• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಿಯವರೆಗೆ ಹೆಣ್ಣುಮಕ್ಕಳು ತಮ್ಮನ್ನು ತಾವು ಅಯ್ಯೋ ಪಾಪ ಅಂದುಕೊಳ್ಳುತ್ತಾರೋ...

By ಜಯನಗರದ ಹುಡುಗಿ
|

ಒಂದು ವಾರದ ಹಿಂದೆ ಗೆಳೆಯನೊಬ್ಬ ನಮ್ಮ ಗೆಳೆಯರ ಗುಂಪಿನಲ್ಲಿ "ನನಗೆ ಲೇಡಿ ಬಾಸ್, ಮನೆಯಲ್ಲೂ, ಆಫೀಸಿನಲ್ಲೂ" ಎಂದು ತಮಾಷೆಯಾಗಿ ಬರೆದ. ಹಾಗೆ ಎಲ್ಲರೂ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ಳುತ್ತಾ ಹೋದರು. ನನ್ನ 6 ವರ್ಷದ ಕೆರಿಯರ್ರಿನಲ್ಲಿ ಒಂದು ಬಾರಿಯೂ ಲೇಡಿ ಬಾಸ್ ಇರಲ್ಲಿಲ್ಲ. ಈಗಲೂ ಮುಂದೆ ಬರುವುದು ಅನುಮಾನ. ನಾನು ಕೆಲಸ ಮಾಡಿದ ಅಷ್ಟೂ ಜಾಗದಲ್ಲಿ ನನ್ನ ಟೀಮಿಗೆ ನಾನೊಬ್ಬಳೇ ಹುಡುಗಿ.

ನನ್ನ ಗೆಳೆಯರ ಗುಂಪಿನಲ್ಲೂ ಹೀಗೆ ಮಾತಾಡುತ್ತಾ ಹೋದರು. ಒಬ್ಬ ಗೆಳೆಯ ಮಾತ್ರ "ನಮ್ ಬ್ಯಾಚಿನಲ್ಲಿ ಹುಡುಗೀನೆ ಸೈನ್ಸ್ ಟಾಪ್ ಮಾಡಿದ್ದು, ಆಕೆ ಇಂಜಿನಿಯರಿಂಗ್ ಹೋಗಿದ್ದು ಗೊತ್ತು, ಆಕೆ ಎಲ್ಲಿ ಹೋದಳು ಅಥವಾ ತುಂಬಾ ಹೆಣ್ಣುಮಕ್ಕಳೇ ಆ ವರ್ಷ ಪಾಸ್ ಆಗಿದ್ದು, ಆವ್ರೆಲ್ಲಾ ಕೆಲಸ ಬಿಟ್ರಾ?" ಎಂದು ಪ್ರಶ್ನೆ ಹಾಕಿದ.

ನೃತ್ಯಗಾರ್ತಿಯರಿಗಿರುವ ರಂಗಪ್ರವೇಶ ಸಂಗೀತಗಾರರಿಗೇಕಿಲ್ಲ?

ಆ ಪ್ರಶ್ನೆಗೆ ಉತ್ತರ ನನ್ನ ಬಳಿ ಇರಲ್ಲಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲಿಯೇ ನನಗಿಂತ ಹಿಂದಿನ ಪೀಳಿಗೆಯ ಎಲ್ಲಾ ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. ಮದುವೆಯಾದ ಮೇಲೆ ಎಲ್ಲಾ ಬಂದಾಗಿತ್ತು. ನನ್ನ ಪೀಳಿಗೆಯಲ್ಲಿಯೂ ಕೆಲವರು ಹೋಗುತ್ತಿರಲ್ಲಿಲ್ಲ. ಹೀಗೆ ಒಂದು ಮನೆಯಲ್ಲಿಯೇ ಇಷ್ಟೆಲ್ಲಾ ಬದಲಾವಣೆಗಳಾದಾಗ ಬೇರೆ ಮನೆಗಳಲ್ಲಿ ದೇಶದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಬಹುದು ಎಂಬ ಚಿಂತನೆಯಲ್ಲೇ ಇದ್ದೆ.

