Rohit Sharma: ರೋಹಿತ್ ಶರ್ಮಾ ವಿರುದ್ಧ ಮೂರು ದೂರುಗಳು ದಾಖಲು
ಐಸಿಸಿ ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಇಂದು (ಗುರುವಾರ) ಪುಣೆಯ ಎಂಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಖುಷಿಯಲ್ಲಿರುವ ಭಾರತ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಆಗಿದೆ, ಆದರೆ ಈ ಪಂದ್ಯಕ್ಕೆ ಮುನ್ನ ರೋಹಿತ್ ಶರ್ಮಾ ವಿರುದ್ಧ ಮೂರು ದೂರುಗಳು ದಾಖಲಾಗಿವೆ.
ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ರೋಹಿತ್ ಶರ್ಮಾ ಅಲ್ಲಿಂದ ನೇರವಾಗಿ ಮುಂಬೈಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದರು. ಕುಟುಂಬದವರ ಜೊತೆ ಎರಡು ದಿನ ಕಳೆದ ಬಳಿಕ, ಮುಂಬೈನಿಂದ ಪುಣೆಗೆ ಮರಳಿದ್ದರು.

ಮುಂಬೈನಿಂದ ಪುಣೆಗೆ ಪ್ರಯಾಣಿಸುವಾಗ ನೀಲಿ ಬಣ್ಣದ ಲಂಬೋರ್ಗಿನಿಯಲ್ಲಿ ಅತಿ ವೇಗದ ಚಾಲನೆ ಮಾಡಿದ್ದಕ್ಕಾಗಿ ದೂರು ದಾಖಲಾದ ನಂತರ ಭಾರತೀಯ ನಾಯಕ ರೋಹಿತ್ ಶರ್ಮಾ ಕೆಲವು ತೊಂದರೆಗಳಿಗೆ ಸಿಲುಕಿದ್ದಾರೆ.
ಎಚ್ಚರಿಕೆ ನೀಡಿದ ಪೊಲೀಸರು!
ಲೋಕಮಾತ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ರೋಹಿತ್ ಶರ್ಮಾ ಮುಂಬೈನಿಂದ ಪುಣೆಗೆ ಲ್ಯಾಂಬೋರ್ಗಿನಿ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಗಂಟೆಗೆ 215 ಕಿಮೀ ವೇಗದಲ್ಲಿ ಚಾಲನೆ ಮಾಡಿದ್ದಾರೆ. ಇದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅತಿ ವೇಗಕ್ಕಾಗಿ ಅವರ ಕಾರಿನ ನಂಬರ್ ಪ್ಲೇಟ್ ಮೇಲೆ ಮೂರು ಟ್ರಾಫಿಕ್ ಚಲನ್ ನೀಡಲಾಗಿದೆ.
"ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿದ್ದು, ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿ ನಡುವೆ ಈ ರೀತಿ ಅತಿಯಾದ ವೇಗದಲ್ಲಿ ಚಾಲನೆ ಮಾಡುವುದು ಸರಿಯಲ್ಲ, ಅವರು ಪೊಲೀಸರ ಭದ್ರತೆಯಲ್ಲಿ ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು" ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದ್ಭುತ ಫಾರ್ಮ್‌ನಲ್ಲಿರುವ ರೋಹಿತ್
ಏಕದಿನ ವಿಶ್ವಕಪ್‌ನ ಭಾರತದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೊನ್ನೆಗೆ ಔಟಾಗಿದ್ದ ರೋಹಿತ್ ಶರ್ಮಾ ನಂತರ ಅದ್ಭುತ ಫಾರ್ಮ್‌ಗೆ ಮರಳಿದ್ದಾರೆ. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಅವರು, ಪಾಕಿಸ್ತಾನದ ವಿರುದ್ಧ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎನ್ನುವ ದಾಖಲೆ ಕೂಡ ಬರೆದಿದ್ದು, ಕ್ರಿಸ್ ಗೇಲ್ ಅವರ ದಾಖಲೆ ಮುರಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಈಗಾಗಲೇ ಕಠಿಣ ಅಭ್ಯಾಸ ಮಾಡಿರುವ ಭಾರತ ತಂಡ ಬಾಂಗ್ಲಾದೇಶವನ್ನು ಮಣಿಸಲು ಸಜ್ಜಾಗಿದೆ. ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ಮತ್ತೊಂದು ದೊಡ್ಡ ಇನ್ನಿಂಗ್ಸ್ ಬಂದರೆ ಭಾರತದ ಗೆಲುವು ಮತ್ತಷ್ಟು ಸುಲಭವಾಗಲಿದೆ.












Click it and Unblock the Notifications