• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪತಿ ಆಳ್ವಿಕೆ ಬರಲಿ ಎಂದ ಗೌಡರ ಮಾತಿನ ಅಂತರಾಳ

By ಆರ್ ಟಿ ವಿಠ್ಠಲಮೂರ್ತಿ
|
   ಚುನಾವಣೆ ಅತಂತ್ರವಾದರೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸೂಕ್ತ, ಎಚ್ ಡಿ ದೇವೇಗೌಡ ಹೇಳಿಕೆ | Oneindia Kannada

   ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದು ಸೂಕ್ತ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಹಲ ಬಗೆಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

   ಈ ರೀತಿ ಹೇಳುವುದರ ಮೂಲಕ, ಮುಂದಿನ ದಿನಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ನಾವು ಯಾರ ಜತೆಗೂ ಕೈಗೂಡಿಸುವುದಿಲ್ಲ ಎಂದು ರಾಜ್ಯದ ಜನರಿಗೆ ದೇವೇಗೌಡರು ಮೆಸೇಜ್ ಮುಟ್ಟಿಸಿದ್ದಾರೆ ಎಂಬಲ್ಲಿಂದ ಹಿಡಿದು, ಸ್ವಯಂಬಲದ ದೊರಕದೇ ಹೋದರೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲೂ ನಾವು ಸಿದ್ಧ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂಬಲ್ಲಿಯ ತನಕ ಹಲವು ಬಗೆಯ ವ್ಯಾಖ್ಯಾನಗಳು ನಡೆದಿವೆ.

   ಚುನಾವಣಾ ರಾಜಕಾರಣ, ಸಮಾವೇಶಗಳು ಹಾಗೂ ಜೆಡಿಎಸ್‌ನ ಯಶಸ್ಸು!

   ಆದರೆ ದೇವೇಗೌಡರ ಈ ಹೇಳಿಕೆಯ ಹಿಂದೆ ಮತ್ತೊಂದು ಬಹುಮುಖ್ಯ ಕಾರಣವಿದೆ. ಅದು ಈವರೆಗೂ ಬಹಿರಂಗವಾಗಿಲ್ಲ. ಅದರರ್ಥ ಇದು ಯಾರಿಗೂ ಗೊತ್ತಿಲ್ಲವೆಂದಲ್ಲ, ಆದರೆ ಯಾರೂ ಅದನ್ನು ಬಹಿರಂಗಪಡಿಸಲು ಸಿದ್ಧರಿಲ್ಲ. ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ದೇವೇಗೌಡರು ಹೇಳಿದ್ದಾರಲ್ಲ? ಒಂದು ವೇಳೆ ಹಾಗೆ ಆದರೆ ಅದರ ಪರಿಣಾಮವೇನು?

   ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್

   ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುವುದು ಎಂದರೆ ಕರ್ನಾಟಕದ ಆಡಳಿತ ನೇರವಾಗಿ ಕೇಂದ್ರ ಸರ್ಕಾರದ ಹಿಡಿತಕ್ಕೆ ಹೋಗುವುದು ಅಂತಲೇ ಹೊರತು ಮತ್ತೇನಲ್ಲ. ಹೀಗೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದರೆ ಕರ್ನಾಟಕದ ರಾಜ್ಯಪಾಲರು ಪವರ್ ಫುಲ್ ಆಗುತ್ತಾರೆ. ಯಾಕೆಂದರೆ ರಾಷ್ಟ್ರಪತಿಗಳಿಂದ ಬರುವ ನಿರ್ದೇಶನದನುಸಾರ ಅವರು ಒಂದು ರಾಜ್ಯದ ಆಗು ಹೋಗುಗಳ ಕುರಿತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಥವಾ, ಒಂದು ರಾಜ್ಯದ ಆಡಳಿತ ಸುಗಮವಾಗಿ ಸಾಗಲು ಏನೇನು ಮಾಡಬೇಕು? ಅಂತ ಅವರು ಶಿಫಾರಸು ಮಾಡುತ್ತಾರೋ ಆ ಶಿಫಾರಸುಗಳನ್ನು ಕೂಡಾ ರಾಷ್ಟ್ರಪತಿಗಳು ಪರಿಗಣಿಸಬಹುದು.

   ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ದೇವೇಗೌಡರ ಮನಸ್ಸಿನಲ್ಲಿ ನಿಜವಾಗಿ ಏನಿದೆ?

   ದೇವೇಗೌಡರ ಮನಸ್ಸಿನಲ್ಲಿ ನಿಜವಾಗಿ ಏನಿದೆ?

   ಅದೇನೇ ಇದ್ದರೂ ರಾಷ್ಟ್ರಪತಿ ಆಳ್ವಿಕೆ ಹೇರುವುದು ಎಂದರೆ ಒಂದು ರಾಜ್ಯದ ಆಡಳಿತ ಸೂತ್ರ ಕೇಂದ್ರದ ಕೈ ಸೇರುವುದು ಎಂದೇ ಹೊರತು ಬೇರೇನಲ್ಲ. ಈ ರೀತಿಯ ಮಾತುಗಳನ್ನಾಡಿರುವ ದೇವೇಗೌಡರ ಮನಸ್ಸಿನಲ್ಲಿ ಏನಿದೆ? ನೇರವಾಗಿ ಹೇಳಬೇಕೆಂದರೆ ಅವರ ಮನಸ್ಸಿನಲ್ಲಿರುವುದು ಆರ್ಥಿಕ ಕಾರಣ. ಇವತ್ತು ವಿವಿಧ ಪಕ್ಷಗಳ ರಾಜಕಾರಣಿಗಳು, ಅಧಿಕಾರಶಾಹಿಯ ಹಲವು ಗಣ್ಯರು, ಉದ್ಯಮಿಗಳ ಕೂಟವೊಂದು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲೇ ಇದೆ. ಯಾವ ಪಕ್ಷದ ಸರ್ಕಾರವೇ ಬರಲಿ, ಅದು ಜೀವಂತ ಮತ್ತು ಪ್ರಭಾವಿ.

   ಈ ಕೂಟ ಕಳೆದ ಹಲವು ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸಂಪತ್ತಿನ ಬಹುದೊಡ್ಡ ಪಾಲನ್ನು ತನ್ನ ವಶಕ್ಕೆ ಪಡೆದಿದೆ. ಮತ್ತು ಈ ಪಾಲಿನಲ್ಲಿಯೇ ಗಣನೀಯ ಭಾಗವನ್ನು ಅದು, ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು, ಜಿಲ್ಲಾ ಕೇಂದ್ರಗಳು, ಪಟ್ಟಣಗಳಲ್ಲಿ ಹೂಡಿಕೆ ಮಾಡುತ್ತಿದೆ. ಅದು ಭಾರೀ ಮಾಲ್ ಗಳ ರೂಪದಲ್ಲಿರಬಹುದು, ವಸತಿ ಸಂಕೀರ್ಣಗಳಿರಬಹುದು, ಐಷಾರಾಮಿ ಹೋಟೆಲುಗಳಿರಬಹುದು, ಆಸ್ಪತ್ರೆಗಳಿರಬಹುದು ಅಥವಾ ಇನ್ನೂ ಹಲವು ಉದ್ಯಮಗಳಿರಬಹುದು. ಇಂಥಲ್ಲೆಲ್ಲ ಈ ಬಂಡವಾಳ ಹೂಡಿಕೆಯಾಗಿದೆ, ಆಗುತ್ತಿದೆ. ಇದು ಕಾಲಕ್ರಮೇಣ ಹೆಚ್ಚಾಗುತ್ತಿರುವುದರ ಪರಿಣಾಮವಾಗಿ ಈ ಕೂಟ ಬಯಸಿದವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವ ಅನಿವಾರ್ಯತೆ ಇದೆ.

