ತಿರುಪತಿಯ ಮೊದಲ ಆರತಿ ಇನ್ಮುಂದೆ ಕರ್ನಾಟಕದವರಿಗೂ ಲಭ್ಯ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
ಬೆಂಗಳೂರು: ವಿಶ್ವಪ್ರಸಿದ್ಧ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಪ್ರತಿದಿನ ನಡೆಯುವ ಅತ್ಯಂತ ಪವಿತ್ರವಾದ ಮೊದಲ ಆರತಿಯನ್ನು ಪಡೆದುಕೊಳ್ಳಲು ಕರ್ನಾಟಕದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಶಿಷ್ಟಾಚಾರದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ. ಬೆಂಗಳೂರಿನ ಬನಶಂಕರಿ 6ನೇ ಹಂತದ ಲಿಂಗಧೀರನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀಷಣ್ಮುಖ ಸುಬ್ರಮಣ್ಯ ದೇವಸ್ಥಾನದ ಶೀಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಮಹತ್ವದ ನಿರ್ಧಾರವನ್ನು ಸಾರ್ವಜನಿಕವಾಗಿ ಹಂಚಿಕೊಂಡರು.
ತಿರುಮಲದಲ್ಲಿ ಕರ್ನಾಟಕಕ್ಕೆ ವಿಶೇಷ ಸೌಲಭ್ಯ
ತಿರುಪತಿ ದೇವಸ್ಥಾನದ ಇತಿಹಾಸ ಮತ್ತು ಕರ್ನಾಟಕದ ಒಡನಾಟವನ್ನು ನೆನಪಿಸಿಕೊಂಡ ಸಿಎಂ, "ತಿರುಪತಿ ತಿರುಮಲ ದೇಗುಲದ ಒಳಭಾಗದ ಮುಖ್ಯದ್ವಾರದ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮಾತ್ರ ಮೊದಲಿನಿಂದಲೂ ಅವಕಾಶವಿತ್ತು. ಈ ನಿತ್ಯದ ಪ್ರಥಮ ಆರತಿಯನ್ನು ಸದ್ಯಕ್ಕೆ ಕರ್ನಾಟಕ ಸರ್ಕಾರದ ವಿಶೇಷ ಅಧಿಕಾರಿ ಮಾತ್ರ ಸ್ವೀಕರಿಸುತ್ತಿದ್ದಾರೆ. ಆದರೆ ಇನ್ಮುಂದೆ ರಾಜ್ಯದ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ನ್ಯಾಯಾಧೀಶರು ಸೇರಿದಂತೆ ಸರ್ಕಾರದ ಪರವಾಗಿ ಯಾರು ಅಲ್ಲಿಗೆ ಭೇಟಿ ನೀಡಿದರೂ ಅವರಿಗೆ ಈ ಮೊದಲ ಆರತಿಯ ಗೌರವ ಸಿಗಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿಯಮಾವಳಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಮ್ಮ ರಾಜ್ಯದ ಎಷ್ಟೋ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೇ ಬೇಸರದಿಂದ ವಾಪಸ್ ಬಂದ ಉದಾಹರಣೆಗಳಿವೆ. ರಾಜ್ಯದ ಜನಸೇವೆ ಮಾಡುವವರಿಗೆ ದೇವರ ಮುಂದೆ ನಿಂತು ಪ್ರಾರ್ಥಿಸಲು ಮತ್ತು ಈ ವಿಶೇಷ ಆರತಿ ಸೌಲಭ್ಯ ಒದಗಿಸುವುದು ನನ್ನ ಅವಧಿಯ ಅತ್ಯಂತ ಪ್ರಮುಖ ನಿರ್ಧಾರ ಎಂದು ಅವರು ಹೆಮ್ಮೆಯಿಂದ ಹೇಳಿದರು. ತಮ್ಮ ಜೈಲು ವಾಸದ ಬಿಡುಗಡೆಯ ನಂತರ ಇತ್ತೀಚೆಗಷ್ಟೇ ಮನೆದೇವರಾದ ತಿರುಪತಿಗೆ ಭೇಟಿ ನೀಡಿದಾಗ ಈ ಆಲೋಚನೆ ಬಂದಿದ್ದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಎಸ್.ಎಂ.ಕೃಷ್ಣ ಅವರು ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ, ವೈಭವವಾದ ಕಟ್ಟಡ ಕಟ್ಟುವ ಉದ್ದೇಶದಿಂದ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದರು. ಅಷ್ಟೊತ್ತಿಗೆ ನಮ್ಮ ಸರ್ಕಾರದ ಅವಧಿ ಮುಗಿಯಿತು. ನನ್ನನ್ನ ಮುಂದುವರೆಸದ ಕಾರಣ ಆ ಕೆಲಸ ಮಾಡಲು ಆಗಿರಲಿಲ್ಲ. ಮಹಾರಾಜರ ಕಾಲದಲ್ಲೇ ನೀಡಿದ ಏಳು ಎಕರೆ ಜಾಗ ಅಲ್ಲಿತ್ತು ಎಂದರು.
