• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಚ್ಚಲು ಮನೆಯ ಹಳೆ ಹುಲಿ ಹಂಡೆ

By * ವಸಂತ ಕುಲಕರ್ಣಿ, ಸಿಂಗಪುರ
|

ಹಂಡೆ ಎಂದ ಕೂಡಲೇ ನಮ್ಮೆಲ್ಲರ ಮನದ ಮುಂದೆ ಮೂಡುವ ಚಿತ್ರವೆಂದರೆ ಹತ್ತು ಹದಿನೈದು ವರ್ಷಗಳ ಹಿಂದಿನವರೆಗೂ ಸ್ನಾನಕ್ಕೆ ನೀರು ಕಾಯಿಸಲು ಉಪಯೋಗಿಸುತ್ತಿದ್ದ ದೊಡ್ದ ಹೊಟ್ಟೆಯ ಚಿಕ್ಕ ಬಾಯಿಯ ಪಾತ್ರೆ. ಕೆಲವು ವರ್ಷಗಳ ಹಿಂದೆ ಎಲ್ಲರ ಮನೆಯಲ್ಲಿ ಅದು ವಹಿಸುತ್ತಿದ್ದ ತುಂಬಾ ಮುಖ್ಯವಾದ ಪಾತ್ರದಿಂದ ಅದಕ್ಕೆ ಮಹತ್ವದ ಸ್ಥಾನ ಲಭ್ಯವಾಗಿತ್ತು. ಈಗ ಕಾಲನ ವಕ್ರದೃಷ್ಟಿಯ ಮಹಿಮೆಯಿಂದಾಗಿ ಆಧುನೀಕತೆಯು ದಾಪುಗಾಲಿಟ್ಟು, ಅದರ ಸ್ಥಾನವನ್ನು ಗೀಸರ್‌ಗಳು ಆಕ್ರಮಿಸಿಕೊಂಡಿವೆ. ಹಳೇ ಸರಕಾದ ನಮ್ಮ ಪಾಪದ ಹಂಡೆಯು ಸ್ಟೋರ್ ರೂಮ್ ಸೇರಿಕೊಂಡು ಅದರ ಕತ್ತಲಲ್ಲಿ ವನವಾಸ ಅನುಭವಿಸುತ್ತಿದೆ.

ಈಗಿನ ಹೊಸ ಪೀಳಿಗೆಗೆ ಹಂಡೆಯ ಬಗ್ಗೆ ಹೋಗಲಿ, ಆ ಶಬ್ದವಾದರೂ ಗೊತ್ತಿರುವದೋ ಎಂಬುದರ ಬಗ್ಗೆ ನನ್ನ ಸಂಶಯ. ಹಂಡೆ ನಮ್ಮ ಚಿಕ್ಕಂದಿನಲ್ಲಿ ವಹಿಸಿದ ಮಹತ್ವದ ಪಾತ್ರದ ಬಗ್ಗೆ ಅವರಿಗೆ ಎಂತು ತಿಳಿ ಹೇಳುವದು?

