ಸಿಲಿಕಾನ್ ಸಿಟಿಯಲ್ಲಿ ಖಾಕಿ ಭರ್ಜರಿ ಬೇಟೆ: 3,840 ಮಂದಿ ಅರೆಸ್ಟ್, ₹322 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಸಂಕಲ್ಪ ತೊಟ್ಟಿರುವ ಬೆಂಗಳೂರು ನಗರ ಪೊಲೀಸರು, 2026 ನೇ ಸಾಲಿನಲ್ಲಿ ಡ್ರಗ್ ಪೆಡ್ಲರ್‌ಗಳು ಹಾಗೂ ಅಂತರರಾಷ್ಟ್ರೀಯ ಜಾಲದ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಈ ವರ್ಷದಲ್ಲಿ ಪೊಲೀಸರು ಬರೋಬ್ಬರಿ 2,936 ಎನ್‌ಡಿಪಿಎಸ್ (NDPS Act) ಕೇಸ್ ದಾಖಲಿಸಿಕೊಂಡಿದ್ದು, ಒಟ್ಟು 3,840 ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಬಂಧಿತರ ಪೈಕಿ 37 ಮಂದಿ ವಿದೇಶಿ ಪ್ರಜೆಗಳೂ ಇದ್ದು, ಈ ಜಾಲದ ಹಿಂದೆ ಹೊರದೇಶಗಳ ನಂಟು ಇರುವುದು ಕೂಡ ಬೆಳಕಿಗೆ ಬಂದಿದೆ.
ಏನೆಲ್ಲ ಡ್ರಗ್ಸ್ ಜಪ್ತಿ?
ಈ ಭರ್ಜರಿ ಕಾರ್ಯಾಚರಣೆಗಳ ಮೂಲಕ ಇಡೀ ಸಪ್ಲೈ ಚೈನ್‌ಗೆ ಬ್ರೇಕ್ ಹಾಕಿರುವ ಖಾಕಿ ಪಡೆ, ಮಾರುಕಟ್ಟೆಯಲ್ಲಿ ಬರೋಬ್ಬರಿ ₹322.92 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಐಟಿ ಸಿಟಿಯ ಯುವಕರನ್ನು ಗುರಿಯಾಗಿಸಿಕೊಂಡು ಸಾಗಿಸಲಾಗುತ್ತಿದ್ದ ಅತ್ಯಂತ ದುಬಾರಿ ಹಾಗೂ ಮಾರಕ ಡ್ರಗ್ಸ್ ಅನ್ನು ದಾಳಿಗಳ ವೇಳೆ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಎಂಡಿಎಂಎ (MDMA Crystals/Powder), ಕೊಕೇನ್ (Cocaine), ಎಕ್ಸ್‌ಟಸಿ ಮಾತ್ರೆಗಳು (Ecstasy Pills), ಹೈಡ್ರೋ ಗಾಂಜಾ ಇದ್ದವು.

ಕಳೆದ ಜೂನ್ 3ರಿಂದ ಜುಲೈ 9ರ ನಡುವಿನ ಕೇವಲ ಒಂದೂವರೆ ತಿಂಗಳ ಅವಧಿಯಲ್ಲೇ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 565 ದೂರುಗಳನ್ನು ದಾಖಲಿಸಿದ್ದಾರೆ. ಈ ವೇಳೆ 729 ಭಾರತೀಯರು ಹಾಗೂ 11 ವಿದೇಶಿ ಗ್ಯಾಂಗ್ ಸದಸ್ಯರನ್ನು ಒಳಗೊಂಡಂತೆ ಒಟ್ಟು 740 ಜನರನ್ನು ಬಂಧಿಸಲಾಗಿದೆ. ಈ ಅಲ್ಪ ಅವಧಿಯಲ್ಲೇ ₹92.86 ಕೋಟಿ ಮೌಲ್ಯದ 205 ಕೆಜಿಗೂ ಅಧಿಕ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
ನೆರವಾಯ್ತು 'ರೈಸ್' (RISE) ಅಭಿಯಾನ
