• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಬಿಡದ ಹಂದಿಜ್ವರದ ಭೀತಿ ಮತ್ತು ಆರೋಗ್ಯ ಸಚಿವ

By Staff
|

ಆರೋಗ್ಯ ಸಚಿವ ಶ್ರೀರಾಮುಲು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ.

* ರವಿ ಬೆಳಗೆರೆ

ಹುಡುಗರು ಬಯ್ಯುತ್ತಾರೆ. ನಿಮಗೆ ನಿಮ್ಮದೇ ಭದ್ರತೆಯ ಬಗ್ಗೆ ಕಾಳಜಿಯಿಲ್ಲ. ಎಲ್ಲೆಂದರಲ್ಲಿಗೆ ಒಬ್ಬೊಬ್ಬರೇ ಹೋಗಿಬಿಡುತ್ತೀರಿ ಎಂದು ಆಕ್ಷೇಪಿಸುತ್ತಾರೆ. ನಕ್ಕು ಸುಮ್ಮನಾಗುತ್ತೇನೆ. ಏಕೆಂದರೆ ನಗೆ ಯಾವತ್ತೂ ದಿಗ್ಭಂದನದಲ್ಲಿ, ಸೆಕ್ಯೂರಿಟಿ ಇಟ್ಟುಕೊಂಡು, ಅಂಗರಕ್ಷಕರ ಹಿಂಡು ಕಟ್ಟಿಕೊಂಡು ಬದುಕಿ ಅಭ್ಯಾಸವಿಲ್ಲ. ಮೈತುಂಬ ಶತ್ರುಗಳನ್ನು ಕಟ್ಟಿಕೊಂಡು ಶರಂಪರ ಬೈದಾಡುತ್ತ ಯುದ್ಧಕ್ಕೆ ಬಿದ್ದಿದ್ದ ಕಾಲದಲ್ಲೇ ನಾನು ಸೆಕ್ಯೂರಿಟಿಯವರನ್ನು ಇಟ್ಟುಕೊಳ್ಳಲಿಲ್ಲ. ಹೆಚ್ಚೆಂದರೆ ಕಿಸೆಯಲ್ಲೊಂದು ರಿವಾಲ್ವರು. ಈ ಮಧ್ಯೆ ಅದನ್ನೂ ಮೂಲೆಗಿಟ್ಟಿದ್ದೇನೆ. ಒಬ್ಬ ಮನುಷ್ಯ, ಅದರಲ್ಲೂ ಪತ್ರಕರ್ತನಾದವನು ಅನುಭವಿಸಬೇಕಾದ ಅತಿ ದೊಡ್ಡ ಸವಲತ್ತು ಅಂದರೆ ಸ್ವಾತಂತ್ರ್ಯ. ಸುಮ್ಮನೆ ಒಮ್ಮೆ ಕಾರಿನಿಂದಿಳಿದು ಗಾಂಧಿ ಬಜಾರ್ ನಗುಂಟ ಬರಿಗಾಲಲ್ಲಿ ಒಬ್ಬನೇ ನದೆದು ಹೋಗಿಬಿಡಬೇಕು, ಪುಸ್ತಕದ ಅಂಗಡಿ ನುಗ್ಗಬೇಕು, ಪಾನಿಪುರಿ ತಿನ್ನಬೇಕು. ರಸ್ತೆಯಲ್ಲಿ ಗೆಳೆಯರು ಸಿಗುತ್ತಾರೆ, ಪರಿಚಿತರು-ಓದುಗರು ಸಿಗುತ್ತಾರೆ. ಸಣ್ಣ ಕುಶಲೋಪರಿ. ಎರಡು ಮಾತು. ಏನೋ ಒಂದು ಸುದ್ದಿ. ಒಂದು ಚಿಕ್ಕ ಸುಳಇವು, ಯಾವುದರ ಬಗ್ಗೆಯೋ ಇನ್ಫರ್ಮೇಷನ್. ಸಾಯಂಕಾಲವೊಂದು ಹಾಗೆ ನಿರುಮ್ಮಳವಾಗಿ ಕಳೆದುಹೋಗಬೇಕು. ಇಂತಹ ಸ್ವಾತಂತ್ರ್ಯ ಕಳೆದುಕೊಂಡ ದಿನ ಪತ್ರಿಕೋದ್ಯಮಕ್ಕೆ ತಿಲಾಂಜಲಿ ಕೊಟ್ಟಂತೆಯೇ.