   ಓವೈಸಿ ಕರ್ನಾಟಕ ಎಂಟ್ರಿ ಸಮಾಚಾರ ಮತ್ತು ಗೌಡ್ರ ಲೆಕ್ಕಾಚಾರ

   ಸ್ವಯಂ ಅಭಿವೃದ್ಧಿಯೇ ಇವರ ಮೂಲಮಂತ್ರ

   ಸ್ವಯಂ ಅಭಿವೃದ್ಧಿಯೇ ಇವರ ಮೂಲಮಂತ್ರ

   ಸ್ವಾತಂತ್ರ್ಯ ಬಂದ ಹೊಸತರಲ್ಲಿ ಶಾಂತವೇರಿ ಗೋಪಾಲಗೌಡರಂತಹ ನಾಯಕರು ಒಂದು ವೋಟು, ಒಂದು ನೋಟು ಎಂಬ ತತ್ವದ ಆಧಾರದ ಮೇಲೆ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದರು. ಅಂದರೆ ಸ್ಪರ್ಧಿಸುವ ಹಲವು ಅಭ್ಯರ್ಥಿಗಳಿಗೆ ಜನರೇ ಹಣ ನೀಡಿ, ಮತವನ್ನೂ ನೀಡಿ ಶಾಸನಸಭೆ ಚುನಾವಣೆಯಲ್ಲಿ ಗೆಲ್ಲಿಸುವ ಸಂಪ್ರದಾಯವಿತ್ತು. ಯಾವಾಗ ಜನರೇ ಸಹಕಾರ ನೀಡಿ ತಮ್ಮ ಪ್ರತಿನಿಧಿಯನ್ನು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಕಳಿಸುತ್ತಾರೋ? ಆಗ ಸಹಜವಾಗಿ ಅವರು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಒಬ್ಬ ಜನಪ್ರತಿನಿಧಿ ಸ್ಪಂದಿಸುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ ಇವತ್ತು ಅಂತಹ ನಿರೀಕ್ಷೆ ಮಾಡಲು ಸಾಧ್ಯವೇ?

   ಹಾಗಂತ ಆಯ್ಕೆಯಾಗಿ ಬಂದವರೆಲ್ಲ ಸ್ಪಂದನಾ ರಹಿತರು ಎಂದಲ್ಲ. ಆದರೆ ಬಹುತೇಕ ಜನ ಸ್ಪಂದನಾ ರಹಿತರು. ಯಾಕೆಂದರೆ ಹೆಚ್ಚು ಕಡಿಮೆ ಬಹುತೇಕರು ಬಂಡವಾಳ ಹೂಡಿ ಚುನಾವಣೆಯಲ್ಲಿ ಗೆದ್ದಿರುತ್ತಾರೆ. ಹೀಗಾಗಿ ಮುಂದಿನ ಚುನಾವಣೆಯ ಒಳಗೆ ಹಾಕಿದ ಬಂಡವಾಳವನ್ನು ವಾಪಸ್ ಪಡೆಯುವುದರ ಜತೆಗೆ ಪುನಃ ಸ್ಪರ್ಧೆಗೆ ನಿಲ್ಲಲು ಪೂರಕವಾದ ಶಕ್ತಿಯನ್ನು ಗಳಿಸಿಕೊಳ್ಳಲು ಅವರು ಯತ್ನಿಸುತ್ತಾರೆ. ಇಂತಹ ಯತ್ನ ನಡೆಯುವಾಗ ಆಯಾ ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಿನ ಸಮಯವನ್ನು ತಮ್ಮ ವೈಯಕ್ತಿಕ ಸಾಮ್ರಾಜ್ಯದ ಬೆಳವಣಿಗೆಯ ಕಡೆ ಅವರು ನೀಡುತ್ತಾರೆ. ಯಾವಾಗ ಈ ಅಂಶ ಮುಖ್ಯವಾಗುತ್ತದೋ? ಆಗ ಪಕ್ಷ ಭೇದವಿಲ್ಲದೆ ಹಲವರು ಪರಸ್ಪರ ಕೈಗೂಡಿಸುತ್ತಾರೆ. ಇವರೊಂದಿಗೆ ಅಧಿಕಾರಶಾಹಿ, ಬಂಡವಾಳಶಾಹಿ ವ್ಯವಸ್ಥೆಯ ಬಹುಜನರು ಕೈಗೂಡಿಸುವುದರಿಂದ ಸಂಪತ್ತು ವೃದ್ಧಿಯ ಕೆಲಸಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಇದರ ಪರಿಣಾಮವಾಗಿಯೇ ಇವತ್ತು ಒಂದು ಚುನಾವಣೆಯನ್ನು ಎದುರಿಸಲು ಬೇಕಾದ ಹಣವನ್ನು ಖರ್ಚು ಮಾಡಲು ಸಿದ್ಧರಿರುವವರಿಗೆ ರಾಜಕೀಯ ಪಕ್ಷಗಳು ಚುನಾವಣೆಯ ಟಿಕೆಟ್ ನೀಡಬೇಕಾಗುತ್ತದೆ.