ಜುಲೈ 1ರಂದು ಬೆಂಗಳೂರು ಪೊಲೀಸರು ಹಮ್ಮಿಕೊಂಡ "ಸೇ ನೋ ಟು ಡ್ರಗ್ಸ್" ಮತ್ತು RISE ಜಾಗೃತಿ ಅಭಿಯಾನದ ನಂತರ ಕಾರ್ಯಾಚರಣೆ ಮತ್ತಷ್ಟು ಚುರುಕುಪಡೆದುಕೊಂಡಿತ್ತು. ಅಭಿಯಾನ ಆರಂಭವಾದ ಕೇವಲ 9 ದಿನಗಳ ಅವಧಿಯಲ್ಲೇ ಪೊಲೀಸರು ಇಡೀ ನಗರದಾದ್ಯಂತ ಮಿಂಚಿನ ದಾಳಿ ನಡೆಸಿ 135 ಪ್ರಕರಣಗಳನ್ನು ದಾಖಲಿಸಿದ್ದಾರೆ. ಐದು ಜನ ವಿದೇಶಿಗರು ಸೇರಿದಂತೆ 161 ಪೆಡ್ಲರ್‌ಗಳನ್ನು ಅರೆಸ್ಟ್ ಮಾಡಲಾಗಿದ್ದು, ₹63.44 ಕೋಟಿ ಮೌಲ್ಯದ 49 ಕೆಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ರೈಸ್ ಕರ್ನಾಟಕ' ಹಾಗೂ ಸಿಟಿ ಪೊಲೀಸರ #BedaBro (#ಬೇಡಬ್ರೋ) ಅಭಿಯಾನದ ಅಡಿಯಲ್ಲಿ ಕಾರ್ಯಾಚರಣೆ ನಡೆಸಿರುವ ಖಾಕಿ ಪಡೆ, ಅಂತರರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಕ್ ಹೊಂದಿದ್ದ ಬೃಹತ್ ಮಾದಕ ದ್ರವ್ಯ ಜಾಲವನ್ನು ಬೇಟೆಯಾಡಿದೆ. ಇತ್ತೀಚಿನ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದರು.
ನಾಲ್ವರು ನೈಜೀರಿಯಾ ನಾಗರಿಕರು ಹಾಗೂ ಒಬ್ಬ ದಕ್ಷಿಣ ಆಫ್ರಿಕಾದ ಪ್ರಜೆ ಸೇರಿದಂತೆ ಒಟ್ಟು 5 ಜನ ಅಂತರರಾಷ್ಟ್ರೀಯ ಪೆಡ್ಲರ್‌ಗಳು ಅರೆಸ್ಟ್ ಆಗಿದ್ದು, ಮಣಿಪುರ ಮೂಲದ ಒಬ್ಬ ಆರೋಪಿ, ಬೆಂಗಳೂರು ನಿವಾಸಿಗಳಾಗಿರುವ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದರು. ದಾಳಿ ಮಾಡಿದಾಗ ಸಿಕ್ಕಿರುವ ಮಾದಕ ವಸ್ತುಗಳ ಪ್ರಮಾಣ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು.
29 ಕೆಜಿ ತೂಕದ ಹೈ-ಕ್ವಾಲಿಟಿ ಎಂಡಿಎಂಎ, 20 ಗ್ರಾಂ ಕೊಕೇನ್ ಹಾಗೂ 1,000 ಎಕ್ಸ್‌ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಪ್ತಿಯಾದ ಈ ಡ್ರಗ್ಸ್‌ನ ಮೂಲ ಮೌಲ್ಯ ₹30.43 ಕೋಟಿ ಎಂದು ಅಂದಾಜಿಸಲಾಗಿದ್ದು, ಇದರ ಅಸಲಿ ಮೌಲ್ಯ ಬರೋಬ್ಬರಿ ₹60.86 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಪೊಲೀಸರು ತಿಳಿಸಿದ್ದರು.
ಈ ಯಶಸ್ವಿ ಕಾರ್ಯಾಚರಣೆಗಳ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, "ಬೆಂಗಳೂರಿನ ಯುವ ಪೀಳಿಗೆಯನ್ನು ಡ್ರಗ್ಸ್ ಎಂಬ ಮಹಾಮಾರಿಯಿಂದ ರಕ್ಷಿಸಲು ನಮ್ಮ ಪಡೆ ಬದ್ಧವಾಗಿದೆ. ಈ ಡ್ರಗ್ಸ್ ಜಾಲದ ಮೂಲ ಹಾಗೂ ಸರಬರಾಜು ಲಿಂಕ್‌ಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಸಮುದಾಯಗಳು ಈ ಅಭಿಯಾನಕ್ಕೆ ಕೈಜೋಡಿಸಿರುವುದರಿಂದ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications