• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೊಫೆಸರ್ ಸಾಕಿದ ಲಾಸಿಯ ನಾಯಿ ಪಾಡು!

By * ಯಶ್
|

ಮೂಡಣ ದಿಕ್ಕಿನಲ್ಲಿ ಉದಯಿಸುವ ನೇಸರ ತನ್ನ ಹೊಂಗಿರಣಗಳನ್ನು ಭೂಮಿಯ ಮೇಲೆ ಪಸರಿಸುವುದು ಒಂದೆರಡು ಗಳಿಗೆ ತಡವಾದರೂ ಆಗಬಹುದು. ಆದರೆ, ಎದುರು ಮನೆಯ ಅರವತ್ತರ ಪ್ರೊಫೆಸರ್ ಪತ್ತಾರ್ ಅವರು ಪ್ರತಿನಿತ್ಯ ಮನೆಯಿಂದ ಕೂಗಳತೆಯ ದೂರದಲ್ಲಿರುವ ಮೈದಾನಕ್ಕೆ ಉತ್ತಮ ಹವಾ ಸೇವನೆಗೆ ಬರುವುದು ಎಂದೂ ಅತ್ತಿತ್ತಾಗುವುದಿಲ್ಲ.

ಬಿಳಿ ಟೀಶರ್ಟು, ಬಿಳಿ ಚಡ್ಡಿ, ಬಿಳಿ ಕ್ಯಾನ್ವಾಸ್ ಶೂಸು, ತಲೆಯ ಮೇಲೊಂದು ಟೋಪಿ, ಕೈಯಲ್ಲೊಂದು ಸ್ಟಿಕ್ಕು... ಬಿಳಿ ದಿರಿಸಿನ ಮೇಲೆ ಸಣ್ಣದೊಂದು ಕಪ್ಪುಚುಕ್ಕೆ ಅಂಟಿಕೊಳ್ಳಲೂ ಬಿಡಲಾರದಂಥ ಶಿಸ್ತು. ಮಿಲಿಟರಿ ಕಮಾಂಡರ್ ಕೂಡ ಬೇಸ್ತು ಬೀಳುವಂಥ ಕ್ರಮಬದ್ಧ ನಡಿಗೆ. ಒಂದೇ ವೇಗದ ನಡಿಗೆ, ಪರಿಚಿತರು ಕಂಡರೆ ಒಂದೇ ಬಗೆಯ ನಗೆ. ಶಿಸ್ತೆಂದರೆ ಇವರನ್ನು ನೋಡಿ ಕಲಿಯಬೇಕು ಎಂಬಷ್ಟರ ಮಟ್ಟಿಗೆ ಜೀವನಶೈಲಿಯನ್ನು ರೂಪಿಸಿಕೊಂಡಿದ್ದರು.

ಆದರೆ, ಇತ್ತೀಚೆಗೇಕೋ ಅವರ ನಡಿಗೆಯ ಧಾಟಿಯೇ ಬದಲಾಗಿ ಹೋಗಿದೆ. ಪ್ರತಿದಿನ ಆರೆಂದ್ರೆ ಆರಕ್ಕೆ ಬರುತ್ತಿದ್ದವರು ಈಗೀಗ ಏಳೆಂದ್ರೂ ನಾಪತ್ತೆ. ನಂತರ ಪತ್ತೆಯಾಗಿದ್ದು ಅವರೊಂದು ಕರೀ ಬಣ್ಣದ ನಾಯಿಮರಿ ತಂದಿದ್ದು. ನಿಯತ್ತಿನ ನಾಯಿ ಬಂದ ಮೇಲೆ ಅವರ ನಡಿಗೆಯ ನಿಯತ್ತೇ ಬದಲಾಗಿ ಹೋಯಿತು. ನಡೆಯುವಾಗ ಅದೇನೋ ಧಿಮಾಕು, ಸಿಕ್ಕವರೊಂದಿಗೆ ಮಾತನಾಡಿಸುವಾಗಲೂ ಅದ್ಯಾಕೋ ಕೊಂಕು. ಯಾವುದೋ ಜಾತಿಗೆ ನಾಯಿ ಸೇರಿದ್ದು ಅಂತ ಕೇಳಿದವರಿಗೂ, ಕೇಳದವರಿಗೂ ಹೇಳುತ್ತ ಸಾಗುತ್ತಿದ್ದರು. ನೋಡಿದ್ರೆ, ಅವರ ಮುದ್ದಿನ ನಾಯಿ ಯಾವುದೋ ಜಾತಿಯ ನಾಯಿ ಬೀದಿ ನಾಯಿಯೊಂದಿಗೆ ಮಿಲಾಕತ್ ಆಗಿ ಹುಟ್ಟಿದ ಹಾಗೆ ಕಾಣುತ್ತಿತ್ತು. ಅದರ ಹುಟ್ಟಿನ ಮೂಲ ಏನೇ ಆಗಿರಲಿ ಬಿಡಿ, ಅತ್ಲಾಗೆ.