   ಒಬ್ಬೊಬ್ಬ ಅಭ್ಯರ್ಥಿ ಮಾಡುತ್ತಿರುವ ವೆಚ್ಚವೆಷ್ಟು?

   ಒಬ್ಬೊಬ್ಬ ಅಭ್ಯರ್ಥಿ ಮಾಡುತ್ತಿರುವ ವೆಚ್ಚವೆಷ್ಟು?

   ಒಂದು ಸಣ್ಣ ಹೋಲಿಕೆಯನ್ನು ಗಮನಿಸಿದರೆ ನಿಮಗೆ ಈ ಕೂಟ ಯಾವ ಮಟ್ಟದಲ್ಲಿ ಬೆಳೆದು ನಿಂತಿದೆ ಎಂಬುದು ಅರ್ಥವಾಗುತ್ತದೆ. ಜಾಗತೀಕರಣ ಈ ದೇಶಕ್ಕೆ ಕಾಲಿಡುವ ಮುನ್ನ ಕರ್ನಾಟಕ ಎದುರಿಸಿದ ಕಟ್ಟ ಕಡೆಯ ವಿಧಾನಸಭೆ ಚುನಾವಣೆ ಎಂದರೆ 1989ರದು. ಆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇರಿ ಕರ್ನಾಟಕದಲ್ಲಿ ಚುನಾವಣೆಗೆ ವೆಚ್ಚ ಮಾಡಿರಬಹುದಾದ ಹಣದ ಪ್ರಮಾಣ ಹೆಚ್ಚೆಂದರೂ ಇಪ್ಪತ್ತೈದು ಕೋಟಿ ರೂಪಾಯಿ. ಆದರೆ ಇವತ್ತು ರಾಜಧಾನಿ ಬೆಂಗಳೂರಿನ ಬಹುತೇಕ ಕ್ಷೇತ್ರಗಳಲ್ಲಿ ಒಂದು ಪಕ್ಷದ ಅಭ್ಯರ್ಥಿ ತನ್ನ ಗೆಲುವಿಗಾಗಿ ಕನಿಷ್ಟ ಇಷ್ಟು ಹಣವನ್ನು ಬಂಡವಾಳವಾಗಿ ಹೂಡಬೇಕಾಗುತ್ತದೆ.

   ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ, ಒಬ್ಬ ಅಭ್ಯರ್ಥಿ ಚುನಾವಣೆಯ ವೆಚ್ಚಕ್ಕೆಂದು ಇಪ್ಪತ್ತೆಂಟು ಲಕ್ಷ ರೂಗಳನ್ನು ವೆಚ್ಚ ಮಾಡಬಹುದು. ಚುನಾವಣೆಗೆ ಸ್ಪರ್ಧಿಸಿದವರೂ ಇಷ್ಟೇ ವೆಚ್ಚದೊಳಗಾಗಿ ನಾವು ಚುನಾವಣೆಯನ್ನು ಎದುರಿಸಿದ್ದೇವೆ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಆ ಮಾತು ಬೇರೆ. ಆದರೆ ವಾಸ್ತವ ಸ್ಥಿತಿ ಹಾಗಿದೆಯೇ? ಅಂತ ನೋಡಿದರೆ ವಿಷಾದವೆನ್ನಿಸುತ್ತದೆ.

   ಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆ

   ಇದೇ ದೇವೇಗೌಡರ ಅನಿಸಿಕೆಯ ಗೂಢಾರ್ಥ

   ಇದೇ ದೇವೇಗೌಡರ ಅನಿಸಿಕೆಯ ಗೂಢಾರ್ಥ

   ಈ ಬಾರಿಯ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ ಎಲ್ಲರೂ ಸೇರಿ ಹೂಡಿಕೆ ಮಾಡಬಹುದಾದ ಬಂಡವಾಳದ ಪ್ರಮಾಣ ಐದರಿಂದ ಆರು ಸಾವಿರ ಕೋಟಿ ರೂಪಾಯಿ. ಇದಕ್ಕೆ ದಾಖಲೆ ಒದಗಿಸಲಾಗುವುದಿಲ್ಲ. ಆದರೆ ಈ ಮಟ್ಟದ ಹಣ ಹೂಡಿಕೆಯಾಗದೆ ಚುನಾವಣೆ ನಡೆಯುತ್ತದೆ ಎನ್ನುವುದು ಭ್ರಮೆ. ಅಂದರೆ ಚುನಾವಣೆಗಳು ಇವತ್ತು ಅಂತಃಸಾಕ್ಷಿಯ ಆಧಾರದ ಮೇಲೆ ನಡೆಯುತ್ತಿಲ್ಲ. ಸಾಕ್ಷಿಗಳ ಆಧಾರದ ಮೇಲೆ ನಡೆಯುತ್ತಿವೆ. ಯಾವಾಗ ಸಾಕ್ಷಿಯೇ ಮುಖ್ಯವಾಗಿ ಅಂತಃಸ್ಸಾಕ್ಷಿ ಗೌಣವಾಗುತ್ತದೋ? ಆಗ ರಾಜ್ಯದ ಅಭಿವೃದ್ಧಿಗಿಂತ ಸ್ವಯಂ ಅಭಿವೃದ್ಧಿಯೇ ಬಹುತೇಕರ ಮೂಲಮಂತ್ರವಾಗುತ್ತದೆ.

   ಹೀಗೆ ಸ್ವಯಂ ಅಭಿವೃದ್ಧಿಯನ್ನು ಮೂಲಮಂತ್ರವನ್ನಾಗಿಸಿಕೊಂಡವರು ಯಾವುದೋ ಒಂದು ಪಕ್ಷದಲ್ಲಿಲ್ಲವಲ್ಲ? ಹೀಗಾಗಿ ಇಂಥವರು ಬೇನಾಮಿ ಹೆಸರಿನಲ್ಲಿ ಮಾಡಿಟ್ಟಿರುವ, ಮಾಡುತ್ತಿರುವ ಅಪಾರ ಪ್ರಮಾಣದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯದೆ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಹೀಗಾಗಿ ಮುಂದಿನ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಎಂದು ದೇವೇಗೌಡರು ಹೇಳುತ್ತಿರುವುದು.

   ಇದನ್ನು ಅವರೇ ಏಕೆ ಹೇಳಿದರು? ಅದು ಎಷ್ಟರ ಮಟ್ಟಿಗೆ ಈಡೇರುತ್ತದೆ? ಅನ್ನುವುದು ಬೇರೆ ವಿಷಯ. ಆದರೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಿ ಎಂಬ ಅವರ ಮಾತಿನ ನಿಜವಾದ ಅರ್ಥ ಇದು. ರಾಜಕೀಯದ ಆಳವನ್ನು ಬಲ್ಲವರಿಗೆ ಇದು ಸುಲಭವಾಗಿ ಅರ್ಥವಾಗುತ್ತದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   In case of hung assembly should President's rule be imposed in Karnataka? Why H D Deve Gowda is saying this? Is there any hidden meaning in his words? What would happen if no party gets majority and president's rule is imposed? Political analysis by R T Vittal Murthy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more