Namma metro: ನಮ್ಮ ಮೆಟ್ರೋ ತಾಂತ್ರಿಕ ದೋಷವನ್ನು ಬಿಂಬಿಸಿದ ಮಾಧ್ಯಮಗಳಿಗೆ ಈ ಮಹಿಳೆ ಹೇಳಿದ್ದೇನು ಗೊತ್ತಾ?
ಬೆಂಗಳೂರು, ಫೆಬ್ರವರಿ, 20: ತಾಂತ್ರಿಕ ದೋಷ ಹಿನ್ನೆಲೆ ಬೈಯಪ್ಪನಹಳ್ಳಿ-ಗರುಡಾಚಾರ್ ಪಾಳ್ಯ ನಿಲ್ದಾಣಗಳ ನಡುವೆ ಇಂದು (ಫೆಬ್ರವರಿ 20) ಬೆಳಗ್ಗೆ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇನ್ನು ಈ ಬಗ್ಗೆ ರೇಣುಕಾ ಮಂಜುನಾಥ್ ಎಂಬ ಮಹಿಳೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
"ನಮ್ಮ ಬೆಂಗಳೂರಿನಲ್ಲಿ 'ಮೆಟ್ರೋ' ಕೊಡುತ್ತಿರುವ ಸೇವೆ ಅದ್ಭುತವಾಗಿದೆ! ಇದು ಜನರಿಗೆ ಬೆಂಗಳೂರಿನ ಭೂಗೋಳದ ಅಂತರವನ್ನು ಕಡಿಮೆ ಮಾಡಿದೆ. ಮೊದಲು ಬೆಂಗಳೂರು ಉತ್ತರದವರಿಗೆ ದಕ್ಷಿಣಕ್ಜೆ ಹೋಗುವುದು ಬಹಳ ಪ್ರಯಾಸವಾಗುತ್ತಿತ್ತು. ಈಗ ಮೆಟ್ರೋದಿಂದಾಗಿ, ಬೆಂಗಳೂರು ಉತ್ತರದಲ್ಲಿ ರಿಯಲ್ ಎಸ್ಟೇಟ್ ಧರಗಳೂ ಹೆಚ್ಚುತ್ತಿವೆ. ಇಲ್ಲಿನ ಬಾಡಿಗೆ ಸಹಾ ಹೆಚ್ಚಿದೆ. ಐಟಿ ಉದ್ಯೋಗಿಗಳಿಗಂತೂ ಎಲ್ಲಿ ಬೇಕಾದರೂ ಮನೆ ಮಾಡಿಕೊಂಡಿರುವಂತಾಗಿದೆ. ಏರ್‌ಪೋರ್ಟ್ ಮೆಟ್ರೋ ಕೆಲಸ ಮುಗಿದರೆ ಆ ಭಾಗದ ಚಿತ್ರಣವೇ ಬದಲಾಗುತ್ತದೆ," ಎಂದು ಬರೆದುಕೊಂಡಿದ್ದಾರೆ.

ಇಷ್ಟೆಲ್ಲಾ ಇರುವಾಗ ಆಗೊಮ್ಮೆ ಈಗೊಮ್ಮೆ ಉಂಟಾಗುವ ತಾಂತ್ರಕ ಸಮಸ್ಯೆಯಿಂದಾಗಿ ಕೆಲವು ಗಂಟೆಗಳ ವ್ಯತ್ಯಯವನ್ನು ನಮ್ಮ ಚಾನಲ್‌ಗಳು ಭೂಕಂಪವಾದಂತೆ ತೋರಿಸುತ್ತಿರುತ್ತವೆ. ಅಲ್ಲಿ ನಿಂತಿರುವವರ ಬಳಿ ಹೋಗಿ "ಹೇಳಿ, ಹೇಳಿ ನಿಮಗೆಷ್ಟು ಸಮಸ್ಯೆ." ಅನ್ನುತ್ತಾರೆ! ಅವರೇ ಕೂಲ್ ಆಗಿದ್ದರೆ, ಇವರಿಗಾಗುವ ನಿರಾಶೆ ನೋಡಬೇಕು..ಮತ್ತಷ್ಟು ಕೆದಕುವರು!
