ಜನಾಶೀರ್ವಾದ ಸಿಕ್ಕರೆ ಮೇಕೆದಾಟು ಯೋಜನೆಗೆ ಸಹಕಾರ: ಹೆಚ್‌ಡಿ ಕುಮಾರಸ್ವಾಮಿ ಭರವಸೆ
ಮಂಡ್ಯ ಜಿಲ್ಲೆಯ ಜನರು ತಮಗೆ ಆಶೀರ್ವಾದ ಮಾಡಿದ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿ ಚೌಕಟ್ಟಿನಲ್ಲಿ ಬಗೆ ಹರಿಸಿ, ಅಣೆಕಟ್ಟೆ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ.
ನಾಗಮಂಗಲದಲ್ಲಿ ಸೋಮವಾರ ಆಯೋಜಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ನಾನು ನನ್ನ ರಾಜಕೀಯ ಜೀನವದಲ್ಲಿ ಅಲ್ಪ ಸ್ವಲ್ಪ ಕಾಣಿಕೆ ಕೊಟ್ಟಿದ್ದೇನೆ ಎನ್ನುವುದು ನಿಮ್ಮ ಹೃದಯದಲ್ಲಿದ್ದರೆ ಈ ಚುನಾವಣೆಯಲ್ಲಿ ನನಗೆ ಹಾಲನ್ನಾದರೂ ಕೊಡಿ ವಿಷವನ್ನಾದರೂ ಕೊಡಿ ಎರಡನ್ನೂ ಸಮಚಿತ್ತವಾಗಿ ಸ್ವೀಕರಿಸುತ್ತೇನೆ ಎಂದರು.

ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣದ ವಿಷಯ ಇವತ್ತಿನದಲ್ಲ. ಸುಮಾರು 30 ವರ್ಷಗಳಷ್ಟು ಹಳೆಯದು, ತಾವು ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದೆ, ಜತೆಗೆ ಡಿಪಿಆರ್ ಮಾಡಿಸಿದ್ದೆ, ಆ ಕಡತ ದೆಹಲಿಯಲ್ಲಿಯೇ ಇದೆ. ತಮ್ಮನ್ನು ಹಾಗೂ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ವಿರುದ್ಧ ಟೀಕೆ
ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದ ಮಾತುಗಳನ್ನಾಡುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಕದ ರಾಜ್ಯದ ಸ್ನೇಹಿತರು ಹಾಗೂ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಬಳಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆದುಕೊಂಡು ಬರಲಿ, ನಾನು ಪ್ರಧಾನಿ ಬಳಿ ಎರಡು ಸೆಕೆಂಡ್‌ಗಳಲ್ಲಿ ಅನುಮತಿ ಕೊಡಿಸುತ್ತೇನೆ, ಇದು ಇವರ ಕೈಯಲ್ಲಿ ಆಗುತ್ತಾ ಎಂದು ಸವಾಲೆಸೆದರು.
ರಾಜ್ಯದಲ್ಲಿ ಪಿಕ್ ಪಾಕೆಟ್ ಸರ್ಕಾರ ಅಧಿಕಾರದಲ್ಲಿದೆ, ಇದು ರಾಜ್ಯದ ಜನರ ಉದ್ದಾರ ಮಾಡಲ್ಲ, ಕಳೆದ 10 ತಿಂಗಳುಗಳಿಂದ ಸರಕಾರದ ಖಜಾನೆಯನ್ನು ಲೂಟಿ ಮಾಡಿ ರಾಜ್ಯದ ಜನರಿಗೆ ಚೊಂಬು ನೀಡಿದೆ, ಇದು ರೈತ ವಿರೋಧಿ ಸರ್ಕಾರ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು ಕಾಂಗ್ರೆಸ್ ನಾಯಕರು ಸಂಚು ರೂಪಿಸುತ್ತಿದ್ದಾರೆ. ಜಿಲ್ಲೆಯ ರೈತರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳದಿದ್ದರೆ ಜೀವನದಲ್ಲಿ ಸಂಪೂರ್ಣವಾಗಿ ನೆಲಕಚ್ಚುತ್ತೇವೆಂಬ ಭಯದಲ್ಲಿ ನಾನು ಪಣತೊಟ್ಟು ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಿದು. ಕಳೆದ 17ವರ್ಷಗಳಲ್ಲಿ 3 ಬಾರಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದೇನೆ. ಕಾವೇರಿ ಸೇರಿದಂತೆ ಜಿಲ್ಲೆಯ ಹಲವಾರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಜಿಲ್ಲೆಯ ಜನತೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ನನ್ನ ರಾಜಕೀಯ ಭವಿಷ್ಯ ಇರೋದು ಮಂಡ್ಯ ಜಿಲ್ಲೆಯ ಜನರ ಕೈಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೈಯಲ್ಲಲ್ಲಾ, ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಸೋಲುವುದು ಪೂರ್ವದಲ್ಲಿ ಸೂರ್ಯ ಉದಯವಾಗುವಷ್ಟೇ ಸತ್ಯ ಅಂತ ಹೇಳ್ತಾರೆ. ಹಾಗಾಗಿ ನನ್ನ ಭವಿಷ್ಯವನ್ನು ಜಿಲ್ಲೆಯ ಜನರು ನಿರ್ಧಾರಿಸಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.












Click it and Unblock the Notifications