿಗದಿರಬಹುದು. ಮೊದಲು ನೀವು ಹಣ ಕಟ್ಟಬೇಕು. ನಂತರ ರಿಎಂಬರ್ಸ್‌ಮೆಂಟ್ ಪಡೆಯಬೇಕು. ಕೆಲ ವೆಚ್ಚಗಳನ್ನು ಕಂಪನಿ ಸಂಪೂರ್ಣವಾಗಿ ಒಪ್ಪದೇ ಇರಬಹುದು.
8. ಸಬ್ ಲಿಮಿಟ್
ಕೆಲ ಪಾಲಿಸಿಗಳಲ್ಲಿ ನಿರ್ದಿಷ್ಟ ಚಿಕಿತ್ಸೆಗೆ ಗರಿಷ್ಠ ಮಿತಿ ಇರುತ್ತದೆ. ಉದಾಹರಣೆಗೆ ಕ್ಯಾಟರಾಕ್ಟ್ ₹40,000 ಮಾತ್ರ, ಮೊಣಕಾಲು ಸಂಧಿ ರಿಪ್ಲೇಸ್‌ಮೆಂಟ್ ₹1 ಲಕ್ಷ ಮಾತ್ರ ಹೀಗೆ. ಆದರೆ ಆಸ್ಪತ್ರೆ ₹2 ಲಕ್ಷ ಬಿಲ್ ಮಾಡಿದರೆ ಉಳಿದ ಹಣ ನೌು ಪೇ ಮಾಡಬೇಕಿರುತ್ತದೆ.
9. ಸಕಾರಣ, ರೂಢಿಗತ ಶುಲ್ಕಗಳು (Reasonable & Customary Charges)
ಆಸ್ಪತ್ರೆ ಅತಿಯಾದ ಶುಲ್ಕ ವಿಧಿಸಿದೆ ಎಂದು ಕಂಪನಿಗೆ ಅನಿಸಿದರೆ ಅವರು "ಈ ಚಿಕಿತ್ಸೆಗೆ ಇಷ್ಟು ಶುಲ್ಕ ಸಾಮಾನ್ಯವಲ್ಲ" ಎಂದು ಹೇಳಿ ಕಡಿಮೆ ಮೊತ್ತವನ್ನಷ್ಟೇ ಅನುಮೋದಿಸಬಹುದು. ಉಳಿದ ಹಣವನ್ನು ರೋಗಿಯೇ ಕಟ್ಟಬೇಕು.
10. ಬಳಕೆ ವಸ್ತುಗಳ (Consumables) ಕವರ್ ಇಲ್ಲದಿರುವುದು
ಇತ್ತೀಚಿನ ವರ್ಷಗಳಲ್ಲಿ ಬಳಕೆ ವಸ್ತುಗಳ (Consumables) ಕವರ್ ಎಂಬ ಆಡ್ ಆನ್ ಬಂದಿದೆ. ಇದಿಲ್ಲದಿದ್ದರೆ ಸಿರಿಂಜ್, ಪಿಪಿಇ ಕಿಟ್, ಸರ್ಜಿಕಲ್ ವಸ್ತುಗಳು, ಡಿಸ್‌ಪೋಸಬಲ್ ಐಟಮ್ಸ್ ಇವುಗಳಿಗೆ ನಿಮ್ಮ ಜೇಬಿನಿಂದ ಹಣ ಹೋಗಬಹುದು.
11. ಕ್ಲೇಮ್ ರಿಜೆಕ್ಷನ್
ನಿಮ್ಮ ಕ್ಲೈಮ್ ಸಂಪೂರ್ಣವಾಗಿ ತಿರಸ್ಕೃತವಾಗುವ ಸಂದರ್ಭಗಳೂ ಇವೆ. ಕಾರಣಗಳು ಹಲವು ಇರಬಹುದು. ಮಾಹಿತಿಯನ್ನು ಮರೆಮಾಚಿರುವುದು, ವೇಟಿಂಗ್ ಪೀರಯೆಡ್, ಪಾಲಿಸಿ ನಿಯಮ ಉಲ್ಲಂಘನೆ, ಅಗತ್ಯ ದಾಖಲೆಗಳ ಕೊರತೆ, ಪಾಲಿಸಿಯಲ್ಲಿ ಕವರ್ ಇಲ್ಲದ ಚಿಕಿತ್ಸೆ ಹೀಗೆ ಹತ್ತು ಹಲವು ಕಾರಣ ನೀಡಿ ಕಂಪನಿ ನಿಮಗೆ ಟೊಪ್ಪಿ ಹಾಕಬಹುದು.