ಲಾಸಿ ಅಂತ ಅದಕ್ಕೆ ನಾಮಕರಣ ಕೂಡ ಮಾಡಿದ್ದರು. ಆ ಹೆಸರು ಮುಂದೆ ಯಾವ ರೀತಿ ಪ್ರಸಿದ್ಧಿ ಗಳಿಸಿತೆಂದರೆ, ಸಣ್ಣ ಮಕ್ಕಳಷ್ಟೇ ಏಕೆ ದೊಡ್ಡವರು ಕೂಡ ಅವರ ಮನೆಯವರನ್ನು ಲಾಸಿ ಅಂಕಲ್ ಅಥವಾ ಲಾಸಿ ಮಾಮಾ, ಮನೆಮಂದಿಯನ್ನೆಲ್ಲ ಲಾಸಿ ಆಂಟಿ, ಲಾಸಿ ಅಜ್ಜಿ ಅಂತೆಲ್ಲ ಕರೆಯಲು ಶುರುಹಚ್ಚಿಕೊಂಡರು. ಇದಕ್ಕೆಲ್ಲ ಪ್ರೊಫೆಸರ್ ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಲಕ್ಷ್ಯವೇನಿದ್ದರೂ ಲಾಸಿಯ ಆರೈಕೆ, ಲಾಸಿಯನ್ನು ಮುದ್ದಿಸುವಿಕೆಯಲ್ಲಿಯೇ ಕಳೆದುಹೋಗುತ್ತಿತ್ತು. ಅದರ ಕೊರಳಿಗೊಂದು ಚೈನು ಕಟ್ಟಿ ಸುಸ್ಸು ಮುಂತಾದವೆಲ್ಲ ಮಾಡಿಸಿಕೊಂಡು, ಒಂದು ಸುತ್ತು ಹಾಕಿಸಿ ಬರುವುದು ಪತ್ತಾರ್ ಅಂಕಲ್ ಬೆಳಗಿನ ದಿನಚರಿಯಾಯಿತು.

ಅದ್ಯಾಕೆ ನಾಯಿಗಳ ಮಾಲಿಕರೆಲ್ಲರೂ ತಮ್ಮ ಮುದ್ದಿನ ಪ್ರಾಣಿಯೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾರೋ ಗೊತ್ತಿಲ್ಲ. ಬಹುಶಃ ಯಾರಾದರೂ ಈ ವಿಷಯವನ್ನು ಸೀರಿಯಸ್ಸಾಗಿ ತೆಗೆದುಕೊಂಡರೆ ಒಂದು ಒಳ್ಳೆಯ ಪಿಎಚ್ ಡಿ ಥೀಸಿಸ್ ಬರೆಯಬಹುದು. ಲಾಸಿ ಮಾಮಾ ಕೂಡ ಇಂಗ್ಲಿಷಿನಲ್ಲಿ ಅದರೊಂದಿಗೆ ಸಂಭಾಷಣೆಯನ್ನು ಶುರುಹಚ್ಚಿಕೊಂಡರು. ತಮಾಷೆಯೆಂದರೆ, ವಾಕಿಂಗಿಗೆಂದು ಬಯಲಿಗೆ ಕರೆದುಕೊಂಡು ಬಂದಾಗಲೆಲ್ಲ ಅವರ ಇಂಗ್ಲಿಷಿನ ಮೇಲಿನ ಪ್ರಭುತ್ವ ಕೂಡ ಬಯಲಾಗುತ್ತ ಹೋಯಿತು!