ದ್ವಾರಕನಾಥ್ ಭವಿಷ್ಯ ಬಹಿರಂಗಪಡಿಸಿದರೆ ದೊಡ್ಡ ಸುದ್ದಿಯಾಗುತ್ತೆ
ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಮಾರ್ಗದರ್ಶಕರಾದ ಜ್ಯೋತಿಷಿ ದ್ವಾರಕನಾಥ್ ಅವರ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ದ್ವಾರಕನಾಥ್ ಅವರು ಕಳೆದ 35 ವರ್ಷಗಳಿಂದ ನನಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನಮ್ಮ ನಡುವಿನ ಒಡನಾಟ ಹಾಗೂ ಅವರು ನೀಡಿದ ಸಲಹೆಗಳ ಕುರಿತು ಬರೆಯಲು ಹೊರಟರೆ ಒಂದು ದೊಡ್ಡ ಇತಿಹಾಸದ ಪುಸ್ತಕವೇ ಆಗುತ್ತೆ. ಈ ಹಿಂದೆ ಅವರು ನನಗೊಂದು ಭವಿಷ್ಯ ನುಡಿದಿದ್ದರು, ಅದನ್ನು ನಾನಿಲ್ಲಿ ಬಹಿರಂಗಪಡಿಸಿದರೆ ಇಡೀ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗುತ್ತದೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದರು.
"ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡುತ್ತೀರಿ ಎಂದು ದ್ವಾರಕನಾಥ್ ಅವರಿಗೆ ಕಳೆದ 25 ವರ್ಷಗಳಿಂದ ಅನೇಕರು ಧಮ್ಕಿ ಹಾಕುತ್ತಲೇ ಇದ್ದಾರೆ. ಆದರೆ ಅವರು ಯಾವತ್ತೂ ಇಂತಹ ಬೆದರಿಕೆಗಳಿಗೆ ಹೆದರಿದವರಲ್ಲ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸೇರಿದಂತೆ ಹಲವರು ಇವರ ಸಲಹೆ ಪಡೆದಿದ್ದಾರೆ" ಎಂದ ಡಿಕೆಶಿ, 90ರ ದಶಕದಲ್ಲಿ ಸ್ನೇಹಿತರೊಬ್ಬರ ಪತ್ನಿಯ ಭೀಕರ ಕ್ಯಾನ್ಸರ್ ಕಾಯಿಲೆಯ ಸಂದರ್ಭದಲ್ಲಿ ದ್ವಾರಕನಾಥ್ ಅವರು ಜಾತಕ ನೋಡಿ ನೀಡಿದ್ದ ಧೈರ್ಯ ಹಾಗೂ ಧಾರ್ಮಿಕ ಮಾರ್ಗದರ್ಶನದಿಂದ ಆ ಮಹಿಳೆ ಇಂದಿಗೂ ಸುಖವಾಗಿ ಬಾಳುತ್ತಿರುವುದನ್ನು ನೆನಪಿಸಿಕೊಂಡರು.
ದೇವಾಲಯಗಳ ಮಹತ್ವದ ಬಗ್ಗೆ ಮಾತನಾಡಿದ ಸಿಎಂ, "ದೇವಾಲಯ ಎಂದರೆ ಅದು ಭಕ್ತಿ, ಸಂಸ್ಕಾರ ಮತ್ತು ಧರ್ಮದ ನೆಲೆವೀಡು. ಭಕ್ತ ಮತ್ತು ಭಗವಂತನ ನಡುವೆ ಭಾವನಾತ್ಮಕ ವಿನಿಮಯ ನಡೆಯುವ ಪವಿತ್ರ ಸ್ಥಳವಿದು. ಧರ್ಮ ಯಾವುದಾದರೂ ತತ್ವ ಒಂದೇ, ದೇವರೊಬ್ಬ ನಾಮ ಹಲವು ಎಂಬಂತೆ ನಾವೆಲ್ಲರೂ ಭಕ್ತಿಯ ಅಡಿಪಾಯದ ಮೇಲೆ ದೈವಕೃಪೆಯ ಗೋಪುರ ಕಟ್ಟಲು ಇಲ್ಲಿ ಸೇರಿದ್ದೇವೆ. ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮ ರಕ್ಷಿಸುತ್ತದೆ" ಎಂದು ಶ್ಲೋಕದ ಮೂಲಕ ವಿವರಿಸಿದರು.
ವಿಧಾನಸೌಧದ ಮೇಲಿರುವ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಸಾಲನ್ನು ಉಲ್ಲೇಖಿಸಿದ ಅವರು, ಒಬ್ಬರಿಂದಲೇ ದೇವಸ್ಥಾನ ಕಟ್ಟಲು ಸಾಧ್ಯವಿಲ್ಲ, ಸಾರ್ವಜನಿಕರೆಲ್ಲರೂ ಕೈಜೋಡಿಸಿ ಈ ಸುಬ್ರಮಣ್ಯೇಶ್ವರ ಸನ್ನಿಧಿಯನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಶೃಂಗೇರಿಯ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಸದಾ ನಮ್ಮ ಮೇಲಿದೆ ಎಂದು ಹೇಳಿ ನಾಡಿನ ಜನತೆಗೂ ಶುಭ ಹಾರೈಸಿದರು.












Click it and Unblock the Notifications