ಈ ನಡುವೆ ನನ್ನ ಛೇಂಬರಿನಲ್ಲಿ ಕೂಡಲು ಕೂಡ ಮನಸಾಗುವುದಿಲ್ಲ. ಹಾಲ್ ನಲ್ಲಿ ಎಲ್ಲರ ಮಧ್ಯೆ ಮೇಜು ಕುರ್ಚಿ ಹಾಕಿಕೊಂಡು ಬರೆಯಲು ಕೂಡುತ್ತೇನೆ. ತುಂಬ ಹೊತ್ತು ಕೂತು ಬರೆದು ಬೇಸರವಾದಾಗ ಮೆಟ್ಟಿಲಿಳಿದು ಹೋಗಿ ಆಫೀಸಿನ ಮುಂದೆ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಕೂಡುತ್ತೇನೆ. ಇಡೀ ಪದ್ಮನಾಭನಗರವೇ ಕಾಂಕ್ರೀಟ್ ಕಾಡಾಗಿ ಹೋಗಿರುವಾಗ, ನಮ್ಮ ಆಫೀಸಿನೆದುರು ಒಂದು ಅಂಗೈಯಗಲದ ಬಯಲು ಹಾಗೇ ಉಳಿದುಕೊಂಡಿದೆ. ಮೊನ್ನೆ ಬಯಲಿನಲ್ಲಿ ಕುರ್ಚಿ ಹಾಕಿಕೊಂಡು ಕುಳಿತಾಗ ಎದುರು ಮನೆಯಲ್ಲಿ ಯಾರೋ ಕೆಮ್ಮುವುದು ಕೇಳಿಸಿತು. ಎದುರು ಮನೆಯಲ್ಲಿ ನಾಲ್ಕೈದು ಪುಟ್ಟು ಮಕ್ಕಳಿವೆ. ಅದು ಮಾರವಾಡಿ ಸೋದರರಿಬ್ಬರ ಒಟ್ಟು ಕುಟುಂಬ. ನಾನು ಯಾವಾಗ ಆಫೀಸಿನಿಂದ ಹೊರಬಂದರೂ ಆ ಮಕ್ಕಳು ನನ್ನಲ್ಲಿಗೆ ಓಡಿ ಬರುತ್ತವೆ. ಕೈ ಕುಲುಕಿ ಗುಡ್ ಮಾರ್ನಿಂಗ್ ಹೇಳಿ ನಗುತ್ತವೆ. ನಾನು ಪ್ರೀತಿಯಿಂದ ನೆತ್ತಿ ಸವರುತ್ತೇನೆ. ಅಂಥದರಲ್ಲಿ, ಇದ್ಯಾರು ಕೆಮ್ಮುವುದು ಅಂತ ನೋಡಿದರೆ ಅದು ಪೂಜಾ, ಅವೇ ಮಕ್ಕಳ ಪೈಕಿ ಒಂದು. ಅವಳ ಕೆಮ್ಮು ಸಾಮಾನ್ಯವಾಗಿ ಮಕ್ಕಳಿಗೆ ಬರುವಂತಹ ಕೆಮ್ಮಿನಂತಿರಲಿಲ್ಲ. ಕರುಳಿನಿಂದ ಎದ್ದು ಬಿಟ್ಟೂ ಬಿಡದೆ ಬರುತ್ತಿತ್ತು. ಮಲಗಿರಲಾಗದೆ ಜ್ವರದ ತಾಪಕ್ಕೆ ಹೊರಗೆ ಬಂದು ಮೆಟ್ಟಲ ಮೇಲೆ ಕುಳಿತಿದ್ದ ಮಗುವಿಗೆ ಕೂತುಕೊಳ್ಳಲೂ ಆಗುತ್ತಿರಲಿಲ್ಲ. ಮಕ್ಕಳ ಮಾತಿರಲಿ, ದೊಡ್ಡವರಿಗೆ ಕೂಡ ಆ ಪರಿಯ ಕೆಮ್ಮು ಬರುವುದನ್ನು ನಾನು ನೋಡಿಲ್ಲ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಆ ಕುಟುಂಬದ ಹಿರಿಯಲಿಗೆ ಹೇಳಿ ಕಳಿಸಿದ.