ಮನೆ ಕಾಂಪೌಂಡಿನ ಹೊರಗೆ ನಿಂತುಕೊಂಡು 'ಏ ಲಾಸಿ ಕಮ್ ಇನ್ ಸೈಡ್, ಏ ಲಾಸಿ, ನೋನೋ ಡೋಂಟ್ ಗೋ ದಟ್ ಸೈಡ್' ಅಂತ ಹೇಳಿದ್ರೆ ಅದಾದರೂ ಹೇಗೆ ಒಳಗೆ ಬಂದೀತು? ಗೇಟಿನ ಒಳಗೆ ನಿಂತುಕೊಂಡು ಕಮ್ ಇನ್ ಸೈಡ್ ಅಂದ್ರೆ ಅವರ ಮಾತಿಗೆ ಕಿಮ್ಮತ್ತಾದರೂ ಅದು ಕೊಡುತ್ತಿತ್ತು. ಇವರ ಇಂಗ್ಲಿಷ್ ಸಂಭಾಷಣೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಲಾಸಿ ತನ್ನಷ್ಟಕ್ಕೆ ತಾನು ಕಂಡಲ್ಲೆಲ್ಲ ಕಾಲೆತ್ತುತ್ತ ಅತ್ತಿತ್ತ ಸಾಗುತ್ತಿತ್ತು. ಸುತ್ತಮುತ್ತಲಿನವರೆಲ್ಲ ಈ ಪ್ರಹಸನ ನೋಡಿದ್ದರಿಂದ ಅವಮಾನವಾದಂತಾಗಿ 'ಒಳಗ ಬಂದರೆ ಬಾ ನಿನ್ನ ಮಾಡತೇನಿ' ಅಂತ ಬಾಗಲಕೋಟಿ ಕನ್ನಡ ಭಾಷೆಯಲ್ಲಿ ಸಿಡುಕುತ್ತ ನಾಯಿಯನ್ನು ಎಳೆದೊಯ್ಯುತ್ತಿದ್ದರು.

ಇದು ಲಾಸಿ ಮಾಮಾ ಅವರೊಬ್ಬರದೇ ಕಥೆಯಲ್ಲ. ನಾಯಿ ಸಾಕಿರುವ ಶೇಕಡಾ ತೊಂಬತ್ತರಷ್ಟು ಮೇಲಂತಸ್ತಿನ ಜನ ಅವುಗಳೊಂದಿಗೆ ಇಂಗ್ಲಿಷಿನಲ್ಲಿಯೇ ಸಂಭಾಷಿಸುತ್ತಾರೆ. ಇದು ಜಾಗತಿಕ ಸತ್ಯ. ಈ ಶ್ವಾನಗಳಿಗೆ ಕನ್ನಡದ ಬದಲಾಗಿ ಇಂಗ್ಲಿಷ್ ಕಲಿಸುವಂಥ ಕ್ಲಾಸನ್ನು ಯಾರಾದರೂ ನಡೆಸಿದರೆ ಸ್ವಲ್ಪ ಕಾಸನ್ನಾದರೂ ಮಾಡಬಹುದೇನೋ. ಅಥವಾ ನಾಯಿಗಳಿಗೆ ಮಾತ್ರ ಅರ್ಥವಾಗುವಂಥ ಇಂಗ್ಲಿಷನ್ನು ಹೇಳಿಕೊಡುವ ವಿಶೇಷ ತರಗತಿಗಳನ್ನು ಮಾಲಿಕರಿಗಾಗಿಯೇ ನಡೆಸಿದರೆ ಹೇಗೆ? ನಾಯಿಗಳಿಗಾಗಿಯೇ ವಿಶೇಷ ತರಬೇತುದಾರ, ಶ್ವಾನಗಳಿಗಾಗಿಯೇ ವಿಶೇಷ ಬ್ಯೂಟಿ ಪಾರ್ಲರುಗಳು, ಸ್ಪಾಗಳು ಆರಂಭವಾಗಿರುವಾಗ, ನಾಯಿಗಳಿಗೆ ಮನುಷ್ಯರ ಮಾತನ್ನು ಕಲಿಸುವ, ಅಥವಾ ನಾಯಿಗಳ ಮಾತನ್ನು ಮನುಷ್ಯರಿಗೆ ಕಲಿಸುವ ಶಾಲೆ ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಹಾಗಂತ ಪ್ರತಿಯೊಬ್ಬರೂ ಇಂಗ್ಲಿಷಿನಲ್ಲಿಯೇ ಮಾತಾಡುತ್ತಾರಂತೇನೂ ಅಲ್ಲ. ನಾಯಿಗಳನ್ನು ತಮ್ಮ ಮನೆಯ ಸದಸ್ಯನಂತೆಯೇ ನಡೆಸಿಕೊಳ್ಳುವವರಿದ್ದಾರೆ, ಕನ್ನಡದಲ್ಲಿಯೇ ಸಂಭಾಷಿಸುತ್ತಾರೆ.

ಮಾತು ಕೇಳಿದಾಗ ಮುದ್ದು, ಮಾತ ಕೇಳದಿದ್ದಾಗ ಗುದ್ದು ; ಇದು ಲಾಸಿ ಮಾಮಾ ಅವರ ದಿನನಿತ್ಯದ ಮಂತ್ರವಾಯಿತು. ಚೆನ್ನಾಗಿ ತಿಂದುಂಡು ಸೌಂದರ್ಯವತಿಯಾಗಿ ಬೆಳೆದ ಲಾಸಿಗೆ ಗೆಳೆಯರ ಬಳಗವೂ ದೊಡ್ಡದಾಯಿತು. ಸ್ವಾಭಾವಿಕವಾಗಿ ಪ್ರೊಫೆಸರ್ ಪತ್ತಾರ್ ಅವರಿಗೆ ಇರುಸುಮುರುಸು ವೃದ್ಧಿಸುತ್ತಾ ಹೋಯಿತು. ಒಂದು ದಿನ ಪತ್ತಾರ್ ಅವರ ಮಗಳು ಲಾಸಿಯನ್ನು ಬಹಿರ್ದೆಸೆಗೆಂದು ಹಿಡಿದುಕೊಂಡು ಬಂದಾಗ, ಆಕೆಯ ಕೈಯಿಂದ ತಪ್ಪಿಸಿಕೊಂಡು ಹೋದ ಲಾಸಿ ಗಿಡಕಂಟಿಯಲ್ಲಿ ಕುಡಿದು ಬಿದ್ದಾತನೊಬ್ಬನನ್ನು ಮೂಸಲು ಹೋಗಿತ್ತು. ಕುಡುಕ ಹೋ ಎಂದು ಬೊಬ್ಬೆ ಹೊಡೆದುದನ್ನು ನೋಡಿ ಗಾಬರಿಗೊಂಡ ಲಾಸಿ ಅಲ್ಲಿಂದ ಪರಾರಿಯಾಗಿತ್ತು, ಪ್ರೊಫೆಸರ್ ಮಗಳು ಹೌಹಾರಿ ಚಿಟ್ಟಂತ ಚೀರಿ ಮನೆಗೆ ಓಡಿ ಬಂದು, ಎರಡು ದಿನ ಜ್ವರ ಬಂದು ಮಲಗಿದ್ದಳು. ಎರಡು ದಿನ ತಪ್ಪಿಸಿಕೊಂಡು ಭರ್ತಿ ಸ್ವಾತಂತ್ರ್ಯವನ್ನು ಅನುಭವಿಸಿದ ಲಾಸಿಯನ್ನು ಪ್ರೊಫೆಸರ್ ಅವರೇ ಹುಡುಕಿ ಹಿಡಿದುಕೊಂಡು ಬಂದಿದ್ದರು. ವಾಪಸ್ ಬಂದಾಗ ಅವರ ಮುಖ ನೋಡಬೇಕಾಗಿತ್ತು.

ಎರಡು ದಿನಗಳ ಹನಿಮೂನ್ ಮುಗಿಸಿಕೊಂಡು ಬಂದ ಲಾಸಿ ಒನ್ ಫೈನ್ ಡೇ ಗರ್ಭ ಧರಿಸಿದ್ದಳು! ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಪ್ರೊಫೆಸರ್ ಕುಟುಂಬ ಪ್ರಯತ್ನಿಸದೆ ಹಿಂದೆ ನಡೆದದ್ದನ್ನೆಲ್ಲಾ ಮರೆತು ತುಂಬು ಹೃದಯದಿಂದ ಮನೆಮಂದಿಯೆಲ್ಲ ಲಾಸಿಯನ್ನು ಲಾಲಿಸಿದ್ದರು. ಒಂದು ಶುಭದಿನ ಲಾಸಿ ಅನಾಮತ್ ಹನ್ನೆರಡು ಮರಿಗಳಿಗೆ ಜನ್ಮ ನೀಡಿದಳು. ಹೊರಜಗತ್ತಿಗೆ ಮರಿಗಳು ಹುಟ್ಟಿದ್ದು ಗೊತ್ತಾಯಿತಾದರೂ ಅವುಗಳ ಕುಂಯ್ ಕುಂಯ್ ರಾಗ ಕೇಳಲೇಯಿಲ್ಲ. ಹೊರಜಗತ್ತು ಲಾಸಿಯ ಬಗ್ಗೆ ಮತ್ತು ಮರಿಗಳ ಬಗ್ಗೆ ಕೇಳಲೂ ಇಲ್ಲ, ತಲೆಕೆಡಿಸಿಕೊಳ್ಳಲೂ ಇಲ್ಲ. ಬಾಣಂತನ ಮುಗಿಯುವ ಹೊತ್ತಿಗೆ ಮತ್ತೆ ಲಾಸಿ ಒಬ್ಬಂಟಿಯಾಗಿದ್ದಳು, ಪತ್ತಾರ್ ಪ್ರೊಫೆಸರ್ ಮನೆ ಸುಣ್ಣಬಣ್ಣ ಬಳಿದುಕೊಂಡು ಕಂಗೊಳಿಸುತ್ತಿತ್ತು ಮತ್ತು ಹೊರಜಗತ್ತು ಹುಬ್ಬೇರಿಸಿಕೊಂಡು ನೋಡುತ್ತಿತ್ತು!

English summary
Is there any coaching for teaching english to pet dog? A humor by Yash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X