ಧಾರವಾಡ; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್, ಕಣದಲ್ಲಿ 17 ಮಂದಿ
ಧಾರವಾಡ, ಏಪ್ರಿಲ್ 23: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಆತಂಕ ಮೂಡಿಸಿದ್ದರು. ಆದರೆ ಅವರು ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ.
ಮೇ 7ರಂದು ಧಾರವಾಡ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಚುನಾವಣಾ ಚಿತ್ರಣದ ಮಾಹಿತಿ ನೀಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 25 ನಾಮಪತ್ರಗಳು ಸಲ್ಲಿಕೆಯಾಗಿದ್ದವು. 25 ಅಭ್ಯರ್ಥಿಗಳಲ್ಲಿ 8 ಅಭ್ಯರ್ಥಿಗಳು ಸೋಮವಾರ ನಾಮಪತ್ರ ಹಿಂಪಡೆದಿದ್ದಾರೆ.

ಅಂತಿಮವಾಗಿ ಧಾರವಾಡ ಲೋಕಸಭಾ ಚುನಾವಣಾ ಕಣದಲ್ಲಿ 17 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿತ್ತು. ಅದರಂತೆ ಒಟ್ಟು 8 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ.
ನಾಮಪತ್ರ ವಾಪಸ್ ಪಡೆದವರು: ಲೋಕಸಭೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಿ, ಅವುಗಳು ಕ್ರಮಬದ್ದವಾಗಿದ್ದ ವೀಣಾ ಜನಗಿ, ಪ್ರವೀಣಕುಮಾರ ಮಾದರ, ರವಿ ಪಟ್ಟಣಶೆಟ್ಟಿ, ರಿಯಾಜ ಶೇಖ, ದಿಂಗಾಲೇಶ್ವರ ಮಹಾಸ್ವಾಮಿಗಳು, ಶಿವಾನಂದ ಮುತ್ತಣ್ಣವರ, ರಾಜಶೇಖರಯ್ಯ ಕಂತಿಮಠ ಮತ್ತು ವೆಂಕಟೇಶ ಆಚಾರ್ಯ ಮಣ್ಣೂರ ಅವರು ತಮ್ಮ ಉಮೇದುವಾರಿಕೆ ವಾಪಸ್ ಪಡೆದರು.
ಅಂತಿಮವಾಗಿ ಧಾರವಾಡ ಚುನಾವಣಾ ಕ್ಷೇತ್ರದಿಂದ ಚುನಾವಣೆಗೆ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಭಾರತೀಯ ಜನತಾ ಪಾರ್ಟಿಯಿಂದ ಪ್ರಲ್ಹಾದ್ ಜೋಶಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ವಿನೋದ ಅಸೂಟಿ ಮತ್ತು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಕಿ ಭಾರತೀಯ ಏಕತಾ ಪಾರ್ಟಿಯಿಂದ ಜಾವೀದ ಅಹಮದ್ ಬೆಳಗಾಂವಕರ್, ಪ್ರಹಾರ ಜನಶಕ್ತಿ ಪಾರ್ಟಿಯಿಂದ ಟಾಕಪ್ಪ ಯಲ್ಲಪ್ಪ ಕಲಾಲ ಕಣದಲ್ಲಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕರೆಣ್ಣವರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬುಗಡಿ ಬಸವಲಿಂಗಪ್ಪ ಈರಪ್ಪ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಮಹಮ್ಮದ ಇಸ್ಮಾಯಿಲ್ ಮುಕ್ತಿ, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದಿಂದ ವಿನೋದ ದಶರಥ ಘೋಡಕೆ ಅಭ್ಯರ್ಥಿಗಳು.
ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)ಯಿಂದ ವೆಂಕಟೇಶ ಪ್ರಸಾದ ಎಚ್., ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದಿಂದ ಶರಣಬಸವ ಗೋನವಾರ ಮತ್ತು ಟಿಪ್ಪು ಸುಲ್ತಾನ ಪಾರ್ಟಿಯಿಂದ ಬಂಕಾಪುರ ಶೌಖತ್ ಅಲಿ ಅವರು ಕಣದಲ್ಲಿ ಉಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಗುರಪ್ಪ ಹೆಚ್.ಇಮ್ರಾಪೂರ, ಪ್ರವೀಣ ಹ.ಹತ್ತೆನವರ, ಬಾಳನಗೌಡ್ರ ಮಲ್ಲಿಕಾರ್ಜುನಗೌಡ, ರಾಜು ಅನಂತಸಾ ನಾಯಕವಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಮತ್ತು ಎಸ್.ಎಸ್.ಪಾಟೀಲ್ ಕಣದಲ್ಲಿದ್ದಾರೆ.
ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ನಿಯಮಗಳ ಅನುಸಾರ ಚಿಹ್ನೆಗಳ ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಹಲವು ನಾಯಕರು ಮನವಿ ಮಾಡಿದ್ದರು: ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಧಾರವಾಡ ಲೋಕಸಭಾ ಕ್ಷೇತರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿತ್ತು.
ಏಪ್ರಿಲ್ 18ರಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು, ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ದಿವ್ಯ ಪ್ರಭು ಅವರಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿಯ ಹಲವು ನಾಯಕರು ನಾಮಪತ್ರ ವಾಪಸ್ ಪಡೆಯುವಂತೆ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳಿಗೆ ಮನವಿ ಮಾಡಿದ್ದರು.












Click it and Unblock the Notifications