ಬೆಂಗಳೂರಿನಲ್ಲಿ ಎಲ್ಲೆಡೆಯೂ ಇದೇ ಪರಿಸ್ಥಿತಿ. ಯಾವ ಮನೆ ನೋಡಿದರೂ ಜ್ವರ. ಇಂಥ ಸಮಯದಲ್ಲಿ ಜನಸಾಮಾನ್ಯರು ದಿಕ್ಕೆಡುತ್ತಾರೆ. ಜ್ವರ ನಿಯಂತ್ರಿಸಲು ನೀವೇನು ಮಾಡುತ್ತಿದ್ದೀರಿ ಎಂಬಂತೆ ಸರ್ಕಾರದೆಡೆದೆ ನೋಡುತ್ತಾರೆ. ನಾನು ತಕ್ಷಣ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪೆರುಮಾಳ್ ಅವರಿಗೆ ಫೋನು ಮಾಡಿದೆ. ಮೊದಲಿದ್ದ ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಮಾನವೀಯ ಅನುಕಂಪದ ಅಧಿಕಾರಿ ಮದನಗೋಪಾಲ್ ಅವರ ಜಾಗಕ್ಕೆ ಬಂದು ಕುಳಿತಿರುವ ಪೆರುಮಾಳ್ ಹಳೇ ಕಳ್ಳ. ಆತನಿಗೆ ಹಂದಿಜ್ವರದ ಬಗ್ಗೆ ಸಣ್ಣದೊಂದು ಕಾಳಜಿಯೂ ಇದ್ದಂತೆ ಕಾಣಲಿಲ್ಲ. ಆತನೊಡನೆ ಮಾತನಾಡುವುದು ವ್ಯರ್ಥವೆನ್ನಿಸಿ ಆರೋಗ್ಯ ಮಂತ್ರಿ ಶ್ರೀರಾಮುಲೂಗೆ ಫೋನ್ ಮಾಡಿದೆ. ಶ್ರೀರಾಮುಲು ನನ್ನ ಹುಡುಗ. ದುಡ್ಡಿನ ವಿಷಯದಲ್ಲಿ ಕಳ್ಳನಲ್ಲ, ಮೈಗಳ್ಳ ಮೊದಲೇ ಅಲ್ಲ. ಅವನ ಮನೆಯ ಮುಂದೆ ಸಾವಿರಾರು ಜನ ಸದಾ ಗುಂಪು ಸೇರಿರುತ್ತಾರೆ. ಗದಗ್ ನಲ್ಲಂತೂ ಶ್ರೀರಾಮುಲು ಅತ್ಯಂತ ಜನಪ್ರಿಯ ನಾಯಕ. ತೀರ ಪರ್ಸನಲ್ ಲೈಫ್ ಎಂಬುದನ್ನೇ ಬಿಟ್ಟು ಸಾರ್ವಜನಿಕ ಜೀವನವನ್ನು ತನ್ನದಾಗಿಸಿಕೊಂಡು ಬಿಟ್ಟಿದ್ದಾನೆ ಶ್ರೀರಾಮುಲು.

"ಅದೆಲ್ಲ ಇರಲಿ. ಹಂದಿಜ್ವರದ ಭೀತಿಗೆ ಸಿಕ್ಕು ಬೆಂಗಳೂರು ನಡುಗಿ ಹೋಗುತ್ತಿದೆ. ನೀನು ಎಲ್ಲಿದ್ದೀಯ" ಅಂತ ಕೇಳಿದೆ.

ನಿಜ ಹೇಳಬೇಕೆಂದರೆ, ಹಂದಿಜ್ವರವೆಂಬುದು ತನ್ನ ಮೊದಲ ಬಲಿ ತೆಗೆದುಕೊಂಡದ್ದು ಬೆಂಗಳೂರಿನ ಬಿಟಿಎಮ್ ಲೇಔಟಿನಲ್ಲಿ. ಇಪ್ಪತ್ತಾರು ವರ್ಷ ವಯಸ್ಸಿನ ರೂಪಾ ಎಂಬ ಶಿಕ್ಷಕಿ ಹಂದಿಜ್ವರದಿಂದ ತೀರಿಕೊಂಡಳು ಎಂಬ ಸುದ್ದಿ ತಿಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವಣರಕ್ಕೆಂದು ತಮ್ಮ ದಂಡಿನ ಸಮೇತ ಹೋಗಿದ್ದರು. ಸುದ್ದಿ ಕೇಳಿದ ತಕ್ಷಣ ಅಲ್ಲೇ ಕೊತ್ತ ಕುದ್ದು ಹೋದ ಅವರು, 'ಈ ಆರೋಗ್ಯ ಮಂತ್ರಿ ಶ್ರೀರಾಮುಲು ಎಲ್ರೀ?' ಅಂತ ಪತ್ರಕರ್ತರ ಮುಂದೆ ಚಿಟಿಚಿಟಿ ಚೀರುವ ನಾಟಕವಾಡಿದರು. ಅವರು ಹಾಗೆ ಚೀರುತ್ತಿದ್ದಾಗ ಆರೋಗ್ಯಮಂತ್ರಿ ಶ್ರೀರಾಮುಲು ಕೊಳ್ಳೇಗಾಲದಲ್ಲಿ ಮನೆಮನೆ ತಿರುಗಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಯಾಚಿಸುತ್ತಿದ್ದ. ಹಾಗೆ ಅವನನ್ನು ಕೊಳ್ಳೇಗಾಲಕ್ಕೆ ಕಳಿಸಿ, 'ಬಿಜೆಪಿ ಕ್ಯಾಂಡಿಡೇಟನ್ನು ನೀನು ಗೆಲ್ಲಿಸಿಕೊಂಡೇ ಬರಬೇಕು' ಎಂದು ಅಪ್ಪಣೆ ಕೊಟ್ಟವರೇ ಯಡಿಯೂರಪ್ಪ. ಆದರೆ ಇಲ್ಲಿ ಪತ್ರಕರ್ತರ ಮುಂದೆ ಆರೋಗ್ಯ ಸಚಿವ ತನ್ನ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬಂತೆ ಮೈಕೈ ಪರಚಿಕೊಂಡದ್ದೂ ಅವರೇ. ರಾಜಕಾರಣವೆಂದರೆ ಇದು.

"ನನಗೆ ಅದೆಲ್ಲ ಅರ್ಥವಾಗುತ್ತದೆ ಶ್ರೀರಾಮುಲು. ಆದರೆ ಆರೋಗ್ಯ ಸಚಿವನಾಗಿ ನಿನಗೆ ನಿನ್ನದೇ ಜವಾಬ್ದಾರಿಯಿದೆ. ಯಾವ ರಾಜಕಾರಣವೂ ನಿನ್ನೊಳಗಿನ ಅಂತಃಕರಣವನ್ನು ನುಂಗಿ ಬಿಡಬಾರದು. ನೀನು ಕೊಳ್ಳೇಗಾಲದಲ್ಲೇ ಇರು. ಬಳ್ಳಾರಿಯಲ್ಲೇ ಇರು. ಕೈಲಿರುವ ಕೆಲಸ ಬಿಟ್ಟು ನೆಟ್ಟಗೆ ಬೆಂಗಳೂರಿಗೆ ಬಾ. ನಾಲ್ಕು ಆಸ್ಪತ್ರೆಗಳಿಗೆ ಭೇಟಿ ಕೊಡು. ಗಾಬರಿ ಬಿದ್ದಿರುವ ಜನಕ್ಕೆ ಧೈರ್ಯ ಹೇಳು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಇದೆಯೋ ಇಲ್ಲವೋ ಪರೀಕ್ಷಿಸು. ಪೆರುಮಾಳ್ ರಂತಹ ಮೈಗಳ್ಳ ಅಧಿಕಾರಿಗಳಿಗೆ ಎರಡು ಲಾತಾ ಕೊಟ್ಟು ಕೆಲಸ ಮಾಡಿಸು. ಇವಿಷ್ಟೂ ಆದ ಮೇಲೆ ಕೊಳ್ಳೇಗಾಲಕ್ಕಾದರೂ ಹೋಗು, ಮತ್ತೆಲ್ಲಿಗಾದರೂ ಹೋಗು" ಅಂದೆ.

ಶ್ರೀರಾಮುಲು ನನ್ನ ಮಾತು ತೆಗೆದುಹಾಕಲಿಲ್ಲ. ಮಾರನೆಯ ದಿನವೇ ಬೆಳಿಗ್ಗೆ ಹೆಲಿಕಾಪ್ಟರ್ ಹತ್ತಿಕೊಂಡು ಬಂದವನು ಜಯದೇವ ಆಸ್ಪತ್ರೆ ತಲುಪಿಕೊಂಡು ಅಲ್ಲಿಂದಲೇ ಫೋನು ಮಾಡಿದ. "ಅಣ್ಣಾ ಬಂದಿದೀನಿ" ಅಂತ. ಹಾಗೆ ಬಂದವನು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಮತ್ತೆರಡು ಮೂರು ಕಡೆ ಭೇಟಿ ನೀಡಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ. ಇವತ್ತು ಹಂದಿಜ್ವರವೆಂಬುದು ಕೇವಲ ಖಾಯಿಲೆಯಾಗಿ ಉಳಿದಿಲ್ಲ. ಅದಕ್ಕೆ ಅಂತಾರಾಷ್ಟ್ರೀಯ ಆಯಾಮ ದೊರೆಯ ತೊಡಗಿದೆ. ಅದು ಕೂಡ ಭಯೋತ್ಪಾದಕತೆಯ ಒಂದು ಮುಖವಾಡ ಎಂಬ ಅನುಮಾನ ಕೆಲವರನ್ನು ಕಾಡುತ್ತಿದ್ದೆ.