ಫೇಸ್ಬುಕ್ಕಿನಲ್ಲಿ ಲೇಖಕಿ ಸಂಗೀತಾ ಚಚಡಿ ತಾವು ಓದಿದ್ದ ಸಿವಿಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಬ್ಬರೇ ಹುಡುಗಿ ಮತ್ತು ಈಗ ಕೆಲಸ ಮಾಡುತ್ತಿರುವ ಆಫೀಸಿನಲ್ಲಿಯೂ ಒಬ್ಬರೇ ಹೆಣ್ಣು ಟೀಮ್ ಲೀಡ್ ಎಂದು ಬರೆದುಕೊಂಡಿದ್ದರು. ಇನ್ನು ಸುಧಾ ಮೂರ್ತಿಯವರ ಕಥೆಯೂ ಭಿನ್ನವಾಗಿರಲ್ಲಿಲ್ಲ. ಯಾಕೆ ಅಷ್ಟು ಬುದ್ಧಿವಂತರಾದ ಹೆಣ್ಣು ಮಕ್ಕಳನ್ನ ನಾವು ಓದೋದಕ್ಕೆ ಅಥವಾ ಕೆಲಸ ಮಾಡೋದಕ್ಕೆ ಕಳಿಸೋದಿಲ್ವಾ ಎಂದು ಯೋಚನೆ ಮಾಡುತ್ತಿದ್ದೆ.

ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು

ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುವ ಗೆಳತಿ ಹೇಳಿದ್ದು, "ಅದೇನು ಹೆಣ್ಣು ಮಕ್ಕಳನ್ನ ಕಳಿಸೋದು ಅಂತ್ಯಾ, ಯಾಕೆ ಅವರಿಗೇ ಹೋಗೋದಕ್ಕೆ ಗೊತ್ತಾಗಲ್ವಾ?" ಎಂದು ಪ್ರಶ್ನೆ ಹಾಕಿದಳು. ನನಗೂ ಅದು ಹೌದು ಅನ್ನಿಸಿತು.

ನಾನು ಬಾರ್ಸಿಲೋನಾದಲ್ಲಿ ಓದುತ್ತಿದ್ದ ವಿಶ್ವವಿದ್ಯಾಲಯದಲ್ಲೂ ಸ್ನಾತಕೋತ್ತರ ಪದವಿಯಲ್ಲಿ 300 ಜನ ವಿದ್ಯಾರ್ಥಿಗಳಲ್ಲಿ 10 ಜನ ಮಾತ್ರ ಹುಡುಗಿಯರಿದ್ದೆವು. ನಮ್ಮ ಕೋರ್ಸಿನ ನಿರ್ದೇಶಕಿ ಎಮಿಲಿಯಾ "ಹಾಗೂ ಹೀಗೂ ಇಂಜಿನಿಯರಿಂಗ್ ತನಕ ಹೆಣ್ಣು ಮಕ್ಕಳು ಓದುತ್ತಾರೆ, ಸ್ನಾತಕೋತ್ತರ ಪದವಿ ಬಹಳ ಕಷ್ಟ, ಪಿ ಎಚ್ ಡಿ ಅಂತೂ ವಿಪರೀತ ಕಷ್ಟ. ಅಲ್ಲಿಂದ ಇಲ್ಲಿ ಬಂದಿರುವ ಹೆಣ್ಣುಮಕ್ಕಳಲ್ಲಿ ನನಗೆ ಬಹಳ ನಂಬಿಕೆ ಇದೆ, ಏನಾದರೂ ಮಾಡಿ" ಎಂದು ಬಂದ ಮೊದಲ ದಿವಸವೇ ಹೇಳಿದ್ದರು. ಅಂಕಗಳಲ್ಲಿ ನಾವೇ ಮುಂದಿದ್ದೆವು. ಆದರೂ ಮುಂದೆ ಯಾವತ್ತೂ ನಾವು ನಮ್ಮ ವೃತ್ತಿಯನ್ನ ಬಿಡಬಾರದೆಂಬ ಬುದ್ಧಿಯನ್ನು ನಮ್ಮಲ್ಲಿ ತುಂಬುತ್ತಲೇ ಬಂದಿದ್ದರು.

