Karnataka Weather: ಕೈಕೊಟ್ಟ ಮುಂಗಾರು, ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ 3 ದಿನ ಮಳೆ ಮುನ್ಸೂಚನೆ
Karnataka Rains: ರಾಜ್ಯದಲ್ಲಿ ಸದ್ಯ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮತ್ತೆ ಕೈಕೊಟ್ಟಿದೆ. ಕೆಲವೆಡೆ ಮಾತ್ರ ಧಾರಾಕಾರ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಮೂರು ದಿನ ಈ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಗಮನಿಸಿ.
ರಾಜ್ಯ ರಾಜಧಾನಿ ಬೆಂಗಳೂರಿನ ಕೆಲವೆಡೆ ಸೋಮವಾರ (ಜುಲೈ 13) ಬೆಳಗ್ಗೆ ಮೋಡ ಕವಿದ ವಾತಾವರಣ ಇದೆ. ನಗರದ ಹಲವೆಡೆ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಭಾನುವಾರ ನಗರದಲ್ಲಿ ಬಹುತೇಕ ಮಳೆ ಕ್ಷೀಣಿಸಿದ್ದು, ಬಿಸಿಲಿನ ವಾತಾವರಣವೇ ಮುಂದುವರೆದಿತ್ತು.

ಬೆಂಗಳೂರಿನ ಹವಾಮಾನದ ವಿವರ
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆಯೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಮುನ್ಸೂಚನೆ ಇದೆ.
ಮುಂದಿನ ಮೂರು ದಿನ ಮಳೆ ಮುನ್ಸೂಚನೆ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಹಾಗೂ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಉಳಿದಂತೆ ದಕ್ಷಿಣ ಒಳನಾಡಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ ಚಾಮರಾಜನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಮನಗರ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದ್ದು, ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರೆಯಲಿದೆ. ಇನ್ನೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಗದಗ, ಧಾರವಾಡ ಮೋಡ ಒಣಹವೆ ಮುಂದುವರೆಯಲಿದ್ದು, ಅಲ್ಲಲ್ಲಿ ತುಂತು ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮಲೆನಾಡು, ಕರಾವಳಿ ಜಿಲ್ಲೆಗಳ ಭಾಗಗಳಲ್ಲಿ ಮಾತ್ರ ಭಾರೀ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದ್ದರೆ, ಉತ್ತರ ಒಳನಾಡಿನ ಕೆಲವೆಡೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವೆಡೆ ಸುರಿದ ಭಾರಿ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿತ್ತು.
ಮಳೆ ಕೈಕೊಟ್ಟ ಆತಂಕದಲ್ಲಿ ರೈತ
ಆದರೆ ಇದೀಗ ಅದೇ ಆಡಿದ್ದೇ ಆಟ ಎಂಬಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಮತ್ತೆ ಕೈಕೊಟ್ಟಿದ್ದು, ಕೃಷಿಕರು, ಜನರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಈಗಲೇ ಹೀಗೆ ಆದ್ರೆ ಇನ್ನೂ ಮುಂಗಾರು ಅವಧಿ ಮುಗಿದ ಮೇಲೆ ಇನ್ನೇನು ಗತಿ ಕಾದಿದೆಯೋ ಎನ್ನುವ ಆತಂಕದಲ್ಲಿದ್ದಾರೆ.
ಈ ನಡುವೆಯೇ ಹವಾಮಾನ ಇಲಾಖೆ ಆತಂಕದ ವಿಚಾರ ಹೊರಹಾಕಿದ್ದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇಷ್ಟೊತ್ತಿಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಬೇಕಿತ್ತು. ಆದರೆ ಈ ವಾಡಿಕೆಯಷ್ಟು ಕೂಡ ಮಳೆ ಸುರಿಯುತ್ತಿಲ್ಲ. ಇದೇ ಚಿಂತೆಗೆ ಒಳಗಾಗುವಂತೆ ಮಾಡಿದೆ. ಇಂತಹ ಸನ್ನಿವೇಷದಲ್ಲೂ ಕೆಲವೆಡೆ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸಪಡುವ ವಿಚಾರವಾಗಿದೆ. ಒಟ್ಟಿನಲ್ಲಿ ಮಳೆರಾಯನ ಆರ್ಭಟ ಮತ್ತೆ ಯಾವಾಗ ಶುರುವಾಗಲಿದೆಯೋ ಎಂದು ರಾಜ್ಯದ ಜನ ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications