ರೇಷನ್ ಕಾರ್ಡ್, ವೋಟರ್ ಐಡಿ ಪಡೆದು ಚಿಕ್ಕಬಳ್ಳಾಪುರದಲ್ಲಿ ಬಿಂದಾಸ್ ಲೈಫ್; ಪಾಕಿಸ್ತಾನಿ ಪ್ರಜೆಗಳು ಸಿಕ್ಕಿಬಿದ್ದಿದ್ದೇ ರೋಚಕ
ಬೆಂಗಳೂರು: ಕಾನೂನುಬಾಹಿರವಾಗಿ ಭಾರತೀಯ ಪೌರತ್ವದ ಪ್ರಮುಖ ದಾಖಲೆಗಳನ್ನು ಪಡೆದುಕೊಂಡು ತಮ್ಮ ಅಸಲಿ ರಾಷ್ಟ್ರೀಯತೆಯನ್ನು ಮರೆಮಾಚಿ ಕರ್ನಾಟಕದಲ್ಲಿ ನೆಲೆಸಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿರುವ ಇವರನ್ನು ಫರಾ ನಾಜ್ (Farah Naz) ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ (Mohammed Fardeen) ಎಂದು ಗುರುತಿಸಲಾಗಿದೆ.
ಪಡಿತರ ಚೀಟಿ, ವೋಟರ್ ಐಡಿ ಕಾರ್ಡ್ ಜಪ್ತಿ
ರಾಜ್ಯದಲ್ಲಿ ವಿದೇಶಿ ಪ್ರಜೆಗಳ ಅಕ್ರಮ ವಾಸ್ತವ್ಯ ಹಾಗೂ ನಕಲಿ ದಾಖಲೆಗಳ ಸೃಷ್ಟಿ ಜಾಲದ ಮೇಲೆ ತೀವ್ರ ನಿಗಾ ಇರಿಸಿರುವ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಕಾನೂನುಬಾಹಿರವಾಗಿ ನೆಲೆಸಲು ಸ್ಥಳೀಯ ಪ್ರಭಾವಿ ವ್ಯವಸ್ಥೆ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಾವು ಪಾಕಿಸ್ತಾನದವರು ಎಂಬ ಸತ್ಯವನ್ನು ಸಂಪೂರ್ಣವಾಗಿ ಮುಚ್ಚಿಟ್ಟು, ಭಾರತೀಯ ನಾಗರಿಕರ ಸೋಗಿನಲ್ಲಿ ಇವರು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದರು ಎನ್ನಲಾಗಿದೆ.

ತನಿಖೆಯ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಮೊಹಮ್ಮದ್ ಅಯೂಬ್ ಖಾನ್ ಎಂಬುವವರು ಕೆಲಸ ಹುಡುಕಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (ಯುಎಇ) ತೆರಳಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಪಾಕಿಸ್ತಾನಿ ಮೂಲದ ಮಹಿಳೆ ಫರಾ ನಾಜ್ ಪರಿಚಯವಾಗಿದ್ದು, ಇಬ್ಬರೂ ಅಲ್ಲೇ ವಿವಾಹವಾಗಿದ್ದರು. ಈ ದಂಪತಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದಾರೆ. ಈ ಪೈಕಿ ಈಗ ಪೊಲೀಸರ ವಶದಲ್ಲಿರುವ ಮೊಹಮ್ಮದ್ ಫರ್ದೀನ್ ಪಾಕಿಸ್ತಾನದಲ್ಲೇ ಜನಿಸಿದ್ದ ಎಂಬ ಸತ್ಯ ತನಿಖೆಯ ವೇಳೆ ಬಯಲಾಗಿದೆ.
ಸುಳ್ಳು ಹೇಳಿ ರೇಷನ್ ಕಾರ್ಡ್ ಪಡೆದಿದ್ದರು
ಈ ಪಾಕಿಸ್ತಾನಿ ಪ್ರಜೆಗಳು ಸ್ಥಳೀಯ ದಾಖಲೆಗಳನ್ನು ಪಡೆದಿರುವ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸರಿಗೆ ಅನುಮಾನ ಬಂದು ಸ್ಪಷ್ಟನೆ ಕೇಳಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಗಳು ಇವರ ಎಲ್ಲ ದಾಖಲೆಗಳನ್ನು ಜಾಲಾಡಿದ್ದಾರೆ. ಈ ವೇಳೆ ಇವರು ತಮ್ಮ ಅಸಲಿ ರಾಷ್ಟ್ರೀಯತೆ ಹಾಗೂ ಪೌರತ್ವದ ಸಂಗತಿಗಳನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟು ವಂಚನೆಯ ಮೂಲಕ ರೇಷನ್ ಕಾರ್ಡ್ ಪಡೆದುಕೊಂಡಿರುವುದು ಸಾಬೀತಾಗಿದೆ. ವಿಷಯ ಖಚಿತವಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಇವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಿದ್ದಾರೆ. ಇತ್ತ ಮತದಾರರ ಗುರುತಿನ ಚೀಟಿಯನ್ನು (ವೋಟರ್ ಐಡಿ) ಸಹ ಸಕ್ಷಮ ಪ್ರಾಧಿಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಸಿಂಧುಗೊಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇವರು ಎಷ್ಟು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರು? ಚಿಕ್ಕಬಳ್ಳಾಪುರಕ್ಕೆ ಬರಲು ಇವರಿಗೆ ಸ್ಥಳೀಯವಾಗಿ ಯಾರು ಸಹಾಯ ಮಾಡಿದ್ದರು? ಮತ್ತು ವೋಟರ್ ಐಡಿ ಹಾಗೂ ರೇಷನ್ ಕಾರ್ಡ್‌ಗಳನ್ನು ಮಾಡಿಸಿಕೊಟ್ಟ ಆ ದಲ್ಲಾಳಿಗಳು ಯಾರು? ಎಂಬ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಸದ್ಯ ವಿದೇಶಿ ಪ್ರಜೆಗಳ ಕಾಯ್ದೆ ಹಾಗೂ ವಂಚನೆ ಪ್ರಕರಣದ ಅಡಿಯಲ್ಲಿ ಇಬ್ಬರ ಮೇಲೂ ದೂರು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಡಿ ಭಾಗದ ಜಿಲ್ಲೆಯೊಂದರಲ್ಲಿ ಇಂತಹ ಸೂಕ್ಷ್ಮ ಘಟನೆ ನಡೆದಿರುವುದು ಸ್ಥಳೀಯ ಆಡಳಿತ ಹಾಗೂ ಭದ್ರತಾ ಸಂಸ್ಥೆಗಳನ್ನು ಮತ್ತಷ್ಟು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.












Click it and Unblock the Notifications