ನನ್ನ ಜೊತೆ ಓದುತ್ತಿದ್ದ ಭಾರತದ ಹುಡುಗರು ಮೊದಲು ಈ ವಿಷಯವನ್ನ ಅಯ್ಯೋ ಪಾಪ ಎಂದು ಕೇಳಿಸುಕೊಳ್ಳುತ್ತಾ ಇದ್ದರು. ಆಮೇಲೆ "ಹುಡುಗಿಯರ ವ್ಯಕ್ತಿತ್ವದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು" ಎಂದು ಹರಿಹಾಯ್ದರು. ಸಂಜೆ 8 ಘಂಟೆಯ ಮೇಲೆ ಒಬ್ಬಳೇ ನನ್ನ ಊರಾದ ಬೆಂಗಳೂರಿನಲ್ಲಿಯೇ ಓಡಾಡದ ನಾನು, ಅಲ್ಲಿ ಬಾರ್ಸಿಲೋನಾದಲ್ಲಿ ಮಧ್ಯರಾತ್ರಿ 2 ಘಂಟೆ ತನಕ ಲೈಬ್ರರಿಯಲ್ಲಿ ಓದಿದ ನಂತರ ಮನೆಗೆ ನಡೆದುಕೊಂಡೇ ಹೋಗಬೇಕಿತ್ತು. ಮೊದಲೆರಡು ಸಲ ಆ ಹುಡುಗರು ನನ್ನೊಟ್ಟಿಗೆ ಬಂದರು, ನಂತರ "ಏನು ಆಗೋದಿಲ್ಲ ಒಬ್ಬಳೇ ಹೋಗು, ಅಭ್ಯಾಸ ಮಾಡಿಕೋ" ಎಂದು ಖಡಾಖಂಡಿತವಾಗಿ ಹೇಳಿ ಅವತ್ತು ಕಳಿಸಿದ್ದರು.

ಎಲ್ಲ ಹೆಣ್ಮಕ್ಕಳು ಕೆಲಸಕ್ಕೆ ಹೋಗುವವರೇ, ಕೆಲವರಿಗೆ ಮಾತ್ರ ಸಂಬಳ!

ನನಗೆ ಮರದ ನೆರಳೂ ಅವತ್ತು ಏನೋ ಮಾಡಿಬಿಡುತ್ತದೆ ಎಂದು ಭಯ ಪಟ್ಟುಕೊಂಡೇ 2 ಕಿಮೀ ದಾರಿ ಸವೆಸಿದೆ. ನನ್ನ ಮನದ ಭಯ ಹೊರತು ಪಡಿಸಿ ನನ್ನನ್ನ ಒಂದು ಬೀದಿ ನಾಯಿಯೂ ಏನೂ ಮಾಡಲು ಬರಲ್ಲಿಲ್ಲ. ಮನೆಗೆ ಬಂದ ನಂತರ ಮೆಸೇಜು ಕಳಿಸಿದ ಹುಡುಗರು, "ಸಮಾನತೆಯ ದಾರಿಯಲ್ಲಿ ನಿನ್ನ ಮೊದಲ ಹೆಜ್ಜೆ, ಹೀಗೆ ಹೆಜ್ಜೆಗಳನ್ನ ಇಡು" ಎಂದು ಹೇಳಿ ನಕ್ಕರು.

ಆಗ ನನ್ನ ತಲೆಯಲ್ಲಿ ಹೊಳೆದ್ದದ್ದು, ಹೆಣ್ಣುಮಕ್ಕಳು ನಮ್ಮನ್ನ ನಾವೇ "ಅಯ್ಯೋ ಪಾಪ, ನಾನೊಬ್ಬಳೇ ಎಲ್ಲಿ ಹೋಗೋದು" ಎಂಬ ಕರುಣಾಜನಕ ಸ್ಥಿತಿಯನ್ನ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇವೆ. ಅದರಿಂದ ಆಚೆ ನಾವು ಬರಬೇಕು. ನಮ್ಮ ಸ್ಥಿತಿ ಮತ್ತು ಪರಿಸ್ಥಿತಿಗೆ ಯಾರೂ ಕಾರಣವಾಗುವುದಿಲ್ಲ ಎಂಬ ಸತ್ಯವನ್ನೂ ನಾವು ಅರಿಯಬೇಕು. ಹಾಗಿದ್ದಾಗಲೇ ನಮಗೆ ನಾವೇ ಅಯ್ಯೋ ಪಾಪ ಅನ್ನೋದಕ್ಕೆ ಸಾಧ್ಯವಾಗುವುದಿಲ್ಲ.