ಅದನ್ನು bio terrorism ಅನ್ನುತ್ತಾರೆ. ರೋಗಾಣುಗಳನ್ನು ತಮ್ಮ ಶತ್ರುದೇಶಗಳಿಗೆ ಬೇಕೆಂತಲೇ ರವಾನೆ ಮಾಡುತ್ತಾರೆ. ಇಂತಹ ರೋಗಗಳಿಗೆ unprepared ಆಗಿರುವ ಭಾರತದಂಥ ವಿಶಾಲವಾದ, ಬಡದೇಶಗಳಲ್ಲಿ ರೋಗ ಹರಡುವಂತೆ ಮಾಡುತ್ತಾರೆ. ಇದು ಸದ್ದಿಲ್ಲದೆ ನಡೆದು ಹೋಗುವಂಥ ಪ್ರಕ್ರಿಯೆ. ಭಾರತದೊಳಕ್ಕೆ ಹಂದಿಜ್ವರವನ್ನು ಈ ಉದ್ದೇಶದಿಂದಲೇ ಪಂಪ್ ಮಾಡಲಾಯಿತಾ? ಈ ಬಗ್ಗೆ ತಲೆ ಕೆಡಿಸಿಕೊಂಡವರಿದ್ದಾರೆ. ಆದರೆ ಇದು ಪತ್ತೆಯಾಗುವುದಾದರೂ ಹೇಗೆ?

ಜ್ವರಕ್ಕಿಂತ ಹೆಚ್ಚಾಗಿ ಜ್ವರದ ಭೀತಿ ಎಲ್ಲರನ್ನೂ ಕಾಡುತ್ತಿದೆ. ಸಾರ್ವಜನಿಕ ಮೂತ್ರಿ ಬಳಸುವಂತಿಲ್ಲ. ಸಾರ್ವಜನಿಕರು ಬಳಸುವ ಫೋನು ಮುಟ್ಟುವಂತಿಲ್ಲ. ಮುಖ್ಯವಾಗಿ, ಮೆಟ್ಟಿಲುಗಳ ಪಕ್ಕದಲ್ಲಿ ಕೈಯಿಡಲು ಹಾಕಿರುವ ಕಬ್ಬಿಣದ ಅಥವಾ ಕಟ್ಟಿಗೆಯ ರೇಲಿಂಗ್ ಇರುತ್ತದಲ್ಲ, ಅದನ್ನು ಮುಟ್ಟುವಂತಿಲ್ಲ. ಕೆಮ್ಮುವವರ, ಸೀನುವವರ ಪಕ್ಕದಲ್ಲಿ ಕೂಡುವಂತಿಲ್ಲ. ಜ್ವರ ಅಂತ ಗೊತ್ತಾಗಿಬಿಟ್ಟರೆ ಸಾಕು: ಅದು ಹಂದಿಜ್ವರವಿರಲಿ ಬಿಡಲಿ, ಮನೆಯವರೇ ದೂರವಾಗಿ ಬಿಡುವ ಪರಿಸ್ಥಿತಿ. ಶಾಲೆಗೆ ಹೋದ ಮಗು ಜ್ವರ ತಗುಲಿಸಿಕೊಳ್ಳದೆ ಮನೆಗೆ ಹಿಂದಿರುಗಿದರೆ ಸಾಕು ಎಂದು ನಿಟ್ಟುಸಿರಿಡುವ ದಿನಗಳಿವು. ಇಂಥ ಹಂದಿಜ್ವರದ ಹಾವಳಿಯ ಮಧ್ಯೆ ಚಿಕೂನ್ ಗುನ್ಯಾ, ಡೆಂಗ್ಯೂ, ವೈರಲ್ ಫಿವರ್ ಗಳ ತಾಂಡವ ನೃತ್ಯ ನಡೆದಿದೆ. ನಿಸರ್ಗವೇ ಮುನಿದಿರುವಾಗ ಮನುಷ್ಯತಾನೇ ಎನು ಮಾಡಬಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X