ಈಗ ಸ್ಲಂಗಳ ಅಕ್ಕಪಕ್ಕ ಒಳಚರಂಡಿ ಅಧ್ವಾನ, ನೀರಿನ ಸಮಸ್ಯೆ, ಆಸ್ಪತ್ರೆಗಳಲ್ಲಿನ ಸಮಸ್ಯೆ, ಶಾಲೆಗಳ ಸಮಸ್ಯೆ, ತರಕಾರಿ ಮಾರ್ಕೆಟ್‌ಗಳ ಸಮಸ್ಯೆ, ಕಳ್ಳರ ಸಮಸ್ಯೆ ಹೀಗೆ ಬಹಳಷ್ಟಿದೆ. ಆರ್‌ಟಿಒ, ಸಬ್ ರಿಜಿಸ್ಟ್ರಾರ್ ಕಛೇರಿ ಮುಂತಾದ ಕಡೆ ಇರುವ ಈ ದಲ್ಲಾಳಿಗಳ ಶೋಷಣೆ ಬಗ್ಗೆ ತೋರಿಸಿ. ಅಲ್ಲೆಲ್ಲಾ ಹೋಗಿ ಸಮಸ್ಯೆ ಬಿಂಬಿಸಿದರೆ ಸಾಕು.
ಈ ಮೆಟ್ರೋ ಸಮಸ್ಯೆ , ವಿಶ್ವದ ಅತೀ ಪುರಾತನವೆನಿಸಿಕೊಂಡ ಲಂಡನ್‌ನಲ್ಲಿ ಇಲ್ಲಿಗಿಂತಾ ಹೆಚ್ಚಾಗಿದೆ. ಬಹಳಷ್ಟು ಸಾರಿ ಅಲ್ಲಿ ಮೆಟ್ರೊ ರೈಲುಗಳೇ ಕ್ಯಾನ್ಸಲ್ ಆಗಿಬಿಡುತ್ತವೆ! ಕೆಲವೊಮ್ಮೆ ಅಲ್ಲಿಪ್ರಾಮಾಣಿಕವಾಗಿ ಬೋರ್ಡ್ ಹಾಕಿದ್ದನ್ನು ನೋಡಿದ್ದೇನೆ! ವ್ಯತ್ಯಯಕ್ಕೆ ಕಾರಣ staff shortage!
ಸ್ವಚ್ಛತೆ , ಶಿಸ್ತು ಮೊದಲ್ಗೊಂಡು ಅನೇಕ ವಿಷಯಗಳಲ್ಲಿ ನಮ್ಮ ಮೆಟ್ರೋ ಅಲ್ಲಿಗಿಂತಾ ಚಂದವಾಗಿದೆ. ಆರಂಭವಾಗಿ ಕೆಲವೇ ವರ್ಷಗಳಾಗಿದೆ. ನಮ್ಮದೂ ಅವರಷ್ಟೇ ವಿಭಿನ್ನ ಸೇವೆ ಒದಗಿಸುವ ಹಂತ ತಲುಪುವುದರಲ್ಲಿ ಸಂಶಯವೇ ಇಲ್ಲ. ಮುಖ್ಯವಾಗಿ ನಮ್ಮ ಮೆಟ್ರೋ, ಸಿಲಿಕಾನ್ ವಿಷಯಕ್ಕೆ ಮತ್ತೊಂದಕ್ಕೆ ಒಂದೇ ಕಡೆ ಕೇಂದ್ರಿತಗೊಂಡಿದ್ದ ವಸತಿ ವಾಸ್ತವ್ಯಗಳು ವಿಕೇಂದ್ರಿತಗೊಂಡು ನಗರದ ಜನಜೀವನದ ಸಾಂದ್ರತೆ ನಗರದಾದ್ಯಂತ ಹರಡಿಕೊಳ್ಳುತ್ತಿದೆ. ಇದು ಮೆಟ್ರೊ ತಂದ ಮೌನ ಕ್ರಾಂತಿ!
ಮೀಡಿಯಾದವರು ತಮ್ಮೆಲ್ಲಾ ಶಕ್ತಿ, ಸಾಮರ್ಥ್ಯವನ್ನು ಇಂತಹ ಕಡೆ ವ್ಯಯಿಸುವುದನ್ನು ಬಿಟ್ಟು, ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆಗಳು ಯಾವ ರೀತಿ ಇವೆ ಎಂದು ಈ ಫೇಸ್‌ಬುಕ್ ಖಾತೆಯ ಕಮೆಂಟ್ ಬಾಕ್ಸ್‌ನಲ್ಲಿ ಗಮನಿಸಿ.












Click it and Unblock the Notifications