12. ವಿಮಾ ಮೊತ್ತ (Sum Insured) ಸಾಕಾಗದಿರುವುದು
ಇಂದು ದೊಡ್ಡ ಆಸ್ಪತ್ರೆಗಳಲ್ಲಿ ಕ್ಯಾನ್ಸರ್, ಅಂಗಾಂಗ ಕಸಿ, ಐಸಿಯು ಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ ಮೊದಲಾದವುಗಳಿಗೆ ₹20 ಲಕ್ಷದಿಂದ ₹50 ಲಕ್ಷದವರೆಗೆ ವೆಚ್ಚ ಆಗಬಹುದು. ನಿಮ್ಮ ಬಳಿ ₹5 ಲಕ್ಷ ಪಾಲಿಸಿ ಮಾತ್ರ ಇದ್ದರೆ ಉಳಿದ ಹಣ ತೆರುವುದು ನಿಮ್ಮ ಜವಾಬ್ದಾರಿಯೇ ಆಗುತ್ತದೆ.
ಆಸ್ಪತ್ರೆ ಬಿಲ್ ಕಡಿಮೆ ಆಗಲು ಏನು ಮಾಡಬೇಕು?
1. ರೂಮ್ ರೆಂಟ್‌ಗೆ ಮಿತಿ ಇಲ್ಲದ ಪಾಲಿಸಿ ಆಯ್ಕೆ ಮಾಡಿ.
2. ಕನಿಷ್ಠ ₹10-25 ಲಕ್ಷದ ಸಮರ್ಪಕ ವಿಮೆ ಮೊತ್ತ ಅಥವಾ Base Policy + Super Top-up ಪರಿಗಣಿಸಿ.
3. ಕೋ ಪೇ, ಸಬ್ ಲಿಮಿಟ್, ಡಿಡಕ್ಟಿಬಲ್ ಇರುವುದೇ ಎಂದು ಪಾಲಿಸಿ ದಾಖಲೆ ಓದಿ.
4. ಸಾಧ್ಯವಾದಷ್ಟು Network Hospital ಆಯ್ಕೆ ಮಾಡಿ.
5. ಆಸ್ಪತ್ರೆಗೆ ದಾಖಲಾಗುವ ಮುನ್ನ ಕ್ಯಾಶ್‌ಲೆಸ್ ಪ್ರಿ ಆಥರೈಸೇಷನ್ ಮಾಡಿಸಿ.
6. ಎಲ್ಲಾ ವೈದ್ಯಕೀಯ ಮಾಹಿತಿ ಮತ್ತು ಹಳೆಯ ಕಾಯಿಲೆಗಳನ್ನು ಪ್ರಾಮಾಣಿಕವಾಗಿ ಘೋಷಿಸಿ.
7. ಪಾಲಿಸಿಯಲ್ಲಿ ಒಳಗೊಂಡಿರುವ ಮತ್ತು ಒಳಗೊಂಡಿಲ್ಲದ ವೆಚ್ಚಗಳ ಪಟ್ಟಿಯನ್ನು ಮುಂಚಿತವಾಗಿ ತಿಳಿದುಕೊಳ್ಳಿ.
8. ಅಗತ್ಯವಿದ್ದರೆ ಕನ್ಸ್ಯೂಮಬಲ್ ಕವರ್ ಅಥವಾ ಇತರ ಉಪಯುಕ್ತ Add-onಗಳನ್ನು ಪರಿಗಣಿಸಿ.


Click it and Unblock the Notifications
