ಹಿಟ್ ಆಂಡ್ ರನ್ ಕೇಸ್: ಅಪಘಾತಕ್ಕೊಳಗಾದ ಯುವಕನಿಗೆ ಕ್ಷಮೆ ಕೇಳಿದ ಹಾಸ್ಯ ನಟ ಚಂದ್ರಪ್ರಭಾ, ಆಕ್ರೋಶಕ್ಕೆ ಕಾರಣವಾಗಿದ್ದು ಆ ಹೇಳಿಕೆ
ಚಿಕ್ಕಮಗಳೂರು, ಸೆಪ್ಟೆಂಬರ್, 08: ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಮಾಲ್ತೇಶ್ ಎಂಬುವವರಿಗೆ ಹಾಸ್ಯ ನಟ ಚಂದ್ರಪ್ರಭಾ ಅವರು ಕಾರಿನಿಂದ ಗುದ್ದಿಕೊಂಡು ತಿರುಗಿಯೂ ನೋಡದೇ ಹೋಗಿದ್ದರು. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಚಂದ್ರಪ್ರಭಾ ಅವರು, ಆತ ಕುಡಿದಿದ್ದು, ಆತನೇ ನನ್ನ ಗಾಡಿಗೆ ಅಡ್ಡ ಬಂದಿದ್ದ ಎಂದು ಅಪಘಾತಕ್ಕೊಳಗಾದ ಮಾಲ್ತೇಶ್ ವಿರುದ್ಧ ಸಮಾಜಾಹಿಷಿ ನೀಡಿದ್ದರು. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶಗಳು ಭುಗಿಲೆದ್ದ ಬೆನ್ನಲ್ಲೇ ಇದೀಗ ಚಂದ್ರಪ್ರಭಾ ಕ್ಷಮೆಯಾಚಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಾಸ್ಯ ನಟ ಚಂದ್ರಪ್ರಭಾ, ಮಾಲ್ತೇಶ್ ಮದ್ಯ ಸೇವಿಸಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದೇನೆ. ಆದ್ದರಿಂದ ಅವರು ಹಾಗೂ ಅವರ ಕುಟುಂಬಕ್ಕೆ ಕ್ಷಮೆ ಕೇಳುತ್ತೇನೆ. ಅಲ್ಲದೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಯುವಕ ಹಾಗೂ ಆತನ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದರು.

ಇನ್ನೂ ಪ್ರಕರಣ ದಾಖಲಾಗಿದ್ದ ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಗೆ ಇಂದು ಹಾಜರಾದ ಹಾಸ್ಯ ನಟ ಚಂದ್ರಪ್ರಭಾ ಅವರು, ಅಪಘಾತಕ್ಕೊಳಗಾದ ಮಾಲ್ತೇಶ್‌ಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ನಟ ಚಂದ್ರಪ್ರಭಾ ತನ್ನ ಕಾರಿನಲ್ಲಿ ಬೈಕ್ ಸವಾರನಿಗೆ ಡಿಕ್ಕಿಯೊಡೆದು ಆತನಿಗೆ ಏನಾಯ್ತು ಎಂದು ತಿರುಗಿಯೂ ನೋಡದೇ ಹೋಗಿರುವ ಘಟನೆ ನಗರದಲ್ಲಿ ನಡೆದಿತ್ತು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುತ್ತಮುತ್ತ ಶೂಟಿಂಗ್ ಮುಗಿಸಿ ಸೋಮವಾರ ರಾತ್ರಿ ಬೆಂಗಳೂರಿಗೆ ಹಿಂದಿರುಗುವಾಗ ನಗರದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬೈಕ್ ಸವಾರನಿಗೆ ಡಿಕ್ಕಿಯೊಡೆದು ಸೌಜನ್ಯಕ್ಕೂ ಆತನಿಗೆ ಏನಾಗಿದೆ ಎಂದು ನೋಡದೇ ಹೋಗಿದ್ದು, ಸ್ಥಳೀಯರು ಕಾಮಿಡಿ ನಟನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.