ಹೆಣ್ಣುತನದ ಸಂಭ್ರಮವನ್ನು ಇಮ್ಮಡಿಗೊಳಿಸುವ ಮದರಂಗಿ!

ಪ್ರಾಯಶಃ ನಮ್ಮ ಮನೆಗಳಲ್ಲಿ ನಮ್ಮ ಮನೆಕೆಲಸಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳನ್ನಾಗಿ ಕಲಿಸಬೇಕಾಗುತ್ತದೆ, ಯಾವ ಹೆಣ್ಣುಗಂಡು ಭೇದವಿಲ್ಲದೆ. ಒಂದೇ ವಯಸ್ಸಿನ ಗಂಡು ಅಥವಾ ಹೆಣ್ಣನ್ನ ಮನೆಗಳಲ್ಲಿ ಬಹಳ ವ್ಯತ್ಯಾಸವಾಗಿ ಬೆಳೆಸುತ್ತಾರೆ. ಈ ಅಸಮಾನತೆಯನ್ನ ಹೊಡೆದೋಡಿಸುವುದು ನಮ್ಮ ಕಾಲಕ್ಕೆ ಕಷ್ಟ. ನಮ್ಮ ಮುಂದಿನ ಪೀಳಿಗೆ ಹೀಗೆ ಬೆಳೆದಿರುವುದಿಲ್ಲ. ಎಲ್ಲವನ್ನೂ ಎಲ್ಲರೂ ಮಾಡಿದಾಗ ಮಾತ್ರ ಕೆಲಸಕ್ಕೆ ಹೋಗಿ ಆರಾಮಾಗಿ ಕೆಲಸ ಮಾಡಿಬರಬಹುದು.

ಇದೊಂದೇ ಕಾರಣವಾ? ಅಥವಾ ಮತ್ತಿನ್ಯಾವುದಾದರೂ ಇದೆಯಾ ಎನ್ನುವ ಯೋಚನೆ ನನ್ನ ತಲೆಯಲ್ಲಿ ಸದಾ ಓಡುತ್ತಿರುತ್ತದೆ. ಇಂಜಿನಿಯರಿಂಗ್ ಸಮಯದಲ್ಲಿ ಒಂದೊಂದು ಮಾರ್ಕಿಗೂ ಸ್ಟಾಫ್ ರೂಮಿಗೆ ಹೋಗುತ್ತಿದ್ದ ನಮ್ಮಂತಹ ಹೆಣ್ಣುಮಕ್ಕಳಿಗೆ ಒಬ್ಬರು ದೊಡ್ಡ ವ್ಯಕ್ತಿ ಹೇಳಿದ್ದರು "ಹೇಗಿದ್ದರೂ ಮುಂದೆ ಅಡುಗೆ ಪಾತ್ರೆಯಲ್ಲಿ ನಿಮ್ಮ ಜೀವನ ಕಳೆಯುತ್ತದೆ, ಅದಕ್ಕ್ಯಾಕೆ ಇಷ್ಟೆಲ್ಲಾ ಹಾರಾಡ್ತೀರಾ" ಎಂದು ಮೂದಲಿಸಿದ್ದರು. ಇವೆಲ್ಲವನ್ನ ದಾಟಿ ಹೆಣ್ಣುಮಕ್ಕಳು ಸಾಧಿಸಬೇಕಾಗಿದೆ. ಈಗ ಕಳೆದು ಹೋದ ಹೆಣ್ಣುಮಕ್ಕಳು ಸಿಗಬಹುದು....

English summary
Where all those women have gone? What are they doing now? Why many talented girl students persue higher studies and go for job? When will boy-girl inequality vanish in India? Writes Jayanagarada Hudugi Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more