ಸ್ನಾನದ ನೀರು ಕಾಯಿಸಲು ನಮ್ಮ ಮನೆಯಲ್ಲಿ ಉಪಯೋಗಿಸುತ್ತಿದ್ದುದು ಕಟ್ಟಿಗೆಯ ಹೊಟ್ಟು. ತುಂಬಾ ಅಗ್ಗವಾಗಿ ಲಭಿಸುತ್ತಿದ್ದ ಹೊಟ್ಟನ್ನು ಕಟ್ಟಿಗೆಯ ಅಡ್ಡೆಯಿಂದ ತರುವ ಕೆಲಸ ನನ್ನದು ಇಲ್ಲವೆ ನನ್ನಣ್ಣನದು. ಒಲೆಯಲ್ಲಿ ಒನಕೆ ಇಟ್ಟು ಸುತ್ತೆಲ್ಲ ಬಿಗಿಯಾಗಿ ಹೊಟ್ಟು ತುಂಬಿ ನಂತರ ಒನಕೆ ಹೊರಗೆಳೆದು ಒಲೆಯಲ್ಲಿ ಹೊಟ್ಟಿನ ಅಚ್ಚನ್ನು ನಿರ್ಮಿಸಿ, ಮರುದಿನದ ಸ್ನಾನಕ್ಕೆಂದು ಹಿಂದಿನ ದಿನವೇ ಮಣ್ಣಿನ ಒಲೆಯನ್ನು ಸಿದ್ಧಗೊಳಿಸುತ್ತಿದ್ದೆವು. ಮರುದಿನ ಕುರುಳಿನ ತುಂಡೊಂದರ ಮೇಲೆ ಚಿಮಣಿ (ಕೆರೋಸಿನ್) ಎಣ್ಣೆಯನ್ನು ಹಾಕಿ ಬೆಂಕಿ ಹೊತ್ತಿಸಿ ಹೊಟ್ಟು ತುಂಬಿದ ಒಲೆಯಲ್ಲಿ ಹಾಕಿ ಅದರ ಮೇಲೆ ಹಂಡೆಯನ್ನು ಇಟ್ಟು ಬಿಟ್ಟರೆ ಆಯಿತು. ಅರ್ಧ ಗಂಟೆಯಲ್ಲಿ ಕುದಿಯುವ ನೀರು ತಯಾರು! ಅಂದು ಈ ಕುದಿಯುವ ನೀರನ್ನು ಬಕೆಟ್ಟಿನಲ್ಲಿ ಹಾಕಿಕೊಂಡು ಹದವಾಗಿ ತಣ್ಣೀರು ಬೆರೆಸಿ ಚುಮುಚುಮು ಚಳಿಯಲ್ಲಿ ಬೆಚ್ಚಗೆ ಸ್ನಾನ ಮಾಡುವದೇ ಒಂದು ದೊಡ್ಡ ಖುಷಿ! ಈ ಹಂಡೆ ನೀರಿನ ಸ್ನಾನದ ಖುಷಿಯ ಮೇಲೆ ಲೇಖಕಿ ಭುವನೇಶ್ವರಿ ಹೆಗಡೆ ಒಂದು ಸುಂದರವಾದ ದೊಡ್ಡ ಲೇಖನವನ್ನೇ ಬರೆದಿದ್ದಾರೆ.

ಹಂಡೆಯು ತಾಮ್ರದ್ದೋ ಅಥವಾ ಹಿತ್ತಾಳೆಯದ್ದೋ ಇರುತ್ತಿತ್ತು. ಹೊಳೆಯುವ ಕೆಂಬಣ್ಣದ ತಾಮ್ರದ ಪಾತ್ರೆ ಅಥವಾ ಥಳ ಥಳಿಸುವ ಹಳದಿ ವರ್ಣದ ಹಿತ್ತಾಳೆ ಪಾತ್ರೆಗಳು ಅಂದು ಸಾಮಾನ್ಯವಾಗಿ ಉಪಯೋಗದಲ್ಲಿದ್ದವು. ಬೇರೆ ಬೇರೆ ಬಣ್ಣದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಸಾಲಾಗಿ ಜೋಡಿಸಿಟ್ಟಿರುವದನ್ನು ನೋಡುವದೇ ಒಂದು ಚೆಂದ ಅಲ್ಲವೇ? ಈಗ ಎಲ್ಲವೂ ಸ್ಟೇನ್‌ಲೆಸ್ ಸ್ಟೀಲು! ತಾಮ್ರ ಅಥವಾ ಹಿತ್ತಾಳೆ ಹಂಡೆಗಳು ಸತತ ಉಪಯೋಗದಿಂದ ಮತ್ತು ಕಟ್ಟಿಗೆ ಒಲೆಯ ಮಸಿಯಿಂದ ಆವರಿಸಲ್ಪಟ್ಟು ಬಣ್ಣಗೆಡುತ್ತಿದ್ದವು. ನಮ್ಮ ಅವ್ವ ಅಜ್ಜಿಯರು ಎಲ್ಲ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳೊಂದಿಗೆ ಹಂಡೆಯನ್ನು ಕೂಡ ಹುಣಿಸೆ ಹಣ್ಣಿನಿಂದ ತಿಕ್ಕಿ ತಿಕ್ಕಿ ತೊಳೆದು ಥಳಥಳ ಹೊಳೆಯುವಂತೆ ಮಾಡುವದನ್ನು ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತಿದ್ದೆವು. ಹಂಡೆಯಂತಹ ದೊಡ್ಡ ಪಾತ್ರೆಗಳನ್ನು ಎತ್ತಿ ಕೊಡುವದು, ಅವರು ಹುಣಿಸೆಯಿಂದ ತಿಕ್ಕುತ್ತಿರುವಾಗ ಹಿಡಿದು ಒಂದೆಡೆ ನಿಲ್ಲುವಂತೆ ಮಾಡುವದು ಇತ್ಯಾದಿ ಮುಖ್ಯ(!) ಪಾತ್ರಗಳನ್ನು ನಾವು ಕೂಡಾ ವಹಿಸುತ್ತಿವು.

ವರ್ಷವಿಡೀ ದಿನದಿನಕ್ಕೂ ಉಪಯೋಗಿಸುವ ಈ ಹಂಡೆಯನ್ನು ಏನಿದ್ದರೂ ತಿಕ್ಕಿ ತೊಳೆದು ಸ್ವಚ್ಛ ಮಾಡಿ ಪೂಜೆ ಮಾಡಲೇಬೇಕಾದ ದಿನವೊಂದು ಇದೆ. ಅದೇ ನಮ್ಮ ದೀಪಾವಳಿಯ ಮೊದಲ ದಿನ, ನರಕ ಚತುರ್ದಶಿಯ ಹಿಂದಿನ ದಿನ. ಧನ ತ್ರಯೋದಶಿ ಅಥವಾ ನೀರು ತುಂಬುವ ಹಬ್ಬ. ಅಂದು ನಮ್ಮ ಈ ಬಹು ಜನ ಹಿತಾಯ ಹಂಡೆ ಲಕಲಕ ಹೊಳೆದು ತಯಾರಾಗಿ, ಅರಿಶಿಣ, ಕುಂಕುಮ ಮತ್ತು ಗಂಧ ಹಚ್ಚಿಸಿಕೊಂಡು ಪೂಜೆಗೊಳ್ಳುತ್ತದೆ. ಅದರ ಜೊತೆ ಅದರ ಇತರ ಜೊತೆಗಾರರಾದ ಬಿಂದಿಗೆ, ತಂಬಿಗೆಗಳೂ ಪೂಜೆಗೊಂಡರೂ ಘನ ಗಾತ್ರದ, ಘನ ಗಂಭೀರ ಹಂಡೆ ಸಿಂಗಾರಗೊಂಡು ಅರ್ಚನೆಗೊಳ್ಳುವದನ್ನು ನೋಡುವದೇ ಒಂದು ಸಂಭ್ರಮ.

ಈ ಹಬ್ಬದ ದಿನ ಮಲೆನಾಡಿನ ಜನರು ಮತ್ತೊಬ್ಬರ ಮನೆಯಿಂದ ಏನಾದರೂ ವಸ್ತುಗಳನ್ನು ಕದ್ದು ಅವರನ್ನು ಬೇಸ್ತು ಬೀಳಿಸಿ ನಂತರ ವಾಪಸ್ ಕೊಟ್ಟು ಬೈಯಿಸಿಕೊಳ್ಳುವದು ಒಂದು ಪದ್ಧತಿಯಂತೆ. ಹಾಗೆ ಬೈಯಿಸಿಕೊಂಡರೆ ಒಳ್ಳೆಯದಾಗುವದು ಎಂಬ ನಂಬಿಕೆ. ಈ ಕದಿಯುವ ವಸ್ತುಗಳಲ್ಲಿ ಹಂಡೆಗೆ ಪ್ರಮುಖ ಸ್ಥಾನವಂತೆ. ಅಂದಿನ ದಿನಗಳಲ್ಲಿ ಬೇರೇ ಏನಾದರೂ ಕದ್ದುಕೊಳ್ಳಲಿ, ದೀಪಾವಳಿಯ ಕೊರೆಯುವ ಚಳಿಯ ದಿನಗಳಲ್ಲಿ ಹಂಡೆಯನ್ನು ಕಳೆದುಕೊಳ್ಳುವದು ತುಂಬಾ ಕಷ್ಟಕರ ಕೆಲಸ. ಚಳಿಯಲ್ಲಿ ಬಿಸಿನೀರಿಲ್ಲದೇ ಸ್ನಾನವಿಲ್ಲ! ಸ್ನಾನವಿಲ್ಲದೇ ಖಾನಾಪಾನವಿಲ್ಲ! ಕದ್ದ ಮಹಾನುಭಾವರು ಅದರ ಮಾಲೀಕರಿಂದ ಮನಸಾರೆ ಬೈಯಿಸಿಕೊಂಡು ಕೃತಾರ್ಥರಾಗಿರಬಹುದು.

ಮಲೆನಾಡಿನಲ್ಲಿ ಹಂಡೆಗೆ ಇನ್ನೊಂದು ಮಹತ್ವದ ಕೆಲಸವಿದೆ. ಅಡಿಕೆ ತೋಟದ ಮಾಲೀಕರೆಲ್ಲರಿಗೆ ಅಡಿಕೆ ಕುದಿಸಲು ನಮ್ಮ ಈ ಹಂಡೆ ಬೇಕೇ ಬೇಕು. ಅಡಿಕೆಹಣ್ಣನ್ನು ತೆಗೆದು ಒಳಗಿನ ಬೀಜವನ್ನು ಹಂಡೆಯಲ್ಲಿ ಕುದಿಸಿ ನಂತರ ಬಿಸಿಲಲ್ಲಿ ಒಣಗಿಸಿದಾಗ ಅದಕ್ಕೆ ನಾವು ನೋಡುವ ಕಂದು-ಕಪ್ಪು ಬಣ್ಣ ಬರುತ್ತದೆ.

ಹಂಡೆಯ ಮುಖ್ಯ ಉಪಯೋಗ ನೀರನ್ನು ಕಾಯಿಸುವದು ಅಥವಾ ಮದುವೆ ಮನೆಯಲ್ಲಿ ಸಾರನ್ನೋ ಅಥವಾ ಮತ್ತೇನೋ ಆಹಾರ ಪದಾರ್ಥ ಮಾಡಲು ಉಪಯೋಗಿಸುವದು. ಆದರೆ ಆಗಿನ ಸಾಹಿತ್ಯದಲ್ಲಿ ಅಥವಾ ನಿತ್ಯ ಜನ ಬಳಕೆಯ ಭಾಷೆಯಲ್ಲಿ ತುಂಬ ದೊಡ್ಡದಾದ ವಸ್ತುವೊಂದನ್ನು ವರ್ಣಿಸಲು ಕೂಡ ಜನ ಉಪಯೋಗಿಸುತ್ತಿದ್ದುದು ಹಂಡೆಯನ್ನೇ. ನನಗೀಗಲೂ ನೆನಪಿರುವ ನಾವೆಲ್ಲ ಚಿಕ್ಕ ಮಕ್ಕಳಿದ್ದಾಗ ನಮ್ಮ ಜೊತೆ ಆಟವಾಡುವ ಚಿಕ್ಕ ಹುಡುಗಿಯರು ಹೇಳುತ್ತಿದ್ದ ಹಾಡು ಹೀಗೆ ಸಾಗುತ್ತದೆ:

ಮಾಮಾ ಬಂದಾನವ್ವಾ|

ಏನ್ ತಂದಾನವ್ವಾ|

ಹಂಡೆದಂಥಾ ಹೊಟ್ಟಿ ಬಿಟ್‌ಕೊಂಡ

ಹಂಗೇ ಬಂದಾನವ್ವಾ ||

ಎಲ್ಲರಿಗೂ ಮಾಮಂದಿರ ಮೇಲೆ ಸಲಿಗೆ. ಕಾಕಾಗಳನ್ನು ಬಹುತೇಕ ಎಲ್ಲರೂ ಬಹುವಚನದಿಂದ ಕರೆದರೆ, ಮಾಮಂದಿರನ್ನು ಮಾತ್ರ ಏಕವಚನದಿಂದಲೇ ಕರೆಯುವದು ರೂಢಿ ಅಲ್ಲವೆ? ಮಾಮನ ಹೊಟ್ಟೆಯನ್ನು ಕೂಡ ಹಂಡೆಯೊಂದಿಗೆ ಹೋಲಿಸುವ ಧಾರ್ಷ್ಟ್ಯವನ್ನು ತೋರುತ್ತಿದ್ದುದು ಈ ಸಲಿಗೆಯಿಂದಲೇ ತಾನೇ?

ಹಂಡೆಯಲ್ಲಿ ನೀರು ಮರಳಿಸಿ ಮುದ್ದಿನ ಅಳಿಯನಿಗೆ ಸ್ನಾನ ಮಾಡಿಸುವ ಪರಿಯನ್ನು, ಅದರಲ್ಲಿರುವ ಜೀವನೋತ್ಸಾಹದ ಚಿಲುಮೆಯನ್ನು ವರ್ಣಿಸಿದೆ ಜಾನಪದ ಲೋಕದ ಮಾಣಿಕ್ಯವೊಂದು ಹೀಗೆ:

ಏಳು ಹಂಡೆ ನೀರು ಯಾಲಕ್ಕಿ ಪರಿಮಳ

ಎದ್ದೆದ್ದು ಮರಳಿ ಉಕ್ಯಾವು

ಎದ್ದೆದ್ದು ಮರಳಿ ಉಕ್ಯಾವಭ್ಯಂಗಕ್ಕೆ

ಮುದ್ದಿನಳಿಯನ ಕರೆತನ್ನಿ

ಹಂಡೆ ಎನ್ನುವದೊಂದು ಅಡ್ಡ ಹೆಸರು ಕೂಡ. ನಮ್ಮೂರಿನಲ್ಲಿ ಹಂಡೆ ಎನ್ನುವ ಸದ್ಗೃಹಸ್ಥರೊಬ್ಬರು ನಗರ ಸಭೆ ಚುನಾವಣೆಗೆ ನಿಂತು ಅರ್ಹತೆಯಿದ್ದರೂ, ಪುಢಾರಿಗಳ ಅಬ್ಬರ, ಧನಬಲ ಮತ್ತು ಸ್ನಾಯು ಬಲಗಳ ಎದುರು ಸೆಣಸಲಾರದೆ ಸೋತಿದ್ದರು ಎಂಬ ನೆನಪು.