ಚಂದ್ರಪ್ರಭಾ ಕಾರಿನಿಂದ ಅಪಘಾತಕ್ಕೀಡಾದ ಯುವಕ ಮಾಲತೇಶ್ ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರದ ಬಟ್ಟೆ ಅಂಗಡಿಯಲ್ಲಿ 6-7 ಸಾವಿರಕ್ಕೆ ಕೆಲಸ ಮಾಡುವ ಮಾಲತೇಶ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅಪಘಾತಕ್ಕೀಡಾಗಿ ಎರಡು ದಿನದಿಂದ ಪ್ರಜ್ಞೆ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಂದ್ರಪ್ರಭಾ ಅಪಘಾತ ಮಾಡಿದ ಕೂಡಲೇ ಸ್ಥಳಿಯರು ಯುವಕನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅಪಘಾತದ ತೀವ್ರತೆ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಚಂದ್ರಪ್ರಭಾ, ಆತ ಕುಡಿದಿದ್ದು, ಆತನೇ ನನ್ನ ಗಾಡಿಗೆ ಅಡ್ಡ ಬಂದಿದ್ದ ಎಂದು ಸಮಾಜಾಹಿಷಿ ನೀಡಿದ್ದರು. ಅಪಘಾತವಾದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದರು. ನಾವೇ ನನ್ನ ಸ್ನೇಹಿತನೇ ಜೊತೆ ಆಟೋ ಮಾಡಿ ಆತನನ್ನು ಆಸ್ಪತ್ರೆಗೆ ಕಳಿಹಿಸಿದ್ದು. ಅಲ್ಲಿದ್ದ ಸ್ಥಳೀಯರು ನೀವು ಹೋಗಿ. ಆತ ಕುಡಿದಿದ್ದಾನೆ ಎಂದು ಹೇಳಿದರು. ನಾವು ಆತನನ್ನು ಆಸ್ಪತ್ರೆಗೆ ಸೇರಿಸಿ ಶೂಟಿಂಗ್‍ಗೆ ತುರ್ತು ಹೋಗಲೇಬೇಕಾದ ಕಾರಣ ನಾನು ಅಲ್ಲಿಂದ ಹೊರಟೆ ಎಂದು ಸಮಾಜಾಯಿಷಿ ನೀಡಿದ್ದರು.
ಆದರೆ, ಮಾಲತೇಶ್‍ನನ್ನು ಆಸ್ಪತ್ರೆಗೆ ಸೇರಿಸಿದ್ದು ಸ್ಥಳಿಯರೇ ವಿನಃ. ಚಂದ್ರಪ್ರಭಾ ಅಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಯುವಕ ಮಾಲತೇಶ್ ಸಹೋದರ ರಘು ಚಂದ್ರಪ್ರಭಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನನ್ನ ತಮ್ಮ ಕುಡಿಯೋದೇ ಇಲ್ಲ. ನಾನೇ ಗ್ಯಾರಂಟಿ. ಅವನಿಗೆ ಕುಡಿಯೋ ಅಭ್ಯಾಸವೇ ಇಲ್ಲ. ಅವನ್ಯಾರೋ ಗೊತ್ತಿಲ್ಲ. ಚಂದ್ರಪ್ರಭಾ ಅಂತೆ. ಅವನೇ ಕುಡಿದು ಗಾಡಿ ಓಡಿಸಿದ್ದಾನೆ. ಆತ ಆಸ್ಪತ್ರೆಗೆ ಸೇರಿಸಿದ್ದರೆ ಮನೆಯವರು ಬರೋ ತನಕ ಇರಬಹುದಿತ್ತು. ಏಕೆ ಓಡಿ ಹೋದ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಆತ ಆಸ್ಪತ್ರೆಗೆ ಸೇರಿಸಿಲ್ಲ. ಆಸ್ಪತ್ರೆಗೆ ಸೇರಿಸಿದ್ದು ಸ್ಥಳಿಯರು, ಆತ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನದಿಂದ ಕ್ರಿಟಿಕಲ್ ಪರಿಸ್ಥಿತಿಯಲ್ಲಿ ಐಸಿಯುನಲ್ಲಿ ಇದ್ದಾನೆ. ವೈದ್ಯರು ನಾಲ್ಕು ದಿನ ಇರಲಿ ಎಂದಿದ್ದಾರೆ. ಯಾರನ್ನೂ ಗುರುತಿಸುತ್ತಿಲ್ಲ. ನಾನು ಬಾರ್ ಬೆಂಡಿಂಗ್ ಕೆಲಸ ಮಾಡೋದು. ಅಪ್ಪ-ಅಮ್ಮ ಸಣ್ಣ ರೈತರು. ಅವನ್ಯಾರೇ ಆಗಿರಲಿ, ಇಲ್ಲಿಗೆ ಬಂದು ನನ್ನ ಜೊತೆ ಮಾತನಾಡಬೇಕು. ಅಪಘಾತ ಮಾಡಿ ಓಡಿಹೋಗೋದಲ್ಲ ಎಂದು ಕಿಡಿಕಾರಿದ್ದರು.
ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಂದ್ರಪ್ರಭಾಗೆ ಕರೆ ಮಾಡುತ್ತಿದ್ದಂತೆ ಚಂದ್ರಪ್ರಭಾ ಶೂಟಿಂಗ್‍ನಲ್ಲಿ ಬ್ಯುಸಿ ಇರುವ ಕಾರಣ ಎರಡು ದಿನ ಸಮಯ ಕೇಳಿದ್ದಾರೆ. ಶುಕ್ರವಾರ ಠಾಣೆಗೆ ಬರೋದಾಗಿ ತಿಳಿಸಿದ್ದರು.












Click it and Unblock the Notifications