'ಯುವರತ್ನ' ಬೆಡಗಿಯ ಪತಿ, ಸ್ಟಾರ್‌ ನಟನ ವಿರುದ್ಧ ದಾಖಲಾಯ್ತು ಕೇಸ್‌, ಏನಿದು ₹1.80 ಕೋಟಿ ಹಿಂದಿರುವ ಕಥೆ

ತೆರೆಯ ಮೇಲೆ ಹೀರೋ ಆಗಿ ಮಿಂಚುವ ಸ್ಟಾರ್‌ಗಳು ರಿಯಲ್ ಲೈಫ್‌ನಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಿರುವುದು ಹೊಸದೇನಲ್ಲ. ಈಗ ಇದೇ ಸಾಲಿಗೆ ಮತ್ತೊಬ್ಬ ನಟ ಸೇರಿದ್ದಾರೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿ, ಕೆಲಸ ಮುಗಿದ ನಂತರ ನಯಾಪೈಸೆ ಕೊಡದೆ ಸತಾಯಿಸಿದ ಆರೋಪದ ಮೇಲೆ ತಮಿಳಿನ ಖ್ಯಾತ ನಟ ಹಾಗೂ ಅವರ ಇಡೀ ಚಿತ್ರತಂಡದ ವಿರುದ್ಧ ಕೇಸ್ ದಾಖಲಾಗಿದೆ. ಬಾಕಿ ಹಣ ಕೇಳಲು ಹೋದವರಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಸಿನಿಮಾದಲ್ಲಿ ಮಿಂಚಿದ್ದ ನಟಿಯ ಪತಿಯೂ ಆಗಿರುವ ಈ ನಟ ಯಾರು? ಈ ಕೇಸ್‌ ಕಥೆ ಏನು ಎಂಬ ವಿವರ ಇಲ್ಲಿದೆ.

ತಮಿಳು ನಟ ಆರ್ಯ (Arya) ಯಾರಿಗೆ ತಾನೇ ಗೊತ್ತಿಲ್ಲ. ಈ ನಟ ನಮ್ಮ ಹೆಮ್ಮೆಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ 'ಯುವರತ್ನ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸಯೇಶಾ ಸೈಗಲ್ (Sayyeshaa) ಅವರ ಪತಿ ಕೂಡ. ಈತ ತಮಿಳು ಹೀರೋ ಆದ್ರೂ ತೆಲುಗು ನೆಲದಲ್ಲೂ ವಿಲನ್‌ ಆಗಿಯೂ ಅಬ್ಬರಿಸಿದ್ದರು. ಈಗ ಅವರಿಗೆ ಅದೇ ತೆಲುಗು ನೆಲದಲ್ಲಿ ದೊಡ್ಡ ಕಾನೂನು ಸಂಕಷ್ಟ ಎದುರಾಗಿದೆ. ಶೂಟಿಂಗ್‌ಗಾಗಿ ಬಾಡಿಗೆಗೆ ಪಡೆದಿದ್ದ ಕ್ಯಾಮೆರಾ ಹಾಗೂ ಲೈಟಿಂಗ್ ಉಪಕರಣಗಳ ಕೋಟ್ಯಂತರ ರೂಪಾಯಿ ಬಾಕಿ ಹಣ ಪಾವತಿಸದೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಟ ಆರ್ಯ ಮತ್ತು ಅವರ ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Tamil Actor Arya

ಏನಿದು ₹1.80 ಕೋಟಿ ವಂಚನೆ ಕಥೆ?

ನಟ ಆರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಅನಂತನ್ ಕಾಡು' ಎಂಬ ಸಿನಿಮಾದ ಶೂಟಿಂಗ್‌ಗಾಗಿ ಹೈದರಾಬಾದ್ ಮೂಲದ ಖ್ಯಾತ ಪ್ರೀಮಿಯಂ ಡಿಜಿಟಲ್ ಕ್ಯಾಮೆರಾ ಮತ್ತು ಲೈಟಿಂಗ್ ಉಪಕರಣಗಳ ಬಾಡಿಗೆ ಸಂಸ್ಥೆಯಿಂದ ಕಾಂಟ್ರಾಕ್ಟ್ ಆಧಾರದ ಮೇಲೆ ಪರಿಕರಗಳನ್ನು ಪಡೆಯಲಾಗಿತ್ತು. ಶೂಟಿಂಗ್ ಮುಗಿದ ತಕ್ಷಣ ಯಾವುದೇ ತಡ ಮಾಡದೆ ಸಂಪೂರ್ಣ ಹಣ ಪಾವತಿಸುವುದಾಗಿ ನಿರ್ಮಾಪಕ ವಿನೋದ್ ಹಾಗೂ ನಟ ಆರ್ಯ ಭರವಸೆ ನೀಡಿದ್ದರು ಎನ್ನಲಾಗಿದೆ.