ಅಷ್ಟು ದೊಡ್ಡ ಪರಂಪರೆಯನ್ನು ಪಡೆದ ಹಂಡೆ ಇಂದು ಸ್ಟೋರ್ ರೂಮಿನ ಕತ್ತಲೆಯಲ್ಲಿ ಯಾವದೋ ಮೂಲೆಯಲ್ಲಿ ಕುಳಿತಿರುವದನ್ನು ನೋಡಿದಾಗಲೋ ಅಥವ ಜನಮನದಿಂದ ಮಾಯವಾದ ಪರಿಯನ್ನು ಗಮನಿಸಿದಾಗ ಮನ ಕಲಕುತ್ತದೆ. ಹಳೆಯ ಕಾಲದ ವಸ್ತ್ರಾಭರಣಗಳು ಹೊಸ ರೂಪು ಪಡೆದು ಇಂದಿನ ಫ್ಯಾಷನ್ ಯುಗದಲ್ಲಿ ಮತ್ತೆ ಎದ್ದು ಜನಪ್ರಿಯಗೊಳ್ಳುವದನ್ನು ನೋಡಿದಾಗ, ಮುಂದೆಂದಾದರೂ ಈ ಹಳೆಯ ಹುಲಿ ಮತ್ತೆ ತನ್ನ ಮಹಿಮೆಯನ್ನು ಪ್ರದರ್ಶಿಸುವ ಮತ್ತೆ ಮುಖ್ಯ ಭೂಮಿಕೆಯನ್ನು ವಹಿಸುವ ಕಾಲ ಬರಬಹುದೇ ಎಂದು ಅನಿಸುತ್ತೆ. ಇದೊಂದು "wishful thinking" ಅಷ್ಟೆ. ಏನು ಮಾಡುವದು ಸ್ವಾಮಿ? ಕಾಲಾಯ ತಸ್ಮೈ ನಮಃ!

ಇಂದಿನ ಆಧುನೀಕತೆಯ ನಾಗಾಲೋಟವನ್ನು ಹಳೆಯದರ ಕೊನೆಯ ಕೊಂಡಿಯಾದ ನಮ್ಮ ಪೀಳಿಗೆ ಒಂದು ತರಹದ ಆತಂಕದಿಂದ ನೋಡುತ್ತಿದೆ. ಮುಂದಿನವರಿಗೆ ಹಳೆಯ ವಸ್ತುಗಳಿಗೆ, ಭಾವನೆಗಳಿಗೆ ಜೋತು ಬೀಳುವ ಈ ಸ್ವಭಾವ ಓಬೀರಾಯನ ಕಾಲದ ಮನೋಧರ್ಮವಾಗಿ, ಅರ್ಥಹೀನವಾಗಿ ಕಾಣಬಹುದು. ಆದರೆ ಈ ಆತಂಕದ ಮೂಲದಲ್ಲಿರುವದು, ಹಳೆಯದಿಂದ ಹೊಸದರ ಕಡೆಗೆ ಸಾಗುತ್ತಿರುವ ಈ ಬಿರುಗಾಳಿಯಲ್ಲಿ ನಮ್ಮತನದ ಕುರುಹಾದ ಅನೇಕ ಗಟ್ಟಿ ಸಂಪ್ರದಾಯ ಮತ್ತು ಸಂಸ್ಕೃತಿಗಳು ಕೂಡ ಕೊಚ್ಚಿ ಹೋಗುವವೇನೋ ಎಂಬ ಅಸಹಾಯಕ ಭಾವನೆ. ಎಷ್ಟರ ಮಟ್ಟಿಗೆ ನಮ್ಮ ಹೊಸ ಪೀಳಿಗೆ ಈ ಹಳೆಯದರ ಕೈ ಹಿಡಿಯುತ್ತದೋ ಎಂಬುದನ್ನು ಆ ಕಾಲ ಮಹಾಶಯನೇ ನಿರ್ಣಯಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more