ಆದರೆ ದೂರಿನ ಪ್ರಕಾರ, ಇವರು ಹೈದರಾಬಾದ್‌ನಿಂದ ಕೇರಳದ ಶೂಟಿಂಗ್ ಸ್ಪಾಟ್‌ಗೆ ಸ್ವಂತ ಖರ್ಚಿನಲ್ಲಿ ಉಪಕರಣಗಳನ್ನು ಸಾಗಿಸಿಕೊಟ್ಟಿದ್ದಲ್ಲದೆ, ಇಡೀ ಶೂಟಿಂಗ್ ಮುಗಿಯುವವರೆಗೂ ತಾಂತ್ರಿಕ ಸಿಬ್ಬಂದಿಯ ನೆರವನ್ನೂ ನೀಡಿತ್ತು. ಶೂಟಿಂಗ್ ಮುಗಿದ ನಂತರ ಸಂಸ್ಥೆಯು ಒಟ್ಟು ₹2.12 ಕೋಟಿ ರೂಪಾಯಿಗಳ ಬಿಲ್ ನೀಡಿದೆ. ಆದರೆ ಚಿತ್ರತಂಡ ಕೇವಲ ಅಲ್ಪ ಪ್ರಮಾಣದ ಮುಂಗಡ ಹಣ ಮಾತ್ರ ಪಾವತಿಸಿದ್ದು, ₹1.80 ಕೋಟಿಗಿಂತಲೂ ಅಧಿಕ ಬಾಕಿ ಹಣವನ್ನು ಕೊಡದೆ ಸತಾಯಿಸಿದೆ ಎಂದು ಸಂಸ್ಥೆ ಆರೋಪಿಸಿದೆ.

ಉಪಕರಣಗಳ ಬಾಡಿಗೆ ಸಂಸ್ಥೆಯ ಪ್ರಕಾರ, ನಿರ್ಮಾಪಕರು ಬಾಕಿ ಹಣ ಇರುವುದನ್ನು ಲಿಖಿತವಾಗಿ ಒಪ್ಪಿಕೊಂಡಿದ್ದರು. ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಸಂಪೂರ್ಣ ಸೆಟಲ್‌ಮೆಂಟ್ ಮಾಡಿಕೊಡುವುದಾಗಿಯೂ ಬರೆದುಕೊಟ್ಟಿದ್ದರು. ಆದರೆ ದಿನ ಕಳೆದಂತೆ ನಯಾಪೈಸೆ ಹಣ ಬಾರದಿದ್ದಾಗ ಸಂಸ್ಥೆಯು ಫೋನ್ ಕರೆಗಳು, ವಾಟ್ಸಾಪ್ ಸಂದೇಶಗಳ ಮೂಲಕ ಹತ್ತಾರು ಬಾರಿ ಅವರನ್ನು ಸಂಪರ್ಕಿಸಿತ್ತು. ಆದರೂ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ.

ಮ್ಯಾನೇಜರ್‌ಗೆ ಬೆದರಿಕೆ ಹಾಕಿದ್ರಾ ಆರ್ಯ

ಇನ್ನು ಬಾಕಿ ಹಣ ವಸೂಲಿಗಾಗಿ ಸಂಸ್ಥೆಯ ಮ್ಯಾನೇಜರ್ ಅವರು ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಲು ಹೋದಾಗ, ನಟ ಆರ್ಯ, ನಿರ್ಮಾಪಕ ವಿನೋದ್ ಹಾಗೂ ಅವರ ಸಹಾಯಕ ಸೇರಿಕೊಂಡು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಬೇಸತ್ತ ಸಂಸ್ಥೆಯು ಜುಬಿಲಿ ಹಿಲ್ಸ್ ಪೊಲೀಸರ ಮೊರೆ ಹೋಗಿದೆ. ದೂರಿನ ಹಿನ್ನೆಲೆಯಲ್ಲಿ ಜುಬಿಲಿ ಹಿಲ್ಸ್ ಪೊಲೀಸರು ನಟ ಆರ್ಯ ಹಾಗೂ ನಿರ್ಮಾಪಕರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಕೇಸ್‌ ದಾಖಲಿಸಿಕೊಂಡಿದ್ದಾರೆ. ಸಂಸ್ಥೆ ನೀಡಿರುವ ಒಪ್ಪಂದದ ಪತ್ರ ಮತ್ತು ಬಿಲ್‌ ಪರಿಶೀಲಿಸುತ್ತಿರುವ ಪೊಲೀಸರು, ಶೀಘ್ರದಲ್ಲೇ ನಟ ಆರ್ಯ ಮತ್ತು ತಂಡಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಈ ಆರೋಪಗಳ ಕುರಿತು ನಟ ಆರ್ಯ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+